ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಗ್ಲ ನೆಲದಲ್ಲೂ ಯುಗಾದಿ ಸಪ್ಪಳ

By Staff
|
Google Oneindia Kannada News
Ravi Shankarಲಂಡನ್‌ನ ಸುತ್ತ ಮುತ್ತ ಇರುವ ಎನ್‌ಆರ್‌ಐಗಳನ್ನು ಸಂಘಟಿಸಿ, ರೆಡಿಂಗ್‌ ನಗರದಲ್ಲಿ ಯುಗಾದಿ ಆಚರಿಸುವ ವಿಚಾರಕ್ಕೆ ಸ್ಫೂರ್ತಿ ತುಂಬಿದವರು ಗಾಯತ್ರಿ ವಿನಯ್‌ು ಮತ್ತು ವಿನಯ್‌ು ರಾವ್‌. ಸಾರಥ್ಯ ವಹಿಸಿದವರು ಪವನ್‌ ಮೈಸೂರ್‌.

ಪರಸ್ಪರ ಪರಿಚಯ ಹಾಗು ಉಭಯ ಕುಶಲೋಪರಿಗಳೊಂದಿಗೆ ಅಂದಿನ ಕಾರ್ಯಕ್ರಮ ಆರಂಭವಾಯಿತು. ಸುಮಾರು ಇನ್ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನರ ನಡುವೆ, ಯುಗಾದಿ ಕಾರ್ಯಕ್ರಮ ರಂಗೇರಿತ್ತು. ನೆರೆದಿದ್ದ ಮಹಿಳೆಯರಿಗೆಲ್ಲ ಗುಲಾಬಿ ವಿತರಿಸಿ, ಮಧ್ಯಾಹ್ನ 1 ಘಂಟೆಗೆ ಶ್ರೀ ಗಣೇಶನ ಪೂಜೆ ಹಾಗು ಪ್ರಾರ್ಥನೆಯೊಂದಿಗೆ ಶುರುವಾಯಿತು ನಮ್ಮ ಆಚರಣೆ. ಸ್ವಾಗತ ಭಾಷಣದೊಂದಿಗೆ ಗಾಯತ್ರಿ ವಿನಯ್‌ು ಅವರು ಯುಗಾದಿ ಹಬ್ಬ ಹಾಗು ಸಕಲರೂ ಒಂದೆಡೆ ಸೇರಿ ಅದನ್ನು ಆಚರಿಸುವ ಮಹತ್ವವನ್ನು ತಿಳಿಸಿದರು.

ಇತ್ತೀಚೆಗಷ್ಟೆ ಕನ್ನಡ ಚಲನಚಿತ್ರರಂಗಕ್ಕೆ ಹಾಗೂ ಕನ್ನಡ ನಾಡಿಗೆ ತುಂಬಲಾರದ ನಷ್ಟ ಉಂಟುಮಾಡಿದ ನಟಸಾರ್ವಭೌಮ ಡಾ. ರಾಜ್‌ ಅವರ ಅಗಲಿಕೆಯನ್ನು ಸ್ಮರಿಸುತ್ತ, ಅವರ ಆತ್ಮಕ್ಕೆ ಶಾಂತಿ ಕೋರಿ 2 ನಿಮಿಷಗಳ ಮೌನ ಆಚರಿಸಲಾಯಿತು. ಆಣ್ಣಾವ್ರ ಸ್ಟೈಲ್‌ನಲ್ಲಿಯೇ ಮೋಹನ ಅರ್ಕುರ್‌ ಮತ್ತು ಆನ್ನಪೂರ್ಣ ಆನಂದ್‌ ಅವರ ಜೋಡಿ, ಬಭ್ರುವಾಹನ-ಆರ್ಜುನರ ವಾಗ್ಧಾಳಿಯ ಸಂಭಾಷಣೆಯನ್ನು ಅತ್ಯುತ್ತಮವಾಗಿ ಮಂಡಿಸಿದ ರೀತಿ, ಸಭೆ ಕಾವೇರುವಂತೆ ಮಾಡಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಜಯ ಕೊಟ್ಟೂರ್‌ ಅವರು, ಯು.ಕೆ. ಯಲ್ಲಿ ಕನ್ನಡಬಳಗವನ್ನು ಕಟ್ಟಿ ಬೆಳೆಸಿದ ಬಗ್ಗೆ, ಬಳಗದ ಕಾರ್ಯಸಾಧನೆಗಳ ಬಗ್ಗೆ ವಿವರಿಸಿ, ಎಲ್ಲರೂ ಸೇರಿ ಕನ್ನಡಬಳಗ ಮತ್ತಷ್ಟು ಬೆಳೆಸುವ ಬಗ್ಗೆ ಕರೆ ನೀಡಿದರು. ತಮ್ಮ ಭಾಷಣದ ಕೊನೆಯಲ್ಲಿ ಅವರು, ಯು.ಕೆ. ಯಲ್ಲಿಯೂ ಸಹ ಉದಯ ಮತ್ತು ಈ ಟಿ.ವಿ ಬಿತ್ತರಿಸಲು ಮಾಡುತ್ತಿರುವ ಪ್ರಯತ್ನದ ಬಗ್ಗೆ ತಿಳಿಸಿದಾಗ ನೆರೆದಿದ್ದ ಕನ್ನಡಿಗರ, ಅವರ ಭೇಟಿಗೆಂದು ಭಾರತದಿಂದ ಬಂದಿದ್ದ ಅವರ ತಂದೆ-ತಾಯಿಗಳು ಸೇರಿದಂತೆ ಎಲ್ಲರ ಮುಖದಲ್ಲಿ ಸಂತಸದ ನಗೆ, ಚಪ್ಪಾಳೆಯ ಕರತಾಡನ.

ಬೆಳಗಾವಿಯವರಾದ ವಿಜಯ ಕೊಟ್ಟೂರ್‌ ಅವರು ತಮ್ಮ ಭಾಷಾ ಶೈಲಿಯೊಂದಿಗೆ ಸಹಕರಿಸಲು ಕೇಳಿದಾಗ, ಪವನ ಮೈಸೂರ್‌ ಅವರು ‘‘ಹುಬ್ಬಳ್ಳಿ ಯಾದರೇನು, ಬೆಳಗಾವಿ ಯಾದರೇನು’’ ಎಂದು ಚುಟುಕು ಹಾಡನ್ನು ಹೇಳುವುದರ ಮೂಲಕ, ಕಾರ್ಯಕ್ರಮಕ್ಕೆ ರಂಗು ತಂದರು.

ನಂತರ ಆಯೋಜಿಸಿದ್ದ ಅಚ್ಚು ಕಟ್ಟಿನ ಭೋಜನ, ಅದರ ಮೇಲೊಂದು ಪಾನ್‌-ಬೀಡ, ಕರ್ನಾಟಕದ ಮದುವೆ ಸಮಾರಂಭದ ಭೋಜನವನ್ನೇ ಸವಿದಷ್ಟು ರುಚಿಕರವಾಗಿತ್ತು, ಸಮಾವೇಶಕ್ಕೆ ಹಬ್ಬದ ಮೆರುಗನ್ನು ನೀಡಿದಂತಿತ್ತು. ವಿವಿಧ ಕಲಾವಿದರಿಂದ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲ್ಪಟ್ಟವು - ಶುಭ ಸುದರ್ಶನ್‌ ಹಾಗು ಕುಮಾರಿ.

ಶಾಂಘವಿ ಅವರಿಂದ ಭರತನಾಟ್ಯ, ಮಲ್ಲಿಕ ವೇಣುಗೋಪಾಲ್‌ ನಿರೂಪಿಸಿದ ‘‘ಘಲ್ಲು ಘಲ್ಲೆನುತ’’ ಡ್ಯಾನ್ಸನ್ನು ಕುಮಾರಿಯರಾದ ಅನು, ಸೋನು ಮತ್ತು ಬಿಂದಿಯ ಮನಮೋಹಕವಾಗಿ ನರ್ತಿಸಿದರು. ಪವನ ಅವರು ಆಗಾಗ್ಗೆ ಕನ್ನಡ ಒಗಟುಗಳಿಂದ, ಪ್ರಶ್ನೆಗಳೊಂದಿಗೆ ಎಲ್ಲರ ಕನ್ನಡ ಜ್ನಾನವನ್ನು ಒರೆಹಚ್ಚಿದರು. ರೆಡಿಂಗ್‌ ರಮಣಿಯರು ಸೇರಿ ಮಾಡಿದ ನೃತ್ಯ ಚೆನ್ನಾಗಿ ಮೂಡಿ ಬಂದಿತು.

ಈ ಮಧ್ಯೆ ಇದ್ದಕ್ಕಿದ್ದ ಹಾಗೆ, ಪ್ರೇಕ್ಷಕರಿಂದ ಅಂತ್ಯಾಕ್ಷರಿ ಆಟದ ಕೋರಿಕೆ, ನಿರಾಸೆಗೊಳಿಸದ ಪವನ, ಎರಡು ತಂಡಗಳನ್ನು ಮಾಡಿ ಸ್ಪರ್ಧೆ ನಡೆಸಿಯೇಬಿಟ್ಟರು. ಎರಡು ತಂಡದವರು ನಮ್ಮ ಕಾಲದ, ಅಂದರೆ ಹಳೆಯ ಚಲನಚಿತ್ರಗಳ ಮಧುರಗೀತೆಗಳನ್ನೆಲ್ಲ ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ತನ್ನ ಪಾಳಿಗಾಗಿ ಕಾಯುತ್ತಿದ್ದ ಶಶಿಕಾಂತ್‌, ಕೈಗೆ ಮೈಕ್‌ ಸಿಕ್ಕ ಕೂಡಲೆ, ‘‘ಕೋಲು ಮಂಡೆ ಜಂಗಮ ದೇವ’’ ಹಾಡನ್ನು ಪೂರ್ತಿಯಾಗಿ ಹಾಡಿದ್ದು ನೆರೆದವರೆಲ್ಲರನ್ನು ಬೆರಗುಗೊಳಿಸಿತು.

ಕಾರ್ಯಕ್ರಮಗಳ ಜೊತೆಯಲ್ಲಿಯೆ, ಮದುವೆ ಮನೆಯ ವಾತಾವರಣದಂತೆ ಅಲ್ಲಲ್ಲಿ ದಾವಣಗೆರೆ, ಶಿವಮೊಗ್ಗ, ಉಡುಪಿ, ಮಂಗಳೂರು, ಬೆಂಗಳೂರು, ಮೈಸೂರು ಜನರ ಗುಂಪು ಉಭಯಕುಶಲೋಪರಿ ನಡೆಸುತ್ತ ತಮ್ಮ ಹಿಂದಿನ ಚರಿತ್ರೆಗಳನ್ನೆಲ್ಲ ಉಳಿದವರ ಜೊತೆ ಹಂಚಿಕೊಂಡರು. ಇಷ್ಟೊತ್ತಿಗೆ ಸಂಜೆಯಾದ ಪರಿವೆ ಯಾರಿಗೂ ಆದಂತಿರಲಿಲ್ಲ.... ಕಟ್ಲೆಟ್‌, ಟೀ, ಕಾಫಿಯೊಂದಿಗೆ ಸಂಜೆ ಸ್ನ್ಯಾಕ್ಸ್‌ ರೆಡಿ ಆಗಿತ್ತು. ಕಾರ-ಮಂಡಕ್ಕಿ, ಮೆಣಸಿನಕಾಯಿ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂಬ ಕಾಮೆಂಟ್‌ ಅನ್ನು ದಾವಣಗೆರೆ ಗುಂಪಿನವರು ಮಾಡದೆ ಇರಲಿಲ್ಲ.

ಚಹವನ್ನು ಸವಿಯುತ್ತ ಒಂದಾದ ಮೇಲೊಂದು ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದಾಗ ಜನ ನಿಬ್ಬೆರಗಾಗುವಂತೆ ಮೂಡಿಬಂತು, ಕುಮಾರಿ ಅನು ವಿನಯ್‌ುಳ ‘ಖಜರಾರೆ’ ನೃತ್ಯ. ನೃತ್ಯ ಮುಗಿಯುತ್ತಿದ್ದಂತೆ ಕಿವಿಗಡಚಿಕ್ಕುವ ಕರತಾಡನ, ಶಿಳ್ಳೆಗಳೊಂದಿಗೆ ಸಭಿಕರು ತಮ್ಮ ಪ್ರಶಂಸೆಗಳ ಮಳೆಗೈದರು.

ಕಾರ್ಯಕ್ರಮದ ಪರ್ಫೆಕ್ಟ್‌ ಅಂತ್ಯಕ್ಕೆ ಮನೋರಮ ಪ್ರಸಾದ್‌ ಹಾಗು ತಂಡದವರಿಂದ ಕರ್ನಾಟಕ ಸಂಗೀತ ಗಾಯನ ಆಯೋಜಿಸಲಾಗಿತ್ತು. ದಾಸರ ಪದ, ಪ್ರೇಕ್ಷಕರ ಆಸೆಯಂತೆ ‘‘ಕೃಷ್ಣಾ ನೀ ಬೇಗನೆ ಬಾರೋ’’ ಮುಂತಾದ ರಚನೆಗಳನ್ನು ಸುಶ್ರಾವ್ಯವಾಗಿ ಹಾಡಿ, ಎಲ್ಲರೂ ತಲೆದೂಗುವಂತೆ ಮಾಡಿದರು. ಇತ್ತೀಚೆಗೆ ‘‘ಹೊಡಿ ಮಗ ಹೊಡಿ ಮಗ’’, ‘‘ಮೆಂಟಲ್‌ ಮಂಜ’’ ಇನ್ನಿತರ ಹಾಡುಗಳಿಂದ ರೋಸಿಹೊಗಿದ್ದ ನಮ್ಮ ಕಿವಿಗಳಿಗೆ ಮನೋರಮ ಪ್ರಸಾದ್‌ ಅವರ ಗಾಯನ ಮುದ ನೀಡಿತು.

ಒಟ್ಟಾರೆ ಹೊರದೇಶದಲ್ಲಿ ಆಚರಿಸಿದ ಈ ಯುಗಾದಿ ಎಲ್ಲರಿಗೂ ತಮ್ಮ ಊರಲ್ಲೆ ಬಂಧು-ಬಾಂಧವರ ಜೊತೆ ಆಚರಿಸಿದ ಅನುಭವದ ಸಮಾರಂಭವಾಗಿತ್ತು. ಕೊನೆಯಲ್ಲಿ ವಿನಯ್‌ು ರಾವ್‌ ಅವರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮದ ಯಶಸ್ಸಿಗೆ ನೇರವಾಗಿಯೂ, ಪರೋಕ್ಷವಾಗಿಯೂ ಕಾರಣಕರ್ತರಾದ ಎಲ್ಲರಿಗೂ ವಂದನೆ ಹೇಳುತ್ತ, ಮತ್ತೆ ಮತ್ತೆ ಈ ರೀತಿಯ ಸೊಷಿಯಲ್‌ ಗ್ಯಾದರಿಂಗ್‌ ಹಮ್ಮಿಕೊಳ್ಳುವ ಭರವಸೆಯ ಮೂಲಕ ಸಮಾರಂಭಕ್ಕೆ ತೆರೆ ಎಳೆದರು.

ಸಂಜೆ ಸುಮಾರು 7.30ಕ್ಕೆ ಸಭಿಕರೆಲ್ಲ ಪರಸ್ಪರರನ್ನು ತಮ್ಮ ತಮ್ಮ ಸ್ಥಳಗಳಿಗೆ ಆಹ್ವಾನಿಸುತ್ತ, ಆ ದಿನದ ಸಂತಸದ ಕ್ಷಣಗಳನ್ನು ಮೆಲುಕು ಹಾಕುತ್ತ, ಒಲ್ಲದ ಮನಸ್ಸಿನಿಂದ ಹಿಂದಿರುಗಿದರು.

ಮುಖಪುಟ / ವ್ಯಯನಾಮ ಸಂವತ್ಸರಕ್ಕೆ ಸ್ವಾಗತ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X