AI ಅತಿಯಾಗಿ ನೆಚ್ಚಿಕೊಂಡಿದ್ದೇ ಮುಳ್ಳಾಯಿತು: ಕೆಲಸ ಕಳೆದುಕೊಳ್ಳುವ ಹಂತಕ್ಕೆ ತಲುಪಿದ ಐಟಿ ಉದ್ಯೋಗಿ
AI ಇದೀಗ ಎಲ್ಲಾ ಕಡೆ ಇದರದ್ದೇ ಸದ್ದು. AIಯಿಂದ ಅನೇಕ ಜನರು ಕೆಲಸ ಕಳೆದುಕೊಳ್ಳುವ ಹಾಗಾಗಿದೆ. AI ಕಾರಣದಿಂದಲೇ ಬಹಳಷ್ಟು ಕಂಪನಿಗಳು ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿದ್ದಾರೆ. AI ಒಬ್ಬ ವ್ಯಕ್ತಿಗೆ ಪರ್ಯಾಯವಾಗಿ ಕೆಲಸ ಮಾಡಬಲ್ಲದು ಮತ್ತು ವ್ಯಕ್ತಿಗಿಂತ ವೇಗವಾಗಿ ಕೆಲಸ ಮಾಡಿ ಮುಗಿಸಬಲ್ಲದು ಎನ್ನುವುದೇ ಈ ಬೆಳವಣಿಗೆಗೆ ಕಾರಣ. ಹಾಗಾಗಿ ಈಗ ಎಲ್ಲಾ ಕ್ಷೇತ್ರಗಳಲ್ಲಿ AIಗೆ ಬೇಡಿಕೆ ಹೆಚ್ಚುತ್ತಿದೆ. ಇವೆಲ್ಲದರ ಮಧ್ಯೆ, ಇಲ್ಲೊಬ್ಬ ವ್ಯಕ್ತಿ AI ಮೇಲೆ ಹೆಚ್ಚು ಅವಲಂಬಿತರಾಗಿದ್ದೇ ಅವರು ಕೆಲಸ ಕಳೆದುಕೊಳ್ಳುವುದಕ್ಕೆ ಕಾರಣವಾಗಿದೆ.
AI: ಉದ್ಯೋಗ ಭದ್ರತೆಯ ಬಗ್ಗೆ ಕಳವಳ
ಐಟಿ ಉದ್ಯೋಗಿಯೊಬ್ಬರು ಕೆಲಸದ ಸ್ಥಳದಲ್ಲಿನ ಅನಿಶ್ಚಿತತೆಯ ಅನುಭವವನ್ನು ಶೇರ್ ಮಾಡಿದ್ದಾರೆ. AI ಟೂಲ್‌ಗಳನ್ನೇ ಹೆಚ್ಚು ಹೆಚ್ಚು ಬಳಸಿದ್ದು ಮತ್ತು ಅವುಗಳ ಮೇಲೆಯೇ ಸಂಪೂರ್ಣವಾಗಿ ಅವಲಂಬಿತರಾಗಿದ್ದೇ ತಮ್ಮ ಸಹೋದ್ಯೋಗಿ ಕೆಲಸ ಕಳೆದುಕೊಳ್ಳುವುದಕ್ಕೆ ಕಾರಣವಾಯಿತು ಎಂದು ಹೇಳಿದ್ಧಾರೆ. ಐಟಿ ವಲಯದಲ್ಲಿ ಉದ್ಯೋಗ ಭದ್ರತೆಯ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಾಗಿ ತುರ್ತು ನಿಧಿ ಅಥವಾ ಎಮರ್ಜೆನ್ಸಿ ಫಂಡ್ ಅನ್ನು ನಿರ್ಮಿಸುವ ಅವಶ್ಯಕತೆಯನ್ನು ಒತ್ತಿ ಹೇಳಿದ್ದಾರೆ.

ಮೂರೇ ತಿಂಗಲ್ಲಿ ವಾರ್ನಿಂಗ್
ಐಟಿ ಉದ್ಯೋಗ ಮಾರ್ಕೆಟ್ ಮೇಲೆ AI ಯ ಪ್ರಭಾವ ಹೆಚ್ಚಾಗಿ ತೋರುತ್ತಿದೆ ಎಂದು ಹೇಳುವ ಮೂಲಕ ಈ ಕತೆಯನ್ನು ವಿವರಿಸಿದ್ದಾರೆ. ತಾನು ಹೊಸ ಕಂಪನಿಗೆ ಸೇರಿ ಹತ್ತು ತಿಂಗಳಾಗಿದೆ. ಆದರೆ ಮೊದಲ ಮೂರು ತಿಂಗಳ ನಂತರ ನನ್ನ ಪರ್ಫಾಮೆನ್ಸ್ ಬಗ್ಗೆ ವಾರ್ನಿಂಗ್ ಬಂದಿರುವ ಬಗ್ಗೆ ಹೇಳಿಕೊಂಡಿದ್ದಾರೆ. ನನ್ನ ಕೆಲಸ ಕ್ಲೈಂಟ್‌ನ ನಿರೀಕ್ಷೆಗೆ ತಕ್ಕಂತೆ ಇಲ್ಲ ಎನ್ನುವ ಮೂಲಕ ವಾರ್ನಿಂಗ್ ಕೊಡಲಾಗಿತ್ತು. ತನ್ನ ಹಿಂದಿನ ಕಂಪನಿ ಬಹಳ ಟಾಕ್ಸಿಕ್ ಆಗಿತ್ತು.
ಹಾಗಾಗಿ ಇಲ್ಲಿ ಸ್ವಲ್ಪ ದಿನ ಆರಾಮಾಗಿದ್ದು ನಂತರ ಕೆಲಸ ಚುರುಕು ಮಾಡಿದರಾಯಿತು ಎನ್ನುವ ಯೋಚನೆ ಇವರದ್ದಾಗಿತ್ತು. ಆದರೆ ಯಾವಾಗ ವಾರ್ನಿಂಗ್ ಬಂತೋ ಅವರು ಕೆಲಸದ ಕಡೆಗೆ ಫೋಕಸ್ ಮಾಡುವುದಕ್ಕೆ ಶುರು ಮಾಡುತ್ತಾರೆ. ವಾರ್ನಿಂಗ್‌ನ ಹಿಂದಿನ ಉದ್ದೇಶ ಅವರಿಗೆ ತಿಳಿದಿತ್ತು. ಹಾಗಾಗಿ ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾರೆ. ಟೀಂಮ್‌ನಲ್ಲಿ ತನಗಾಗಿ ಒಂದು ಸ್ಥಾನವನ್ನು ಗಳಿಸುವುದಕ್ಕಾಗಿ ಶ್ರಮ ಹಾಕುತ್ತಾರೆ. ಕೊನೆಗೆ ಇವರಿಗೆ ಇವರ ಕೆಲಸಕ್ಕೆ ಬಿ +/ಎ ರೇಟಿಂಗ್‌ಗೆ ಬರುವುದಕ್ಕೆ ಶುರುವಾಗುತ್ತದೆ. ಹೀಗೆ ಎಲ್ಲವೂ ಸರಿ ಹೋಗುತ್ತದೆ.
ಪದೇ ಪದೇ ಸಿಗ್ತಾ ಇತ್ತು ವಾರ್ನಿಂಗ್
ಇದಾದ ಬಳಿಕ ಇವರ ತಂಡಕ್ಕೆ ಮತ್ತೊಬ್ಬನ ಸೇರ್ಪಡೆಯಾಗುತ್ತದೆ. ಅವರ ಪ್ರಕಾರ, ಸಹೋದ್ಯೋಗಿಯ ಅನುಭವ ಹೆಚ್ಚಿತ್ತು. ಆದರೂ ಕೆಲಸವನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುತ್ತಿದ್ದರು. ಅವರ ಕೆಲಸ ಬಹಳ ನಿಧಾನವಾಗಿ ಸಾಗುತ್ತಿತ್ತು. ಅವರು ಕೆಲಸಗಳಿಗಾಗಿ AI ಮೇಲೆ ಅತಿಯಾಗಿ ಅವಲಂಬಿತರಾಗಿದ್ದರು. ಅದು ಅವರ ಕೆಲಸದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಸಹೋದ್ಯೋಗಿಗೆ ಅವರ ಕೆಲಸದ ರೀತಿ ನೀತಿಯ ಬಗ್ಗೆ ಪದೇ ಪದೇ ವಾರ್ನಿಂಗ್ ಸಿಗ್ತಾ ಇತ್ತು.
ಮುಂದಿನ ಹೆಜ್ಜೆ ವಜಾ
ಸುಮಾರು ಎರಡು ತಿಂಗಳ ವಾರ್ನಿಂಗ್ ಬಳಿಕ ಕಂಪನಿಯ ನಿರ್ದೇಶಕರು ಸಹೋದ್ಯೋಗಿಯನ್ನು ಕರೆದು ಯಾವ ಪ್ರಾಜೆಕ್ಟ್ ಅನ್ನೂ ವಹಿಸದೆ ಕೂರಿಸಿದ್ದಾರೆ. ಅಂದರೆ ಈಗ ಅವರು ಯಾವ ಕೆಲಸವನ್ನೂ ಮಾಡುವಂತಿಲ್ಲ. ಕಂಪನಿಯ ಮುಂದಿನ ಹೆಜ್ಜೆ ಕೆಲಸದಿಂದ ವಜಾ ಮಾಡುವುದು ಎನ್ನುವುದು ಇಲ್ಲಿ ಎಲ್ಲರಿಗೂ ಸ್ಪಷ್ಟ ಎಂದು ರೆಡ್ಡಿಟ್ ಬಳಕೆದಾರರು ಹೇಳಿಕೊಂಡಿದ್ದಾರೆ.
ತುರ್ತು ನಿಧಿ ಬಹಳ ಮುಖ್ಯ
ಈ ಅನುಭವದ ಮೂಲಕ ಆರ್ಥಿಕವಾಗಿ ನಮ್ಮನ್ನು ಸದೃಢರನ್ನಾಗಿಸಿಕೊಳ್ಳುವುದು ಎಷ್ಟು ಮುಖ್ಯ ಎನ್ನುವುದನ್ನು ಅರಿತುಕೊಂಡರಂತೆ. ಇಲ್ಲಿ ನಾನು ಯಾರನ್ನೂ ಹೆದರಿಸುತ್ತಿಲ್ಲ, ಒಬ್ಬ ಸಹೋದರನಾಗಿ ಆರ್ಥಿಕ ಸಲಹೆ ನೀಡುತ್ತಿದ್ದೇನೆ. ದಯವಿಟ್ಟು ತುರ್ತು ನಿಧಿಯನ್ನು ರಚಿಸಿ. ಯಾವುದೇ ಮ್ಯೂಜಿಕಲ್ ಕಾನ್ಸರ್ಟ್ ಟಿಕೆಟ್ ಖರೀದಿ ಮಾಡುವುದು ಅಗತ್ಯವಿದೆಯೇ? ಕಾರಿನ ಮೇಲೆ ಹೂಡಿಕೆ ಬೇಕೇ? ಎನ್ನುವುದನ್ನು ನಿರ್ಧಾರ ಮಾಡಿಕೊಳ್ಳಿ. ಸದ್ಯಕ್ಕೆ ಅಗತ್ಯ ವಸ್ತುಗಳ ಮೇಲೆ ಮಾತ್ರ ಗಮನಹರಿಸಿ. ಸಾಲವನ್ನು ಆದಷ್ಟು ಕಡಿಮೆ ಮಾಡಿ. ಕನಿಷ್ಠ ಮುಂದಿನ ಎರಡು ವರ್ಷಗಳಿಗಾದರೂ ಅದು ನನ್ನ ಯೋಜನೆಯಾಗಿದೆ ಎಂದು ಅವರು ಬರೆದಿದ್ದಾರೆ.
ಇಂಟರ್ನೆಟ್‌ನಲ್ಲಿ ಕಾಮೆಂಟ್
ಈ ಪೋಸ್ಟ್‌ಗೆ ಅನೇಕ ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.ಕೆಲಸದ ಅನಿಶ್ಚಿತತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಎಮರ್ಜೆನ್ಸಿ ಫಂಡ್ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಐಟಿ ಉದ್ಯೋಗಗಳು ತುಂಬಾ ಅನಿಶ್ಚಿತತೆಯಿಂದ ಕೂಡಿದೆ ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ವಾಸ್ತವವಾಗಿ ಬಹಳ ಅಗತ್ಯವಿರುವ ಅಂಶ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೌದು AI ಅನ್ನು ಹೆಚ್ಚು ಅವಲಂಬಿಸುವುದು ಅಡ್ಡ ಪರಿಣಾಮವನ್ನೂ ಬೀರಬಹುದು ಎಂದು ಹೇಳಿದ್ದಾರೆ.


Click it and Unblock the Notifications
