Gram Panchayat Recruitment; ಗ್ರಾಮ ಪಂಚಾಯಿತಿ 733 ಹುದ್ದೆ ಭರ್ತಿ, ವಿವರ
ಬೆಂಗಳೂರು, ನವೆಂಬರ್ 20: ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ. ಕರ್ನಾಟಕ ಲೋಕಸೇವಾ ಆಯೋಗಕ್ಕೆ 733 ಹುದ್ದೆಗಳ ಭರ್ತಿಗೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಲಾಗಿದೆ, ನೇಮಕಾತಿ ಅಧಿಸೂಚನೆ ಶೀಘ್ರವೇ ಪ್ರಕಟವಾಗುವ ನಿರೀಕ್ಷೆ ಇದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೇಮಕಾತಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಡಿಸೆಂಬರ್ ತಿಂಗಳಿನಲ್ಲಿ ನೇಮಕಾತಿ ಅಧಿಸೂಚನೆ ಹೊರಬೀಳುವ ನಿರೀಕ್ಷೆ ಇದೆ. 2024ರಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಯಾವ-ಯಾವ ಹುದ್ದೆಗಳು?; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೆಪಿಎಸ್‌ಸಿಗೆ ಗ್ರಾಮ ಪಂಚಾಯಿತಿ ಮಟ್ಟದ ನೇಮಕಾತಿಗಾಗಿ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡಿದೆ. ಒಟ್ಟು 733 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಸಹ ಒಪ್ಪಿಗೆ ನೀಡಿದೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ), ಕಾರ್ಯದರ್ಶಿ ಗ್ರೇಡ್-1, ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳು ಸೇರಿ ಒಟ್ಟು 733 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ನವೆಂಬರ್ ತಿಂಗಳ ಅಂತ್ಯ ಅಥವ ಡಿಸೆಂಬರ್‌ನಲ್ಲಿ ಈ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟವಾಗಲಿದೆ. ಪ್ರಮುಖವಾಗಿ ರಾಜ್ಯದಲ್ಲಿ ಪಿಡಿಒ ಹುದ್ದೆಗಳು ಖಾಲಿ ಇದೆ. ಪ್ರತಿ ಪಿಡಿಒಗೆ 2-3 ಪಂಚಾಯಿತಿಗಳ ಪ್ರಭಾರ ನೀಡಲಾಗಿದ್ದು, ಕಾರ್ಯಭಾರ ಹೆಚ್ಚಿದೆ. ಆದ್ದರಿಂದ ನೇಮಕಾತಿಗೆ ಸರ್ಕಾರ ಮುಂದಾಗಿದೆ.
ಕಲ್ಯಾಣ ಕರ್ನಾಟಕ ಮತ್ತು ಸಾಮಾನ್ಯ ವೃಂದ ಸೇರಿ ಪಿಡಿಒ ಹುದ್ದೆಗಳ ಭರ್ತಿಗೆ ಸಹ ಇಲಾಖೆ ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಮೀಸಲಾತಿಗೆ ಸರ್ಕಾರದ ಹಸಿರು ನಿಸಾನೆ ಸಹ ಸಿಕ್ಕಿದೆ. ಈಗಿರುವ ನಿಯಮ, ವೇತನ ಶ್ರೇಣಿಗಳ ಮೂಲಕವೇ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ನೇಮಕಾತಿ ಅಧಿಸೂಚನೆ ಪ್ರಕಟವಾದರೆ ಕಲ್ಯಾಣ ಕರ್ನಾಟಕ ಭಾಗಕ್ಕೆ 106 ಪಿಡಿಒ, ಕಾರ್ಯದರ್ಶಿ ಗ್ರೇಡ್-1 85 ಹುದ್ದೆಗಳು ಲಭ್ಯವಾಗುವ ನಿರೀಕ್ಷೆ ಇದೆ. ಅಧಿಸೂಚನೆ ಪ್ರಕಟವಾದ ಬಳಿಕ ಯಾವ ವೃಂದದ ಎಷ್ಟು ಹುದ್ದೆ ಎಂಬ ಖಚಿತ ಮಾಹಿತಿ ಸಿಗಲಿದೆ.
ಅಧಿಸೂಚನೆ ಪ್ರಕಟವಾದರೆ 150 ಪಿಡಿಒ, ಕಾರ್ಯದರ್ಶಿ ಗ್ರೇಡ್-1 135, ಕಾರ್ಯದರ್ಶಿ ಗ್ರೇಡ್-2 343 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ 105 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇಲಾಖೆ ಸದ್ಯ ಇಷ್ಟು ಹುದ್ದೆಗಳ ಭರ್ತಿಗೆ ಮಾತ್ರ ಆರ್ಥಿಕ ಇಲಾಖೆಯ ಒಪ್ಪಿಗೆಯನ್ನು ಪಡೆದಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪಿಡಿಒ 660, ಕಾರ್ಯದರ್ಶಿ ಗ್ರೇಡ್-1 350, ಕಾರ್ಯದರ್ಶಿ ಗ್ರೇಡ್-2 415 ಹುದ್ದೆಗಳು ಖಾಲಿ ಇವೆ.
ನೇಮಕಾತಿಯ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, "ಪಿಡಿಒ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಸೇರಿ ವಿವಿಧ ಹುದ್ದೆಗಳ ಭರ್ತಿಗೆ ಈಗಾಗಲೇ ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹುದ್ದೆ ಖಾಲಿ ಇರುವುದರಿಂದ ಹಾಲಿ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ಹುದ್ದೆ ಭರ್ತಿಯಾದರೆ ಸಮಸ್ಯೆಗೆ ಪರಿಹಾರ ಸಿಗಲಿದೆ" ಎಂದು ಹೇಳಿದ್ದಾರೆ.












Click it and Unblock the Notifications