Gram Panchayat; ಪಂಚಾಯಿತಿಗೆ ಒಬ್ಬ ಡಾಟಾ ಎಂಟ್ರಿ ಆಪರೇಟರ್ ನೇಮಕ
ಬೆಂಗಳೂರು, ಅಕ್ಟೋಬರ್ 26: ಕರ್ನಾಟಕ ಸರ್ಕಾರ ರಾಜ್ಯದ ಪ್ರತಿ ಗ್ರಾಮ ಪಂಚಾಯತಿಗೂ ಹೊಸದಾಗಿ ಒಂದು ಡಾಟಾ ಎಂಟ್ರಿ ಆಪರೇಟರ್ ನೇಮಕ ಮಾಡಲು ಆದೇಶ ಹೊರಡಿಸಿದೆ. ಈ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಆಯುಕ್ತರು, ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಈ ಕುರಿತು ಪತ್ರದ ಮೂಲಕ ಆದೇಶ ನೀಡಿದೆ. ಈ ಆದೇಶ ರಾಜ್ಯದ ಪ್ರತಿ ಗ್ರಾಮ ಪಂಚಾಯತಿಗಳಿಗೂ ಹೊಸದಾಗಿ ಒಂದು ಡಾಟಾ ಎಂಟ್ರಿ ಆಪರೇಟರ್ ಅನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳುವ ಕುರಿತು ಎಂಬ ವಿಷಯ ಒಳಗೊಂಡಿದೆ. ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 886 ಗ್ರಾವಕಾ 2016, ದಿ 29/09/2020 ಉಲ್ಲೇಖ ಮಾಡಲಾಗಿದೆ.

ಆದೇಶದ ವಿವರಗಳು; ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿ ಸಿಬ್ಬಂದಿ ಸ್ವರೂಪ, ವೇತನ ಶ್ರೇಣಿಗಳು, ನೇಮಕಾತಿ ವಿಧಾನ ಮತ್ತು ಇತರ ಸೇವಾ ಷರತ್ತುಗಳು, ನಿಯಮಗಳು) 2020ರಂತೆ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ನೇಮಕಾತಿ ವಿಧಾನ, ವಿದ್ಯಾರ್ಹತ ಆಯ್ಕೆ ಸಮಿತಿ ನಿಗದಿ ಪಡಿಸಿ ಆದೇಶಿಸಲಾಗಿರುತ್ತದೆ ಎಂದು ಹೇಳಿದೆ.
ಮುಂದುವರೆದು ಡಾಟಾ ಎಂಟ್ರಿ ಆಪರೇಟರ್‌ಗಳ ನೇರ ನೇಮಕಾತಿಗೆ ಸದರಿ ಹುದ್ದೆಗಳನ್ನು ಭರ್ತಿ ಮಾಡಲು ಜಿಲ್ಲೆಯನ್ನು ಒಂದು ಜೇಷ್ಠತಾ ಘಟಕವೆಂದು ಪರಿಗಣಿಸಿ ನಿರ್ದೇಶಿಸಿರುವಂತೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯ ಸಮಿತಿಯಲ್ಲಿ ಆಯ್ಕೆ ಮಾಡಿಕೊಳ್ಳತಕ್ಕದ್ದು ಹಾಗೂ ಸದರಿ ಹುದ್ದೆಗೆ ಆಯ್ಕೆಯಾದ ನೌಕರರಿಗೆ ಬಾಪೂಜಿ ಸೇವಾ ಕೇಂದ್ರದಲ್ಲಿ ಸಂಗ್ರಹವಾಗುವ ಮೊತ್ತದಿಂದ ವೇತನವನ್ನು ಪಾವತಿಸಲು ಈ ಮೂಲಕ ಸೂಚಿಸಿದೆ ಎಂದು ಆದೇಶ ತಿಳಿಸಿದೆ.
ಸರ್ಕಾರದ ಆದೇಶದ ಅನ್ವಯ ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಡಾಟಾ ಎಂಟ್ರಿ ಆಪರೇಟರ್ ನೇಮಕವಾಗಲಿದೆ. ಒಟ್ಟಾರೆಯಾಗಿ 5980 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಉಂಟಾಗಿರುವ ಕೆಲಸದ ಒತ್ತಡ ನಿರ್ವಹಣೆಗೆ ಇದು ಸಹಕಾರಿಯಾಗಲಿದೆ.
ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ನೇಮಕಗೊಂಡವರಿಗೆ ಕನಿಷ್ಠ 16,738 ರೂ. ವೇತನ ನಿಗದಿಪಡಿಸಲಾಗಿದೆ. ಬಾಪೂಜಿ ಸೇವಾ ಕೇಂದ್ರದಲ್ಲಿ ಸಂಗ್ರಹವಾಗುವ ಮೊತ್ತದಿಂದ ಈ ವೇತನ ಪಾವತಿಸಬೇಕು ಎಂದು ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರು ಸೂಚನೆ ನೀಡಿದ್ದಾರೆ.
ನೇಮಕಾತಿ ಸಂದರ್ಭದಲ್ಲಿ ಈಗಾಗಲೇ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ನೌಕರರ ಸಂಘದ ಅಧ್ಯಕ್ಷ ಭೀಮರೆಡ್ಡಿ ಪಾಟೀಲ್ ಆಗ್ರಹಿಸಿದ್ದಾರೆ.












Click it and Unblock the Notifications