ಕೈ ಮೀರಿತು ಆಫ್ರಿಕನ್ನರ ಡ್ರಗ್ ದಂಧೆ, ಬಾಂಗ್ಲಾದೇಶಿಯರ ವೇಶ್ಯಾವಾಟಿಕೆ ದಂಧೆ
ಬೆಂಗಳೂರು, ಆ. 11: ರಾಜಧಾನಿ ಬೆಂಗಳೂರಿನಲ್ಲಿ ಒಂದಡೆ ಆಫ್ರಿಕನ್ನರ ಡ್ರಗ್ ದಂಧೆ. ಇನ್ನೊಂದೆಡೆ ಬಾಂಗ್ಲಾದೇಶಿಯರ ವೇಶ್ಯಾವಾಟಿಕೆ ಜಾಲ. ಈ ಎರಡೂ ದಂಧೆಗಳು ಬೆಂಗಳೂರು ಪೊಲೀಸರ ಕೈ ಮೀರಿ ಬೆಳೆದು ನಿಂತಿವೆ.
ಡ್ರಗ್ ಹಾಗೂ ವೇಶ್ಯಾವಾಟಿಕೆ ವಿರುದ್ಧ ಪೊಲೀಸರು ಎಷ್ಟೇ ಕೇಸು ದಾಖಲಿಸಿದರೂ ಅದು ಅಕ್ರಮವಾಗಿ ವಾಸಿಸಿರುವ ವಿದೇಶಿಯರಿಗೆ ನೆರವಾಗಲಿದೆ ವಿನಃ ಈ ಮಾರಕ ಜಾಲಕ್ಕೆ ಮುಕ್ತಿ ಕೊಡಿಸುವಂತೆ ಕಾಣುತ್ತಿಲ್ಲ! ರಾಷ್ಟ್ರ ರಾಜಧಾನಿ ದೆಹಲಿಗೆ ಹೋಲಿಸಿದ್ರೆ ಬೆಂಗಳೂರಿನಲ್ಲಿಯೇ ಅತಿ ಹೆಚ್ಚು ಆಫ್ರಿಕನ್ನರು ಹಾಗೂ ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿದ್ದಾರೆ.
ಅಕ್ರಮವಾಗಿ ವಾಸಿಸುತ್ತಿರುವ ವಿದೇಶಿಯರಿಗೆ ಕಡಿವಾಣ ಹಾಕದಿದ್ದರೆ ಬೆಂಗಳೂರು ಭವಿಷ್ಯದಲ್ಲಿ ವೇಶ್ಯಾವಾಟಿಕೆ ಹಾಗೂ ಡ್ರಗ್ ಜಾಲದ ರಾಜಧಾನಿಯಾಗಲಿದೆ ಎಂದು ಪೊಲೀಸರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ ಆಫ್ರಿಕನ್ನರ ಡ್ರಗ್ ದಂಧೆ ಹಾಗೂ ಬಾಂಗ್ಲಾದೇಶಿಯರ ವೇಶ್ಯಾವಾಟಿಕೆ ದಂಧೆಯ ಕರಾಳ ಸತ್ಯವನ್ನು "ಒನ್ ಇಂಡಿಯಾ ಕನ್ನಡ" ಇಲ್ಲಿ ಬಿಚ್ಚಿಡುತ್ತಿದೆ.
ಆಫ್ರಿಕನ್ನರ ಸ್ವರ್ಗ ಬೆಂಗಳೂರು ಯಾಕೆ ?: ರಾಷ್ಟ್ರ ರಾಜಧಾನಿ ದೆಹಲಿಯ ಗಲ್ಲಿ ಹುಡುಕಿದರೂ ಆಫ್ರಿಕನ್ ಪ್ರಜೆಗಳು ಸಿಗುವುದು ಬಹು ಅಪರೂಪ. ಸಿಕ್ಕರೂ ಅವರು ನೈಜವಾಗಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಸಿಂಹಪಾಲು. ಅದೇ ಬೆಂಗಳೂರಿನ ವಿಚಾರಕ್ಕೆ ಬಂದರೆ ಸುಮಾರು 20 ಸಾವಿರ ಆಫ್ರಿಕನ್ ಪ್ರಜೆಗಳು ಇಲ್ಲಿ ವಾಸವಾಗಿದ್ದಾರೆ ಎನ್ನುತ್ತವೆ ಪೊಲೀಸ್ ಅಂಕಿ ಅಂಶಗಳು.
ಅದರಲ್ಲಿ ಶೇ. 80 ರಷ್ಟು ಮಂದಿ ಅಕ್ರಮವಾಸಿಗಳು ಹಾಗೂ ಡ್ರಗ್ ಜಾಲದಲ್ಲಿ ಸಿಲುಕಿರುವರು. ವಿಪರ್ಯಾಸವೆಂದರೆ ಬೆಂಗಳೂರಿನಲ್ಲಿ ಆಫ್ರಿಕನ್ನರ ಸಂಘವಿದೆ. ಅದರ ಅಧ್ಯಕ್ಷ ಬೊಸ್ಕೊ ಸ್ಥಳೀಯ ಮಹಿಳೆಯನ್ನು ಮದುವೆಯಾಗಿ ಭಾರತದ ಪ್ರಜೆಯಾಗಲು ಹೊರಟಿದ್ದಾನೆ. ಯಾವುದೇ ಆಫ್ರಿಕನ್ ಪ್ರಜೆಗೆ ಸಮಸ್ಯೆಯಾದ ಕೂಡಲೇ ಸಂಘ ಬೆಂಬಲಕ್ಕೆ ನಿಲ್ಲುವಂತಹ ವಾತಾವರಣ ನಿರ್ಮಿಸಿಕೊಂಡಿದ್ದಾರೆ.
ಬೆಂಗಳೂರಿನ ರಾಮಮೂರ್ತಿನಗರ, ಹೊರಮಾವು, ಬಾಗಲೂರು, ಕಮ್ಮನಹಳ್ಳೀ, ಬಾಣಸವಾಡಿ ಆಫ್ರಿಕನ್ ಪ್ರಜೆಗಳ ನೆಚ್ಚಿನ ತಾಣ. ಇದರ ಜತೆಗೆ ಹೊರ ವಲಯದ ಕಾಲೇಜುಗಳಲ್ಲಿ ವಾಸವಾಗಿದ್ದಾರೆ. ಆಫ್ರಿಕನ್ನರಿಗೆ ಬೆಂಗಳೂರು ಯಾಕೆ ಇಷ್ಟ ಅಂದ್ರೆ ಇಲ್ಲಿ ಪೊಲೀಸರು ಕೇಸು ಹಾಕಿ ಜೈಲಿಗೆ ಕಳುಹಿಸುತ್ತಾರೆ. ಜಾಮೀನು ಪಡೆದು ಹೊರ ಬಂದರೆ ಮತ್ತದೇ ಜೀವನ.
ಆದರೆ ದೆಹಲಿಯಲ್ಲಿ ಸುಮಾರು ಒಂದು ಸಾವಿರ ಮಂದಿ ವಾಸಿಸಲ್ಪಡುವ ವಿದೇಶಿಯರಿಗಾಗಿ ಪ್ರತ್ಯೇಕ ಡಿಟೆನ್ಷನ್ ಸೆಂಟರ್ ತೆರೆದಿದ್ದಾರೆ. ಆಫ್ರಿಕನ್ ಪ್ರಜೆಗಳು ಡಿಟೆನ್ಷನ್ ಕೇಂದ್ರದಲ್ಲಿ ಮೂರು ದಿನ ಇರಲಾರರು. ಹೀಗಾಗಿ ವಾಪಸು ತವರು ದೇಶಕ್ಕೆ ಮರಳುತ್ತಾರೆ. ಆದರೆ, ಬೆಂಗಳೂರಿನಲ್ಲಿ ಸುಸಜ್ಜಿತ ಡಿಟೆಕ್ಷನ್ ಸೆಂಟರ್ ಇಲ್ಲದಿರುವುದು ಆಫ್ರಿಕನ್ ಪ್ರಜೆಗಳು ಬೆಂಗಳೂರು ನೆಚ್ಚಿಕೊಳ್ಳಲು ಕಾರಣ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿ.

ಕಾಲೇಜುಗಳ ದನ ದಾಹವೇ ಡ್ರಗ್ ಜಾಲ ಮೂಲ
ಉನ್ನತ ಶಿಕ್ಷಣದ ಹೆಸರಿನಲ್ಲಿ ಹಣ ಮಾಡಲು ತಲೆಯೆತ್ತಿರುವ ವೃತ್ತಿಪರ ಕಾಲೇಜುಗಳೇ ಆಫ್ರಿಕನ್ ಡ್ರಗ್ ಪೆಡ್ಲರ್ ಗಳ ಆಗಮನಕ್ಕೆ ಕಾರಣ ಎನ್ನುತ್ತವೆ ಪೊಲೀಸರು ಈವರೆಗಳು ದಾಖಲಿಸಿರುವ ಕೇಸುಗಳ ತನಿಖಾ ಸಾರಾಂಶ. ಉನ್ನತ ಶಿಕ್ಷಣಕ್ಕಾಗಿ ಹೊರ ರಾಜ್ಯದ ವಿದ್ಯಾರ್ಥಿಗಳನ್ನು ಸೆಳೆಯಲು ಕಾಲೇಜುಗಳು ಏಜೆಂಟರನ್ನು ನೇಮಿಸಿವೆ. ಹೀಗಾಗಿ ಆಫ್ರಿಕನ್ ಪ್ರಜೆಗಳು ವಿದ್ಯಾಭ್ಯಾಸದ ಹೆಸರಿನಲ್ಲಿ ಭಾರತಕ್ಕೆ ಬರುತ್ತಾರೆ. ದಾಖಲಾತಿ, ಶುಲ್ಕ ವಸೂಲಿ ಬಗ್ಗೆ ವಿದೇಶಿ ವಿದ್ಯಾರ್ಥಿಗಳ ಬಗ್ಗೆ ಕಾಲೇಜುಗಳು ಯಾವ ಜವಾಬ್ಧಾರಿಯೂ ತೆಗೆದುಕೊಳ್ಳುವುದಿಲ್ಲ.
ಕಾಲೇಜಿಗೆ ಬರದಿದ್ದರೂ ಹಣ ಕೊಟ್ಟರೆ ಪದವಿ ನೀಡುತ್ತವೆ. ಹೀಗಾಗಿ ಆಫ್ರಿಕನ್ ಪ್ರಜೆಗಳು ಹೆಚ್ಚಾಗಿ ಬೆಂಗಳೂರು ತರಹದ ನಗರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲಿನ ಕಾನೂನು ವೀಕ್ ಇರುವುದನ್ನು ತಿಳಿದು ಡ್ರಗ್ ಜಾಲಕ್ಕೆ ಇಳಿಯುತ್ತಾರೆ. ಕ್ರೆಡಿಟ್ ಕಾರ್ಟ್ ಚೀಟಿಂಗ್, ಡ್ರಗ್ ಜಾಲ ಇಲ್ಲವೇ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಕಳೆದ ಹತ್ತು ವರ್ಷದಲ್ಲಿ ಅತಿ ಹೆಚ್ಚು ಆಫ್ರಿಕನ್ ಪ್ರಜೆಗಳು ಬೆಂಗಳೂರಿಗೆ ಹೆಚ್ಚು ಬಂದಿದ್ದಾರೆ.
ಇವರ ವಿರುದ್ಧ ವೇಶ್ಯಾವಾಟಿಕೆ, ಡ್ರಗ್ ಜಾಲ, ಕ್ರೆಡಿಟ್ ಕಾರ್ಡ್ ವಂಚನೆ ಪ್ರಕರಣ ದಾಖಲಿಸಿದರೂ ಅವರು ಕ್ಯಾರೆ ಎನ್ನುವುದಿಲ್ಲ. ವಕೀಲರನ್ನು ಇಟ್ಟುಕೊಂಡು ಜಾಮೀನು ಪಡೆದು ಮತ್ತೆ ತಮ್ಮ ಕರಾಳ ದಂಧೆಗಳನ್ನು ಮುಂದುವರೆಸುತ್ತಿದ್ದಾರೆ. ಇದರ ಜತೆಗೆ ಸಾರ್ಕ್ ಸದಸ್ಯ ರಾಷ್ಟ್ರಗಳ ವಿದ್ಯಾಭ್ಯಾಸಕ್ಕಾಗಿ ಕೇಂದ್ರ ಸರ್ಕಾರ ನೀಡುವ ಅನುದಾನ ಪಡೆಯಲು ಕಾಲೇಜುಗಳು ಆಫ್ರಿಕನ್ನರನ್ನು ದಾಖಲಿಸಿಕೊಂಡು ಶುಲ್ಕ ಪಡೆಯುತ್ತವೆ. ಅವರನ್ನು ಬೀದಿಗೆ ಬಿಟ್ಟು ಡ್ರಗ್ ಜಾಲ ನಡೆಸಲು ಕೆಂಪು ಹಾಸಿಗೆ ಹಾಕಿಕೊಟ್ಟಿವೆ.

ಕೇಸು ಹಾಕಿಸಿಕೊಂಡು ಇಲ್ಲಿಯೇ ವಾಸಕ್ಕೆ ಪ್ಲಾನ್
ವಿದ್ಯಾರ್ಥಿ ವೀಸಾ ಮೇಲೆ ಬಂದು ನೆಲಸುವ ಆಫ್ರಿಕನ್ನರು ಅವಧಿ ಮುಗಿದರೂ ತಮ್ಮ ದೇಶಕ್ಕೆ ಮರಳುವುದಿಲ್ಲ. ಯಾವುದಾದರೂ ಅಕ್ರಮ ದಂಧೆ ಮಾಡಿ ಮೋಜು ಜೀವನ ನಡೆಸುತ್ತಾರೆ. ವೀಸಾ ಅವಧಿ ಮುಗಿಯುತ್ತಿದ್ದಂತೆ ಬೇಕಾಗಿಯೇ ಯಾವುದಾದರೂ ಕೇಸು ಹಾಕಿಸಿಕೊಂಡು ಜೈಲಿಗೆ ಹೋಗುತ್ತಾರೆ.
ಒಮ್ಮೆ ಕ್ರಿಮಿನಲ್ ಕೇಸು ದಾಖಲಾದರೆ ಅದು ಇತ್ಯರ್ಥ ಆಗುವವರೆಗೂ ದೇಶ ಬಿಟ್ಟು ಹೋಗುವಂತಿಲ್ಲ ಎನ್ನುತ್ತದೆ ನಮ್ಮ ಕಾನೂನು. ಹೀಗಾಗಿ ಆಫ್ರಿಕನ್ ಅಕ್ರಮ ವಾಸಿಗಳ ವಿರುದ್ಧ ಕೇಸು ಹಾಕುವುದು ಅವರ ಪಾಲಿಗೆ ವರದಾನವೇ ಹೊರತು ಅಪಾಯವಿಲ್ಲ.
ಜಾಮೀನು ಪಡೆದು ಮತ್ತೆ ತಮ್ಮ ದಂಧೆಗಳನ್ನು ಮುಂದುವರೆಸುತ್ತಾರೆ. ಇನ್ನು ವೀಸಾ ಅವಧಿ ಮುಗಿದ ವಿದೇಶಿ ಪ್ರಜೆಗಳನ್ನು ಪತ್ತೆ ಮಾಡುವುದೇ ಬೆಂಗಳೂರು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ವೇಶ್ಯಾವಾಟಿಕೆ, ಡ್ರಗ್ ಜಾಲದ ಮೇಲೆ ಸಾವಿರ ಕೇಸು ದಾಖಲಿಸಿದರೂ ಆಫ್ರಿಕನ್ ಡ್ರಗ್ ಜಾಲ ನಿಯಂತ್ರಣ ತರಲು ಸಾಧ್ಯವಿಲ್ಲ. ಆಫ್ರಿಕನ್ ಪ್ರಜೆಗಳ ಆಗಮನಕ್ಕೆ ಕಾರಣವಾಗುತ್ತಿರುವ ಮೂಲ ಸಮಸ್ಯೆ ಪತ್ತೆ ಹಚ್ಚಿ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ಬೆಂಗಳೂರಿನಲ್ಲಿ ಇವರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದ್ದು, ಡ್ರಗ ಜಾಲ ಕೂಡ ಮತ್ತಷ್ಟು ವಿಸ್ತರಣೆಯಾಗಲಿದೆ ಎಂದು ಪೊಲೀಸ್ ಅಧಿಕಾರಿ ಕಳವಳ ವ್ಯಕ್ತಪಡಿಸಿದ್ದಾರೆ.

ಆಫ್ರಿಕನ್ನರು ಜಾಗ ಖಾಲಿಗೆ ಇಂದೋಂದೇ ಮಾರ್ಗ
ಆಫ್ರಿಕನ್ನರಿಗೆ ಪೊಲೀಸರು ದಾಖಲಿಸುವ ಕೇಸಿನ ಬಗ್ಗೆಯಾಗಲೀ, ಕೊಡುವ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ಬಗ್ಗೆಯಾಗಲೀ ಭಯವಿಲ್ಲ. ಆದರೆ ಭಯ ಬೀಳುವುದು ಡಿಟೆಂಕ್ಷನ್ ಸೆಂಟರ್ ಗೆ ಹೋದಾಗ ಮಾತ್ರ. ಆದರೆ ಬೆಂಗಳೂರಿನಲ್ಲಿ ಸಮರ್ಥ ಡಿಟೆಕ್ಷನ್ ಸೆಂಟರ್ ಇಲ್ಲದಿರುವುದು ಆಫ್ರಿಕನ್ನರ ಅಕ್ರಮವಾಗಿ ವಾಸ ಮಾಡಲಿಕ್ಕೆ ಮೂಲ ಕಾರಣವಾಗಿದೆ. ನೆಲಮಂಗಲದಲ್ಲಿ ನೆಪ ಮಾತ್ರಕ್ಕೆ ಅಕ್ರಮ ವಾಸಿಗಳ ಕೇಂದ್ರವನ್ನು ತೆರೆಯಲಾಗಿದೆ. ಅಲ್ಲಿ ಯಾವ ಸುರಕ್ಷತೆಯೂ ಇಲ್ಲ.
ಕೇವಲ ಹತ್ತಿಪ್ಪತ್ತು ಮಂದಿ ಇರಬಹುದು. ಕನಿಷ್ಠ 1 ಸಾವಿರ ವಿದೇಶಿ ಪ್ರಜೆಗಳನ್ನು ಕೂಡಿ ಹಾಕುವ ಸಾಮರ್ಥ್ಯವುಳ್ಳ ಡಿಟೆಂಕ್ಷನ್ ಸೆಂಟರ್ ನಿರ್ಮಾಣ ಮಾಡಬೇಕು. ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಸೆಲ್ ನಲ್ಲಿ ಹಾಕಿಡಬೇಕು. ಆಫ್ರಿಕನ್ ಪ್ರಜೆಗಳು ಡಿಟೆಕ್ಷನ್ ಸೆಂಟರ್ ಬಾಗಿಲು ನೋಡುತ್ತಿದ್ದಂತೆ ತಮ್ಮ ಸ್ವಂತ ದೇಶಕ್ಕೆ ಓಡಿ ಹೋಗುತ್ತಾರೆ.
ಡಿಟೆಕ್ಷನ್ ಸೆಂಟರ್ ಗೆ ಹೋದ್ರೆ ಬಿಡುಗಡೆ ಭಾಗ್ಯ ಇರುವುದಿಲ್ಲ. ಹೀಗಾಗಿ ಅವರು ವಾಪಸು ಮಾತೃ ದೇಶಕ್ಕೆ ತೆರಳುತ್ತಾರೆ. ಡಿಟೆಂಕ್ಷನ್ ಸೆಂಟರ್ ಗೆ ಅಕ್ರಮ ವಾಸಿಗಳನ್ನು ತಳ್ಳುವ ಕೆಲಸ ಮಾಡುವುದು (FRRO )ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ ಅಧಿಕಾರಿಗಳು.
ಬೆಂಗಳೂರಿನಲ್ಲಿ ಕೇವಲ ಒಂದು ಮನೆ ಗಾತ್ರದ ಡಿಟೆಂಕ್ಷನ್ ಸೆಂಟರ್ ನೆಲಮಂಗಲ ಬಳಿ ಸರ್ಕಾರ ತೆರೆದಿದೆ. ಅಲ್ಲಿ ಬೆರಳೆಣಿಕೆ ಮಂದಿಯನ್ನು ಇಡಬಹುದಷ್ಟೇ. ಹೀಗಾಗಿ ಬೆಂಗಳೂರಿನಲ್ಲಿ ಅಕ್ರಮವಾಗಿ ಆಫ್ರಿನ್ ಪ್ರಜೆಗಳ ಹೆಚ್ಚು ವಾಸವಾಗಿದ್ದಾರೆ.
ನೆಲಮಂಗಲದಲ್ಲಿ ನೆಪಕ್ಕೆ ಡಿಟೆನ್ಷನ್ ಸೆಂಟರ್ ತೆರೆದಿದ್ದರೂ ಅಲ್ಲಿ ಮೂರು ಮಂದಿ ಕೂಡ ಇರಲ್ಲ. ಹೀಗಾಗಿ ಆಫ್ರಿಕನ್ ಪ್ರಜೆಗಳಿಗೆ ಬೆಂಗಳೂರು ಅಂದ್ರೆ ಪಂಚ ಪ್ರಾಣ ಎನ್ನುತ್ತಾರೆ ಪೊಲೀಸರು. ಕಾಲೇಜುಗಳ ಹೊಣೆಗೇಡಿತನ ಹಾಗೂ ವಿದೇಶಿಯರ ನೋಂದಣಿ ಪ್ರಾದೇಶಿಕ ಕಚೇರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಂಗಳೂರು ಆಫ್ರಿಕನ್ನರ ಡ್ರಗ್ ಸಿಟಿಯಾಗಿ ಪರಿವರ್ತನೆಯಾಗುತ್ತಿದೆ ಎಂಬ ಆರೋಪ ದಟ್ಟವಾಗಿ ಕೇಳಿ ಬರುತ್ತಿವೆ.

ಆಫ್ರಿಕನ್ನರ ಅಸಲಿ ಸತ್ಯ ಗೊತ್ತಾಗಿದ್ದು ಜೆ.ಸಿ. ನಗರ ಪ್ರಕರಣದಲ್ಲಿ
ಬೆಂಗಳೂರಿನಲ್ಲಿ ಆಫ್ರಿಕನ್ನರು ಒಂದು ಸಂಘ ಕಟ್ಟಿಕೊಂಡಿದ್ದಾರೆ, ಅದಕ್ಕೊಬ್ಬ ಲೀಡರ್ ಇದ್ದಾನೆ ಎಂಬುದು ಗೊತ್ತಾಗಿದ್ದು ಜೆ.ಸಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಆಫ್ರಿಕನ್ನರ ದಾಂಧಲೆ ಪ್ರಕರಣ.
ಡ್ರಗ್ ಪೆಡ್ಲರ್ ಹೃದಯಾಘಾತದಿಂದ ಸಾವನ್ನಪ್ಪಿದ ಪ್ರಕರಣ ಖಂಡಿಸಿ ಆಫ್ರಿಕನ್ನರು ಪೊಲೀಸರ ಎದುರು ಬೀದಿಗೆ ಇಳಿದು ಹೋರಾಟ ನಡೆಸಿದರು. ಪೊಲೀಸರ ಮೇಲೆ ಕೈ ಮಾಡಿ ಕೊನೆಗೂ ಲಾಠಿ ಏಟುಗಳಿಗೆ ತುತ್ತಾದರು. ಆಗಲೇ ಆಫ್ರಿಕನ್ನರ ಸಂಘದ ಅಧ್ಯಕ್ಷ ಬಾಸ್ಕೋ ಎಂಬಾತ ಇದ್ದಾನೆ.
ಆಫ್ರಿಕನ್ನರನ್ನು ಒಗ್ಗೂಡಿಸಿ ಅವರ ಜಾಲ ವಿಸ್ತರಿಸುವ ಕಾರ್ಯದಲ್ಲಿ ಸಂಘ ತೊಡಗಿಸಿಕೊಂಡಿದೆ ಎಂಬ ಸತ್ಯ ಪೊಲೀಸರಿಗೆ ಅರಿವಾಗಿದ್ದು. ಇನ್ನು ಆಫ್ರಿಕನ್ ಪ್ರಜೆಗಳ ವಿರುದ್ಧ ಸಾವಿರಾರು ಕೇಸು ದಾಕಲಾದರೂ ಒಬ್ಬ ಆಫ್ರಿಕನ್ ಪ್ರಜೆ ಬೆಂಗಳೂರು ಬಿಟ್ಟು ಹೋಗಿಲ್ಲ ಎಂಬುದು ಅಚ್ಚರಿಯ ಸಂಗತಿ. ಅದರ ಮೂಲ ಹುಡುಕಿದಾಗಲೇ ಆಫ್ರಿಕನ್ ಡ್ರಗ್ ಜಾಲದ ಅಸಲಿ ಸತ್ಯಗಳು ಹೊರಗೆ ಬಂದಿದ್ದು, ಅನೇಕರು ಬಂಧನಕ್ಕೆ ಒಳಗಾಗಿದ್ದಾರೆ.

ಬಾಂಗ್ಲಾದೇಶಿಯರಿಗೆ ನೆಲೆ ಕೊಟ್ರೆ 10 ಸಾವಿರ ಆದಾಯ
ಆಫ್ರಿಕನ್ ಪ್ರಜೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಅದರ ನಾಲ್ಕು ಪಟ್ಟು ಹೆಚ್ಚಿರುವರು ಬಾಂಗ್ಲಾದೇಶಿಯರು. ಬೆಂಗಳೂರಿನಲ್ಲಿ ಒಂದು ಲಕ್ಷ ಬಾಂಗ್ಲಾದೇಶಿಯರು ಇದ್ದಾರೆ ಎನ್ನುತ್ತವೆ ಪೊಲೀಸ್ ಅಂಕಿ ಅಂಶಗಳು. ಇಲ್ಲಿ ಬಾಂಗ್ಲಾ ದೇಶಿಯರು ಅಕ್ರಮವಾಗಿ ವಾಸ ಮಾಡಲಿಕ್ಕೆ ಕಾರಣ ನಮ್ಮ ಸ್ಥಳೀಯರೇ ಕಾರಣ. ಬೆಂಗಳೂರು ಹೊರ ವಲಯದಲ್ಲಿ ಖಾಲಿ ಇರುವ ಸರ್ಕಾರಿ ಜಾಗ ಕಬಳಿಸುವ ಆಸೆಯಿಂದ ಗುಡಿಸಲು ಹಾಕುತ್ತಾರೆ. ಏಜೆಂಟರಿಗೆ ದುಡ್ಡು ಕೊಟ್ಟು ಬಾಂಗ್ಲಾದೇಶಿಯರನ್ನು ಕರೆಸಿ ಅಲ್ಲಿ ಬಾಡಿಗೆಗೆ ನೀಡುತ್ತಾರೆ.
ಇನ್ನ ಕೆಲಸದ ವಿಚಾರವಾಗಿ ಬಂದ್ರೆ ಮೂರು ಚಕ್ರದ ಸೈಕಲ್ ಕೊಟ್ಟು ಪ್ಲಾಸ್ಟಿಕ್ ಆಯಲು ಕಳಿಸುತ್ತಾರೆ. ದಿನಕ್ಕೆ ಸುಮಾರು ಒಂದು ಸಾವಿರ ರೂ. ಮೌಲ್ಯದ ಪ್ಲಾಸ್ಟಿಕ್ ಆಯುವ ಬಾಂಗ್ಲಾ ದೇಶಿಯರು ಅದನ್ನು ಮನೆ ಬಾಡಿಗೆ ಕೊಟ್ಟ ಮಾಲೀಕರಿಗೆ ಮಾರುತ್ತಾರೆ. ಬಾಂಗ್ಲಾ ದೇಶಿಯರು ತಂದು ಹಾಕುವ ಪ್ಲಾಸ್ಟಿಕ್ ನ್ನು ರೀಸೈಕಲ್ ಮಾಡಿ ಮಾರಾಟ ಮಾಡಿದರೆ ದಿನಕ್ಕೆ ಹತ್ತು ಸಾವಿರ ಲಾಭ.
ಸರ್ಕಾರಿ ಜಾಗ ಕಬಳಿಸಿ ಬಾಡಿಗೆ ಪಡೆಯುವ ಜತೆಗೆ ಪ್ಲಾಸ್ಟಿಕ್ ಉದ್ಯಮದಿಂದ ಸಾವಿರಾರು ರೂಪಾಯಿ ಗಳಿಸುವ ಅವಕಾಶ. ಅನೇಕರು ಇದನ್ನೇ ದೊಡ್ಡ ವ್ಯಾಪರವನ್ನಾಗಿ ಮಾಡಿಕೊಂಡಿದ್ದಾರೆ.
ಹೀಗಾಗಿ ಸ್ಥಳೀಯರೇ ಬಾಂಗ್ಲಾದೇಶಿಯರನ್ನು ಕರೆಸಿ ಇಲ್ಲಿ ಆಶ್ರಯ ನೀಡುತ್ತಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿಅಕ್ರಮವಾಗಿ ವಾಸಿಸಿರುವ ಬಾಂಗ್ಲಾ ದೇಶಿಯರ ಸಂಖ್ಯೆ ಒಂದು ಲಕ್ಷಕ್ಕೆ ತಲುಪಿದೆ ಎನ್ನುತ್ತವೆ ಪೊಲೀಸ್ ಅಂಕಿಅಂಶಗಳು.

ಬಾಂಗ್ಲಾ ವೇಶ್ಯಾವಾಟಿಕೆ ದಂಧೆ
ಇನ್ನು ಬಾಂಗ್ಲಾ ದೇಶಿಯರ ಮತ್ತೊಂದು ಕರಾಳ ವಿಷಯ ವೇಶ್ಯಾವಾಟಿಕೆ ದಂಧೆ. ಅಪ್ರಾಪ್ತ ಯುವತಿಯರನ್ನು ಕರೆ ತಂದು ಆನ್‌ಲೈನ್ ವೇದಿಕೆಗಳ ಮೂಲಕ ಗ್ರಾಹಕರನ್ನು ಸೆಳೆದು ವೇಶ್ಯಾವಾಟಿಕೆ ಮಾಡುವ ದಂಧೆ ಎಲ್ಲಡೆ ವ್ಯಾಪಿಸಿದೆ. ಬಾಡಿಗೆ ಮನೆಗಳಲ್ಲಿ, ಅಪಾರ್ಟ್ ಮೆಂಟ್ ಗಳಲ್ಲಿ, ಮಸಾಜ್ ಪಾರ್ಲರ್ ಹೆಸರಿನಲ್ಲಿ ತಲೆಯೆತ್ತಿರುವ ವೇಶ್ಯಾವಾಟಿಕೆ ದಂಧೆ ಪೊಲೀಸರ ಕೈ ಮೀರಿ ನಿಂತಿದೆ. ಅದರಲ್ಲೂ ಆನ್‌ಲೈನ್ ವೇದಿಕೆಗಳ ಮೂಲಕ ಗ್ರಾಹಕರನ್ನು ಸೆಳೆದು ನಿರಾಂತಕವಾಗಿ ದಂಧೆ ಮುಂದುವರೆಸಿದ್ದಾರೆ.
ಇನ್ನು ನೆರೆ ದೇಶದವರೇ ಆಗಿರುವ ಬಾಂಗ್ಲಾದೇಶಿಯರು ಪಶ್ಚಿಮ ಬಂಗಾಳದ ಮೂಲಕ ಸುಲಭವಾಗಿ ಭಾರತಕ್ಕೆ ಎಂಟ್ರಿ ಕೊಡುತ್ತಾರೆ. ಹೀಗೆ ಬರುವರು ಮತ್ತೆ ವಾಪಸು ದೇಶಕ್ಕೆ ಹೋಗುವುದೇ ಇಲ್ಲ. ಕಸ ಇಲ್ಲವೇ ವೇಶ್ಯಾವಾಟಿಕೆ ದಂಧೆ ಮೂಲಕ ಅಕ್ರಮವಾಗಿ ನೆಲೆಸಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶಿಯರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಸೇರಿಸಿದ್ದಾರೆ.
ಕನ್ನಡ ಕಲಿಸಿ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಸ್ಥಳೀಯರನ್ನು ಮದುವೆಯಾಗಿ ಇಲ್ಲಿನ ಪೌರತ್ವ ಪಡೆಯುತ್ತಿದ್ದಾರೆ. ಈಗ ಎಚ್ಚೆತ್ತುಕೊಳ್ಳಲಿದ್ದರೆ ಮುಂದಿನ ದಿನಗಳಲ್ಲಿ ಇವರು ಬಾಂಗ್ಲಾದವರು ಎಂದು ಪತ್ತೆ ಮಾಡುವುದೇ ಕಷ್ಟವಾಗಿ ಪರಿಣಮಿಸಬಹುದು. ಅಷ್ಟರ ಮಟ್ಟಿಗೆ ಬಾಂಗ್ಲಾದವರು ಬೆಂಗಳೂರಿನಲ್ಲಿ ತಳವೂರುತ್ತಿದ್ದಾರೆ.

ಬಾಂಗ್ಲಾ ಯುವತಿ ಸಾಮೂಹಿಕ ಅತ್ಯಾಚಾರ
ಬಾಂಗ್ಲಾ ಯುವತಿಯ ಮೇಲೆ ಯುವಕರ ಗುಂಪು ಲೈಂಗಿಕ ದೌರ್ಜನ್ಯ ಎಸಗುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಸಂತ್ರಸ್ತ ಯುವತಿ ದೂರು ಕೊಡದೇ ಕೇರಳಾ ಸೇರಿದ್ದಳು. ಈ ಪ್ರಕರಣ ಇಡೀ ಬೆಂಗಳೂರಿನ ಗೌರವಕ್ಕೆ ಧಕ್ಕೆ ತಂದಿತ್ತು. ಪ್ರಕರಣವನ್ನು ಬೆಂಗಳೂರು ಪೊಲೀಸರು ಪತ್ತೆ ಮಾಡಿದಾಗ ಬಾಂಗ್ಲಾದೇಶಿಯರ ವೇಶ್ಯಾವಾಟಿಕೆ ಅಸಲಿ ಮುಖವಾಡ ಬಯಲಿಗೆ ಬಂದಿತ್ತು. ಬಾಂಗ್ಲಾ ಯುವತಿಯರನ್ನು ಕರೆಸಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಬಯಲಿಗೆ ಬಂದಿತ್ತು.
ಮಾತ್ರವಲ್ಲ, ಆನ್‌ಲೈನ್ ಜಾಲ ತಾಣಗಳಲ್ಲಿ ಬಾಂಗ್ಲಾ ಯುವತಿಯರ ಮಸಾಜ್ ಪಾರ್ಲರ್ ದಂಧೆಯ ಬಾಹುಗಳು ಬೆಂಗಳೂರು ಮಾತ್ರವಲ್ಲ ರಾಜ್ಯದೆಲ್ಲೆಡೆ ಹಬ್ಬಿದೆ. ಭಾರತದಲ್ಲಿ ಮಹಿಳೆಯರ ರಕ್ಷಣೆಗೆ ಇರುವ ಕಾನೂನನ್ನು ಬಳಸಿಕೊಳ್ಳುವ ವೇಶ್ಯಾವಾಟಿಕೆ ದಂಧೆ ಕೋರರು ಸಂತ್ರಸ್ತ ಹೆಸರಿನಲ್ಲಿ ಬಾಂಗ್ಲಾದೇಶಿಯರನ್ನು ಬಿಡಿಸಿ ಮತ್ತದೇ ದಂಧೆಗೆ ತಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಡ್ರಗ್ ಮತ್ತು ಸೆಕ್ಷ್ ಜಾಲವನ್ನು ನಿಯಂತ್ರಣಕ್ಕೆ ತರಲಾಗದ ಪರಿಸ್ಥಿತಿಗೆ ತಲುಪಿದೆ ಎನ್ನುತ್ತಾರೆ ಪೊಲೀಸರು.
ಬಾಂಗ್ಲಾದೇಶಿಯರು ಹೆದರುವುದು ಏನಕ್ಕೆ ? ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಯರು ಕೂಡ ಮೊಂಡರು. ಎಷ್ಟೇ ಕ್ರಿಮಿನಲ್ ಕೇಸು ಹಾಕಿದರೂ ಅವರು ವಾಪಸು ಮಾತೃ ದೆಶಕ್ಕೆ ಹೋಗುವುದಿಲ್ಲ. ಅದೇ ಡಿಟೆನ್ಷನ್ ಕೇಂದ್ರದಲ್ಲಿ ಮಹಿಳೆಯರನ್ನು ಮತ್ತು ಪುರುಷರನ್ನು ಪ್ರತ್ಯೇಕವಾಗಿ ಬಂಧನದಲ್ಲಿಟ್ಟರೆ, ಒಂದು ತಿಂಗಳು ಅವರು ಇರಲ್ಲ. ಅದೇ ಕ್ರಿಮಿನಲ್ ಕೇಸು ದಾಖಲಿಸಿದರೆ, ಜಾಮೀನು ಪಡೆದು ಹೊರ ಬಂದು ಪ್ರಕರಣ ಮುಗಿಯುವ ವರೆಗೂ ಇಲ್ಲಿಯೇ ಠಿಕಾಣಿ ಹೂಡುತ್ತಾರೆ.
ಹೀಗಾಗಿ ಅಕ್ರಮ ಬಾಂಗ್ಲಾದೇಶಿಯರನ್ನು ಪೊಲೀಸರೂ ಏನು ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರವೇ ಎಚ್ಚೆತ್ತು ಕಠಿಣ ಭದ್ರತೆಯುಳ್ಳ ವಿದೇಶಿ ಅಕ್ರಮವಾಸಿಗಳ ಕೇಂದ್ರ ತೆರೆಯಬೇಕು. ವಿದ್ಯಾಭ್ಯಾಸ ಹಾಗೂ ನಾನಾ ಕಾರಣದಿಂದ ಭಾರತಕ್ಕೆ ಬರುವ ಆಫ್ರಿಕನ್ ಹಾಗೂ ಬಾಂಗ್ಲಾದೇಶಿಯರ ಡಾಟಾ ಸಂಗ್ರಹಿಸಿ ಅವರ ಬೆರಳು ಮುದ್ರೆ ಹಾಗೂ ಮುಖ ಚರ್ಯೆ ಗುರುತು ಆಧಾರಿತ ಡಾಟಾ ಸಂಗ್ರಹಿಸಬೇಕು.
ವೀಸಾ ಅವಧಿ ಮುಗಿದ ಕೂಡಲೇ ಅವರನ್ನು ಪತ್ತೆ ಮಾಡಿ ಕೂಡಲೇ ಅವರ ದೇಶಗಳಿಗೆ ರವಾನಿಸಬೇಕು. ಇಲ್ಲವೇ ಡಿಟೆಂಕ್ಷನ್ ಕೇಂದ್ರಕ್ಕೆ ಅಟ್ಟಬೇಕು. ಆಗ ಮಾತ್ರವೇ ಬೆಂಗಳೂರಿನಲ್ಲಿ ವಿದೇಶಿಯರ ಅಕ್ರಮವಾಸಕ್ಕೆ ಕಡಿವಾಣ ಹಾಕಲು ಸಾಧ್ಯ . ಈ ನಿಟ್ಟಿನಲ್ಲಿ ನೂತನ ಗೃಹ ಸಚಿವರು ಹೆಜ್ಜೆ ಇಡುವರೇ ಕಾದು ನೋಡಬೇಕು.












Click it and Unblock the Notifications