ನರೇಗಾ ಯೋಜನೆ; ವೈಯಕ್ತಿಕ ಕಾಮಗಾರಿ ಮೊತ್ತ 5 ಲಕ್ಷಕ್ಕೆ ಏರಿಕೆ, ವಿವರ
ಬೆಂಗಳೂರು, ಅಕ್ಟೋಬರ್ 20: ಕರ್ನಾಟಕ ಸರ್ಕಾರ ನರೇಗಾ ಯೋಜನೆಯಡಿ ಕಾಮಗಾರಿಗಳ ಮೊತ್ತಗಳನ್ನು ಪರಿಷ್ಕರಣೆ ಮಾಡಿದೆ. ವೈಯಕ್ತಿಕ ಕಾಮಗಾರಿ ಮೊತ್ತವನ್ನು 5 ಲಕ್ಷಕ್ಕೆ ಏರಿಕೆ ಮಾಡಿದೆ. ಇದಕ್ಕೆ ಅನ್ವಯವಾಗುವ ಷರತ್ತುಗಳನ್ನು ಸಹ ವಿವರಿಸಿದೆ.
ಆಯುಕ್ತರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜ್ಞಾಪನಾ ಪತ್ರವನ್ನು ಬರೆದಿದ್ದಾರೆ. 2022-23ನೇ ಪ್ರಧಾನ ವಾರ್ಷಿಕ ಸುತ್ತೋಲೆಯನ್ನು ಉಲ್ಲೇಖ ಮಾಡಿದ್ದಾರೆ.

ಜ್ಞಾಪನಾ ಪತ್ರದ ವಿವರಗಳು; ಈ ಜ್ಞಾಪನಾ ಪತ್ರವು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿ (ಪ್ರತಿ ಅರ್ಹ ಕುಟುಂಬ)ಗಳ ಗರಿಷ್ಠ ಮೊತ್ತವನ್ನು ರೂ. 2.50 ಲಕ್ಷಗಳಿಂದ ರೂ. 5 ಲಕ್ಷಗಳಿಗೆ ಹೆಚ್ಚಿಸಿರುವ ಕುರಿತು ಎಂಬ ವಿಷಯ ಒಳಗೊಂಡಿದೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿಕಾರರಿಗೆ ಅಕುಶಲ ಕೆಲಸ ಒದಗಿಸುವುದರ ಜೊತೆಗೆ ಅರ್ಹ ಫಲಾನುಭವಿಗಳಿಗೆ ಜೀವನಾಧಾರಕ್ಕೆ ನೆರವಾಗುವ ವೈಯಕ್ತಿಕ ಆಸ್ತಿಗಳನ್ನು ಸೃಜನೆ ಮಾಡುವ ಮೂಲಕ ಅವರ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವುದು ಯೋಜನೆಯ ಉದ್ದೇಶವಾಗಿರುತ್ತದೆ ಎಂದು ಹೇಳಿದೆ.
ನರೇಗಾ ಯೋಜನೆಯಡಿ ವೈಯಕ್ತಿಕ ಸೌಲಭ್ಯಗಳನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಸೃಷ್ಟೀಕರಣವನ್ನು ನೀಡಲಾಗಿದೆ. ಮಹಾತ್ಮಗಾಂಧಿ ನರೇಗಾ ಅಧಿನಿಯಮ 2005ರ ಅನುಸೂಚಿ 1, ಪ್ಯಾರಾ 5ರಲ್ಲಿ ತಿಳಿಸಿದಂತೆ ಯೋಜನೆಯಡಿ ವೈಯಕ್ತಿಕ ಸೌಲಭ್ಯಗಳನ್ನು ಪಡೆಯಲು ಫಲಾನುಭವಿಯ (ಅರ್ಹ ಕುಟುಂಬವು) ಈ ಕೆಳಕಂಡ ವರ್ಗಗಳಲ್ಲಿ ಯಾವುದಾದರೂ ಒಂದು ವರ್ಗದಲ್ಲಿ ಅರ್ಹರಾಗಿರತಕ್ಕದ್ದು ಎಂದು ತಿಳಿಸಿದೆ.
* ಪರಿಶಿಷ್ಟ ಜಾತಿ
* ಪರಿಶಿಷ್ಟ ಪಂಗಡ
* ಅಲೆಮಾರಿ ಬುಡಕಟ್ಟುಗಳು
* ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು
* ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು
* ಮಹಿಳಾ ಪ್ರಧಾನ ಕುಟುಂಬಗಳು
* ವಿಕಲಚೇತನ ಕುಟುಂಬಗಳು
* ಭೂ ಸುಧಾರಣಾ ಫಲಾನುಭವಿಗಳು
* ವಸತಿ ಯೋಜನೆಗಳ ಫಲಾನುಭವಿಗಳು
* ಅರಣ್ಯ ಹಕ್ಕು ಕಾಯ್ದೆ 2006ರ ಫಲಾನುಭವಿಗಳು
* ಸಣ್ಣ ಮತ್ತು ಅತಿ ಸಣ್ಣ ರೈತರು
ಫಲಾನುಭವಿಯು ವೈಯಕ್ತಿಕ ಸೌಲಭ್ಯ ಪಡೆಯಲು ಅಧಿನಿಯಮದ ಅನುಸೂಚಿ 1 ಪ್ಯಾರಾ 5ರಲ್ಲಿ ಎರಡು ಷರತ್ತುಗಳನ್ನು ವಿಧಿಸಲಾಗಿದೆ. ಫಲಾನುಭವಿಯು (ಅರ್ಹ ಕುಟುಂಬವು) ಕಡ್ಡಾಯವಾಗಿ ನರೇಗಾ ಯೋಜನೆಯ ಜಾಬ್ ಕಾರ್ಡ್ ಹೊಂದಿರಬೇಕು. ಫಲಾನುಭವಿಗೆ ನೀಡಲಾದ ವೈಯಕ್ತಿಕ ಕಾಮಗಾರಿಯಲ್ಲಿ ಆತನ ಕುಟುಂಬದ ಕನಿಷ್ಠ ಒಬ್ಬ ಸದಸ್ಯರಾದರೂ ಕೆಲಸ ನಿರ್ವಹಿಸಬೇಕು.
ನರೇಗಾ ಯೋಜನೆಯ Annual Master Circular 2022-23ರ ಪ್ಯಾರಾ 7.4.12(III) ರಲ್ಲಿ ಯೋಜನೆಯಡಿ ಪ್ರತಿ ಫಲಾನುಭವಿಗೆ (ಪ್ರತಿ ಅರ್ಹ ಕುಟುಂಬಕ್ಕೆ) ಕುಟುಂಬಕ್ಕೆ) ನೀಡಬಹುದಾದ ವೈಯಕ್ತಿಕ ಕಾಮಗಾರಿಗಳ ಗರಿಷ್ಠ ಮೊತ್ತದ ಮಿತಿಯನ್ನು ರೂ. 2 ಲಕ್ಷಗಳಿಗೆ ನಿಗದಿಪಡಿಸಿ, ಸದರಿ ಗರಿಷ್ಠ ಮೊತ್ತದ ಮಿತಿಯನ್ನು ಹೆಚ್ಚಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿರುತ್ತದೆ.
ಮುಖ್ಯಮಂತ್ರಿಗಳು ಸದರಿ ಪ್ರಸ್ತಾವನೆಗೆ ಅನುಮೋದನೆ ನೀಡಿರುವ ಪ್ರಯುಕ್ತ ನರೇಗಾ ಯೋಜನೆಯಡಿ ಪ್ರತಿ ಫಲಾನುಭವಿಗೆ (ಪ್ರತಿ ಆರ್ಹ ಕುಟುಂಬಕ್ಕೆ) ನೀಡಬಹುದಾದ ವೈಯಕ್ತಿಕ ಕಾಮಗಾರಿಗಳ ಗರಿಷ್ಠ ಮೊತ್ತದ ಮಿತಿಯನ್ನು ರೂ. 2.50 ಲಕ್ಷಗಳಿಂದ ರೂ. 5 ಲಕ್ಷಗಳಿಗೆ ಹೆಚ್ಚಿಸಲು ತೀರ್ಮಾನಿಸಲಾಗಿರುತ್ತದೆ. ಯೋಜನೆಯಡಿ ನೋಂದಾಯಿತವಾದ ಒಂದು ಅರ್ಹ ಕುಟುಂಬವು ತನ್ನ ಜೀವಿತಾವಧಿಯಲ್ಲಿ ಗರಿಷ್ಠ 5 ಲಕ್ಷಗಳವರೆಗೆ ಯೋಜನೆಯಡಿ ನೀಡಲಾಗುವ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಬಹುದಾಗಿದೆ.
ಮಹಾತ್ಮ ಗಾಂಧಿ ನರೇಗಾ ಯೋಜನೆ ಪ್ರಾರಂಭವಾದ ವರ್ಷದಿಂದ ಈ ತಹಲ್‌ವರೆಗೂ ಅರ್ಹ ಕುಟುಂಬಕ್ಕೆ ನೀಡಿರುವ ವೈಯಕ್ತಿಕ ಸೌಲಭ್ಯಗಳ ದಾಖಲೆಗಳನ್ನು ಪರಿಶೀಲಿಸಿ, ಅರ್ಹತೆ ಹೊಂದಿದ್ದಲ್ಲಿ ಸೌಲಭ್ಯ ಕಲ್ಪಿಸಲು ನಿಯಮಾನುಸಾರ ಕ್ರಮವಹಿಸುವುದು. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತೆಗೆದುಕೊಳ್ಳಬಹುದಾದ ವೈಯಕ್ತಿಕ ಕಾಮಗಾರಿಗಳ ವಿವರಗಳನ್ನು ಸಹ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಳಿಸಲಾಗಿದೆ.












Click it and Unblock the Notifications