ನರೇಗಾ ಯೋಜನೆಯಡಿ ನೀಡುವ ಕೂಲಿ ಏಪ್ರಿಲ್ 1ರಿಂದ ಪರಿಷ್ಕರಣೆ
ಬೆಂಗಳೂರು, ಮಾರ್ಚ್ 30: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೀಡುತ್ತಿದ್ದ ಕೂಲಿಯನ್ನು 2025-26ನೇ ಸಾಲಿನ ಆರ್ಥಿಕ ವರ್ಷದಿಂದ ಏರಿಕೆ ಮಾಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಆದೇಶವನ್ನು ಹೊರಡಿಸಿದೆ. ಆದ್ದರಿಂದ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ನರೇಗಾ ಯೋಜನೆಯಡಿ ಕಾರ್ಮಿಕರು ಪಡೆಯುವ ಕೂಲಿ ಏರಿಕೆಯಾಗಲಿದೆ. ಗ್ರಾಮೀಣ ಭಾಗದ ಬಡ ಜನರಿಗೆ ನರೇಗಾ ಯೋಜನೆ ಅನುಕೂಲವಾಗಿದ್ದು, ಅವರ ಗ್ರಾಮದಲ್ಲಿಯೇ ಅವರಿಗೆ ಕೆಲಸ ಸಿಗಲಿದ್ದು, ಕೆಲಸ ಅರಸಿಕೊಂಡು ಗುಳೆ ಹೋಗುವುದು ತಪ್ಪಲಿದೆ.
ಏಪ್ರಿಲ್ 1 ರಿಂದ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನೀಡುವ ಕೂಲಿಯನ್ನು 370 ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ಅಲ್ಲದೇ ಬೇಸಿಗೆಯಲ್ಲಿ ನಿರಂತರವಾಗಿ ಕಾರ್ಮಿಕರಿಗೆ ಕೆಲಸ ನೀಡಲಾಗುತ್ತದೆ ಎಂದು ಬಳ್ಳಾರಿ ಜಿಲ್ಲಾ ಪಂಚಾಯಿತಿ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್ ಹೇಳಿದ್ದಾರೆ.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ 2025-26ನೇ ಸಾಲಿನಿಂದ ಜಾರಿಗೆ ಬರುವಂತೆ ನರೇಗಾ ಯೋಜನೆಯಡಿ ಕಾರ್ಯ ನಿರ್ವಹಣೆ ಮಾಡುವ ಕಾರ್ಮಿಕರ ಕೂಲಿಯನ್ನು ಪರಿಷ್ಕರಣೆ ಮಾಡಿದೆ. ಯೋಜನೆಯಡಿ ನೀಡುತ್ತಿದ್ದ ಕೂಲಿಯು ಏಪ್ರಿಲ್ 1 ರಿಂದ 370 ರೂ. ಗೆ ಹೆಚ್ಚಳವಾಗಲಿದೆ.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೂಲಿಯನ್ನು ಪ್ರಸ್ತುತ ಆರ್ಥಿಕ ವರ್ಷದಿಂದ 370 ರೂ.ಗಳಿಗೆ ಪರಿಷ್ಕರಿಸಲಾಗಿದೆ. ಏಪ್ರಿಲ್ 1ರಿಂದ ಅನ್ವಯವಾಗುವಂತೆ ಪರಿಷ್ಕೃತ ಕೂಲಿಯನ್ನು ಪಾವತಿಸಲು ಕ್ರಮವನ್ನು ಕೈಗೊಳ್ಳಲು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಆದೇಶಿಸಿದೆ.
ನಿರಂತರವಾಗಿ ಕೆಲಸ: ಈಗಾಗಲೇ ಬೇಸಿಗೆ ಆರಂಭವಾಗಿದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಗ್ರಾಮೀಣ ಭಾಗದ ಜನರು ಕೆಲಸ ಅರಸಿ ಗುಳೆ ಹೋಗುವುದು ತಪ್ಪಿಸಲು ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಕೆಲಸ ನೀಡಲಾಗುತ್ತದೆ.

ಕೆಲಸ ಅರಸಿ ಜನರು ವಲಸೆ ಹೋಗುವುದನ್ನು ತಡೆಗಟ್ಟಲು ಗ್ರಾಮದ ಬಡ ಕೂಲಿ ಕಾರ್ಮಿಕರು ನಮೂನೆ-6ರಲ್ಲಿ ಅರ್ಜಿಯನ್ನು ಗ್ರಾಮ ಪಂಚಾಯತಿಗೆ ಸಲ್ಲಿಸಿ, ಕೂಲಿ ಕೆಲಸವನ್ನು ತಮ್ಮ ಗ್ರಾಮದಲ್ಲೇ ಪಡೆಯಬಹುದು. ಪ್ರತಿ ಕುಟುಂಬವು 100 ದಿನಗಳವರೆಗೆ ನರೇಗಾ ಕೆಲಸದಲ್ಲಿ ಭಾಗವಹಿಸಬಹುದು.
ನರೇಗಾ ಯೋಜನೆ ಸಿಗುವ ಸೌಲಭ್ಯಗಳು
* ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ವಿಶೇಷ ಚೇತನರು ಹಾಗೂ ಹಿರಿಯ ನಾಗರಿಕರಿಗೆ ದಿನ ಒಂದಕ್ಕೆ ನಿಗದಿತ ಕೂಲಿ ಪಡೆಯಲು ನಿರ್ವಹಿಸಬೇಕಾದ ಕೆಲಸದ ಪ್ರಮಾಣದಲ್ಲಿ ಶೇ.50ರಷ್ಟು ರಿಯಾಯತಿ ಇರುತ್ತದೆ.
* ಶೇ.60ಕ್ಕಿಂತ ಹೆಚ್ಚಿನ ಪ್ರಮಾಣದ ಮಹಿಳೆಯರನ್ನು ಹೊಂದಿರುವ ಕಾಮಗಾರಿಗಳಲ್ಲಿ ಮಹಿಳೆಯರು ನಿರ್ವಹಿಸಬೇಕಾದ ಕೆಲಸದ ಪ್ರಮಾಣದಲ್ಲಿ ಶೇ.10ರಷ್ಟು ರಿಯಾಯತಿ ನೀಡಲಾಗುತ್ತದೆ.
* ನರೇಗಾ ಯೋಜನೆಯ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ 6 ತಿಂಗಳ ಗರ್ಭಿಣಿಯರಿಗೆ ಮಗುವಿನ ಜನನದವರೆಗೆ ಹಾಗೂ ಬಾಣಂತಿಯರಿಗೆ ಮಗುವಿನ ಜನನ ದಿನಾಂಕದಿಂದ 6 ತಿಂಗಳವರೆಗೆ ಯೋಜನೆಯಡಿ ನಿಗದಿತ ಕೂಲಿ ಪಡೆಯಲು ನಿಗದಿಪಡಿಸಲಾದ ಕೆಲಸದ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲಾಗಿದೆ.
* ರಿಯಾಯತಿ ಪಡೆಯಲು ಆರೋಗ್ಯ ಇಲಾಖೆಯು ನೀಡುವ ತಾಯಿ ಕಾರ್ಡ್ ಅನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ.
* ನಮೂನೆ-1 ರಲ್ಲಿ 18 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರು ಉದ್ಯೋಗ ಚೀಟಿಗೆ ಅರ್ಜಿ ಸಲ್ಲಿಸುವುದು. ಅರ್ಜಿ ಜೊತೆಗೆ ಪಾಸ್ ಪೋರ್ಟ್ ಅಳತೆಯ ಫೋಟೋ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಖಾತೆ ಮಾಹಿತಿಯನ್ನು ಆಯಾ ಗ್ರಾಮ ಪಂಚಾಯತಿಗೆ ನೀಡಿ, ಉದ್ಯೋಗ ಚೀಟಿಯನ್ನು ಪಡೆದುಕೊಳ್ಳಬಹುದು.












Click it and Unblock the Notifications