IT Sector: ಐಟಿ ವಲಯದಲ್ಲಿ ಪ್ರಮುಖ ನೇಮಕಾತಿಯಲ್ಲಿ ಶೇ.1.5 ಕುಸಿತ ಸಾಧ್ಯತೆ
ಬೆಂಗಳೂರು, ಆಗಸ್ಟ್ 07: ಭಾರತದಲ್ಲಿ ಮಾಹಿತಿ ತಂತ್ರಜ್ಞಾನ (IT) ವಲಯದಲ್ಲಿನ ಉದ್ಯೋಗಗಳ ನೇಮಕ ಪ್ರಸಕ್ತ ಹಣಕಾಸು ವರ್ಷದಲ್ಲಿ ನೀರಸವಾಗಿದೆ. ದೇಶದ ಪ್ರಮುಖ ಐಟಿ ಕಂಪನಿಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ ಸದರಿ ಆರ್ಥಿಕ ವರ್ಷದಲ್ಲಿ ಶೇಕಡಾ 40 ರಷ್ಟು ಕಡಿಮೆ ನೇಮಕಾತಿಯ ನಿರೀಕ್ಷೆ ಇದೆ.
ಇದು ಹೀಗೆ ಮುಂದುವರಿದರೆ 2024ರ ಆರ್ಥಿಕ ವರ್ಷಕ್ಕೆ ಐಟಿ ಕ್ಷೇತ್ರದ ದೈತ್ಯ ಕಂಪನಿಗಳಲ್ಲಿಯೇ 50,000 ರಿಂದ 1,00,000 ಉದ್ಯೋಗಿಗಳ ಸಂಖ್ಯೆ ಕಡಿಮೆ ಆಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಕಳೆದ ವರ್ಷ 2022ರಲ್ಲಿ ಒಟ್ಟು ನಿವ್ವಳ 2,50,000 ಉದ್ಯೋಗಿಗಳ ನೇಮಕ ಆಗಿತ್ತು. ಆದರೆ ಇದು ಈ ವರ್ಷಕ್ಕೆ ಭಾರಿ ಕುಸಿತ ಕಂಡಿದೆ. ಇದು ಈ ಕ್ಷೇತ್ರದಲ್ಲಿನ ಬೇಡಿಕೆಯ ಅನಿಶ್ಚಿತತೆ ಮತ್ತು ತಂತ್ರಜ್ಞಾನ ಸೇವೆಗಳಲ್ಲಿನ ಮಂದಗತಿ ಬೆಳವಣಿಯನ್ನು ಸೂಚಿಸುತ್ತದೆ ಎಂದು ತಿಳಿದು ಬಂದಿದೆ.
ಈ ನೇಮಕಾತಿ ಇಳಿಕೆಯ ಪ್ರವೃತ್ತಿಯು ಭಾರತಕ್ಕೆ ಮತ್ತು ಸ್ವದೇಶಿ ಕಂಪನಿಗಳಿಗೆ ಮಾತ್ರ ಸಿಮೀತವಾಗಿಲ್ಲ. ಬದಲಾಗಿ ಭಾರತದಲ್ಲಿರುವ ಬೃಹತ್ ಉದ್ಯೋಗಿ ನೆಲೆಗಳನ್ನು ಹೊಂದಿರುವ ಅಂತಾರಾಷ್ಟ್ರೀಯ ಐಟಿ ದೊಡ್ಡ ಕಂಪನಿಗಳಲ್ಲಿ ಸಹ ಈ ವರ್ಷ ಸುಮಾರು 5,000 ರಷ್ಟು ಕುಸಿತ ಆಗಿದೆ.
ಇತ್ತೀಚಿನ ತ್ರೈಮಾಸಿಕದದಲ್ಲಿ ಆಕ್ಸೆಂಚರ್, ಕ್ಯಾಪ್‌ಜೆಮಿನಿ ಮತ್ತು ಕಾಗ್ನಿಜೆಂಟ್‌ಗಳಂತ ಕಂಪನಿಗಳಲ್ಲಿ ಉದ್ಯೋಗಿಗಳ ಸಂಖ್ಯೆ ಇಳಿಕೆ ಆಗಿದ್ದನ್ನು ಗಮನಿಸಬಹುದು. ಇದೆಲ್ಲ ಕಾರಣದಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ಈ ವಲಯದಿಂದ ನಿವ್ವಳ ನೇಮಕಾತಿಯಲ್ಲಿ ಶೇಕಡಾ 40 ಕುಸಿತ ನಿರೀಕ್ಷಿಸಬಹುದಾಗಿದೆ.

ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಪ್ರಸಕ್ತ ಆಗಸ್ಟ್‌ನಲ್ಲಿ ಹೊಸ ನೇಮಕಾತಿಗಳ ಅಗತ್ಯತೆ ಸುಮಾರು ಶೇಕಡಾ 50 ರಷ್ಟು ಕಡಿಮೆ ಆಗಿದೆ ಎಂದು ಟೀಮ್‌ಲೀಸ್ ಡಿಜಿಟಲ್‌ನ ಮುಖ್ಯ ಕಾರ್ಯನಿರ್ವಾಹಕ ಸುನಿಲ್ ಸಿ ಮಾಹಿತಿ ನೀಡಿದರು.
ಯುರೋಪ್ ಕಂಪನಿ ಮುಖ್ಯಸ್ಥರ ಪ್ರತಿಕ್ರಿಯೆ
Quess ITಯ ಮುಖ್ಯ ಕಾರ್ಯನಿರ್ವಾಹಕ ವಿಜಯ್ ಶಿವರಾಮ್ ಅವರು ಶೇಕಡಾ 25- 30ರಷ್ಟು ಐಟಿ ನೇಮಕಾತಿಯ ಇಳಿಕೆಯು ತೀವ್ರ ಪರಿಣಾಮ ಬಿದ್ದಿದೆ. ಇದಕ್ಕೆ ಕೆಲವು ಕಾರಣಗಳನ್ನು ಹೆಸರಿಸಿರುವ ಅವರು, ಕಡಿಮೆ ನೇಮಕಾತಿಯು ಬೇಡಿಕೆ ಚಕ್ರಕ್ಕೆ ಹೊಡೆತ ನೀಡಿದೆ. ಕೆಲವು ಪ್ರಾಜೆಕ್ಟ್‌ಗಳ ರದ್ದತಿ, ಮ್ಯಾಕ್ರೋ ಸವಾಲುಗಳಿಂದ ಪ್ರತಿಕೂಲ ಪರಿಣಾಮ ಬೀರಿವೆ ಎಂದು ತಿಳಿಸಿದ್ದಾರೆ.
ವಿಪ್ರೋದಲ್ಲಿ ಫ್ರೆಶರ್ಸ್ ನೇಮಕಾತಿ ನಡೆದಿಲ್ಲ
ವಿಪ್ರೋದ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸೌರಭ್ ಗೋವಿಲ್ ಅವರು, ಕಂಪನಿಯು ಮೊದಲ ತ್ರೈಮಾಸಿಕದಲ್ಲಿ ಯಾವುದೇ ಫ್ರೆಶರ್‌ಗಳನ್ನು ನೇಮಕ ಮಾಡಿಕೊಳ್ಳಲಿಲ್ಲ. ನೇಮಕಾತಿ ಬೇಡಿಕೆಗೆ ಅನುಗುಣವಾಗಿ ಆ ಬಗ್ಗೆ ನಿರ್ಧರಿಸುವದಾಗಿ ಹೇಳಿತ್ತು. ಸದ್ಯ ಅಗತ್ಯಕ್ಕೆ ತಕ್ಕ ಉದ್ಯೋಗಿಗಳನ್ನು ತಾವು ಹೊಂದಿರುವುದಾಗಿ ವಿಪ್ರೋ ತಿಳಿಸಿದೆ.
ಇನ್ನೂ ಇನ್ಫೋಸಿಸ್ ಕಂಪನಿಯು ಬೇಡಿಕೆ ಆಧಾರದಡಿ ನೇಮಕ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಲೀಲ್ ಪರೇಖ್ ತಿಳಿಸಿದರು.












Click it and Unblock the Notifications