ವರಮಹಾಲಕ್ಷ್ಮಿ ಹಬ್ಬಕ್ಕೆ ಪೂಜಾ ಕೋಣೆ ಹೀಗಿರಲಿ

ಹೆಣ್ಣು ಮಕ್ಕಳು ಲಕ್ಷ್ಮಿ ಪೂಜೆ ಮಾಡಿದರೆ ಒಳಿತು ಎಂಬುದು ವಾಡಿಕೆ. ಆದ್ದರಿಂದ ದೇವಿ ಪೂಜೆ ಮಾಡಲು ಹೇಗೆ ತಯಾರಿ ಮಾಡಿಕೊಳ್ಳಬಹುದು ಎಂಬ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ. ಪೂಜಾ ಕೋಣೆಯನ್ನು ಒಪ್ಪವಾಗಿ ಅಲಂಕರಿಸಿ ದೇವಿಯನ್ನು ಬರಮಾಡಿಕೊಂಡರೆ ಒಲಿದು ಬರುವಳು.
1. ನಾಣ್ಯಗಳ ಜೋಡಣೆ: ಸರ್ವಸಂಪತ್ತಿನ ದೇವಿಯಾಗಿರುವ ಲಕ್ಷ್ಮಿಯನ್ನು ಬರಮಾಡಿಕೊಳ್ಳಲು ನಾಣ್ಯಗಳಿಂದ ರಂಗೋಲಿ ಚಿತ್ತಾರ ಜೋಡಣೆ ಮಾಡಬಹುದು. ನೆಲದ ಮೇಲೆ 1,2,5 ರೂಪಾಯಿಯ ನಾಣ್ಯಗಳನ್ನು ರಂಗೋಲಿಯಂತೆ ಜೋಡಿಸಬಹುದು. ಇತ್ತೀಚೆಗೆ 5 ರೂ ನಾಣ್ಯ ಚಿನ್ನದ ಬಣ್ಣದಲ್ಲಿ ಇರುವುದರಿಂದ ಇದನ್ನು ಜೋಡಿಸಿದರೆ ಚಿನ್ನದ ನಾಣ್ಯದಲ್ಲೇ ಅಲಂಕಾರ ಮಾಡಿದಂತೆ ಕಾಣುತ್ತದೆ. ಮಂಟಪವಿದ್ದರೆ ಅದರಲ್ಲಿ ಈ ನಾಣ್ಯ ಜೋಡಿಸಿದರೆ ಪೂಜಾ ಕೋಣೆ ಮಿನುಗುತ್ತದೆ.
2. ನೋಟಿನ ಅಲಂಕಾರ: 10,20,50 ರೂಗಳ ನೋಟನ್ನು ಪೂಜಾ ಕೋಣೆಯಲ್ಲಿ ದೇವಿಯ ಮುಂದೆ ತಟ್ಟೆಯಲ್ಲಿ ವೃತ್ತಾಕಾರವಾಗಿ ಅಥವಾ ಲಕ್ಷ್ಮಿ ಕಲಶವಿಡುವ ತಟ್ಟೆಯಲ್ಲಿ ಸುತ್ತಲೂ ನೋಟುಗಳನ್ನು ಒಂದರ ಮೇಲೊಂದಂತೆ ಜೋಡಿಸಿದರೆ ನೋಡಲು ಆಕರ್ಷಕವಾಗಿರುತ್ತದೆ. ನೋಟುಗಳನ್ನು ತೋರಣದಂತೆಯೂ ಕಟ್ಟಬಹುದು. ಆದರೆ ಪಿನ್ ಹೊಡೆಯುವಾಗಾ ಜೋಪಾನದಿಂದಿರಬೇಕು. ನೋಟಿನ ಹಾರವನ್ನೂ ಫೋಟೊಗೆ ಹಾಕಬಹುದು.
3. ಕಮಲದ ಹೂವಿನ ಜೋಡಣೆ: ಲಕ್ಷ್ಮಿ ಕಮಲಪ್ರಿಯೆ. ಆದ್ದರಿಂದ ಮಂಟಪದ ಎದುರು ಅಥವಾ ಕಲಶದ ಎರಡೂ ಬದಿಯಲ್ಲಿ ಹೂಕುಂಡದಲ್ಲಿ ನೀರು ತುಂಬಿಸಿ ಕಮಲದ ಹೂವನ್ನು ನಿಲ್ಲಿಸಬಹುದು. ಕಮಲದ ಎಲೆಗಳನ್ನು ದೀಪದ ಸುತ್ತಲೂ ಎಳೆಎಳೆಯಾಗಿ ಜೋಡಿಸಿದರೆ ದೀಪ ಇನ್ನಷ್ಟು ಮಿನುಗುವಂತೆ ಚೆನ್ನಾಗಿ ಕಾಣುತ್ತದೆ.
4. ಅಷ್ಟ ಲಕ್ಷ್ಮಿ: ಆದಿ ಲಕ್ಷ್ಮಿ, ಧನ ಲಕ್ಷ್ಮಿ, ಧೈರ್ಯ ಲಕ್ಷ್ಮಿ, ವಿದ್ಯಾ ಲಕ್ಷ್ಮಿ, ಸಂತಾನ ಲಕ್ಷ್ಮಿ, ವಿಜಯ ಲಕ್ಷ್ಮಿ, ಧಾನ್ಯ ಲಕ್ಷ್ಮಿ ಮತ್ತು ಗಜ ಲಕ್ಷ್ಮಿ ಈ ಎಂಟು ರೂಪಗಳುಳ್ಳ ವಿಗ್ರಹವನ್ನೋ ಅಥವಾ ಚಿಕ್ಕ ಚಿಕ್ಕ ಫೋಟೋಗಳನ್ನು ಇಟ್ಟು ಪೂಜೆ ಸಲ್ಲಿಸಬಹುದು. ಇದು ಅಲಂಕಾರದೊಂದಿಗೆ ಪರಿಪೂರ್ಣತೆಯನ್ನೂ ನೀಡುತ್ತದೆ.
5. ಕೆಂಪು ಬಣ್ಣ: ಲಕ್ಷ್ಮಿಯನ್ನು ಪ್ರತಿನಿಧಿಸುವ ಮತ್ತು ತುಂಬಾ ವಿಶೇಷವಾಗಿ ಕಾಣಿಸುವ ಕೆಂಪು ಬಣ್ಣವನ್ನು ಕೋಣೆಯಲ್ಲಿ ಅಲಂಕರಿಸಿದರೆ ಪೂಜಾ ಕೋಣೆಗೆ ಕಳೆಬಂದಂತೆ. ಕೆಂಪು ಬಣ್ಣದ ಹೂವುಗಳು, ರಂಗೋಲಿಗೆ ಕೆಂಪು ಬಣ್ಣ ಹಾಗೂ ಕೆಂಪು ಬಣ್ಣದ ಶೇಡ್ ಇರುವ ಸೀರೆ ಮತ್ತು ಬಳೆ ತೊಡಿಸಿದರೆ ಚೆಂದ. ಆದರೆ ಬಣ್ಣ ಕಣ್ಣು ಕುಕ್ಕುವಂತಿರಬಾರದು. ಆಯ್ಕೆಯಲ್ಲಿ ಎಚ್ಚರಿಕೆಯಿರಲಿ.
ಈ ಬಾರಿಯ ವರಮಹಾಲಕ್ಷ್ಮಿ ಹಬ್ಬವನ್ನು ಹೆಚ್ಚು ಅಲಂಕೃತವಾಗಿಸಲು ಪ್ರಯತ್ನಿಸಿ. ವರಲಕ್ಷ್ಮಿಯಲ್ಲಿ ವರ ಬೇಡುವ ಮುನ್ನ ಪೂಜಾ ಕೋಣೆಯನ್ನು ಅಲಂಕೃತಗೊಳಿಸಿ ದೇವಿಯನ್ನು ಒಲಿಸಿಕೊಳ್ಳಲು ಅಣಿಯಾಗಿ. [ಶ್ರೀ ವರಮಹಾಲಕ್ಷ್ಮಿ ಪೂಜಾವಿಧಾನ]












Click it and Unblock the Notifications