ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಗಾದಿ : ನವ ವರ್ಷದ ಸಡಗರ ಮತ್ತು ಸಂಭ್ರಮ!

By Super
|
Google Oneindia Kannada News

ಯುಗಾದಿ ಹೆಸರೇ ಸೂಚಿಸುವಂತೆ ಹಿಂದೂ ಸಂಸ್ಕೃತಿಯಲ್ಲಿ ಹೊಸವರ್ಷ ಪ್ರಾರಂಭವಾಗುವ ದಿನ. ಯುಗ+ಆದಿ = ಯುಗಾದಿ. ಚೈತ್ರ ಶುದ್ಧ ಪ್ರತಿಪದೆ(ಪಾಡ್ಯ) ದಕ್ಷಿಣಭಾರತದ ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಚಾಂದ್ರಮಾನ ಯುಗಾದಿಯನ್ನು ಆಚರಿಸುತ್ತಾರೆ.

ಮಹರಾಷ್ಟ್ರದಲ್ಲಿ ಯುಗಾದಿ ಹಬ್ಬವನ್ನು ಗುಡಿಪಾಡವ ಎಂದು ಕರೆಯುವರು. ರೋಮನ್ನರ ಹಾಗೂ ಕ್ರೈಸ್ತರ ಕಾಲಗಣನೆಯಂತೆ ಹೊಸವರ್ಷವನ್ನು ಜನವರಿ 1ರಂದು ಜಗತ್ತಿನಾದ್ಯಂತ ಆಚರಿಸುತ್ತಿದ್ದೇವೆ. ಮಿತ್ರರು ಬಂಧುಬಾಂಧವರು ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಶಾಲಿವಾಹನನೆಂಬ ಅರಸನು ಈಗಿರುವ ಮಹಾರಾಷ್ಟ್ರದಲ್ಲಿ ಬಹಳ ಹಿಂದೆ ರಾಜ್ಯವಾಳಿದನು. ಅಲ್ಲಿಂದ ಶಾಲೀವಾಹನ ಶಕಾ ಆರಂಭವಾಯಿತೆಂದು ಇತಿಹಾಸದ ಪುಟಗಳಲ್ಲಿದೆ.

ವಿಕ್ರಮ ಶಕೆ ಪಾಲಿಸುವವರು ಮತ್ತು ಶಕ್ತಿ ದೇವಿಯನ್ನು ಆರಾಧಿಸುವವರು ಕಾರ್ತೀಕ ಶುದ್ಧ ಪ್ರತಿಪದೆ(ಪಾಡ್ಯ)ಯಂದು ಹೊಸ ವರ್ಷ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ. ಹಿಂದೂ ಪುರಾಣ ಕಥೆಗಳಲ್ಲಿ ಬ್ರಹ್ಮದೇವನು ಈ ಜಗತ್ತನ್ನು ಸೃಷ್ಟಿಸಿದನೆಂದು ಜನರಲ್ಲಿ ನಂಬಿಕೆಯಿದೆ.

ಪಾರ್ಥಿವ ಸಂವತ್ಸರವನ್ನು ಬೀಳ್ಕೊಂಡು ವ್ಯಯ ಸಂವತ್ಸರವನ್ನು ಸ್ವಾಗತಿಸುತ್ತಾ ಹೊಸ ವರ್ಷದಲ್ಲಿನ ಮುಂದಿನ ಯೋಜನೆಗಳು, ಕೆಲಸಕಾರ್ಯಗಳಲ್ಲಿನ ರೂಪುರೇಖೆಗಳು, ಹಿಂದಿನ ತಪ್ಪುಗಳನ್ನು ಒಮ್ಮೆ ಮೆಲುಕು ಹಾಕಿ ಮುಂದಿನ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಸಂಕಲ್ಪವನ್ನು ನಾವು ಕೈಗೊಳ್ಳುತ್ತೇವೆ. ಜೀವನದ ಹೋರಾಟದಲ್ಲಿ ಕಷ್ಟ-ಸುಖಗಳನ್ನು ಸಮನಾಗಿ ಸ್ವೀಕರಿಸುವ ಮನೋಭಾವ ನಮ್ಮಲ್ಲಿರಲಿ ಎಂದು ಪ್ರಾರ್ಥಿಸುತ್ತೇವೆ. ಹೊಸ ಮದುಮಕ್ಕಳಿಗೆ ಆರತಿ ಬೆಳಗಿ ಉಡುಗೊರೆ ಕೊಡುವ ಸಂಪ್ರದಾಯವಿದೆ.

ಮನುಷ್ಯರಷ್ಟಲ್ಲದೆ ನಾವು ಮರ ಗಿಡ ಪ್ರಾಣಿ ಪಕ್ಷಿಗಳಲ್ಲಿ ಸಹ ವಸಂತಋತುವಿನ ಆಗಮನದಿಂದ ಆಗುವ ಬದಲಾವಣೆಗಳನ್ನು ಸಂತಸವನ್ನು ನಾವು ಕಾಣಬಹುದು. ಚಳಿಗಾಲದಲ್ಲಿ ಮರಗಳಲ್ಲಿ ಎಲೆಗಳು ಉದುರಿ ಹೋಗಿರುತ್ತವೆ. ಹಾಗೆಯೇ ಹಿಮದಿಂದ ಮನೆ ಹೊರಗಡೆ ಇರುವ ಹೂವಿನ ಗಿಡಗಳು ಎಲೆಗಳುದುರಿ ಜೀವಕಳೆಯಿಲ್ಲದೆ ಮರಗಟ್ಟಿ ಹೋಗುವುದನ್ನು ಇಲ್ಲಿ ನಾವು ನೋಡಬಹುದು.

ಏಪ್ರಿಲ್‌ ಬಂದೊಡನೆ ಗಿಡಗಳು ಪುನಃ ಚಿಗುರಿಕೊಳ್ಳುತ್ತವೆ. ಮರಗಳಲ್ಲಿ ಎಲೆಗಳು ಚಿಗುರಿಕೊಂಡು ಹಸಿರಿನಿಂದ ಕಂಗೊಳಿಸುವುದನ್ನು ಕಣ್ತುಂಬಾ ನೋಡಲು ಬಲುಹಿತವೆನಿಸುತ್ತದೆ. ಮಾವಿನ ಮರದಲ್ಲಿ ಇಂಪಾದ ಕೋಗಿಲೆ ಗಾಯನ ಕಿವಿಗಿಂಪು ನೀಡುತ್ತದೆ. ಮನೆ ಹಿಂದೆ ಮೊಲ, ಅಳಿಲು ಲವಲವಿಕೆಯಿಂದ ಚಂಗ್‌ಚಂಗನೆ ಜಿಗಿಯುತ್ತಾ ಓಡಾಡುವುದನ್ನು ನೋಡಲು ಸಂತೋಷವಾಗುತ್ತವೆ. ಅಷ್ಟಲ್ಲದೆ ರಸ್ತೆಗಳಲ್ಲಿ ಇಲ್ಲಿ ಜನರ ಸಂಚಾರ ಆರಂಭವಾಗುತ್ತದೆ.

ವಾಷಿಂಗ್ಟನ್‌ ಡಿ.ಸಿ. ಯಲ್ಲಿ ಪೊಟೆಮೆಕ್‌ ನದಿಯ ಸುತ್ತಲೂ ಮರಗಳಲ್ಲಿ ಬಿಳಿ ಗುಲಾಬಿ ಹೀಗೆ ನಾನಾ ಬಣ್ಣದ ಹೂಗಳು ಚಳಿಗಾಲದ ನಂತರ ಮರದಲ್ಲಿ ಮೊದಲ ಸಲದ ಹೂವುಗಳನ್ನು ನೋಡಲು ಅಮೇರಿಕಾದ ನಾನಾ ಕಡೆಗಳಿಂದ ಸಾವಿರಾರು ಜನರು ಬರುತ್ತಾರೆ.

ಬೇವು-ಬೆಲ್ಲದ ಮಹತ್ವ :

ಬಾಗಿಲಿಗೆ ಮಾವಿನ ಎಲೆಯ ತೋರಣ ಕಟ್ಟುತ್ತಿರುವ ಅಣ್ಣಯ್ಯ, ಮನೆಯಾಳಗೆ ಘಮಘಮ ಪಾರಿಜಾತ-ಮಲ್ಲಿಗೆ ಮಾಲೆಯ ಕಟ್ಟುತ್ತಿರುವ ಅಕ್ಕಯ್ಯ, ಜರತಾರಿ ಲಂಗ ಧರಿಸಿ ಮುದ್ದಾಗಿ ಮಾತನಾಡುತ್ತಾ ಸರಸರ ಅತ್ತಿಂದಿತ್ತ ಓಡಾಡುವ ಪುಟ್ಟಮಕ್ಕಳು, ಅಂಗಳದಲ್ಲಿ ರಂಗವಲ್ಲಿ ಹಾಕುತ್ತಿರುವ ತಂಗಿ, ರೇಷ್ಮೆ ಮಡಿಯುಟ್ಟು ದೇವರ ಪೂಜೆಗೆ ಸಿದ್ಧವಾಗಿ ನಿಂತಿರುವ ಅಪ್ಪಯ್ಯ, ಜೊತೆಯಲ್ಲಿ ಅಚ್ಚುಕಟ್ಟಾಗಿ ಜೋಡಿಸಿಡುತ್ತಾ ಸಹಾಯ ಮಾಡುತ್ತಿರುವ ಚಿಕ್ಕಪ್ಪ, ಅಡುಗೆಮನೆಯಲ್ಲಿ ಹಬ್ಬದ ವಿಶೇಷ ಅಡುಗೆಯನ್ನು ತಯಾರು ಮಾಡುತ್ತಿರುವ ಅಮ್ಮ, ಹೋಳಿಗೆ ಹೂರಣವನ್ನು ತಯಾರಿಸುತ್ತಿರುವ ಅತ್ತಿಗೆ ಹೋಳಿಗೆ ಲಟ್ಟಿಸಲು ತಯಾರಾಗುತ್ತಿರುವ ಚಿಕ್ಕಮ್ಮ, ಪರಿವಾರದಲ್ಲಿನ ಸದಸ್ಯರ ಸಂಬಂಧಗಳು ಒಬ್ಬೊಬ್ಬರೂ ಸಹಕರಿಸುತ್ತಾ ಬಾಳಪಯಣದಲ್ಲಿ ಸಾಗುವ ಮಾದರಿ ಜೀವನ ಇವೆಲ್ಲಾ ಹಳ್ಳಿಗಳಲ್ಲಿ ಮಾತ್ರ ಬೆರಳೆಣಿಕೆಯಲ್ಲಿ ಇಂದು ನಾವು ಕಾಣುತ್ತಾ ಇದ್ದೇವೆ.

ಮಾವು, ಹಲಸು, ನೇರಳೆ, ಗೇರುಹಣ್ಣು, ಪೇರಳೆ,ನರ್ಕುಲ್‌ ಹಣ್ಣು, ಕುಂಟುನೇರಳೆ, ಕಲ್ಲಂಗಡಿ ಹಣ್ಣು, ಮುಳ್ಳೇಹಣ್ಣು, ಜಂಬೂನೇರಳೆಯ ಕಾಲವದು(ಕೆಲವೊಂದು ಹಣ್ಣಿನ ಹೆಸರು ಕೂಡ ಮರೆತುಹೋಗಿದೆ). ಹಳ್ಳಿಗಳಲ್ಲಿ ಬೆಳಿಗ್ಗೆ ಎದ್ದು ಮನೆಯ ಸದಸ್ಯರು ಎಣ್ಣೆ ಸ್ನಾನವನ್ನು ಗೈದು ಶುಭ್ರಬಟ್ಟೆಯನ್ನು ಧರಿಸಿ ಮನೆದೇವರನ್ನು ಪೂಜಿಸಿ ಹೊಸ ಪಂಚಾಂಗವನ್ನು ಪೂಜಿಸುತ್ತಾರೆ. ಊರ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ಹೊಸವರುಷ ಹರುಷವನ್ನೇ ತರಲಿ ಎಂದು ಪ್ರಾರ್ಥಿಸುತ್ತಾರೆ. ವಿಧೇಯರಾಗಿ ಹಿರಿಯರಿಗೆ ನಮಸ್ಕರಿಸುತ್ತಾರೆ. ನಂತರ ಬೇವು-ಬೆಲ್ಲವನ್ನು ಸೇವಿಸುತ್ತಾರೆ.

ಸಮಪ್ರಮಾಣದ ಕಹಿಬೇವು-ಸಿಹಿಬೆಲ್ಲದ ಸೇವನೆ ಹಿಂದೆ ಒಂದು ತತ್ವ ಅಡಗಿದೆ. ನಮ್ಮ ಜೀವನದಲ್ಲಿ ಸುಖವನ್ನಷ್ಟೇ ನಾವು ಬಯಸುತ್ತೇವೆ. ಆದರೆ ಕಷ್ಟಗಳು, ಶೋಧನೆಗಳು ಸುಖದ ಬೆನ್ನಲ್ಲೇ ಬಂದುಬಿಡುವುದುಂಟು. ಕಷ್ಟ-ಸುಖಗಳನ್ನು ನೋವು-ನಲಿವುಗಳನ್ನು ಸಮನಾಗಿ ಸ್ವೀಕರಿಸಬೇಕು ಎಂಬುದೇ ಬೇವು-ಬೆಲ್ಲ ಸೇವನೆಯ ಹಿಂದಿರುವ ಉದ್ದೇಶ. ಅದಲ್ಲದೇ ಬೇವು ನಾಲಿಗೆಗೆ ಕಹಿಯಾದರೂ ಔಷಧೀಯ ಗುಣಗಳು ಹೇರಾಳವಾಗಿದೆ. ಆರೋಗ್ಯಕ್ಕೆ ಬಲು ಉತ್ತಮ. ಮನೆಯ ಸದಸ್ಯರಲ್ಲಿ ಮನಸ್ತಾಪವಿದ್ದರೆ ಅದನ್ನೆಲ್ಲ ಮರೆತು ಒಟ್ಟಾಗಿ ಹಬ್ಬವನ್ನಾಚರಿಸುವುದಕ್ಕೆ ಹೊಸವರ್ಷ ನಾಂದಿಯಾಗುತ್ತದೆ.

ಒಬ್ಬಟ್ಟಿನಲ್ಲಿ ಒಗ್ಗಟ್ಟಿದೆ... ನೀವೂ ಮಾಡಿ:

ಯುಗಾದಿ ಹಬ್ಬದ ದಿನ ಒಬ್ಬಟ್ಟು ಹೋಳಿಗೆಯದೇ ದರ್ಬಾರು. ಕಡಲೆಬೇಳೆ ಹೋಳಿಗೆ, ಒಬ್ಬಟ್ಟು, ಕಾಯಿಹೋಳಿಗೆ ಪ್ರಮುಖವಾದವುಗಳು. ಕಡಲೆಬೇಳೆಯ ಹೂರಣವನ್ನು ಚಿಕ್ಕಚಿಕ್ಕ ಉಂಡೆಗಳನ್ನಾಗಿ ಮಾಡಿಕೊಂಡು ಅಂಬೋಡೆಯ ಆಕಾರದಲ್ಲಿ ತಟ್ಟಿ ಕಾವಲಿಯಲ್ಲಿ ಎರಡು ಬದಿಯಲ್ಲಿ ಮಗುಚುತ್ತಾ ಸ್ವಲ್ಪ ಕೆಂಪಗಾದೊಡನೆ ತೆಗೆದು ತಟ್ಟೆಯಲ್ಲಿ ಹಾಕಿದರೆ ಅದು ಒಬ್ಬಟ್ಟು.

ಕಡಲೆಬೇಳೆಯನ್ನು ಚೆನ್ನಾಗಿ ಕುಕ್ಕರ್‌ನಲ್ಲಿ ಬೇಯಿಸಿಕೊಂಡು ಮಿಕ್ಸಿಯಲ್ಲಿ ನುಣುಪಾಗಿ ರುಬ್ಬಿ ಅದಕ್ಕೆ ಬೆಲ್ಲ,ಏಲಕ್ಕಿ ಹಾಕಿ ಕಾಯಿಸಿ ಹೂರಣವನ್ನು ತಯಾರಿಸಿಟ್ಟುಕೊಳ್ಳಬೇಕು. ಒಂದು ಲೋಟ ಕಡಲೆಬೇಳೆಗೆ ಮುಕ್ಕಾಲು ಲೋಟ ಮೈದಾ ಹಿಟ್ಟು ಕಾಲು ಲೋಟ ಗೋದಿಹಿಟ್ಟು ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿ ಹಿಟ್ಟನ್ನು ತಯಾರಿಸಿಟ್ಟುಕೊಂಡು ಅದರೊಳಗೆ ಹೂರಣವನ್ನು ಹಾಕಿ ಲಟ್ಟಿಸಿ ಕಾವಲಿಯಲ್ಲಿ ಹಾಕಿ ಎರಡು ಕಡೆ ಮಗುಚಿ ತೆಗೆದರೆ ಕಡಲೆಬೇಳೆ ಹೋಳಿಗೆ ರೆಡಿ.

ತೆಂಗಿನಕಾಯಿಯನ್ನು ಸಣ್ಣದಾಗಿ ತುರಿದು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿ ನಂತರ ಅದಕ್ಕೆ ಬೆಲ್ಲ, ಏಲಕ್ಕಿ, ಲವಂಗ ಹಾಕಿ ಕಾಯಿಸಿ ಹೂರಣವನ್ನು ತಯಾರಿಸಿ ಒಂದು ತೆಂಗಿನಕಾಯಿಗೆ ಒಂದು ಲೋಟ ಗೋಧಿ ಹಿಟ್ಟು ಸ್ವಲ್ಪಅರಿಶಿನ ಹಾಕಿ ಹಿಟ್ಟನ್ನು ಚಿನ್ನಾಗಿ ನಾದಿ ಕಲಸಿಕೊಳ್ಳಬೇಕು. ಅದರಲ್ಲಿ ಕಾಯಿ ಹೂರಣವನ್ನು ಹಾಕಿ ಲಟ್ಟಿಸಿ ಕಾವಲಿಯಲ್ಲಿ ಹಾಕಿ ಎರಡು ಕಡೆ ಮಗುಚಿ ತಟ್ಟೆಯಲ್ಲಿ ಹಾಕಿದರೆ ಕಾಯಿಹೋಳಿಗೆ ರೆಡಿ.

ಒಬ್ಬಟ್ಟಿನ ಜೊತೆಗೆ ಊಟದಲ್ಲಿ ಹುಳಿಯನ್ನ, ಚಿತ್ರಾನ್ನ, ಹೊಸ ಮಾವಿನಕಾಯಿ ಉಪ್ಪಿನಕಾಯಿ, ಕೋಸುಂಬರಿ, ಪಲ್ಯಗಳು, ಹೋಳಿಗೆ, ಕುಡಿಯಲು ತೆಳ್ಳಗಿನ ಸಾರು, ಕಾಯಿರಸ, ಹಸಿ ಒಂದೇ ಎರಡೆ ಬಾಯಲ್ಲಿ ನೀರೂರಿರಬೇಕಲ್ಲ.

ಊಟವಾದ ನಂತರ ಒಂದು ಸ್ವೀಟ್‌ ಪಾನ್‌ ಇದು ಪಚನಕ್ಕಾಗಿ. ಸ್ವೀಟ್‌ ಪಾನ್‌ ಅಂದಾಗ ನೆನಪಾಗೋದು ವರ್ಜಿನಿಯಾದಲ್ಲಿ ನೆಲೆಸಿರುವ ಶಿವಣ್ಣ, ಕಳೆದ ನವೆಂಬರ್‌ನಲ್ಲಿ ವರ್ಜಿನಿಯಾ-ಮೇರಿಲ್ಯಾಂಡ್‌ ಪ್ರವಾಸದಲ್ಲಿ ವರ್ಜಿನಿಯಾದಲ್ಲಿರುವ ಅನಿತಾ ರಾಮಸ್ವಾಮಿಯವರ ಮನೆಯಲ್ಲಿ ಹವ್ಯಕ ಮಿತ್ರ ಬಂಧುಬಾಂಧವರನ್ನೆಲ್ಲಾ ಭೇಟಿಯಾದೆವು. ಅಲ್ಲಿಗೆ ಹೋಗಿ ಬಂದಾಗ ಊರಿಗೆ ಹೋಗಿಬಂದ ಅನುಭವ. ಅಲ್ಲಿಯೂ ಊಟವಾದ ಮೇಲೆ ಆರವತ್ತು ಎಪ್ಪತ್ತು ಸ್ವೀಟ್‌ ಪಾನನ್ನು ಶಿವಣ್ಣ ಅವರು ನಮ್ಮೆಲ್ಲರ ಕಣ್ಣೆದುರೆ ತಯಾರಿಸಿದರು. ಕೆಲವರು ಕುತೂಹಲದಿಂದ ಸ್ವೀಟ್‌ ಪಾನ್‌ ತಯಾರಿಯನ್ನು ವೀಕ್ಷಿಸಿದರು. ಇನ್ನು ಕೆಲವರು ಕುತೂಹಲದಿಂದ ಹಲವಾರು ಪ್ರಶ್ನೆಗಳನ್ನು ಕೇಳಿದರು. ಶಿವಣ್ಣ ಅದಕ್ಕೆಲ್ಲಾ ಉತ್ತರಿಸಿದರು. ಅದು ಒಂದು ಸಿಹಿ ನೆನಪು.

ಪಂಚಾಂಗ ಶ್ರವಣ :

ಯುಗಾದಿ ಹಬ್ಬದ ದಿನ ಬೆಳಿಗ್ಗೆ ಊರಿನ ದೇವಸ್ಥಾನದಲ್ಲಿ ಸಾಮಾನ್ಯವಾಗಿ ಎಲ್ಲರೂ ಸೇರುತ್ತಾರೆ. ಎಲ್ಲರಿಗೂ ಭವಿಷ್ಯವನ್ನು ತಿಳಿದುಕೊಳ್ಳುವ ಆಕಾಂಕ್ಷೆ ಈ ವರ್ಷದಲ್ಲಿ ಏನೇನು ನಡೆಯಬಹುದು ಎಂದು ತಿಳಿದುಕೊಳ್ಳುವ ಕಾತುರ ಕೂಡ ಇರಬಹುದು. ದೇವಸ್ಥಾನದ ಅರ್ಚಕರು ಮೊದಲು ಪಂಚಾಂಗವನ್ನು ಪೂಜಿಸುತ್ತಾರೆ.

ಕ್ಷಣ, ಘಟಿ, ಮಾಸ, ತಿಥಿ, ಪಕ್ಷ, ದಿನ, ವಾರ, ವರ್ಷ, ಯುಗ, ಮನ್ವಂತರ ಹೀಗೆ ಕಾಲವನ್ನು ನಮ್ಮ ಪೂರ್ವಜರು ಹಿಂದೆ ಅಳೆಯುತ್ತಿದ್ದರು. ಕಾಲಗಣನೆಯನ್ನು ಒಂದು ನಿರ್ದಿಷ್ಟ ವ್ಯವಸ್ಥೆಯನ್ನಾಗಿ ಮಾಡುವುದು ಅನಿವಾರ್ಯವಾಯಿತು. ಇಪ್ಪತ್ತೇಳು ನಕ್ಷತ್ರಗಳು, ಒಂಭತ್ತು ಗ್ರಹಗಳು, ಹನ್ನೆರಡು ಮಾಸಗಳು, ಹನ್ನೆರಡು ರಾಶಿಗಳು 7 ದಿನಗಳು, ಆರು ಋತುಗಳು ಇವುಗಳೆಲ್ಲ ಪಂಚಾಂಗದಲ್ಲಿ ಅಡಕವಾಗಿರುತ್ತವೆ.

ದೇವಸ್ಥಾನದ ಅರ್ಚಕರು ಈ ವರ್ಷದ ಮಳೆ ಬೆಳೆಯ ಬಗ್ಗೆ, ಬೆಳೆಗಳ ಬೆಲೆಯ ಬಗ್ಗೆ, ಪ್ರಕೃತಿ ವಿಕೋಪದ ಬಗ್ಗೆ, ಹವಾಗುಣದ ಬಗ್ಗೆ ವಿವರಿಸಿ ಹೇಳುತ್ತಾರೆ. ಆಮೇಲೆ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನೂ, ಮಕರ, ಕುಂಭ, ಮೀನಾ ಹನ್ನೆರಡು ರಾಶಿಫಲಗಳನ್ನು ವ್ಯಯನಾಮ ಸಂವತ್ಸರದಲ್ಲಿ ಈ ವರ್ಷ ಭವಿಷ್ಯದಲ್ಲಿ ಏನೇನು ನಡೆಯಬಹುದು ಎನ್ನುವುದನ್ನು ಅರ್ಚಕರು ಹೇಳುತ್ತಾ ಹೋಗುತ್ತಾರೆ. ಸಾಮಾನ್ಯವಾಗಿ ಭವಿಷ್ಯದಲ್ಲಿ ಏನೇನು ನಡೆಯಬಹುದು ಎನ್ನುವ ಕುತೂಹಲ ಎಲ್ಲರಲ್ಲಿ ಇದ್ದೇ ಇರುತ್ತದೆ.

ಪಂಚಾಂಗದಲ್ಲಿ ಯುಗಾದಿಪುರುಷನ ಚಿತ್ರವಿರುತ್ತದೆ. ಅರ್ಚಕರು ವ್ಯಯನಾಮ ಸಂವತ್ಸರದ ಸಮುದಾಯಫಲಗಳ ಕುರಿತು ಹೇಳತೊಡಗುತ್ತಾರೆ. ಈ ವರ್ಷಾ ನಂದಾ ಎಂಬ ಹೆಸರಿನ ಸಂಕ್ರಾಂತಿ ಕಾಲಪುರುಷನು ಘೃತ ತೈಲವನ್ನು ಹಚ್ಚಿಕೊಂಡು ಯಮುನಾ ನದಿಯಲ್ಲಿ ಸ್ನಾನ ಮಾಡಿ ಕೆಂಪುವಸ್ತ್ರವನ್ನು ಧರಿಸಿ, ನೀಲರತ್ನ ಕುಂಕುಮ, ಗಂಧ, ಕಡಲೆ, ಅಕ್ಷತೆ, ಜಾಜೀ ಹೂಗಳಿಂದ ಅಲಂಕೃತನಾಗಿ ಬೆಳ್ಳಿ ಪಾತ್ರೆಯಲ್ಲಿ ಪಾಯಸವನ್ನು ಭುಂಜಿಸಿ, ಭಿಂದಿವಾಲವೆಂಬ ಆಯುಧವನ್ನು ಧರಿಸಿ, ಭೇರಿ ವಾದ್ಯದೊಡನೆ ಶಾರ್ದುಲವನ್ನು ಏರಿಕೊಂಡು ಬಿಳಿವರ್ಣದ ಕೊಡೆಯನ್ನು ಹಿಡಿದು ಸಿಟ್ಟಿನ ಮುಖಮುದ್ರೆಯುಳ್ಳವನಾಗಿ ಪೂರ್ವದಿಕ್ಕಿಗೆ ಅಭಿಮುಖನಾಗಿ ಗಮಿಸುವನು. ಈ ಕಾಲಪುರುಷನು ಉಪಯೋಗಿಸಿದ ಪದಾರ್ಥಗಳು ಅಲ್ಪಮಾನದಲ್ಲಿ ಬೆಳೆದು ತುಷ್ಟಿಗೊಳ್ಳುವುದು ಎಂದು ಧಾರ್ಮಿಕ ಪಂಚಾಂಗದಲ್ಲಿ ಬರೆದಿರುವುದನ್ನು ಅರ್ಚಕರು ಹೇಳುತ್ತಾ ಹೋಗುತ್ತಾರೆ.

ಎಲ್ಲೆಲ್ಲಿ ಯಾವಾಗ ಹಬ್ಬ :

ಚಿತ್ತಿರೈ ಮಾಸದಲ್ಲಿ ಏಪ್ರಿಲ್‌ 14ರಂದು ಪಕ್ಕದ ತಮಿಳುನಾಡಿನಲ್ಲಿ ಹೊಸವರ್ಷವನ್ನು ಆಚರಿಸುತ್ತಾರೆ. ಮಂಗಳಕರವಾದ ವಸ್ತುಗಳನ್ನು ನೋಡುವ್ಯದರಿಂದ ಅಂದರೆ ಒಳ್ಳೆಯದನ್ನು ನೋಡುವುದರಿಂದ ಶುಭಸಮಾಚಾರಗಳನ್ನು ಕೇಳುವುದರಿಂದ ಹೊಸವರ್ಷ ಆರಂಭವಾಗುತ್ತದೆ. ಮಂಗಳಕರವಾದ ವಸ್ತುಗಳು ಅಂದರೆ ಬಂಗಾರ, ಬೆಳ್ಳಿ, ಆಭರಣಗಳು, ವೀಳ್ಯದೆಲೆ ಅಡಿಕೆ, ಹೂವು ಹಣ್ಣು, ತರಕಾರಿಗಳು, ಭತ್ತ ಮತ್ತು ತೆಂಗಿನಕಾಯಿ. ಬೆಳಗೆದ್ದು ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ಅನಂತರ ಪಂಚಾಂಗ ಶ್ರವಣವನ್ನು ಮಾಡುತ್ತಾರೆ. ಚಿತ್ತಿರೈ ಮಾಸದಲ್ಲಿ ದೇವಿ ಮೀನಾಕ್ಷಿ ಮತ್ತು ಸುಂದರೇಶ್ವರ ದೇವರ ಕಲ್ಯಾಣೋತ್ಸವ ದೇವಸ್ಥಾನದಲ್ಲಿ ನಡೆಯುತ್ತದೆ.

ಪಶ್ಚಿಮ ಬಂಗಾಲದಲ್ಲಿ ಏಪ್ರಿಲ್‌ 14ರಂದು ಪ್ಯೋಲಾ ಬೈಸಾಕ್‌(poila baisakh) ಹೊಸವರ್ಷವನ್ನು ಆಚರಿಸುತ್ತಾರೆ. ಕೇರಳದಲ್ಲಿ ಮಧ್ಯಏಪ್ರಿಲ್‌ನಲ್ಲಿ ‘ವಿಶು' ಎಂದು ಹೊಸವರ್ಷವನ್ನು ಆಚರಿಸುತ್ತಾರೆ. ಇಲ್ಲಿ ಬಂಗಾರ, ಬೆಳ್ಳಿ, ಆಭರಣಗಳು, ವೀಳ್ಯದೆಲೆ. ಅಡಿಕೆ, ಭತ್ತ, ತೆಂಗಿನಕಾಯಿ ಇವುಗಳನ್ನು ಬೆಳಿಗ್ಗೆ ಒಳ್ಳೆಯದನ್ನು ನೋಡುವುದಕ್ಕೆ ವಿಶುಕಣಿ ಎನ್ನುತ್ತಾರೆ.

ಅಸ್ಸಾಮ್‌ನಲ್ಲಿ ಬೊಹಾಗ್‌ ಬಿಹು ಅಥವಾ ರೋಂಗಾಲಿ ಬಿಹು ಹಬ್ಬವನ್ನು ಹೊಸವರ್ಷವನ್ನಾಗಿ ಆಚರಿಸುತ್ತಾರೆ. ಪಂಜಾಬದಲ್ಲಿ ಹಿಂದುಗಳು ಬೈಸಾಕಿ ಹಬ್ಬವನ್ನು ಹೊಸವರ್ಷವನ್ನಾಗಿ ಆಚರಿಸುತ್ತಾರೆ. ಇನ್ನು ಕಾಶ್ಮೀರದಲ್ಲಿ ನವರೆಹ್‌ ಹೊಸವರ್ಷವನ್ನು ಮಾರ್ಚ್‌ ತಿಂಗಳ ಎರಡನೇ ವಾರದಲ್ಲಿ ಆಚರಿಸುತ್ತಾರೆ. ಪಕ್ಕದ ದೇಶ ನೇಪಾಳದಲ್ಲಿ ನವವರ್ಷ ಮಾರ್ಚ್‌ ತಿಂಗಳ ಮೂರನೇ ವಾರದಲ್ಲಿ ಆಚರಿಸುತ್ತಾರೆ.

ಹಬ್ಬಗಳನ್ನು ಆಚರಿಸುವ ರೀತಿಗಳು ಬೇರೆಯಿರಬಹುದು. ಅದರ ಹಿಂದಿರುವ ಉದ್ದೇಶ ಮನೆಮಂದಿಯನ್ನೆಲ್ಲಾ ಒಂದುಗೂಡಿಸುವುದು ಮತ್ತು ಸಂತೋಷವನ್ನು ಹಂಚಿಕೊಳ್ಳುವುದು.

English summary
Ugadi marks the beginning of the New Year. It also brings happiness with the onset of Vasanth Ruthu (spring). Vani Bhat writes on Ugadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X