• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಲಿನಾಯ್‌ು ವಿದ್ಯಾರಣ್ಯದಲ್ಲಿ ಯುಗಾದಿ

By Staff
|
 • ವರದಿ : ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌ು, ಅಮೆರಿಕಾ
 • ಏಪ್ರಿಲ್‌, ಎಂಟರ ಶನಿವಾರ ಇಲಿನಾಯ್‌ು ರಾಜ್ಯದ ವಿದ್ಯಾರಣ್ಯ ಕನ್ನಡ ಕೂಟದಲ್ಲಿ ಯುಗಾದಿಯ ಸಂಭ್ರಮ! ಇದು ಈ ವರ್ಷದ ಮೊಟ್ಟ ಮೊದಲನೆಯ ಕಾರ್ಯಕ್ರಮ ಕೂಡ ಆಗಿದ್ದರಿಂದ ನೋಂದಣಿ, ಪರಸ್ಪರ ಪರಿಚಯ ಮತ್ತು ಉಭಯ ಕುಶಲೋಪರಿಗಳ ನಡುವೆ ಯುಗಾದಿಯ ಸಂಭ್ರಮ ಗರಿಬಿಚ್ಚತೊಡಗಿತು.

  ಮೊದಲಿಗೆ ಪೂಜಾ ಕಾರ್ಯಕ್ರಮವನ್ನು ಲೆಮಾಂಟ್‌ನ ರಾಮದೇಗುಲದ ಅರ್ಚಕರು ವಿದ್ಯುಕ್ತವಾಗಿ ನೆರವೇರಿಸಿದ ನಂತರ, ಪಂಚಾಂಗ ಶ್ರವಣವಿತ್ತು. ಬಹುಪಾಲು ಜನರ ವರ್ಷಭವಿಷ್ಯದಲ್ಲಿ ಆಯಕ್ಕಿಂತ ವ್ಯಯವೇ ಹೆಚ್ಚಾಗಿದ್ದಂತೆ ತೋರಿತು. ವ್ಯಯ ಸಂವತ್ಸರದಲ್ಲಿ, ಹಣ ಹೆಚ್ಚು ವ್ಯಯವಾದರೆ ಆಗಲಿ, ಆದರೆ ಅದು ಒಳ್ಳೆಯ ಕೆಲಸಕ್ಕೆ ಉಪಯೋಗವಾಗಲಿ ಎಂಬ ಅರ್ಚಕರ ನುಡಿ ಅರ್ಥಪೂರ್ಣವೆನಿಸಿತು.

  ಪೂಜೆಯ ನಂತರ ಪುಟ್ಟ ಮಕ್ಕಳು ಸ್ಪಷ್ಟ ಉಚ್ಚಾರಣೆಯಲ್ಲಿ ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಪಠಿಸಿದರು. ನಾಡಗೀತೆಯ ನಂತರ ಭಾರತ ಮತ್ತು ಅಮೆರಿಕಾ ದೇಶಗಳ ರಾಷ್ಟ್ರಗೀತೆಗಳನ್ನು ವಾದ್ಯಸಂಗೀತದಲ್ಲಿ ನುಡಿಸಿದ ಪುಟಾಣಿಗಳ ಪರಿಶ್ರಮ ಪ್ರೇಕ್ಷಕರ ಮನಸೂರೆಗೊಂಡಿತು. ವಿದ್ಯಾರಣ್ಯ ಕನ್ನಡಕೂಟದ ಅಧ್ಯಕ್ಷರಾದ ಬಿ.ಇಂದುಶೇಖರ್‌ ಅವರು ಸಭೆಯನ್ನು ಸ್ವಾಗತಿಸಿ, ಸಮಿತಿಗಳ ಪರಿಚಯ ಮಾಡಿಕೊಟ್ಟರು. ನಂತರ ಮಕ್ಕಳಿಂದ ವಂದೇ ಮಾತರಂ, ಯುಗಾದಿಯ ಹಾಡುಗಳ ಗಾಯನವಿತ್ತು.

  ‘‘ಮಂಡಕ್ಕಿ ತಿನ್ನು ಬಾರೆ ಮಾವನ ಮಗಳೇ, ಮುತ್ತಿಕ್ಕುವಾಗ ಬೇಡ ರಾಂಗು ರಗಳೆ’’ - ಕನ್ನಡ ಕೂಟದ ಕಾರ್ಯಕ್ರಮದ ನಡುವೆ ಇದೆಲ್ಲಿಯದು ಈ ಮುತ್ತಿನ ರಗಳೆ? ಎಂದು ಗಲಿಬಿಲಿಗೊಂಡಿರಾ? ‘‘ರಾಜಾ ನರಸಿಂಹ’’ ಚಿತ್ರದ ಈ ಹಾಡಿಗೆ ಮುದ್ದು ಮಕ್ಕಳು ಮುದ್ದುಮುದ್ದಾಗಿ ನರ್ತಿಸಿದಾಗ, ನೃತ್ಯ ಸಂಯೋಜಕರು ಪಟ್ಟಿರಬಹುದಾದ ಶ್ರಮ ಸಾರ್ಥಕವೆನಿಸಿತು. ಆದರೆ ಚಿಕ್ಕಮಕ್ಕಳು ಹೆಜ್ಜೆ ಹಾಕುವ ಹಾಡುಗಳನ್ನು ಹುಡುಕುವಾಗ, ಆದಷ್ಟೂ ಉತ್ತಮ ಸಾಹಿತ್ಯವಿರುವ ಹಾಡುಗಳನ್ನೇ ಆಯ್ದುಕೊಳ್ಳುವುದು ಉಚಿತ. ಮಕ್ಕಳ ಪುಟ್ಟ ಮೆದುಳಿಗೆ ಕಿಂಚಿತ್ತೂ ಹೊರೆಯೆನಿಸದಂತೆ, ಹಾಡಿನೊಂದಿಗೆ ನಾಡಿನ ಬಗೆಗೆ, ಆಟದೊಂದಿಗೆ ನಮ್ಮ ಸಾಹಿತ್ಯ,ಸಂಸ್ಕೃತಿಯ ಪಾಠವನ್ನೂ ಅವರಿಗೆ ಕಲಿಸಿಕೊಡಲು ಸಿಗುವ ಈ ಸದವಕಾಶವನ್ನು ನಾವೇಕೆ ಬಿಟ್ಟುಕೊಡಬೇಕು ಹೇಳಿ?

  ಅದರ ನಂತರವೂ ಮತ್ತಷ್ಟು ನೃತ್ಯಗಳು. ‘‘ಹೊಸ ವರ್ಷ ಬಂದಾಗ’’, ‘‘ಮನೆ ಕಟ್ಟಿ ನೋಡು’’, ‘‘ಕೃಷ್ಣ ಬಾರೋ ರಂಗ ಬಾರೋ’’ ಹಾಡುಗಳಿಗೆ ಮಕ್ಕಳು ಸೊಗಸಾಗಿ ನರ್ತಿಸಿದರು. ‘‘ಎಲ್ಲೆಲ್ಲೂ ಹಬ್ಬ ಹಬ್ಬ ಬಂತು ಯುಗಾದಿ ಹಬ್ಬ’’ - ‘‘ರಿಷಿ’’ ಚಿತ್ರದ ಈ ಹಾಡಿನ ನೃತ್ಯ ಸಂಯೋಜನೆ ಅತ್ಯುತ್ತಮವಾಗಿತ್ತು. ನಮ್ಮ ನೆನಪಿನಿಂದ ಮರೆಯಾಗುತ್ತಿರುವ ಕೋಲಾಟವನ್ನು ನೃತ್ಯದಲ್ಲಿ ಬಳಸಿಕೊಂಡಿರುವ ನೃತ್ಯ ಸಂಯೋಜಕಿ ನಂದಿನಿ ಬೆಂಡಾಲ ಅವರ ಪ್ರಯತ್ನ ಮೆಚ್ಚುವಂತಹುದು.

  ಕನ್ನಡಕೂಟದ ಚಾರಿಟಬಲ್‌ ಫಂಡ್‌ ಸಂಗ್ರಹಣೆಗಾಗಿ ನಿವೇದನೆ - ಇದೊಂದು ಕೆಲವೇ ನಿಮಿಷಗಳ ಚಿಕ್ಕ-ಚೊಕ್ಕ ಕಾರ್ಯಕ್ರಮ. ಈ ವರ್ಷದ ಧರ್ಮಾರ್ಥ ನಿಧಿ ಸಂಗ್ರಹಣೆಗಾಗಿ, ಜೂನ್‌ ನಾಲ್ಕರಂದು, ಶಿಕಾಗೋ ಕಲಾರಂಗದವರು (ಶಿಕರ), ಜ್ಞಾನಪೀಠ ಪ್ರಶಸ್ತಿ ವಿಜೇತ, ಗಿರೀಶ್‌ ಕಾರ್ನಾಡ್‌ ವಿರಚಿತ ‘‘ತಲೆದಂಡ’’ ನಾಟಕವನ್ನು ಆಡಲು ನಿರ್ಧರಿಸಿ, ಅದಕ್ಕಾಗಿ ತಯಾರಿ ನಡೆಸಿದ್ದಾರೆ. ಪವರ್‌ ಪಾಯಿಂಟ್‌ ಪ್ರದರ್ಶನದ ಮೂಲಕ ನಾಟಕದ ಸ್ಥಳ, ದಿನಾಂಕ, ಸಮಯ, ಟಿಕೆಟ್‌ ಪಡೆಯುವ ಬಗೆ ಮುಂತಾದ ವಿವರಗಳನ್ನು, ಸಭಿಕರಿಗೆ ಪರಿಚಯಿಸಲಾಯಿತು. ಇದರ ಜೊತೆಜೊತೆಗೆ, ಈಗಾಗಲೇ ನಾಟಕದ ತಾಲೀಮಿನಲ್ಲಿ ತೊಡಗಿರುವ ಕಲಾವಿದರ ಕಂಠಗಳಲ್ಲಿದ್ದ ಆಯ್ದ ಸಂಭಾಷಣೆಗಳು ತೇಲಿ ಬರುತ್ತಿದ್ದವು.

  ಕಲಾವಿದರ ಹೆಸರನ್ನು ಹೇಳದೆ, ಬರೀ ಅವರ ಧ್ವನಿಗಳನ್ನಷ್ಟೇ ಕೇಳಿಸಿದ್ದರೂ, ಕೆಲವು ಜಾಣ ಸಭಿಕರು ಇದು ಇಂತವರದ್ದೇ ಧ್ವನಿ ಎಂದು ನಿಖರವಾಗಿ ಗುರುತಿಸಿ ಬೆರಗು ಮೂಡಿಸಿಬಿಟ್ಟರು! ಈ ಕಾರ್ಯಕ್ರಮಕ್ಕಾಗಿ, ವಿದ್ಯಾರಣ್ಯದ ಉತ್ಸಾಹೀ ಸದಸ್ಯರಲ್ಲಿ ಒಬ್ಬರಾದ ಅರುಣ್‌ ಮೂರ್ತಿಯವರು ರಚಿಸಿದ್ದ ‘‘ಬಿಜ್ಜಳ’’ನ ಚಿತ್ರ ಸೊಗಸಾಗಿ ಮೂಡಿಬಂದಿದ್ದು, ಎಲ್ಲರ ಗಮನ ಸೆಳೆಯುವಂತಿತ್ತು. ಒಟ್ಟಿನಲ್ಲಿ ‘‘ತಲೆದಂಡ’’ ನಾಟಕದ ಪೂರ್ವಭಾವೀ ಪ್ರದರ್ಶನಕ್ಕಾಗಿ ಶ್ರಮಿಸಿದ ಕಾರ್ಯಕರ್ತರ ‘‘ತಲೆ’’ ’’ದಂಡ’’ ವಾಗಲಿಲ್ಲವೆಂಬುದು ಸಂತೋಷ ಉಂಟುಮಾಡಿದ ಸಂಗತಿ.

  ‘‘ಎಷ್ಟೇ ಮೇಲೆ ಹೋದರೂ ಚಿಕ್ಕೋನಾಗೇ ಇರು’’ ಎಂಬ ನೀತಿಪಾಠವನ್ನು ನಮಗೆ ಸಾರಿ ಹೇಳುತ್ತಿರುವ ‘‘ಆಪ್ತಮಿತ್ರ’’ ಚಿತ್ರದ ಗಾಳಿಪಟದ ಹಾಡಿನ ನೃತ್ಯದ ನಂತರ, ಅಧ್ಯಕ್ಷರು ವಿಶ್ವಕನ್ನಡ ಸಮ್ಮೇಳನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಕನ್ನಡಕೂಟದ ಸದಸ್ಯರನ್ನು ವಿನಂತಿಸಿಕೊಂಡರು. ಅಲ್ಲದೆ ಕನ್ನಡ ಸಾಹಿತ್ಯ ರಂಗದವರು ಜುಲೈ ತಿಂಗಳಲ್ಲಿ ನಡೆಸಿಕೊಡುತ್ತಿರುವ ಸಾಹಿತ್ಯ ಶಿಬಿರದ ಬಗೆಗೆ ಮಾಹಿತಿ ನೀಡಿದರು. ಕವಿ ಡಾ. ಎನ್‌.ಎಸ್‌.ಲಕ್ಷ್ಮೀನಾರಾಯಣಭಟ್ಟರು ಅಮೆರಿಕಾದ್ಯಂತ ಉಪನ್ಯಾಸಗಳನ್ನು ನೀಡಲಿದ್ದು, ಶಿಕಾಗೋದಲ್ಲಿ ಜುಲೈ ತಿಂಗಳ ಎಂಟು ಮತ್ತು ಒಂಭತ್ತರಂದು ನಡೆಯಲಿರುವ ಸಾಹಿತ್ಯ ಶಿಬಿರಗಳಿಗೆ ಆಸಕ್ತರನ್ನು ನೋಂದಾಯಿಸಿಕೊಳ್ಳುವಂತೆ ಕೇಳಿಕೊಳ್ಳಲಾಯಿತು. ‘‘ಆಹಾ ಝುಂ ತಕ’’ ಮತ್ತು ‘‘ನೃತ್ಯ ನಾಟ್ಯ ಮೇಳ’’ದ ನಂತರ ಭೋಜನ ವಿರಾಮವಿತ್ತು.

  ಹೋಳಿಗೆ ಔತಣವನ್ನು ಮುಗಿಸಿಕೊಂಡು ಬಂದ ಕನ್ನಡಿಗರಿಗಾಗಿ ಕಾದಿತ್ತು ಮತ್ತೊಂದು ಸಂಗೀತದ ರಸದೌತಣ! ಅದು ‘‘ಇಬ್ಬನಿಯ ಇಂಚರ’’ ಎಂಬ ರಸಮಂಜರಿ ಕಾರ್ಯಕ್ರಮ. ಮಾಮರವೆಲ್ಲೋ ಕೋಗಿಲೆ ಎಲ್ಲೋ, ಆಸೆಯ ಭಾವ ಒಲವಿನ ಜೀವ, ತೆರೆದಿದೆ ಮನೆ ಓ ಬಾ ಅತಿಥಿ, ಆಲಿಸು.. ಕೃಷ್ಣನ ಕೊಳಲಿನ ಕರೆ, ತಂಗಾಳಿಯಲ್ಲಿ ನಾನು ತೇಲಿ ಬಂದೆ, ಜೊತೆಯಲಿ ಜೊತೆಜೊತೆಯಲಿ, ಅಣ್ಣ ಬರಲಿಲ್ಲ ಯಾಕೋ ಕರಿಯಾಕ, ಬಾರೆ ಬಾರೆ ಚೆಂದದ ಚೆಲುವಿನ ತಾರೆ .... ಕಲಾವಿದರು ಹಾಡಲು ಆರಿಸಿಕೊಂಡಿದ್ದೆಲ್ಲ ಕನ್ನಡದ ಮರೆಯದ ಮಧುರಗೀತೆಗಳನ್ನೇ. ಹಾಡುಗಳಿಗೆ ಕ್ಯಾರಿಯೋಕಿ ಸಂಗೀತವನ್ನು ಬಳಸಿಕೊಂಡಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತ್ತು.

  ಈ ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ಗಾಯಕಿ ಅನುಪಮಾ ನಿತಿನ್‌ ಇದ್ದಕ್ಕಿದ್ದಂತೆ ಕಣ್ಮರೆಯಾದ ರಹಸ್ಯ ಪತ್ತೆಯಾಗಿದ್ದು, ಅವರು ‘‘ಆರಾಧಿಸುವೆ ಮದನಾರಿ’’ ಹಾಡಿಗೆ ನರ್ತಿಸಲು ಸುಭದ್ರೆಯ ವೇಷದೊಂದಿಗೆ ಪ್ರತ್ಯಕ್ಷವಾದಾಗ! ಸುಭದ್ರೆಯ ಎದುರು ನಿಂತು ಹಾಡಲು ಅಲ್ಲಿ ಕಳ್ಳ ಸನ್ಯಾಸಿ ಅರ್ಜುನ ಇರಲಿಲ್ಲ. ಬದಲಿಗೆ ಅಲ್ಲಿದ್ದಿದ್ದು ಅನುಪಮಾ ಪತಿ ನಿತಿನ್‌! ಎಲ್ಲಾ ಗೀತೆಗಳೂ ಬಹಳ ಚೆನ್ನಾಗಿ ಮೂಡಿಬಂದಿತೆಂಬುದಕ್ಕೆ, ಪ್ರೇಕ್ಷಕರು ಹೃತ್ಪೂರ್ವಕವಾಗಿ ತಟ್ಟಿದ ಚಪ್ಪಾಳೆಗಿಂತ ಬೇರೆ ಪುರಾವೆ ಎಲ್ಲಿಂದ ತರಲಿ? ಒಂದು ಹಾಡನ್ನು ಇನ್ನೊಂದು ಹಾಡಿನೊಂದಿಗೆ ಬೆಸೆಯಲು ನಡುವೆ ಆಕರ್ಷಕ ನಿರೂಪಣೆಯೂ ಇತ್ತು. ನಾನಂತೂ ‘‘ಎಲ್ಲೋ ಅದು ಎಲ್ಲೋ ಕಿವಿ ತುಂಬೋ ರಾಗ’’ ಹಾಡಿದ ಗಾಯಕ ದಿನೇಶ್‌ ಕಾದಮುದ್ದಿಯವರಲ್ಲಿ, ಮುಂದಿನ ಬಾರಿ ಹಾಡಲು ‘‘ಕನಸುಗಾರನ ಒಂದು ಕನಸು ಕೇಳಮ್ಮಾ’’ ಹಾಡಿಗೆ ಅರ್ಜಿಯನ್ನೂ ಈಗಾಗಲೇ ಸಲ್ಲಿಸಿಬಿಟ್ಟಿದ್ದೇನೆ!

  ಒಟ್ಟಿನಲ್ಲಿ ಅದೊಂದು ಯಶಸ್ವೀ ಕಾರ್ಯಕ್ರಮ. ಈ ಕಾರ್ಯಕ್ರಮದ ಪರಿಕಲ್ಪನೆ ಮತ್ತು ಸಂಯೋಜನೆ ವಿದ್ಯಾರಣ್ಯದ ಅಧ್ಯಕ್ಷರಾಗಿರುವ ಇಂದುಶೇಖರ್‌ ಅವರದು.

  ಶಿಕಾಗೋ ಕನ್ನಡಕೂಟದ ಸದಸ್ಯರಲ್ಲಿ ಸುಪ್ತವಾಗಿ ಅಡಗಿದ್ದ ಪ್ರತಿಭೆ ಹೊರಹೊಮ್ಮಲು, ಒಂದು ಸುಂದರ ವೇದಿಕೆ ದೊರಕಿದಂತಿತ್ತು. ಅಮೆರಿಕಾದಲ್ಲಿರುವ ಎಲ್ಲಾ ಕನ್ನಡ ಸಂಘಗಳು, ತಮ್ಮ ಮನರಂಜನಾ ಕಾರ್ಯಕ್ರಮಗಳಿಗಾಗಿ, ಕರ್ನಾಟಕದ ಕಲಾವಿದರತ್ತ ಕಣ್ಣುಹಾಯಿಸುವ ಮೊದಲು, ತಮ್ಮಲ್ಲೇ ಇರುವ ಇಂತಹ ಅಮೂಲ್ಯ ಪ್ರತಿಭೆಗಳನ್ನು ಬೆಳೆಸುವತ್ತ ಮನಸ್ಸು ಮಾಡಲಿ. ವಾಷಿಂಗ್‌ಟನ್‌ನಲ್ಲಿ ನಡೆಯಲಿರುವ ವಿಶ್ವಕನ್ನಡ ಸಮ್ಮೇಳನದಲ್ಲಿಯೂ, ಮತ್ತಷ್ಟು ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ನಡೆಯಲಿ ಎಂದು ಆಶಿಸುತ್ತೇನೆ.

  ಜೇ ತೆಲಗಿಯವರ ವಂದನಾರ್ಪಣೆಯೊಂದಿಗೆ, ಮತ್ತೊಂದು ಯುಗಾದಿ ಹಬ್ಬವು ವಿದ್ಯಾರಣ್ಯ ಕನ್ನಡಕೂಟದ ಇತಿಹಾಸದಲ್ಲಿ ಸೇರಿ ಹೋಯಿತು!

  ಕಾರ್ಯಕ್ರಮದ ಎಲ್ಲಾ ಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ.

  ಮುಖಪುಟ / ವ್ಯಯನಾಮ ಸಂವತ್ಸರಕ್ಕೆ ಸ್ವಾಗತ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more