ಕಾವೇರಿಯಲ್ಲಿ ಯುಗಾದಿ ಕಳೆಯೇರಿಸಿದ ಚಿಣ್ಣರ ಕಿಲಕಿಲ
- ಜಯಶ್ರೀ ಜಗದೀಶ್, ರಾಕ್‌ವಿಲ್, ಮೇರಿಲ್ಯಾಂಡ್
‘ಇದೇನ್ರಿ? ಅನೇಕ ಭಾಷೆಗಳಿಂದ ಕಕ್ಕಾಬಿಕ್ಕಿಯಾಗಿರುವ ಅಮೆರಿಕನ್ನಡ ಮಕ್ಕಳು, ಈ ರೀತಿ ಕನ್ನಡ ನುಡಿಯಲು ಸಾಧ್ಯವೇ ಎಂದು ಅಚ್ಚರಿ ಪಡುತ್ತಿದ್ದಿರಾ?’
‘ಇಲ್ಲ ಕಣ್ರೀ. ಅಮೆರಿಕೆಯ ರಾಜಧಾನಿಯಾದ ವಾಷಿಂಗ್ಟನ್‌ನಲ್ಲಿ ಏಪ್ರಿಲ್ 8ರಂದು ವಿಜೃಂಭಣೆಯಿಂದ ಜರುಗಿದ ಯುಗಾದಿಯ ಸಮಾರಂಭದ ಮೊದಲ ಭಾಗವನ್ನು ಮೇಲೆ ಹೇಳಿದ್ದೇನೆ. ನಾವು ಇಷ್ಟು ಪುಟ್ಟ ಮಕ್ಕಳು, ನಮ್ಮ ಚಿಕ್ಕ ಮೆದುಳಿನಲ್ಲಿ ಕನ್ನಡಕ್ಕಾಗಿ ಇಷ್ಟು ಜಾಗವನ್ನು ಮೀಸಲಿಟ್ಟಿದ್ದೇವೆ. ನಿಮ್ಮ ದೊಡ್ಡ ಮೆದುಳಿನಲ್ಲಿ ನೀವೆಷ್ಟು ಮೀಸಲಿಟ್ಟಿದ್ದೀರೆಂದು ನಮಗೆಲ್ಲ ಸವಾಲೆಸೆದಂತಿತ್ತು; ಅಂದಿನ ಕಾರ್ಯಕ್ರಮ. ಮಕ್ಕಳ ಪ್ರಾಧಾನ್ಯತೆಯಿಂದ ಕೂಡಿದ ಈ ಯುಗಾದಿ ಕಾರ್ಯಕ್ರಮ ಬಹುರೂಪಿ ಮನರಂಜನೆಯನ್ನು ನೀಡಿದುದೂ ಅಲ್ಲದೆ, ಈ ಪೀಳಿಗೆಯಿಂದಲಾದರೂ, ಕನ್ನಡದ ಏಳಿಗೆ ಸಾಧ್ಯವೇನೋ ಎಂಬ ಸಾಂತ್ವನ ಕನ್ನಡಾಭಿಮಾನಿಗಳ ಎದೆ ಮೀಟಿದಂತಿತ್ತು.
ಬ್ಲೇರ್ ಹೈಸ್ಕೂಲಿನ ವಿಶಾಲ ವಾತಾವರಣದಲ್ಲಿ ನಡೆದ ಈ ಸಮಾರಂಭಕ್ಕೆ ಕಾರ್ಯಕಾರಿ ಸಮಿತಿಯವರು ಜೀವನ ಸಾಕ್ಷಿಯಾಗಿ ಬೇವು ಬೆಲ್ಲದ ಸವಿಯಾಡನೆ ಅರಿಸಿನ ಕುಂಕುಮ, ಪುಷ್ಪ ನೀಡಿ ಸ್ವಾಗತಿಸಿದರು. ರಾಜೇಂದ್ರ ಗಲಗಲಿ ಹಾಗೂ ಶುಭಾ ಪ್ರಭು ಅವರು ಅಂದಿನ ಮನರಂಜನಾ ಕಾರ್ಯಕ್ರಮವನ್ನು ಅಮೋಘವಾಗಿ ಹಾಗೂ ಹಾಸ್ಯಮಯವಾಗಿ ನಿರೂಪಿಸಿದರು.
ಬಿಳಿ ಮೋಡ್ಗಳ ನಡುವೆ ಹೊಳೆವ ರವಿದುಂಬಿದ ನೀಲ್ಬಾನಿನ ಚಪ್ಪರಕ್ಕೆ ಕಟ್ಟಿದ ಹೊಸ ಮಾವಿನೆಲೆಯ ತೋರಣದ ಹಿನ್ನೆಲೆಯಲ್ಲಿ ಸಿರಿವೇದಿಕೆಯ ಬಸಿರಿನಿಂದ ಹಸಿರು ಸೀರೆಯ ನೀರೆ ಅನಿತಾ ಕುಲಕರ್ಣಿಯವರು ವ್ಯಯನಾಮ ಸಂವತ್ಸರದಲ್ಲಿ ಶುಭಕೋರಿ, ಅಂದಿನ ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸಿ, ಪುರಂದರ ದಾಸರು ಹೇಳಿದಂತೆ ಸಿರಿ, ಸಂಪತ್ತು, ಜ್ಞಾನ, ಭಕ್ತಿ, ವ್ಯಯನಾಮ ಸಂವತ್ಸರದಲ್ಲಿ ಎಲ್ಲರಿಗೂ ಅಧಿಕವಾಗಿಯೇ ಸಿಗಲಿ. ಆದರೆ, ಪುರಂದರರ ಹೇಳಿಕೆಯ ವೈರಾಗ್ಯದ ಬದಲಿಗೆ (ಅವರ ತಂದೆ ಮೋಹನದಾಸರು ಹೇಳುವಂತೆ) ಆರೋಗ್ಯ ಕೊಡಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ರಾಜರತ್ನಂ ಸ್ಮರಣೆ : ಅನಿತಾ ಚಿಟ್ನಿಸ್ ಅವರ ಪುಷ್ಪಾಂಜಲಿ ಹಾಗೂ ವಿನಾಯಕ ಪ್ರಾರ್ಥನಾ ನೃತ್ಯದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಮೂರರಿಂದ ಹನ್ನೆರಡರ ವಯಸ್ಸಿನ ಸುಮಾರು ನಲವತ್ತು ಮಕ್ಕಳು ಪಾಲ್ಗೊಂಡು, ಸವಿತ ರಾವ್ ಅವರ ನೇತೃತ್ವದಲ್ಲಿ ರೂಪಿತಗೊಂಡ ಉಚ್ಛಮಟ್ಟದ ಕಾರ್ಯಕ್ರಮ ಅಲ್ಲಿ ನಡೆಯಿತು. ಹೌದು, ಜಿ. ಪಿ. ರಾಜರತ್ನಂ ಅವರ ‘ಕಂದನ ಕಾವ್ಯಮಾಲೆ’ ಹಾಡುಗಳಿಗೆ ಅಲ್ಲಿ ನೃತ್ಯವನ್ನು ಸಂಯೋಜಿಸಲಾಗಿತ್ತು. ಮತ್ತೊಮ್ಮೆ ವಿಭ ರಾವ್ ಅವರು ಸ್ವಚ್ಛ ಕನ್ನಡದಲ್ಲಿ ಯಾವ ಟಿಪ್ಪಣಿಯ ಸಹಾಯವೂ ಇಲ್ಲದೆ ಈ ಕವಿತಾ ಗುಚ್ಛವೊಂದನ್ನು ನಿರ್ಮಿಸಲು ಜಿ. ಪಿ. ರಾಜರತ್ನಂರವರಿಗೆ ಸ್ಫೂರ್ತಿ ಪ್ರೇರಿತವಾದ ಸನ್ನಿವೇಶವನ್ನು ವಿವರಿಸಿದರು.
‘ರಂಗವಲ್ಲಿ ಇಕ್ಕುತ್ತಾರೆ ಪುಟ್ಟಪದ್ದು ಶಾರದೆ’ ಎಂಬ ಹಾಡಿನಲ್ಲಿ ಪುಟಾಣಿ ನಿಮಿಷಾ ರಂಗಾಚಾರ್ ಹಿಡಿದ ಪೊರಕೆ ಬಹುಶಃ ಅವಳಿಗಿಂತ ಉದ್ದವಿತ್ತೇನೋ! ಆದರೂ ಗಟ್ಟಿಯಾಗಿ ಹಿಡಿದು ಕಸಗುಡಿಸುವ ದೃಶ್ಯ ಪ್ರೇಕ್ಷಕರ ಮನಕ್ಕೆ ಮುದಕೊಟ್ಟಿತ್ತು. ‘ಬನ್ನಿರಿ ರಾಜ ಕೊಳ್ಳಿರಿ ರಾಜ ಒಂದೊಂದೇ ಕಾಸು’ ಎಂಬ ಪದ್ಯ ಪುಟ್ಟ ಆಟದ ಸಾಮಾನು ಕೊಂಡು ನೆಲ್ಲಿಕಾಯಿ ಮಾವಿನಕಾಯಿ ತಿಂದ ಶಾಲಾ ದಿನಗಳ ನೆನಪನ್ನು ಮರುಕಳಿಸಿತ್ತು. ‘ಬಣ್ಣದ ತಗಡಿನ ತುತ್ತೂರಿ’ ಪದ್ಯ ಕಂಠಪಾಠ ಮಾಡಿ ಒಪ್ಪಿಸುವಾಗ ಮರೆತು ಕನ್ನಡ ಮೇಷ್ಟ್ರ ಕೈಯ್ಯಲ್ಲಿ ಹೊಡೆತ ತಿಂದ ಬಲ ಅಂಗೈಯ್ಯನ್ನು ಮತ್ತೊಮ್ಮೆ ಸವರಿಕೊಳ್ಳುವುದರ ಜೊತೆಗೆ ಕನ್ನಡ ಸರಿಯಾಗಿ ಬಾರದ ಈ ಮಕ್ಕಳು ಹಾಡನ್ನು ನೆನಪಿನಲ್ಲಿಟ್ಟುಕೊಂಡು ಅದಕ್ಕೆ ತಕ್ಕಂತೆ ಅಭಿನಯಿಸಿ ನನ್ನನ್ನು ಅಣಕಿಸಿದಂತಿತ್ತು.
ಕಸ್ತೂರಿ ಪಾತ್ರದಲ್ಲಿ ನೀಳ್ದೇಹದ ಗಾಂಧಿ ಟೊಪ್ಪಿಧಾರಿ ರಶ್ಮಿ ಕುಲಕರ್ಣಿ ಅವರ ಅಭಿನಯ ಅಮೋಘವಾಗಿತ್ತು. ನೀರಿಗೆ ಬಿದ್ದು ತುತ್ತೂರಿ ಹಾಳಾದಾಗ ತೋರುವ ವ್ಯಸನದ ಹಾವ, ಭಾವ, ಕರ್ಕಶ ಶಬ್ದಕ್ಕೆ ತೋರಿದ ಸ್ಪಂದನ ಹಾಗೂ ಮಿಕ್ಕ ಗೆಳೆಯರು ನೀಡಿದ ಸಮಾಧಾನ ಪ್ರಶಂಶನೀಯವಾಗಿತ್ತು. ಕಾರ್ಯಕ್ರಮ ಪರಿಚಯಿಸುವಾಗ ಮನರಂಜನಾ ನಿರೂಪಕರು ಹೇಳಿದಂತೆ - ರಾಜರತ್ನಂರವರಿಗೆ ನಮನ ಸಲ್ಲಿಸಲು ‘ಕಂದನ ಕಾವ್ಯಮಾಲೆ’ಯಲ್ಲಿನ ಕೆಲ ಕುಸುಮಗಳಿಗಿಂತಲೂ ಬೇಕೆ? ಇಂತಹ ನೃತ್ಯ-ಗೀತೆ ನಿರ್ದೇಶಿಸಿದ ಸವಿತ ರಾವ್ ಅವರಿಗೆ ಅಭಿನಂದನೆಗಳು.
ತದನಂತರವೇ ನನಗಿನ್ನಾರು ಸಾಟಿಯೆಂದು ಠೀವಿಯಿಂದ ದಾಪುಗಾಲಿಡುತ್ತ ರಂಗಮಂದಿರ ಪ್ರವೇಶಿಸಿದವನು ನರಕಾಸುರ (ಶ್ರೇಯ ಶೇಷಾದ್ರಿ). ಆತನ ಬೆನ್ನಟ್ಟಿ ಬಂದವರು ಶಿಷ್ಠ ರಕ್ಷಕ ದುಷ್ಟ ಸಂಹಾರಕ ಶ್ರಿ ಕೃಷ್ಣ ಪರಮಾತ್ಮ (ಲೇಖ ತಂತ್ರಿ) ಮತ್ತು ಸತ್ಯಭಾಮೆಯರು. ಶಾಂತಿ ತಂತ್ರಿಯವರ ನಿರ್ದೇಶನದಲ್ಲಿ ಮೂಡಿ ಬಂದ ಯಕ್ಷಗಾನ ಕಾರ್ಯಕ್ರಮ ಎಲ್ಲರನ್ನೂ ಬೆರಗುಗೊಳಿಸಿತು. ಯಕ್ಷಗಾನದಲ್ಲಿ ಬರುವ ಹಲವಾರು ಪ್ರಾಕಾರಗಳನ್ನು, ತಾಳಕ್ಕೆ ತಕ್ಕಂತೆ ನರ್ತಿಸುವ ಹೆಜ್ಜೆಗಳ ಚಳಕವನ್ನೂ ಮಕ್ಕಳಿಂದಲೇ ಪ್ರದರ್ಶಿಸಿದ ಶ್ರೇಯಸ್ಸು , ಶಾಂತಿ ತಂತ್ರಿಯವರಿಗೆ ಸಲ್ಲುತ್ತದೆ.
ತಕ್ಕ ವೇಷ ಭೂಷಣಗಳಿಂದ ಅಲಂಕೃತಗೊಂಡು ಅಬ್ಬರದಿಂದ, ನಿರ್ಭಿಡೆಯಿಂದ ಕನ್ನಡದಲ್ಲಿ ಮಾತನಾಡುವುದನ್ನು ಕೇಳಿದರೆ ಯಕ್ಷಗಾನ ನಡೆಸಿಕೊಟ್ಟವರು ದೊಡ್ಡವರೇ ಇಲ್ಲಾ ಮಕ್ಕಳೇ ಎಂಬ ಸಂಶಯ ಬರುವಷ್ಟು ಮಟ್ಟಿಗೆ ಚೆನ್ನಾಗಿತ್ತು. ಈ ಕಾರ್ಯಕ್ರಮಕ್ಕೆ ಮಕ್ಕಳ ಅಭಿನಯ. ಡೋಲು, ಮೃದಂಗ, ಹಾರ್ಮೊನಿಯಂ ಕಳೆಹೆಚ್ಚಿಸಿದ್ದವು.
ಅಖಿಲಾ ಸುಧೀಶ್ ಅವರು ನಿರ್ದೇಶಿಸಿದ ಅ-ಆ-ಇ-ಈ ಚಲನಚಿತ್ರದ ‘ಜೇನು ಕೀಯಾ ಮಕ್ಕಳು’ ನೃತ್ಯ ತುಂಬಾ ಸೊಗಸಾಗಿತ್ತು. ನಂತರ ಮೂಡಿಬಂದ ಕಾರ್ಯಕ್ರಮ ರವಿ ಶಂಕರ್ ಅವರ ಸಿತಾರ್ ವಾದನದ ಕೃತಿಗೆ ಸಂಯೋಜಿಸಿದ ಒಂದು ಜಾನಪದ ನೃತ್ಯ. ಶೀಲಾಕುಮಾರ್ ಅವರ ನಿರ್ದೇಶನದಲ್ಲಿ ರೂಪುಗೊಂಡು, ತಾಳಕ್ಕೆ ತಕ್ಕ ನೃತ್ಯಾನುಸರಣೆ, ಲಯಬದ್ಧವಾಗಿ ಬಹು ಶಿಸ್ತಿನಿಂದ ಕೂಡಿದ ಮನರಂಜನೆಯಾಗಿತ್ತು.
ಕಾವೇರಿಯ ಅಧ್ಯಕ್ಷರಾದ ಮಾದೇಶ ಬಸವರಾಜು ಅವರು ಕಾರ್ಯಕಾರಿ ಸಮಿತಿಯ ಪರವಾಗಿ ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯ ಕೋರಿ ಮತ್ತೊಮ್ಮೆ ಸ್ವಾಗತಿಸಿದರು.
ಮುಂಬರುವ ಸೆಪ್ಟಂಬರ್ ತಿಂಗಳಲ್ಲಿ, ಕಾವೇರಿಯ ಆಶ್ರಯದಲ್ಲಿ ನಡೆಯಲಿರುವ ‘ವಿಶ್ವ ಕನ್ನಡ ಸಮ್ಮೇಳನ’ ಕಾವೇರಿಯ ಮತ್ತೊಂದು ಘನ ಹೆಜ್ಜೆ. ಈ ಸಮ್ಮೇಳನದ ಯಶಸ್ಸಿಗೆ ನಿಂತವರು ಬಹುಮಂದಿ. ಇವರೆಲ್ಲ ಅಮೆರಿಕೆಯ ವಿವಿಧ ಕನ್ನಡ ಕೂಟಗಳ ಅಧ್ಯಕ್ಷರುಗಳು ಮತ್ತು ಅಕ್ಕ ಸಂಸ್ಥೆಯ ಪದಾಧಿಕಾರಿಗಳು. ವಿಶ್ವ ಕನ್ನಡ ಕೂಟದ ಮುಖ್ಯ ಸಂಚಾಲಕರಾದ ಸುರೇಶ್ ರಾಮಚಂದ್ರ ಮತ್ತು ರವಿ ಡಂಕಣಿಕೋಟೆ ಅವರು ಬಂದ ಅತಿಥಿಗಳನ್ನು ಸ್ವಾಗತಿಸಿ ನಡೆದಿರುವ ಸಿದ್ಧತೆಗಳ ಬಗ್ಗೆ ವಿವರಿಸಿದರು.
‘ಪರವಾಗಿಲ್ಲ, ಈ ಸಲ ತುಂಬಾ ಜನ ಮಕ್ಕಳೇ ಭಾಗವಹಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದವರು ಕೆಲವರಾದರೆ, ‘ಯಾರೂ ದೊಡ್ಡವರು ಸಿಗಲೇ ಇಲ್ಲವಾ ಇವರಿಗೆ’ ಎಂದು ಜರೆದವರು ಮತ್ತೆ ಹಲವರು. ಇವರು ಹೇಳಿದ್ದು ಕೇಳಿಸಿತೇನೋ ಎಂಬಂತೆ ಬಂತು, ಉಷಾ ವಸಂತ್‌ರವರ ನೇತೃತ್ವದಲ್ಲಿ ತಯಾರಾದ ಸುಗಮ ಸಂಗೀತ. ಯುಗಾದಿಯ ಸಂಕೇತವಾಗಿ ‘ವಸಂತ ಬರಲು ಮರ ಚಿಗುರುವುದು’ ಎಂಬ ಹಾಡು ಹಾಡಿದರು.
ಜಿ. ಪಿ. ರಾಜರತ್ನಂ ರವರ ‘ಮಡಕೇರೀಲಿ ಮಂಜು’, ಹಾಗೂ ದ. ರಾ. ಬೇಂದ್ರೆ ಯವರ ‘ಏ ಲಾಲಿ ಲೇಸೋ’ ಎಂಬ ಸುಶ್ರಾವ್ಯವಾದ ಭಾವಗೀತೆಗಳು ಕೇಳುವವರ ಕರ್ಣಗಳಿಗೆ ಆನಂದ ತಂದೊಡ್ಡಿದವು. ಕೂಡಲೇ ಪ್ರಾರಂಭವಾದದ್ದು ವಾಣಿ ರಮೇಶ್ ಅವರು ನಡೆಸಿಕೊಟ್ಟ ಆಶುಭಾಷಣ ಸ್ಪರ್ಧೆ. ಹನ್ನೊಂದು ಜನ ಸ್ಪರ್ಧಿಗಳಿದ್ದು, ಜಯಶ್ರೀ ಜಗದೀಶ್, ಶಶಿಕಲಾ ಚಂದ್ರಶೇಖರ್ ಹಾಗೂ ಶಾಲಿನಿಯವರು ತೀರ್ಪುಗಾರರಾಗಿದ್ದರು. ಬೋಂಡ, ನನ್ನ ಕಾಲೇಜು ದಿನಗಳು, ನಾನು ಕಾವೇರಿಯ ಅಧ್ಯಕ್ಷನಾದರೆ, ಎಂಬ ಕೆಲವು ವಿಷಯಗಳಲ್ಲಿ ಅರ್ಧಾಂಗಿ ಎಂಬ ವಿಷಯದ ಬಗ್ಗೆ ಮಾತನಾಡಿ ಬಹುಮಾನ ಗಿಟ್ಟಿಸಿಕೊಂಡವರು, ಹರೀಶ್ ಹಿರೇಮಠ್.
ಜೊಗಪ್ಪನ ಹಾಡು : ಕಾರ್ಯಕ್ರಮ ಮುಗಿದು ಇನ್ನು ಊಟ ಎಂಬ ಯಾಚನೆಗೆ ತಡೆ ಹಾಕಿ ಬಂತು ಮನರಂಜನಾ ನಿರೂಪಕರ ಪ್ರಕಟಣೆ. ಕೊನೆಯದಾಗಿ ನೀವೆಲ್ಲಾ ನಿರೀಕ್ಷಿಸುತ್ತಿರುವ ನೃತ್ಯ, ‘ಎಲ್ಲೋ ಜೋಗಪ್ಪ ’ಎಂಬ ಹಾಡಿಗೆ ನೃತ್ಯ ಇಲ್ಲಿದೆ ಎಂದರು. ಜಾನಪದದಲ್ಲಿ ಮೂಡಿಬರುವ ಮುಗ್ಧ ಪ್ರಣಯದೊಂದಿಗೆ ಆಧುನಿಕ ಕಾಲದ ಬಜಾರಿಯರ ರಸಿಕತೆಯನ್ನು ಮಿಲಾಯಿಸಿ, ಹಾಡಿನ ಎರಡು ಮಾದರಿಗಳನ್ನು ಜೋಡಿಸಿ ಶಿಲ್ಪ ಜಗದೀಶ್ ಅವರು ನಿರ್ದೇಶಿಸಿದ ನೃತ್ಯ ಹೆಗ್ಗಳಿಕೆಗೆ ಪಾತ್ರವಾಯಿತು.
ಕಿನ್ನೂರಿ ನುಡಿಸುವವನ ದನಿ ಚಂದವೋ ಇಲ್ಲ ಬೆರಳಂದವೋ ಎಂದು ತನ್ನ ಪ್ರಿಯತಮನನ್ನು ಹುಡುಕುತ್ತ ಬಂದು, ಆತನನ್ನು ತುರುಬಿಗೆ ಮೊಗ್ಗಾಗಿ ಬಾ ಎಂದು ಕರೆದರೆ, ತಮ್ಮ ಪ್ರಿಯತಮನನ್ನು ತಳ್ಳುತ್ತ ಕುತ್ತಿಗೆಗೆ ಹಗ್ಗ ಹಾಕಿ ಎಳೆಯುತ್ತ ‘ನಿನ್ನ ಅರಮನೆ ಎಲ್ಲಿ?’ ಎಂದು ದಬಾಯಿಸಿದವರು ಆಧುನಿಕ ಲಲನಾಮಣಿಯರು. ಹಾವ, ಭಾವ, ಮಾದಕ ಅಭಿನಯ, ತಾಳಬದ್ಧವಾದ ಕೋಲ್ಗಳ ನಿನಾದಗಳನ್ನೊಳಗೊಂಡ ನೃತ್ಯ ತಂಡ, ಪ್ರೇಕ್ಷಕರ ಕರತಾಡನದ ಸುರಿ ಮಳೆಯಾಂದಿಗೆ ಶಿಳ್ಳೆಗಳ ಸಾಲನ್ನೇ ಆಕರ್ಷಿಸಿತ್ತು.
ಮಕ್ಕಳಿಗಾಗಿ ಏರ್ಪಡಿಸಿದ ಪ್ರಬಂಧ, ಚಿತ್ರಕಲೆ, ಹಾಗು ಕವನಗಳ ಸ್ಪರ್ಧೆ ಈ ವರ್ಷದ ವಿಶೇಷತೆ ಎನಿಸಿತು. ಈ ಸ್ಪರ್ಧೆಯ ವಿಜೇತರಿಗೆ ಅನೇಕ ಕಾವೇರಿ ಕಾರ್ಯಕಾರಿ ಸಮಿತಿಯ ಸದಸ್ಯರು ಬಹುಮಾನಗಳನ್ನು ಪ್ರಾಯೋಜಿಸಿದ್ದರು.
ಕೊನೆಯದಾಗಿ ಶ್ರೀನಿವಾಸ್ ಗೌಡ ಅವರ ವಂದನಾರ್ಪಣೆಯ ನಂತರ ಊಟದ ಮನೆಗೆ ತೆರಳಿದರೆ ಅಲ್ಲಿ ಮತ್ತೊಂದು ಅಚ್ಚರಿ ಕಾದಿತ್ತು. ಎಲ್ಲರನ್ನೂ ಕೂಡಿಸಿ ಬಾಳೆ ಎಲೆಯಲ್ಲಿ ಹಬ್ಬದೌತಣವನ್ನು ಬಡಿಸುವ ದೃಶ್ಯ ನೋಡಿ ಬಹುಶಃ ಎರಡು ದಶಕಗಳೇ ಕಳೆದಿದ್ದವೇನೋ! ಕಾವೇರಿ ಉಪಾಧ್ಯಕ್ಷೆ ಸುಚೇತಾ ಮನಗೋಳಿಯವರ ನೇತೃತ್ವದಲ್ಲಿ ತುಂಬ ಶಿಸ್ತಿನಿಂದ ವ್ಯವಸ್ಥೆಗೊಳಿಸಲಾಗಿದ್ದ ಭೋಜನಶಾಲೆಯನ್ನು ನೋಡಿದರೆ ಇದು ಅಮೆರಿಕೆಯೋ ಇಲ್ಲ ಭಾರತವೋ ಎಂದು ಸಂದೇಹ ಬಂದಿದ್ದರಲ್ಲಿ ಆಶ್ಚರ್ಯವೇನಿಲ್ಲ. ಕಾವೇರಿಯ ಹಿರಿಯ ಮತ್ತು ಕಿರಿಯ ಸದಸ್ಯರು ನಾ ಮುಂದು ತಾ ಮುಂದು ಎಂದು ಊಟ ಬಡಿಸಲು ಕೈಯಲ್ಲಿ ಟ್ರೇಗಳನ್ನು ಹಿಡಿದುಕೊಂಡು ಸಿದ್ಧರಾಗಿದ್ದು ನೋಡಿ ಎದೆ ತುಂಬಿ ಬಂತು.
ಎಲ್ಲರೂ ಭರ್ಜರಿ ಔತಣ ಸವಿದು ಎರಡಂಗುಲ ಮುಂದೆ ಬಂದ ಹೊಟ್ಟೆಯನ್ನು, ಮಿಕ್ಕ ಊಟವನ್ನು ತುಂಬಿಕೊಂಡ ಚೀಲದಿಂದ ಮುಚ್ಚಿಕೊಳ್ಳುತ್ತ ಸುಚೇತಾ ಮನಗೋಳಿಯವರಿಂದ ವಿಶೇಷವಾಗಿ ತಯಾರಿಸಲ್ಪಟ್ಟ ವೀಳೆ ಜಗಿಯುತ್ತ ಮಿತ್ರರಿಗೆ ವಿದಾಯ ಹೇಳಿ ವಾಹನ ನಿಲ್ದಾಣದತ್ತ ಹೆಜ್ಜೆ ಹಾಕಿದ್ದರು.
ಒಟ್ಟಿನಲ್ಲಿ ಹೇಳುವುದಾದರೆ, ಈ ಯುಗಾದಿಯ ಸಮಾರಂಭ ಅತ್ಯಂತ ವಿಜೃಂಭಣೆಯಿಂದ ನಡೆದು ಬೇವು ಬೆಲ್ಲದ ಸವಿ ಬಹುದಿನ ಎಲ್ಲರ ನೆನಪಲ್ಲೂ ಉಳಿಯುವದರಲ್ಲಿ ಸಂದೇಹವಿಲ್ಲ.
ಮುಖಪುಟ / ವ್ಯಯನಾಮ ಸಂವತ್ಸರಕ್ಕೆ ಸ್ವಾಗತ











Click it and Unblock the Notifications