Infographics: ಕರ್ನಾಟಕದಾದ್ಯಂತ ಮುಂದಿನ ಐದು ಮಳೆ ನಿರೀಕ್ಷೆ
ಬೆಂಗಳೂರು, ಆಗಸ್ಟ 01: ಕರ್ನಾಟಕ ರಾಜ್ಯದಲ್ಲಿ ಮುಂದಿನ ಕೆಲವು ದಿನಗಳ ಕಾಲ ಮತ್ತೆ ಮುಂಗಾರು ಮಳೆ ಅಬ್ಬರಿಸಲಿದೆ. ಮುಂದಿನ ಐದು ದಿನ (ಆಗಸ್ಟ್ 6ವರೆಗೆ) ರಾಜ್ಯಾದ್ಯಂತ ಭಾರಿ ಹಾಗೂ ಅತೀ ಭಾರಿ ಮಳೆ ಆಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕ ರಾಜ್ಯದ ಕರಾವಳಿ ಮತ್ತು ಮಲೆನಾಡು ಒಳಗೊಂಡ ದಕ್ಷಿಣ ಒಳನಾಡಿನ ಭಾಗದಲ್ಲಿ ಮುಂಗಾರು ಮಾರುತಗಳು ಹೆಚ್ಚು ಸಕ್ರಿಯವಾಗಿವೆ. ಈ ಕಾರಣದಿಂದ ಮುಂದಿನ ಐದು ದಿನ ಉಡುಪಿ, ಉತ್ತರ ಕನ್ನಡ, ದಕ್ಷಿಣಕನ್ನಡ ಸೇರಿದಂತೆ ಕೊಡಗು, ಮಡಿಕೇರಿ, ಶಿವಮೊಗ್ಗ, ಚಿಕ್ಕಮಗಳೂರು, ಒಂದು ದಿನ ತುಮಕೂರು ಮತ್ತು ರಾಮನಗರ ಜಿಲ್ಲೆ 'ಆರೆಂಜ್ ಅಲರ್ಟ್' ನೀಡಲಾಗಿದೆ. ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ಕೊಡಲಾಗಿದೆ.
ಇನ್ನು ಉತ್ತರ ಒಳನಾಡಿನಲ್ಲಿ ದುರ್ಬಲವಾಗಿದ್ದ ಮಳೆ ಮತ್ತೆ ಅಲ್ಲಿ ಚರುಕಾಗಲಿದೆ. ಈ ಭಾಗದ ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಒಂದು ದಿನ ಬೆಳಗಾವಿ, ಬೀದರ್‌ನಲ್ಲಿ ಸಾಧಾರಣದಿಂದ ಭಾರಿ ಮಳೆ ಆಗಲಿದೆ. ಈ ಸಂಬಂಧ ಇಷ್ಟು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಕೊಡಲಾಗಿದೆ. ಹೊರತು ಈ ಭಾಗದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಇಲ್ಲ ಎಂದು ರಾಜ್ಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ವಿವಿಧೆಡೆ ಜೋರು ಮಳೆ ನಿರೀಕ್ಷೆ
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲ ಮಳೆ ಎಚ್ಚರಿಕೆ ನೀಡಲಾಗಿದೆ. ಈ ಪೈಕಿ ಅಂಡ್‌ಮಾನ್ ನಿಕೋಬಾರ್ ಐಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಓಡಿಶಾ ಬಿಹಾರ, ಉತ್ತರಾಖಂಡ, ಹಿಮಾಚಲ್ ಪ್ರದೇಶಗಳಲ್ಲಿ ಇದೀಗ ಮತ್ತೆ ಮಳೆ ಆರಂಭವಾಗಿದೆ. ಈ ಪ್ರದೇಶಗಳಲ್ಲಿ ಮಳೆ ದುರ್ಬಲಗೊಂಡಿತ್ತು. ಇದೀಗ ಆ ಎಲ್ಲ ಪ್ರದೇಶಗಳಲ್ಲಿ ಮತ್ತೆ ಮಳೆ ಅಬ್ಬರಿಸುವ ಮನ್ಸೂಚನೆ ಇದೆ. ಚತ್ತಿಸ್‌ಗಢ, ಮಧ್ಯಪ್ರದೇಶ, ಗೋವಾ, ಹರಿಯಾಣ, ದೆಹಲಿ ಭಾಗದಲ್ಲಿ ಮಳೆ ತುಸು ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮುಂದಿನ 48ಗಂಟೆ ಹೇಗಿರಲಿದೆ ವಾತಾವಣ
ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡು ಸೇರಿದಂತೆ ರಾಜ್ಯಾದ್ಯಂತ ಭಾರಿಮಳೆ ನಿರೀಕ್ಷೆ ಇದೆ. ಮಂಗಳವಾರ ಮಾತ್ರ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನಲ್ಲಿ ಸಾಧಾರಣದಿಂದ ಭಾರಿ ಮಳೆ ಆಗುವ ನಿರೀಕ್ಷೆ ಇದೆ. ನಂತರ ನಾಲ್ಕು ದಿನ ಇದೇ ಮೂರು ಭಾಗದ ಬಹುತೇಕ ಎಲ್ಲ ಜಿಲ್ಲೆಗಳ ಹಲವೆಡೆ ಭಾರಿಯಿಂದ ಅತೀ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಈ ಪೈಕಿ ಮುಂದಿನ ಎರಡು ದಿನ ಮಲೆನಾಡು ಹಾಗೂ ಕರಾವಳಿಯಲ್ಲಿ ಅತ್ಯಧಿಕ ಮಳೆ ಕಂಡು ಬರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿಗೆ 1ದಿನ 'ಯೆಲ್ಲೋ ಅಲರ್ಟ್'
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ಮೋಡ ಮುಸುಕಿದ ವಾತಾವರಣವೇ ಕಂಡು ಬಂತು. ಬಿಸಿಲಿನ ದರ್ಶನ ಕಡಿಮೆ ಎನ್ನಬಹುದು. ಮುಂದಿನ 24 ಗಂಟೆ ಬೆಂಗಳೂರಿನ ಸಾಧಾರಣದಿಂದ ಭಾರಿ ಮಳೆ ಆಗುವ ಲಕ್ಷಣಗಳು ದಟ್ಟವಾಗಿವೆ. ಈ ಕಾರಣಕ್ಕೆ ಬೆಂಗಳೂರು ನಗರ ಜಿಲ್ಲೆಗೆ ರಾಜ್ಯ ಹವಾಮಾನ ಇಲಾಖೆಗೆ 'ಯೆಲ್ಲೋ ಅಲರ್ಟ್' ನೀಡಿದೆ. ಈ ಸಮಯದಲ್ಲಿ ನಗರದಲ್ಲಿ ಗರಿಷ್ಠ ತಾಪಮಾನ 30ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20ಡಿಗ್ರಿ ಸೆಲ್ಸಿಯಸ್ ಕಂಡು ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದರು.

ಕರ್ನಾಟಕದಲ್ಲಿ ಉಷ್ಣಾಂಶ/ತೇವಾಂಶ ಹೇಗಿದೆ?
ಬೆಂಗಳೂರಿನಲ್ಲಿ 27ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇದ್ದು, ತೇವಾಂಶ 70ರಷ್ಟು ಮತ್ತು ಗಾಳಿಯ ವೇಗ ಗಂಟೆಗೆ 26ಕಿ.ಮೀ ಕಂಡು ಬಂದಿದೆ. ಬಾಗಲಕೋಟೆ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 65ರಷ್ಟು ತೇವಾಂಶ ಇದೆ. ಮಂಗಳೂರಲ್ಲಿ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 72ರಷ್ಟು ತೇವಾಂಶ ದಾಖಲಾಗಿದೆ. ಶಿವಮೊಗ್ಗದಲ್ಲಿ 26ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 66ರಷ್ಟು ತೇವಾಂಶ ಇದೆ. ಇನ್ನು ಮೈಸೂರಿನಲ್ಲಿ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 70ರಷ್ಟು ದಾಖಲಾಗಿದ್ದು, ಬಳ್ಳಾರಿಯಲ್ಲಿ 29ಡಿ. ಸೆ.ಗರಿಷ್ಠ ಉಷ್ಣಾಂಶ, ತೇವಾಂಶ 51ಕಂಡು ಬಂದಿದೆ.
ರಾಯಚೂರಲ್ಲಿ 31ಡಿಗ್ರಿ ಸೆಲ್ಸಿಯಸ್ ಗರಿಷ್ಠ ಮತ್ತು 59ರಷ್ಟು ತೇವಾಂಶ ಇದೆ. ಚಿತ್ರದುರ್ಗದಲ್ಲಿ 27ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 73ರಷ್ಟು ತೇವಾಂಶ ಕಂಡು ಬಂದಿದೆ. ಅದೇ ರೀತಿ ಕಲಬುರಗಿ 31 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 58ರಷ್ಟು ತೇವಾಂಶ, ಚಿಕ್ಕಮಗಳೂರು 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಹಾಗೂ 62ರಷ್ಟು ತೇವಾಂಶ ದಾಖಲಾಗಿದೆ ಎನ್ನಲಾಗಿದೆ.












Click it and Unblock the Notifications