Namma Metro: ಚಾಲಕರ ನೇಮಕಾತಿ, ಕನ್ನಡಿಗರ ಆಕ್ರೋಶಕ್ಕೆ ಮಣಿದ ಬಿಎಂಆರ್‌ಸಿಎಲ್
ಬೆಂಗಳೂರು, ಮಾರ್ಚ್ 17: ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಹಳದಿ ಮಾರ್ಗ (ಆರ್. ವಿ. ರಸ್ತೆ-ಬೊಮ್ಮಸಂದ್ರ)ದಲ್ಲಿ ಮೆಟ್ರೋ ರೈಲುಗಳ ವಾಣಿಜ್ಯ ಸಂಚಾರ ಆರಂಭಿಸಲು ತಯಾರಿ ನಡೆಸಿದೆ. ಇದಕ್ಕಾಗಿ 50 ಚಾಲಕ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿತ್ತು. ಆದರೆ ಇದರಲ್ಲಿನ ಕೆಲವು ನಿಯಮಗಳು ಈ ಹುದ್ದೆಗೆ ಕನ್ನಡಿಗರು ಅರ್ಜಿ ಹಾಕದಂತೆ ತಡೆದಿತ್ತು. ಕರ್ನಾಟಕದಲ್ಲಿ ಕನ್ನಡಿರನ್ನು ಬಿಟ್ಟು ಬೇರೆ ಭಾಷೆಯವರಿಗೆ ಉದ್ಯೋಗ ನೀಡಲು ಬಿಎಂಆರ್‌ಸಿಎಲ್ ಮುಂದಾಗಿದೆ ಎಂಬುದು ಆಕ್ರೋಶಕ್ಕೆ ಕಾರಣವಾಗಿತ್ತು.
ಬಿಎಂಆರ್‌ಸಿಎಲ್ 50 ಮೆಟ್ರೋ ರೈಲು ಚಾಲಕರ ನೇಮಕಾತಿಯ ನಿಯಮಗಳನ್ನು ಬದಲಾವಣೆ ಮಾಡಬೇಕು. ಕನ್ನಡಿಗರು ಅರ್ಜಿ ಸಲ್ಲಿಕೆ ಮಾಡಲು ಅನುಕೂಲವಾಗುವಂತೆ ನಿಯಮ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿಯೂ ಈ ಕುರಿತು ಚರ್ಚೆಗಳು ನಡೆದಿದ್ದವು. ಬಿಎಂಆರ್‌ಸಿಎಲ್ ನೇಮಕಾತಿ ನಿಯಮವನ್ನು ಕನ್ನಡಿಗರು ಖಂಡಿಸಿದ್ದರು.

ಈಗ ಹೋರಾಟ, ಆಕ್ರೋಶಕ್ಕೆ ಮಣಿದಿರುವ ಬಿಎಂಆರ್‌ಸಿಎಲ್ ನಮ್ಮ ಮೆಟ್ರೊ ರೈಲು ಚಾಲಕರ ಹುದ್ದೆಯ ನೇಮಕಾತಿ ನಿಯಮವನ್ನು ಬದಲಾವಣೆ ಮಾಡಲು ಒಪ್ಪಿಗೆ ನೀಡಿದೆ. ಈಗಿರುವ ನೇಮಕಾತಿ ನಿಯಮಗಳ ಅನ್ವಯ ಕನ್ನಡಿಗರು ಅರ್ಜಿ ಸಲ್ಲಿಕೆ ಮಾಡಲು ಆಗುವುದಿಲ್ಲ. ಆದರೆ ಬಿಎಂಆರ್‌ಸಿಎಲ್ ನೇಮಕಾತಿಗೆ ವಿಧಿಸಿರುವ ಷರತ್ತುಗಳನ್ನು ಬದಲಾಯಿಸಿ, ಕನ್ನಡಿಗರು ಅರ್ಜಿ ಸಲ್ಲಿಕೆ ಮಾಡುಲು ಅನುಕೂಲ ಮಾಡಿಕೊಡಲಿದೆ.
ರೂಪೇಶ್ ರಾಜಣ್ಣ ಪೋಸ್ಟ್: ಈ ಕುರಿತು ರೂಪೇಶ್ ರಾಜಣ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. 'ಮೆಟ್ರೋದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಇಂದು ನಮ್ಮ ಯುಕವೇ ಹಾಗೂ ನಕಸೆ ತಂಡದಿಂದ ಬಿಎಂಆರ್‌ಸಿಎಲ್ ಮುಖ್ಯಕಚೇರಿಯಲ್ಲಿ ಎಂಡಿ ಮಹೇಶ್ವರ ರಾವ್ ಅವರನ್ನು ಭೇಟಿ ಮಾಡಿ ಈ ಕೂಡಲೇ ನಿಯಮಗಳನ್ನು ತೆಗೆದು ಕನ್ನಡಿಗರನ್ನೇ ನೇಮಕ ಮಾಡಲು ಒತ್ತಾಯ ಮಾಡಲಾಗಿ, ನಿಯಮಗಳನ್ನು ತಿದ್ದುಪಡಿ ಮಾಡಿ ಕನ್ನಡಿಗರಿಗೆ ಉದ್ಯೋಗ ನೀಡಲು ಒಪ್ಪಿದ್ದಾರೆ' ಎಂದು ಹೇಳಿದ್ದಾರೆ.
ಕನ್ನಡಿಗರ ಆಕ್ರೋಶಕ್ಕೆ ಕಾರಣವಾದ ನಿಯಮಗಳನ್ನು ತಿಳಿಯೋಣ. ಮೊದಲು ಬಿಎಂಆರ್‌ಸಿಎಲ್ ಚಾಲಕ ಹುದ್ದೆಗೆ ನೇಮಕಾತಿ ಮಾಡಿಕೊಂಡು ಅವರಿಗೆ ತರಬೇತಿ ನೀಡುತ್ತಿತ್ತು. ಆದರೆ ಈ ಬಾರಿ ಆ ನಿಯಮದಲ್ಲಿ ಬದಲಾವಣೆ ಮಾಡಲಾಗಿತ್ತು.
ಇಂಜಿನಿಯರಿಂಗ್ ಟ್ರೇಡ್‌ನಲ್ಲಿ ಡಿಪ್ಲೊಮಾ ಪದವಿ ಪಡೆದವರು, ಯಾವುದೇ ಮೆಟ್ರೋದಲ್ಲಿ ಚಾಲಕರಾಗಿ ಮೂರು ವರ್ಷ ಅನುಭವ ಹೊಂದಿರುವವರು ಅರ್ಜಿ ಸಲ್ಲಿಕೆ ಮಾಡಬೇಕು ಎಂದು ನೇಮಕಾತಿ ನಿಯಮ ತಿಳಿಸಿತ್ತು. ಕರ್ನಾಟಕದಲ್ಲಿ ಯಾವ ನಗರದಲ್ಲಿಯೂ ಮೆಟ್ರೋ ಸೇವೆ ಇಲ್ಲ. ಬಿಎಂಆರ್‌ಸಿಎಲ್ ನಿಯಮದ ಅನ್ವಯ ಚೆನ್ನೈ ಮೆಟ್ರೋ, ಹೈದರಾಬಾದ್ ಮೆಟ್ರೋ, ದೆಹಲಿ ಮೆಟ್ರೋದಲ್ಲಿ ಕೆಲಸ ಮಾಡಿದವರು ಅರ್ಜಿ ಹಾಕಬೇಕಿತ್ತು.
ಈ ಅನುಭವದ ಕಾರಣಕ್ಕೆ ಕನ್ನಡಿಗರು ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸುವಂತಿರಲಿಲ್ಲ. ಆದ್ದರಿಂದ ಕನ್ನಡಿಗರು ಈ ನಿಯಮದ ವಿರುದ್ಧ ಆಕ್ರೋ ವ್ಯಕ್ತಪಡಿಸಿದ್ದರು. ಬಿಎಂಆರ್‌ಸಿಎಲ್ ಬೇರೆ ರಾಜ್ಯದ ಯುವಕ/ ಯುವತಿಯರಿಗೆ ಉದ್ಯೋಗ ನೀಡಲು ಹೊರಟಿದೆ ಎಂದು ಆರೋಪಿದ್ದರು. ನಿಯಮವನ್ನು ಮೊದಲು ಬದಲಾವಣೆ ಮಾಡಿ ಎಂದು ಒತ್ತಾಯಿಸಲಾಗಿತ್ತು.
ಬಿಎಂಆರ್‌ಸಿಎಲ್ ಗುತ್ತಿಗೆ ಆಧಾರದ ಮೇಲೆ ಚಾಲಕ ಹುದ್ದೆಗೆ ನೇಮಕಾತಿಯನ್ನು ಮಾಡಿಕೊಳ್ಳುತ್ತಿದೆ. ಈ ಅವಧಿ 5 ವರ್ಷಗಳಾಗಿದ್ದು, ಬಳಿಕ ಅದನ್ನು ಮುಂದುವರೆಸುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಬಿಎಂಆರ್‌ಸಿಎಲ್ ಉನ್ನತ ಹುದ್ದೆಗಳಲ್ಲಿ ಬೇರೆ ರಾಜ್ಯದವರೇ ಇದ್ದು, ಅವರು ತಮ್ಮ ರಾಜ್ಯದ ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿ ನಿಯಮ ರೂಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿತ್ತು.












Click it and Unblock the Notifications