BSNL Job Cut: ಬಿಎಸ್ಎನ್ಎಲ್‌ನಲ್ಲಿ 19 ಸಾವಿರ ಉದ್ಯೋಗ ಕಡಿತ
ಬೆಂಗಳೂರು, ಡಿಸೆಂಬರ್ 30: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್‌ಎನ್‌ಎಲ್)ನಲ್ಲಿಯೂ ಉದ್ಯೋಗ ಕಡಿತವಾಗಲಿದೆಯೇ?. ಸದ್ಯದ ಮಾಹಿತಿ ಪ್ರಕಾರ ಹೌದು. ಉದ್ಯೋಗಿಗಳ ಸ್ವಯಂ ನಿವೃತ್ತಿ ಯೋಜನೆ 2.0 ಅಡಿ 19 ಸಾವಿರ ಉದ್ಯೋಗ ಕಡಿತವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಪ್ರಸ್ತಾಪ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಸ್ವಯಂ ನಿವೃತ್ತಿ ಯೋಜನೆ ಘೋಷಣೆ ಮಾಡಲು ಹಣಕಾಸು ಸಚಿವಾಲಯದ ಒಪ್ಪಿಗೆ ಬಾಕಿ ಇದೆ.
ಬಿಎಸ್‌ಎನ್‌ಎಲ್ ಉದ್ಯೋಗಿಗಳ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತಂದು ಸಿಬ್ಬಂದಿಗಳ ಸಂಖ್ಯೆಯನ್ನು ಶೇ 35ರಷ್ಟು ಕಡಿಮೆಗೊಳಿಸಲು ಮುಂದಾಗಿದೆ ಎಂದು ವರದಿಗಳು ಹೇಳುತ್ತಿವೆ. ದೂರಸಂಪರ್ಕ ಇಲಾಖೆ (ಡಿಒಟಿ) 2.0 ಸ್ವಯಂ ನಿವೃತ್ತಿ ಯೋಜನೆ (ವಿಆರ್‌ಎಸ್) ಅನುಷ್ಠಾನಗೊಳಿಸಲು ಹಣಕಾಸು ಸಚಿವಾಲಯವನ್ನು ಕೋರಿದೆ. ಸಚಿವಾಲಯದ ಒಪ್ಪಿಗೆ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಒಪ್ಪಿಗೆ ಸಿಗಬೇಕಿದೆ.

ವಿಆರ್‌ಎಸ್ 2.0 ಯೋಜನೆ ಘೋಷಣೆ ಮಾಡಿದರೆ ಅದರಿಂದ ಉಂಟಾಗುವ ವೆಚ್ಚ ಸುಮಾರು 15,000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಆದ್ದರಿಂದ ಸಚಿವಾಲಯದ ಒಪ್ಪಿಗೆ ಬಳಿಕ ವಿಆರ್‌ಎಸ್ ಯೋಜನೆ ಘೋಷಣೆ ಮಾಡಿ, ಉದ್ಯೋಗ ಕಡಿತ ಮಾಡಲಾಗುತ್ತದೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಪ್ರಸ್ತಾವನೆ ಸಲ್ಲಿಕೆಯಾಗಿದೆ: ಬಿಎಸ್‌ಎನ್‌ಎಲ್ ಉದ್ಯೋಗಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಈ ವರದಿ ಮಾಡಲಾಗಿದೆ. ಹೆಸರು ಹೇಳಲು ಇಚ್ಛಿಸಿದ ಉದ್ಯೋಗಿ, "ಬಿಎಸ್‌ಎನ್‌ಎಲ್ ಮಂಡಳಿ ಡಿಒಟಿಗೆ ಉದ್ಯೋಗಿಗಳ ಸಂಖ್ಯೆಯನ್ನು ವಿಆರ್‌ಎಸ್ ಮೂಲಕ 18 ರಿಂದ 19 ಸಾವಿರ ಕಡಿತಗೊಳಿಸುವ ಕುರಿತು ಪ್ರಸ್ತಾವನೆ ಸಲ್ಲಿಸಿದೆ" ಎಂದು ಹೇಳಿದ್ದಾರೆ.
"ಪ್ರಸ್ತುತ ಬಿಎಸ್‌ಎನ್‌ಎಲ್ ತನ್ನ ಆದಾಯದ ಶೇ 38ರಷ್ಟನ್ನು ಉದ್ಯೋಗಿಗಳ ವೇತನಕ್ಕಾಗಿ ಖರ್ಚು ಮಾಡುತ್ತಿದೆ. ವಾರ್ಷಿಕ ತನ್ನ ವೆಚ್ಚವನ್ನು ಸುಮಾರು 5 ಸಾವಿರ ಕೋಟಿ ಕಡಿಮೆ ಮಾಡಲು ರೂಪುರೇಷೆ ತಯಾರು ಮಾಡಲಾಗಿದೆ. ಅಲ್ಲದೇ ಈ ಮೂಲಕ ಸೇವೆಯನ್ನು ಸಹ ಪಾರದರ್ಶಕಗೊಳಿಸಲು ಮುಂದಾಗಿದೆ" ಎಂದು ತಿಳಿಸಿದ್ದಾರೆ.
ಕಳೆದ ಸೋಮವಾರವೇ ಬಿಎಸ್‌ಎನ್‌ಎಲ್ ವಿಆರ್‌ಎಸ್ ಮೂಲಕ ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸುವ ಪ್ರಸ್ತಾವನೆಗೆ ಒಪ್ಪಿಗೆಯನ್ನು ಸೂಚಿಸಿದೆ. ಆದರೆ ದೂರಸಂಪರ್ಕ ಇಲಾಖೆ 2.0 ಸ್ವಯಂ ನಿವೃತ್ತಿ ಯೋಜನೆ ಘೋಷಣೆ ಮಾಡುವ ಮೊದಲು ಹಣಕಾಸು ಸಚಿವಾಲಯ, ಸಚಿವ ಸಂಪುಟದ ಒಪ್ಪಿಗೆಯನ್ನು ಪಡೆಯಬೇಕಿದೆ.
ಹಲವು ದಿನಗಳಿಂದ 2.0 ಸ್ವಯಂ ನಿವೃತ್ತಿ ಯೋಜನೆ ಘೋಷಣೆ ಕುರಿತು ಚರ್ಚೆಗಳು ನಡೆಯುತ್ತಿವೆ. ಆದರೆ ಈ ಕುರಿತು ಇನ್ನೂ ಯಾವುದೇ ಅಂತಿಮ ತೀರ್ಮಾನವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಿಎಸ್‌ಎನ್‌ಎಲ್ 2023-24ನೇ ಹಣಕಾಸು ವರ್ಷದಲ್ಲಿ 21,302 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ನಿಗಮದ ಆದಾಯ ಹೆಚ್ಚಾಗಿದೆ. ಆದರೆ ಸ್ವಯಂ ನಿವೃತ್ತಿ ಯೋಜನೆ ಯಡಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
2019ರಲ್ಲಿ ಬಿಎಸ್‌ಎನ್‌ಎಲ್ ಸ್ವಯಂ ನಿವೃತ್ತಿ ಯೋಜನೆ 1.0 ಘೋಷಣೆ ಮಾಡಿತ್ತು.
BSNL ಮತ್ತು MTNL ತಮ್ಮ ಉದ್ಯೋಗಿಗಳಿಗೆ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಆಕರ್ಷಕ ಸ್ವಯಂ ನಿವೃತ್ತಿ ಯೋಜನೆಯನ್ನು ನೀಡಿತ್ತು. ಇದರ ವೆಚ್ಚವನ್ನು ಭಾರತ ಸರ್ಕಾರವು ಬಜೆಟ್ ಬೆಂಬಲದ ಮೂಲಕ ಭರಿಸಿತ್ತು. ಪಿಂಚಣಿ, ಗ್ರಾಚ್ಯುಟಿ ಮತ್ತು ಇತರ ವೆಚ್ಚವನ್ನು ಭರಿಸಲಾಗಿತ್ತು.












Click it and Unblock the Notifications