Infographics; ಬೆಂಗಳೂರಿನ ಯಾವ ಪ್ರದೇಶದಲ್ಲಿ ಎಷ್ಟು ಮಳೆ?
ಬೆಂಗಳೂರು, ಅಕ್ಟೋಬರ್ 20; ಬೆಂಗಳೂರು ನಗರದಲ್ಲಿ ಕಳೆದ ಒಂದು ವಾರದಿಂದ ಸಂಜೆ ವೇಳೆಗೆ ಭಾರೀ ಮಳೆಯಾಗುತ್ತಿದೆ. ಬುಧವಾರ ಸಂಜೆಯೂ ನಗರದಲ್ಲಿ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದೆ. ಜನಜೀವನ ಅಸ್ತವ್ಯಸ್ತವಾಗಿದೆ.
ನಗರ ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಬುಧವಾರ ಸಂಜೆ ಸುಮಾರು 3 ಗಂಟೆಗಳ ಕಾಲ ಮಳೆಯಾಗಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಹಲವು ಬಡಾವಣೆಗಳಲ್ಲಿ ಅಪಾರ್ಟ್‌ಮೆಂಟ್‌ಗಳ ಬೇಸ್‌ಮೆಂಟ್‌ಗಳಿಗೆ ನೀರು ನುಗ್ಗಿದೆ.
ಹಂಪಿ ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಎಂದರೆ 85 ಮಿ. ಮೀ. ಮಳೆಯಾಗಿದೆ. ಗಾಳಿ ಆಂಜನೇಯ ಸ್ವಾಮಿ ದೇವಾಲಯದ ವ್ಯಾಪ್ತಿಯಲ್ಲಿ 72, ವಿದ್ಯಾಪೀಠ ವ್ಯಾಪ್ತಿಯಲ್ಲಿ 70, ಎಚ್ಎಎಲ್ ವ್ಯಾಪ್ತಿಯಲ್ಲಿ 70 ಮಿ. ಮೀ. ಮಳೆ ಸುರಿದಿದೆ.

ಶೇಷಾದ್ರಿಪುರದ ಸಮೀಪ ಜೆಡಿಎಸ್ ಪಕ್ಷದ ಮುಂಭಾಗದಲ್ಲಿರುವ ನಮ್ಮ ಮೆಟ್ರೋ ತಡೆ ಗೋಡೆ ಭಾರೀ ಮಳೆಗೆ ಕುಸಿದಿದೆ. ಇದರಿಂದಾಗಿ ಗೋಡೆ ಪಕ್ಕದಲ್ಲಿ ನಿಲ್ಲಿಸಿದ್ದ 6 ಕಾರು, 2 ಬೈಕುಗಳಿಗೆ ಹಾನಿಯಾಗಿದೆ.
ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ನಗರದಲ್ಲಿ ಇನ್ನೂ 5 ದಿನಗಳ ಕಾಲ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯನ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ.

ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ನಗರಕ್ಕೆ ಗುರುವಾರ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್, ಗರಿಷ್ಠ ಉಷ್ಣಾಂಶ 29 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಇರಲಿದೆ.

ಆರ್. ಟಿ. ನಗರ, ಕೋರಮಂಗಲ, ಬಿಟಿಎಂ, ಜೆ. ಸಿ. ರಸ್ತೆ, ಹೊರವರ್ತುಲ ರಸ್ತೆ, ಮಾರತ್‌ಹಳ್ಳಿ, ಬೆಳ್ಳಂದೂರು, ಹೆಚ್‌ಎಸ್‌ಆರ್ ಲೇಔಟ್, ಶಿವಾಜಿನಗರ ಮುಂತಾದ ಕಡೆಗಳಲ್ಲಿಯೂ ಭಾರೀ ಮಳೆಯಾಗಿದೆ.












Click it and Unblock the Notifications