ಚಿತ್ರದುರ್ಗ; ಜಿಲ್ಲೆಯಲ್ಲಿ 6 ಬೃಹತ್ ಕೈಗಾರಿಕೆಗಳ ಸ್ಥಾಪನೆ ನಿರೀಕ್ಷೆ
ಚಿತ್ರದುರ್ಗ, ಆಗಸ್ಟ್ 25: ಆರು ಪ್ರತಿಷ್ಠಿತ ಉದ್ದಿಮೆದಾರರು ಶೀಘ್ರವೇ ಚಿತ್ರದುರ್ಗ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆ ಮಾಡುವ ನಿರೀಕ್ಷೆ ಇದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ. ಆನಂದ ಹೇಳಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಚಿತ್ರದುರ್ಗ ಹಾಗೂ ಶಿವಮೊಗ್ಗ ಶಾಖಾ ಕಚೇರಿ ವತಿಯಿಂದ ಆಯೋಜಿಸಲಾಗಿದ್ದ ಉದ್ದಿಮೆದಾರರ ಸಮಾವೇಶದಲ್ಲಿ ಅವರು ಮಾತನಾಡಿದರು. ಹಿರಿಯೂರಿನ ಮೇಟಿಕುರ್ಕೆ ಬಳಿ 1,194 ಎಕರೆ ಭೂಮಿಯನ್ನು ರೈತರಿಂದ ಪಡೆದು, ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ಯಿಂದ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.

ಕೈಗಾರಿಕೆಯಲ್ಲಿ ಹಿಂದುಳಿದ ಚಿತ್ರದುರ್ಗ ಜಿಲ್ಲೆಯನ್ನು ಅಭಿವೃದ್ಧಿಪಡಿಸಲು ಚಿಂತಿಸಲಾಗುತ್ತಿದೆ. ಜಿಂದಾಲ್, ಪ್ರಕಾಶ್ ಸ್ಪಾಂಜ್ ಐರನ್, ವಿಜಯದುರ್ಗ ಐರನ್ ಓರ್, ಇಂಡಸ್ಟ್ರೀಸ್ ಸೇರಿದಂತೆ 6 ಪ್ರತಿಷ್ಠಿತ ಉದ್ದಿಮೆದಾರರು ಶೀಘ್ರವೇ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆ ಮಾಡುವ ನಿರೀಕ್ಷೆ ಇದೆ.
ಒಂದು ವರ್ಷದಲ್ಲಿ ಕೈಗಾರಿಕೆಗಳು ಸ್ಥಾಪನೆ; ಬಿ. ಆನಂದ ಮಾತನಾಡಿ, ಚಿತ್ರದುರ್ಗ ನಗರ ಹೊರತುಪಡಿಸಿ ಜಿಲ್ಲೆಯ ಬೇರೆ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಎಲ್ಲಿಯೂ ಕೈಗಾರಿಕೆ ಪ್ರದೇಶಗಳು ಇರಲಿಲ್ಲ. ಈ ನಿಟ್ಟಿನಲ್ಲಿ ಎರಡು ವರ್ಷಗಳ ಕಾಲ ಸತತ ಪ್ರಯತ್ನ ಮಾಡಿ, ಹಿರಿಯೂರಿನ ಮೇಟಿಕುರ್ಕೆ ಬಳಿ ಕೈಗಾರಿಕೆ ಪ್ರದೇಶ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದೆ. ಮುಂದಿನ 6 ತಿಂಗಳ ಒಳಗಾಗಿ ಕೈಗಾರಿಕೆ ಪ್ರದೇಶ ಅಭಿವೃದ್ದಿ ಮಾಡಲಾಗುವುದು. ಮುಂದಿನ ಒಂದು ವರ್ಷದ ಒಳಗಾಗಿ ಈ ಪ್ರದೇಶದಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗಲಿವೆ ಎಂದರು.
ಬಳ್ಳಾರಿಯ ವಿಜಯ್ ಮಿತ್ತಲ್ ಕಂಪನಿಯವರು ಸಹ ರೂ. 500 ಕೋಟಿ ಹೂಡಿಕೆ ಮಾಡಲು ಸಿದ್ದರಿದ್ದಾರೆ. ಬೃಹತ್ ಕೈಗಾರಿಕೆಗಳು ಆಗಮಿಸಿದ ಪರಿಣಾಮವಾಗಿ ಜಿಲ್ಲೆಯ ಸಣ್ಣಪುಟ್ಟ ಕೈಗಾರಿಕೆಗಳಿಗೂ ಅನುಕೂಲವಾಗಿದೆ. ನೂತನ ಕೈಗಾರಿಕೆ ನೀತಿಯಲ್ಲಿ ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಿಗೆ ಆದ್ಯತೆ ನೀಡಲಾಗಿದೆ. 2 ಹಾಗೂ 3 ನೇ ಹಂತ ನಗರದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಚೆನ್ನೈ-ಬೆಂಗಳೂರು ಹೆದ್ದಾರಿಯನ್ನು 50 ಸಾವಿರ ಕೋಟಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಚಳ್ಳಕೆರೆ ದೊಡ್ಡ ಉಳ್ಳಾರ್ತಿ ಬಳಿ 250 ಎಕೆರೆ ಕೈಗಾರಿಕೆ ಪ್ರದೇಶವನ್ನು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಭಿವೃದ್ಧಿಪಡಿಸಿದೆ. ಕೆಐಎಡಿಬಿಯಲ್ಲಿ ಪರಿಶಿಷ್ಠ ಜಾತಿಯವರಿಗೆ ಕೈಗಾರಿಕೆ ನಿವೇಶನ ಖರೀದಿಯಲ್ಲಿ ಶೇ.75ರಷ್ಟು ರಿಯಾಯಿತಿಯನ್ನು ನೀಡಲಾಗುವುದು. ಇದೇ ಯೋಜನೆಯನ್ನು ಸಾಮಾನ್ಯ ಉದ್ದಿಮೆದಾರಿಗೂ ವಿಸ್ತರಿಸುವ ಬಗ್ಗೆ ನೂತನ ಕೈಗಾರಿಕೆ ನೀತಿಯಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ವಿವರಣೆ ನೀಡಿದರು.
ಜವಳಿ ಮತ್ತು ಕೈಮಗ್ಗ ಇಲಾಖೆ ಉಪನಿರ್ದೇಶಕ ಲಕ್ಷ್ಮಣ ತಳವಾರ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 50 ಕೈಮಗ್ಗ ಸೊಸೈಟಿಗಳು ಇವೆ. 25 ವಿದ್ಯುತ್ ಚಾಲಿತ ಕೈಮಗ್ಗ ಘಟಕಗಳು ಇವೆ. ಕೈಮಗ್ಗ ಸೊಸೈಟಿಯಲ್ಲಿ 5760 ನೇಕಾರರು ಹಾಗೂ ವಿದ್ಯುತ್ ಚಾಲಿತ ಕೈಮಗ್ಗ ಘಟಕದಲ್ಲಿ 110 ಜನರು ಕೆಲಸನಿರ್ವಹಿಸುತ್ತಿದ್ದಾರೆ. ಸುಮಾರು ರೂ.76 ಕೋಟಿ ಹಣ ಜವಳಿ ಕೇತ್ರದಲ್ಲಿ ಹೂಡಿಕೆ ಆಗಿದೆ. ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ ಜವಳಿ ಇಲಾಖೆಯಿಂದ ಉತ್ತೇಜನ ನೀಡಲಾಗುತ್ತಿದ್ದು, ಎಸ್‌ಸಿ ಹಾಗೂ ಎಸ್‌ಟಿ ವರ್ಗದವರಿಗೆ ಶೇ.75 ರಷ್ಟು ಸಾಮಾನ್ಯ ವರ್ಗದವರಿಗೆ ಶೇ.50 ರಷ್ಟು ಸಹಾಯಧನ ನೀಡಲಾಗುತ್ತಿದೆ ಎಂದರು.
ಹಿರಿಯೂರು ಬಳಿ ರೂ. 27 ಕೋಟಿ ವೆಚ್ಚದಲ್ಲಿ ಬೈನರಿ ಅಪೆರಲ್ ಪಾರ್ಕ್ ಸ್ಥಾಪನೆಯಾಗಿದ್ದು, 3 ಘಟಗಳು ಕಾರ್ಯನಿರ್ವಹಿಸುತ್ತಿದ್ದು, 4600 ಜನರಿಗೆ ಉದ್ಯೋಗ ಮಾಡುತ್ತಿದ್ದಾರೆ. 2008-2013ವರೆಗೆ ರಾಜ್ಯ ಸರ್ಕಾರ ಸುವರ್ಣ ವಸ್ತ್ರ ನೀತಿ 2013 ರಿಂದ 20218ರ ವರೆಗೆ ನೂತನ ಜವಳಿ ನೀತಿ, 2019 ರಿಂದ 2024ರ ವರೆಗೆ ಸಿದ್ದ ಉಡುಪು ನೀತಿ ಅನುಷ್ಠಾನ ನೀತಿಗಳನ್ನು ಜಾರಿಗೊಳಿಸಿದೆ. ಇದರ ಅಡಿ ಘಟಕ ಸ್ಥಾಪನೆಗೆ ಸಹಾಯಧನ, 5 ವರ್ಷದ ವರೆಗೆ ಉಚಿತ ವಿದ್ಯುತ್, ಪಿಎಫ್ ಪಾವತಿ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಕೆಎಸ್ಎಫ್‌ಸಿ ಪ್ರಧಾನ ವ್ಯವಸ್ಥಾಪಕ ಕೆ. ಮಲ್ಲಿಕಾರ್ಜುನ ಮಾತನಾಡಿ, "ಉದ್ದಿಮೆದಾರರು ಹಾಗೂ ನವ ಉದ್ದಿಮೆದಾರರು ಸರ್ಕಾರದ ವತಿಯಿಂದ ನೀಡಲಾಗುವ ಸೌಲಭ್ಯಗಳನ್ನು ಪಡೆದುಕೊಂಡು ಯಶಸ್ವಿಯಾಗಬೇಕು. ಕೆಎಸ್‌ಎಫ್‌ಸಿ ಕಚೇರಿಯಲ್ಲಿ ಯಾವುದೇ ಮದ್ಯಸ್ಥಿಕೆದಾರರ ನೆರವು ಇಲ್ಲದೆ ನೇರವಾಗಿ ಶಾಖಾ ವ್ಯಸ್ಥಾಪಕರನ್ನು ಕಂಡು ತಮ್ಮ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಿ. ಚಿತ್ರದುರ್ಗ ಶಾಖೆಯ ಬಗ್ಗೆ ಯಾವುದಾದರೂ ದೂರಗಳು ಇದ್ದರೆ, ಕೇಂದ್ರ ಕಚೇರಿಯ ಗಮನಕ್ಕೆ ತನ್ನಿ. ಕರ್ನಾಟಕ ಹಣಕಾಸು ಸಂಸ್ಥೆ ಜನ ಸ್ನೇಹಿಯಾಗಿದ್ದು, ಸರ್ಕಾರ ಎಲ್ಲಾ ಯೋಜನೆಗಳ ಲಾಭವನ್ನು ಜನರಿಗೆ ತಲುಪಿಸುತ್ತಿದೆ ಎಂದರು.












Click it and Unblock the Notifications