ಮಹಾಶಿವರಾತ್ರಿ ಪ್ರಯಕ್ತ ನಗರದಲ್ಲಿ ಕಾರ್ಯಕ್ರಮಗಳು
ಬೆಂಗಳೂರು, ಫೆ, 23 : ಮಹಾಶಿವರಾತ್ರಿ ಅಂಗವಾಗಿ ನಗರದ ವಿವಿಧೆಡೆ ಅನೇಕ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿವೆ. ಹನುಮಗಿರಿ ಟ್ರಸ್ಟ್ ಇಂದು ಶ್ರೀ ಆರ್ಕೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಮಹೋತ್ಸವವನ್ನು ಆಯೋಜಿಸಿದೆ. ಸಂಜೆ 5 ಗಂಟೆ ಮಾತೆಯರಿಂದ ಸೌಂದರ್ಯ ಲಹರಿ ಪಾರಾಯಣ, ಭಕ್ತಿ ಗೀತೆಗಳು, ಭಜನೆ ನಡೆಯಲಿವೆ. (ಸ್ಥಳ - ದೇವಳ, ಹನುಮಗಿರಿ ಕ್ಷೇತ್ರ, ಅರೇಹಳ್ಳಿ ಏಜೀಸ್ ಲೇಔಟ್, ಸುಬ್ರಮಣ್ಯಪುರ )
ಯಶವಂತಪುರ ವೃತ್ತದ ಬಳಿ ಇರುವ ಶ್ರೀ ಮಹಾಯಾಗ ಗಾಯತ್ರಿ ದೇವಸ್ಥಾನದ ಆವರಣದಲ್ಲಿ ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ಸಂಜೆ 6.30ರಿಂದ ಅಹೋರಾತ್ರಿ ಸಂಗೀತ ನೃತ್ಯೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ನಗರದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ದಿಬ್ಬೂರು ವೀರಪ್ಪ ನಂಜಮ್ಮ ಎಂಡೋಮೆಂಟ್ ಟ್ರಸ್ಟ್ ಸಹಯೋಗದಲ್ಲಿ ಜಯನಗರದ ಶಿವರಾತ್ರಿ ಚಿಂತನ ಮಂಟಪ, ಶಿವರಾತ್ರೇಶ್ವರ ವೃತ್ತ, 1 ನೇ ಮುಖ್ಯ ರಸ್ತೆ, 8ನೇ ವಿಭಾಗದಲ್ಲಿ ರಾತ್ರಿ 9 ಗಂಟೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಿದ್ವಾನ್ ಕಾಶಿನಾಥ್ ಪತ್ತಾರೆ, ವಿದ್ವಾನ್ ಶಿವಾನಂದ ಹೆರೂರ್, ಬೀನಾ ಬಾದಾಮಿ ಹಾಗೂ ಅರ್ಪಿತಾ ಬೆಂಕಿಪೂರ ಕಾರ್ಯಕ್ರಮ ನಡೆಸಿಕೊಡುವರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications