ಬೀದರ್‌ನಲ್ಲಿ ಮಾರ್ಚ್ 5ರಂದು ಉದ್ಯೋಗ ಮೇಳ, ವಿವರಗಳು
ಬೀದರ್, ಮಾರ್ಚ್ 04: ಬೀದರ್ ಜಿಲ್ಲೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಮಾರ್ಚ್ 5ರಂದು ಬೀದರ್‌ನಲ್ಲಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ. ವಿವಿಧ ಕಂಪನಿಗಳ ಸುಮಾರು 50 ಹುದ್ದೆಗಳಿಗೆ ನೇಮಕಾತಿಗಳು ನಡೆಯುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗತ್ಯ ದಾಖಲೆಗಳ ಜೊತೆ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು ಎಂದು ಕರೆ ನೀಡಲಾಗಿದೆ.
ಬೀದರ್ ನಗರದ ನೌಬಾದ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳವನ್ನು ಉದ್ಯೋಗ ಮತ್ತು ಮಾಹಿತಿ ಕೇಂದ್ರ ಹಾಗೂ ರಸಾಯನ ಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಲಾಗಿದೆ. ಬೆಳಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯ ತನಕ ಉದ್ಯೋಗ ಮೇಳ ನಡೆಯಲಿದೆ.

ಹೈದರಾಬಾದ್ ನಗರದ ಪಟಂಚೂರಿನಲ್ಲಿರುವ ನ್ಯೂಲಾಂಡ್ ಲ್ಯಾಬೋರೆಟರೀಸ್ ಕಂಪನಿಯಲ್ಲಿನ ಸುಮಾರು 50ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲು ಈ ಮೇಳ ಆಯೋಜನೆ ಮಾಡಲಾಗಿದೆ. ರಸಾಯನ ಶಾಸ್ತ್ರದಲ್ಲಿ ಪಿಯುಸಿ ಉತ್ತೀರ್ಣ/ ಅನುತ್ತೀರ್ಣಗೊಂಡ ಹಾಗೂ ಬಿಎಸ್‌ಸಿ, ಎಂಎಸ್‌ಇ ಪದವಿ ಪಡೆದ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು.
ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿ ಪ್ರತಿಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ನಾಲ್ಕು ಫೋಟೋದೊಂದಿಗೆ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ತರಬೇತಿಗೆ ಅರ್ಜಿ ಹಾಕಿ: ಕೊಪ್ಪಳ ತೋಟಗಾರಿಕೆ ಇಲಾಖೆ ಉಪ ನಿರ್ದೇಶರು ತೋಟಗಾರಿಕಾ ಇಲಾಖೆಯಿಂದ 2025-26ನೇ ಸಾಲಿನಲ್ಲಿ ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ತೋಟಗಾರಿಕೆ ತರಬೇತಿಯು ಮುನಿರಾಬಾದ್ ಗ್ರಾಮದಲ್ಲಿರುವ ತರಬೇತಿ ಕೇಂದ್ರದಲ್ಲಿ 2025ರ ಮೇ 2 ರಿಂದ 2026ರ ಫೆಬ್ರವರಿ 28ರ ತನಕ ಈ ತರಬೇತಿ ನಡೆಯಲಿದ್ದು, ಕೊಪ್ಪಳ ಜಿಲ್ಲೆಯ ಆಸಕ್ತ ರೈತ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದ್ದಾರೆ.
ಈ ತರಬೇತಿಗಾಗಿ ಸಾಮಾನ್ಯ ಅಭ್ಯರ್ಥಿ 16, ಪರಿಶಿಷ್ಠ ಜಾತಿ 3 ಮತ್ತು ಪರಿಶಿಷ್ಟ ಪಂಗಡ 1ರಂತೆ ಒಟ್ಟು 20 ಅಭ್ಯರ್ಥಿಗಳ ಗುರಿ ನಿಗದಿ ಪಡಿಸಲಾಗಿದೆ. ತರಬೇತಿಯಲ್ಲಿ ಪಾಲ್ಗೊಳ್ಳಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲರಿಗೆ ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ, ಮಾಜಿ ಸೈನಿಕರಿಗೆ 33 ರಿಂದ ಗರಿಷ್ಠ 65 ವರ್ಷ ಹಾಗೂ ಇತರರಿಗೆ ಕನಿಷ್ಠ 18 ವರ್ಷ ಗರಿಷ್ಠ 30 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಕನ್ನಡ ವಿಷಯಗಳೊಂದಿಗೆ ಎಸ್‌ಎಸ್‌ಎಲ್‌ಸಿ ಪರಿಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಅಭ್ಯರ್ಥಿಯು ಚೆನ್ನಾಗಿ ಕನ್ನಡ ಓದುವುದು, ಬರೆಯುವುದು ಮತ್ತು ಮಾತನಾಡುವುದನ್ನು ಬಲ್ಲವರಾಗಿರಬೇಕು.
ತರಬೇತಿಯು ರೈತರ ಮಕ್ಕಳಿಗಾಗಿರುವುದರಿಂದ ಅಭ್ಯರ್ಥಿಯು ತಂದೆ, ತಾಯಿ ಅಥವಾ ಪೋಷಕರು (ತಂದೆ/ ತಾಯಿ ಇಲ್ಲದ ಪಕ್ಷದಲ್ಲಿ) ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಬಗ್ಗೆ ಪಹಣಿಯನ್ನು ನೀಡುವುದು ಕಡ್ಡಾಯವಾಗಿರುತ್ತದೆ. ಅಭ್ಯರ್ಥಿಗಳು ತೋಟದ ಕೆಲಸಗಳನ್ನು ಮಾಡುವಷ್ಟು ದೃಢಕಾಯರಾಗಿರಬೇಕು.
ಅರ್ಜಿ ಸಲ್ಲಿಕೆ ಮಾಡುವ ಸಾಮಾನ್ಯ ಅಭ್ಯರ್ಥಿಗಳು ರೂ. 30, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ರೂ. 15 ಫೋಸ್ಟಲ್ ಆರ್ಡರ್ (ಐಪಿಓ) ಅಥವಾ ಡಿಮ್ಯಾಂಡ್ ಡ್ರಾಫ್ಟ್ (ಡಿಡಿ) ಅನ್ನು ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ)ಕೊಪ್ಪಳ ರವರ ಹೆಸರಿನಲ್ಲಿ ಪಡೆದು ಅರ್ಜಿ ಜೊತೆಗೆ ಲಗತ್ತಿಸಬೇಕು.
ಅರ್ಜಿಗಳನ್ನು ಮಾರ್ಚ್ 30ರ ತನಕ ತೋಟಗಾರಿಕೆ ಉಪ ನಿರ್ದೇಶಕರು (ಜಿ.ಪಂ)ಕೊಪ್ಪಳ, ಸಹಾಯಕ ತೋಟಗಾರಿಕೆ ನಿರ್ದೇಕರು (ರಾವ), ಕೊಪ್ಪಳ ಅವರ ಕಛೇರಿಯಲ್ಲಿ ಪಡೆಯಬಹುದು ಅಥವಾ ವೆಬ್ ಸೈಟ್ www.horticulture.kar.nic.in ಮುಖಾಂತರ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಅರ್ಜಿಗಳನ್ನು ಭರ್ತಿ ಮಾಡಿ ತೋಟಗಾರಿಕೆ ಉಪ ನಿರ್ದೇಶಕರು (ಜಿ.ಪಂ.) ಕೊಪ್ಪಳ ಅಥವಾ ಸಹಾಯಕ ತೋಟಗಾರಿಕೆ ನಿರ್ದೇಕರು (ರಾವ) ಕೊಪ್ಪಳ ಕಛೇರಿಗೆ ಸಲ್ಲಿಸಬೇಕು. ಏಪ್ರಿಲ್ 8ರಂದು ಬೆಳಗ್ಗೆ 10 ಗಂಟೆಗೆ ತೋಟಗಾರಿಕೆ ಉಪನಿರ್ದೇಶಕರ ಕಛೇರಿಯಲ್ಲಿ ಸಂದರ್ಶನ ಏರ್ಪಡಿಸಲಾಗಿದ್ದು, ಈ ಸಂದರ್ಶನಕ್ಕೆ ಎಲ್ಲಾ ಮೂಲ ದಾಖಾಲಾತಿಗಳೊಂದಿಗೆ ಹಾಜರಾಗಬೇಕು. ಇದಕ್ಕಾಗಿ ಪ್ರತ್ಯೇಕ ಸಂದರ್ಶನ ಪತ್ರವನ್ನು ಕಳುಹಿಸಲಾಗುವುದಿಲ್ಲ ಎಂದು ತಿಳಿಸಿದೆ.












Click it and Unblock the Notifications