Get Updates
Get notified of breaking news, exclusive insights, and must-see stories!

ವಿಶೇಷ ಲೇಖನ: ದೀಪಾವಳಿ ತರದಿರಲಿ ಬಾಳಲ್ಲಿ ಕತ್ತಲೆ...

ದೀಪಾವಳಿಯನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಹಬ್ಬ ಎಂದು ಹೇಳಲಾಗುತ್ತದೆ. ಇದು ಅಕ್ಷರಶಃ ನಿಜ. ಹಬ್ಬದ ಆಚರಣೆ ಓಕೆ ಆದರೆ ಪಟಾಕಿ ಬೇಕೆ? ಎಂಬ ಪ್ರಶ್ನೆಯೂ ಸದ್ದಿಲ್ಲದೆ ಏಳುತ್ತದೆ. ಹಬ್ಬಕ್ಕೆ ಪಟಾಕಿ ಬೇಡವೇ ಬೇಡ ಎನ್ನಲಾಗುವುದಿಲ್ಲ. ಆದರೆ ಹಬ್ಬದ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸುವಾಗ ಎಚ್ಚರವಾಗಿರುವುದು ಒಳಿತು ಇಲ್ಲಾಂದ್ರೆ ನಾವು ಮಾಡಿಕೊಳ್ಳುವ ಎಡವಟ್ಟುಗಳಿಂದ ಬಾಳೇ ಕತ್ತಲೆಯಾಗುವ ಸಾಧ್ಯತೆ ಇಲ್ಲದಿಲ್ಲ.

ದೀಪಾವಳಿ ಹಬ್ಬವನ್ನು ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಹಬ್ಬದಲ್ಲಿ ಹಲವು ಬಗೆಯ ಸಂಪ್ರದಾಯಗಳಿದ್ದು, ಅದರಂತೆ ಆಚರಣೆ ನಡೆಯುತ್ತಾ ಬರುತ್ತಿದೆ. ಈ ಆಚರಣೆಯಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ವಲ್ಪ ಮಟ್ಟಿಗೆ ವಿಭಿನ್ನತೆ ಕಂಡು ಬಂದರೂ ಹಬ್ಬದಲ್ಲಿ ಪಟಾಕಿ ಸಿಡಿಸುವುದಂತು ಎಲ್ಲೆಡೆಯೂ ಇದ್ದೇ ಇದೆ.

ಹಿಂದಿನ ಕಾಲದಲ್ಲಿ ಈಗಿನಷ್ಟು ಮುಂದುವರೆದಿರಲಿಲ್ಲ. ಜೊತೆಗೆ ಆರ್ಥಿಕವಾಗಿಯೂ ಹೆಚ್ಚಿನವರು ಸ್ಥಿತಿವಂತರಾಗಿರಲಿಲ್ಲ. ಹಾಗಾಗಿ ತಮ್ಮ ಇತಿಮಿತಿಯಲ್ಲಿ ಹಬ್ಬವನ್ನು ಆಚರಿಸಿ ಸಂತೋಷಪಡುತ್ತಿದ್ದರು. ಅವತ್ತು ಹಬ್ಬದ ಆಚರಣೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದರಲ್ಲದೆ, ಎಲ್ಲರೂ ಒಂದೆಡೆ ಕಲೆತು ಸಂಭ್ರಮಿಸುತ್ತಿದ್ದರು. ಪಟಾಕಿಯನ್ನು ಸಿಡಿಸುತ್ತಿದ್ದರಾದರೂ ಈಗಿನಷ್ಟು ಪ್ರಾಮುಖ್ಯತೆ ನೀಡುತ್ತಿರಲಿಲ್ಲ.

ಅವತ್ತು ಹಬ್ಬದ ದಿನ ಹತ್ತಿರ ಬರುತ್ತಿದೆ ಎಂದರೆ ಸಾಕು ಮನೆ ಮಂದಿಗೆ ಎಲ್ಲಿಲ್ಲದ ಕಾತರ. ಹಬ್ಬಕ್ಕಾಗಿ ಎಲ್ಲಿಲ್ಲದ ಸಿದ್ಧತೆಗಳು ನಡೆಯುತ್ತಿದ್ದವು. ಮನೆಯಲ್ಲಿ ಮಹಿಳೆಯರು ಏನೇನು ಬೇಕೋ ಅದನ್ನೆಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದರು. ಕೆಲವರು ಮನೆಗೆ ಸುಣ್ಣ, ಬಣ್ಣ ಬಳಿದು ಹಬ್ಬಕ್ಕೆ ಸಿಂಗರಿಸುತ್ತಿದ್ದರು. ಮನೆಯ ಮುಂದಿನ ವಿಶಾಲ ಅಂಗಳವನ್ನು ಸಗಣಿಯಿಂದ ಸಾರಿಸಿ ರಂಗೋಲಿ ಹಾಕಿ ಮನೆಯ ಸುತ್ತಲೂ ದೀಪಗಳಿಂದ ಅಲಂಕರಿಸಿ ವರ್ಷಕ್ಕೊಮ್ಮೆ ಬರುವ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು.[ವಿಶೇಷ ಲೇಖನ: ದೀಪಾವಳಿ ಕೇವಲ ಮನೆ ಜ್ಯೋತಿಯಲ್ಲ, ಆತ್ಮಜ್ಯೋತಿ]

Safeguard measures will be followed by burn the firecracks in Deepavali

ಇನ್ನು ಮನೆಗಳಲ್ಲಿ ಮಕ್ಕಳಿಗೆ ಹಬ್ಬದಲ್ಲಿ ಮಾಡುವ ಹಬ್ಬದೂಟಕ್ಕಿಂತ ಪಟಾಕಿಯ ಮೇಲೆಯೇ ಆಸೆ. ವಿವಿಧ ನಮೂನೆಯ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುವ ತವಕ. ದಿನನಿತ್ಯವೂ ಪಟಾಕಿಯದ್ದೇ ಧ್ಯಾನ. ಅವತ್ತಿನ ದಿನಗಳಲ್ಲಿ ಆರ್ಥಿಕವಾಗಿ ಹೆಚ್ಚಿನವರು ಸ್ಥಿತಿವಂತರಾಗಿಲ್ಲದ ಕಾರಣ ಪಟಾಕಿಗೆ ಹೆಚ್ಚಿನ ಹಣ ಸುರಿಯುತ್ತಿರಲಿಲ್ಲ. ಅಷ್ಟೋ ಇಷ್ಟೋ ಹಣ ನೀಡಿ ಪಟಾಕಿ ಖರೀದಿಸಿ ಮಕ್ಕಳಿಗೆ ನೀಡುತ್ತಿದ್ದರು. ಮಕ್ಕಳು ಅದರಲ್ಲೇ ತೃಪ್ತಿಪಟ್ಟುಕೊಳ್ಳುತ್ತಿದ್ದರು.

ಬದಲಾದ ಕಾಲಘಟ್ಟದಲ್ಲಿ ಹಬ್ಬದ ಆಚರಣೆಗಿಂತ ಪಟಾಕಿಗೆ ಹೆಚ್ಚಿನ ಒತ್ತು ನೀಡುತ್ತಿರುವುದು ಸೂಕ್ಷ್ಮವಾಗಿ ಗಮನಿಸಿದಾಗ ಅರಿವಿಗೆ ಬರುತ್ತದೆ. ಇವತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸಿರುವುದರಿಂದ ಹಬ್ಬದ ಸಂಭ್ರಮವನ್ನು ಕೆಲವರು ಪಟಾಕಿ ಸಿಡಿಸುವುದರ ಮೂಲಕ ಹೊರಗೆಡವುತ್ತಾರೆ. ಪಟಾಕಿ ಖರೀದಿಸಿ ಮನೆಗೆ ತರುವಲ್ಲಿಯೂ ಪೈಪೋಟಿ ಕೆಲವೆಡೆ ಕಂಡು ಬರುತ್ತದೆ.

ಪಟಾಕಿ ಸಿಡಿಸದೆ ಹಬ್ಬ ಆಚರಿಸಿ ಎನ್ನುವುದು ಕೂಡ ಸಾಧ್ಯವಾಗದ ಮಾತು. ಹಬ್ಬ ಎಂದ ಮೇಲೆ ಪಟಾಕಿ ಸದ್ದು ಕೇಳಲೇ ಬೇಕು. ಹಾಗಿದ್ದರೆ ಮಾತ್ರ ಹಬ್ಬಕ್ಕೊಂದು ಕಳೆ. ಆದರೆ ಹಬ್ಬದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಯನ್ನು ಬೆಂಕಿಯಲ್ಲಿ ಸುಡುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದು ಕೂಡ ನಮ್ಮನ್ನು ಕಾಡದಿರದು. ಪಟಾಕಿ ಸಿಡಿಸುವುದರಿಂದ ಮೊದಲಿಗೆ ಹಣವನ್ನು ಬೆಂಕಿಯಲ್ಲಿ ಸುಟ್ಟಂತಾಗುತ್ತದೆ. ಎರಡನೆಯದು ವಾಯುಮಾಲಿನ್ಯಕ್ಕೆ ಕಾರಣವಾಗುತ್ತದೆ. ಇದು ಎರಡು ಕೂಡ ಇಡೀ ಸಮಾಜದ ಮೇಲೆ ಬೀರುವ ದುಷ್ಪರಿಣಾಮ. ಇನ್ನು ಪಟಾಕಿ ಸಿಡಿಸುವಾಗ ಜಾಗ್ರತೆ ವಹಿಸದೆ ಆಗುವ ಅನಾಹುತ ವ್ಯಕ್ತಿ ಹಾಗೂ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ.[ಚಿತ್ರಗಳು : ಯೋಧರೊಂದಿಗೆ ದೀಪಾವಳಿ ಆಚರಿಸಿದ ಮೋದಿ]

ಪಟಾಕಿ ಸಿಡಿಸುವುದರಿಂದ ಆಗುವ ಅನಾನುಕೂಲ ಮತ್ತು ದುರಂತದ ಬಗ್ಗೆ ಈ ಹಿಂದಿನಿಂದಲೂ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕೆಲವರು ಮಾಡುತ್ತಲೇ ಬಂದಿದ್ದಾರೆ. ಆದರೂ ಅದರಿಂದ ಹೆಚ್ಚಿನ ಪ್ರಯೋಜನವಾದಂತೆ ಕಂಡು ಬರುತ್ತಿಲ್ಲ. ಏಕೆಂದರೆ ಈಗಾಗಲೇ ಪಟಾಕಿ ಎಂಬ ಸಿಡಿಮದ್ದಿನ ಮಾಯಾಂಗನೆ ಅಬಾಲವೃದ್ದರಾಗಿ ಎಲ್ಲರನ್ನೂ ತನ್ನತ್ತ ಸೆಳೆದುಕೊಂಡಿದೆ. ಹಾಗಾಗಿ ಪಟಾಕಿ ಸಿಡಿಸುವುದರಲ್ಲೇ ಅದೇನೋ ಮಜಾ ಕಾಣುತ್ತಾರೆ.

Safeguard measures will be followed by burn the firecracks in Deepavali

ಹಬ್ಬದ ಸಂದರ್ಭ ಪಟಾಕಿ ಸಿಡಿಸಲೇ ಬೇಡಿ... ಬರೀ ದೀಪ ಹಚ್ಚಿ.... ಭಕ್ಷ್ಯ ಭೋಜನ ಸವಿದು ಹಬ್ಬ ಆಚರಿಸಿ... ಹಾಗೆಂದು ಹೇಳೋಕೆ ಯಾರಿಂದ ಸಾಧ್ಯ? ಇಷ್ಟಕ್ಕೂ ಅದನ್ನು ಕೇಳಿ ಪಾಲಿಸೋರು ಅದೆಷ್ಟು ಮಂದಿ ಇದ್ದಾರೆ? ಪಟಾಕಿ ಹಚ್ಚಲೇ ಬೇಡಿ ಅನ್ನೋದಕ್ಕಿಂತ ಪಟಾಕಿ ಹಚ್ಚುವಾಗ ಒಂದಷ್ಟು ಮುಂಜಾಗೃತಾ ಕ್ರಮ ಕೈಗೊಳ್ಳಿ ಎಂಬ ಸಲಹೆ ನೀಡಿದರೆ ಒಂದಷ್ಟು ಮಂದಿ ಅದನ್ನು ಪಾಲಿಸಿ ತಾವೇ ತಮ್ಮ ಕೈಯ್ಯಾರೆ ತಂದುಕೊಳ್ಳುವ ದುರಂತಕ್ಕೆ ಕಡಿವಾಣ ಹಾಕಲು ಸಾಧ್ಯವಾಗಬಹುದು.

ಹಬ್ಬ ವರ್ಷಕ್ಕೊಮ್ಮೆ ಬರೋದು... ಜೊತೆಗೆ ಕತ್ತಲಿನಿಂದ ಬೆಳಕಿಗೆ ನಮ್ಮನ್ನು ಕೊಂಡೊಯ್ಯುವ ಹಬ್ಬ ಎಂದು ಕೂಡ ಹೇಳಲಾಗುತ್ತದೆ. ಹೀಗಿರುವಾಗ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸೋ ಭರದಲ್ಲಿ ಎಚ್ಚರ ತಪ್ಪಿ ತಮ್ಮ ಬದುಕನ್ನು ಕತ್ತಲೆಗೆ ತಳ್ಳಿಕೊಳ್ಳಬಾರದಲ್ವ ಹಾಗಾಗಿ ಪಟಾಕಿ ಸಿಡಿಸುವ ಮುನ್ನ ಒಂದಷ್ಟು ಮುನ್ನೆಚ್ಚರಿಕೆ ಜೊತೆಗಿರಲಿ.

ಪಟಾಕಿ ಹಚ್ಚುವಾಗ ಅನುಸರಿಸಬೇಕಾದ ಕ್ರಮಗಳು:

ಗುಣಮಟ್ಟದ ಪಟಾಕಿ ಹಾಗೂ ಪರವಾನಗಿ ಹೊಂದಿದವರಿಂದಲೇ ಖರೀದಿಸಿ. ಪಟಾಕಿ ಸಿಡಿಸಲು ಹೊರಡುವವರು ಹತ್ತಿ ಬಟ್ಟೆಯನ್ನು ಧರಿಸಿಕೊಳ್ಳುವುದು ಒಳ್ಳೆಯದು. ಜೊತೆಗೆ ಹಬ್ಬದ ಜೋಶ್ ನಲ್ಲಿ ಪಟಾಕಿಯನ್ನು ಕೈಯ್ಯಲ್ಲಿಡಿದು ಬೆಂಕಿ ಹಚ್ಚುವ, ಬೇರೆಯವರ ಮೇಲೆ ಎಸೆಯುವ ಪ್ರಯತ್ನ ಮಾಡಬೇಡಿ. ಪಟಾಕಿ ಸಿಡಿಯಲಿಲ್ಲವೆಂದು ಅದನ್ನು ಕೈಯ್ಯಲ್ಲಿ ಹಿಡಿದು ಮೇಲಿನ ಪೇಪರ್ ಸುಲಿದು ಬೆಂಕಿ ಹಚ್ಚುವ ಯತ್ನ ಮಾಡಬೇಡಿ. ಕೆಲವೊಮ್ಮೆ ತಡವಾಗಿ ಸಿಡಿಯುವ ಸಾಧ್ಯತೆಯೂ ಇರುತ್ತದೆ.

ಪಟಾಕಿ ಸಿಡಿಸುವಾಗ ಕಿವಿಗೆ ಹತ್ತಿ ಹಾಗೂ ಮೂಗಿಗೆ ಮಾಸ್ಕ್ ಹಾಕಿಕೊಳ್ಳಿ. ಭಾರೀ ಸದ್ದು ಮಾಡುವ ಪಟಾಕಿಗಳಿಂದ ದೂರ ಸರಿಯಿರಿ ಇಲ್ಲಾಂದ್ರೆ ಕಿವಿಯ ತಮಟೆಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಣ್ಣಿಗೆ ಕನ್ನಡಕ ಧರಿಸುವುದು ಕೂಡ ಒಳ್ಳೆಯದು. ಮನೆಯ ಹಿರಿಯರು ಮಕ್ಕಳನ್ನು ಅವರಿಷ್ಟದಂತೆ ಪಟಾಕಿ ಸಿಡಿಸಲು ಬಿಡಬೇಡಿ ನೀವು ಕೂಡ ಜೊತೆಗಿದ್ದು ಅವರ ಬಗ್ಗೆ ನಿಗಾ ವಹಿಸಿ ಜೊತೆಗೆ ಸಲಹೆ ನೀಡಿ. ಮಕ್ಕಳ ವಯಸ್ಸಿಗೆ ತಕ್ಕದಾದ ಪಟಾಕಿಗಳನ್ನೇ ಖರೀದಿಸಿ ತನ್ನಿ.[ದೀಪಾವಳಿ ಎಲ್ಲರ ಬಾಳಲ್ಲಿ ತರಲಿ ಬೆಳಕು]

ಭಾರೀ ಶಬ್ದ ಬರುವ ಪಟಾಕಿಗಳನ್ನು ನೀಡಬೇಡಿ. ಹೂಕುಂಡ(ಫ್ಲವರ್ ಪಾಟ್)ಗಳಿಗೆ ಬೆಂಕಿ ಹಚ್ಚುವಾಗ ಅಂತರ ಕಾಪಾಡಿ. ಕೈಯ್ಯಿಂದ ಹಚ್ಚುವುದು ಒಳ್ಳೆಯದಲ್ಲ. ಹೂಕುಂಡಗಳು ಸಿಡಿದು ಕೈ,ಕಣ್ಣು ಕಳೆದುಕೊಂಡಿರುವ ಉದಾಹರಣೆಗಳು ಬಹಳಷ್ಟಿವೆ. ಇನ್ನು ಎಲ್ಲೋ ಗಮನಹರಿಸುತ್ತಾ ಪಟಾಕಿಗೆ ಬೆಂಕಿ ಹಚ್ಚುವುದು ಅಪಾಯಕಾರಿ. ಕೆಲವರು ಫೋನಿನಲ್ಲಿ ಮಾತನಾಡುತ್ತಲೋ, ಮತ್ತೇನೋ ಮಾಡುತ್ತಾ ಬೆಂಕಿ ಹಚ್ಚುವವರು ಇದ್ದಾರೆ. ಅಂತಹವರು ದಯವಿಟ್ಟು ಪಟಾಕಿಯತ್ತ ಗಮನವಿಟ್ಟು ಬೆಂಕಿ ಹಚ್ಚಿ.

ರಾಕೆಟ್ ಬಿಡುವಾಗ ಬಾಟಲಿಯನ್ನು ಉಪಯೋಗಿಸಿ. ಅಷ್ಟೇ ಅಲ್ಲ ಆಕಾಶದ ಕಡೆಗೆ ಚಿಮ್ಮುವಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಕೆಲವೊಮ್ಮೆ ತಮ್ಮತ್ತಲೋ, ಪಕ್ಕದ ಮನೆಗೋ ನುಗ್ಗುವ ಸಾಧ್ಯತೆಯಿರುತ್ತದೆ. ಇನ್ನು ಪ್ರಾಣಿಗಳ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಹಚ್ಚುವ ವಿಕೃತ ಕೆಲಸವನ್ನು ದಯವಿಟ್ಟು ಮಾಡಬೇಡಿ. ಪಟಾಕಿಯ ಹೊಗೆಯಲ್ಲಿ ಹೆಚ್ಚು ಹೊತ್ತು ಇರಬೇಡಿ. ಪಟಾಕಿ ಹಚ್ಚಿದ ಕೈಯ್ಯನ್ನು ಚೆನ್ನಾಗಿ ತೊಳೆದು ಆಹಾರ ಸೇವಿಸಿ. ಹೀಗೆ ಒಂದಷ್ಟು ಮುಂಜಾಗ್ರತೆಯಿದ್ದರೆ ದೀಪಾವಳಿ ಹಬ್ಬವನ್ನು ಎಂಜಾಯ್ ಮಾಡಲು ಸಾಧ್ಯವಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+