Diwali 2023: ದೀಪಾವಳಿಯಲ್ಲಿ ಗೊತ್ತಿಲ್ಲದೆ ಈ ಕೆಲಸಗಳನ್ನು ಮಾಡಬೇಡಿ...ಇಲ್ಲದಿದ್ದರೆ ಮನೆಯಲ್ಲಿ ಹಣದ ಸಮಸ್ಯೆ ಕಾಡುತ್ತೆ!
ದೀಪಾವಳಿಯಂದು ಲಕ್ಷ್ಮಿ ದೇವಿ ಮನೆಗೆ ಭೇಟಿ ನೀಡುತ್ತಾಳೆ ಎಂದು ನಂಬಲಾಗಿದೆ. ಹೀಗಾಗಿ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಮನೆ ಹಾಗೂ ಮನೆಯಂಗಳವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಜೊತೆಗೆ ಈ ದಿನ ಕೆಲ ಕಟ್ಟುನಿಟ್ಟಿನ ಕೆಲಸಗಳನ್ನು ಪಾಲಿಸಬೇಕು.
ದೀಪಾವಳಿಯ ದಿನಗಳಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ದೀಪಾವಳಿಯಂದು ನೀವು ಕೆಲ ಕಾರ್ಯಗಳನ್ನು ಮಾಡಿದರೆ ನಂತರ ನೀವು ಏನೇ ಮಾಡಿದರೂ ನಿಮಗೆ ಲಕ್ಷ್ಮಿ ದೇವಿಯ ಕೃಪೆ ಸಿಗುವುದಿಲ್ಲ ಮತ್ತು ನಿಮ್ಮ ಮನೆಯಲ್ಲಿ ಹಣದ ಸಮಸ್ಯೆಗಳು ದೂರವಾಗುವುದಿಲ್ಲ. ಹಾಗಾದರೆ ದೀಪಾವಳಿಯಮದು ಯಾವ ಕೆಲಸಗಳನ್ನು ಮಾಡಬಾರದು.

ಬೆಳಿಗ್ಗೆ ಮಲಗುವ ಅಭ್ಯಾಸ ತಪ್ಪಿಸಿ
ಪ್ರತಿದಿನ ಬೆಳಗ್ಗೆ ಬೇಗ ಏಳಬೇಕು ಎಂದರೂ ಬೆಳಗ್ಗೆ ತಡವಾಗಿ ಏಳುವವರ ಸಂಖ್ಯೆ ಜಾಸ್ತಿ ಇದೆ. ಶಾಸ್ತ್ರಗಳ ಪ್ರಕಾರ ಎಲ್ಲರೂ ದೀಪಾವಳಿಯಂದು ಬ್ರಹ್ಮ ಮುಹೂರ್ತದಲ್ಲಿ ಏಳಬೇಕು. ಈ ದಿನಗಳಲ್ಲಿ ಸೂರ್ಯೋದಯದವರೆಗೆ ಮಲಗುವವರಿಗೆ ಮಹಾಲಕ್ಷ್ಮಿಯ ಕೃಪೆ ಸಿಗುವುದಿಲ್ಲ.
ಹಿರಿಯರಿಗೆ ಗೌರವ
ದೀಪಾವಳಿಯಂದು ಮಾತ್ರವಲ್ಲದೆ ಯಾವುದೇ ಸಂದರ್ಭದಲ್ಲೂ ಧರ್ಮವನ್ನು ಅವಮಾನಿಸುವ ಕೆಲಸ ಮಾಡದಂತೆ ವಿಶೇಷ ಕಾಳಜಿ ವಹಿಸಬೇಕು. ಜೊತೆಗೆ ಈ ದಿನ ಪಾಲಕರು ಮತ್ತು ಹಿರಿಯರನ್ನು ಗೌರವಿಸಬೇಕು. ಅವರ ಆಶೀರ್ವಾದವನ್ನು ಪಡೆಯಬೇಕು. ತಂದೆ-ತಾಯಿಯನ್ನು ಅಗೌರವಿಸುವವರಿಗೆ ದೇವರ ಕೃಪೆ ಸಿಗುವುದಿಲ್ಲ ಮತ್ತು ಬಡತನವೂ ಹೆಚ್ಚುತ್ತದೆ. ಈ ದಿನ ಯಾರನ್ನೂ ಮೋಸ ಮಾಡಬೇಡಿ, ಸುಳ್ಳು ಹೇಳಬೇಡಿ ಮತ್ತು ಎಲ್ಲರೊಂದಿಗೆ ಪ್ರೀತಿಯಿಂದ ವರ್ತಿಸಿ.

ಮನೆಯ ಸ್ವಚ್ಚತೆ ಮುಖ್ಯ
ದೀಪಾವಳಿಯಂದು ಮನೆ ಸ್ವಚ್ಛವಾಗಿರಬೇಕು. ಮನೆಯ ಪ್ರತಿಯೊಂದು ಮೂಲೆಯೂ ಸ್ವಚ್ಛ ಮತ್ತು ನೈರ್ಮಲ್ಯವಾಗಿರಬೇಕು. ಮನೆ ಅಥವಾ ಸುತ್ತಮುತ್ತ ಯಾವುದೇ ದುರ್ವಾಸನೆ ಇರಬಾರದು. ಶುಚಿಗೊಳಿಸುವುದರ ಜೊತೆಗೆ ಕೆಲ ಸುವಾಸನೆಯುಕ್ತ ಉತ್ಪನ್ನಗಳನ್ನು ಬಳಸುವುದರ ಮೂಲಕ ಮನೆಯು ಉತ್ತಮ ಪರಿಮಳವನ್ನು ನೀಡುತ್ತದೆ.
ಕೋಪ ತಪ್ಪಿಸಿ
ದೀಪಾವಳಿಯಂದು ಕೋಪಗೊಳ್ಳಬಾರದು ಮತ್ತು ಜೋರಾಗಿ ಕೂಗುವುದು ಕೂಡ ಅಶುಭ. ಈ ದಿನಗಳಲ್ಲಿ ಕೋಪಗೊಳ್ಳುವ ಅಥವಾ ಜೋರಾಗಿ ಕೂಗುವವರಿಗೆ ಲಕ್ಷ್ಮಿಯ ಕೃಪೆ ಸಿಗುವುದಿಲ್ಲ. ಮನೆಯಲ್ಲಿ ಶಾಂತಿಯುತ, ಆಹ್ಲಾದಕರ ಮತ್ತು ಸ್ವಚ್ಛ ವಾತಾವರಣವನ್ನು ಕಾಪಾಡಿಕೊಳ್ಳಿ. ಅಂತಹ ಮನೆಗಳು ಲಕ್ಷ್ಮಿ ದೇವಿಯ ಕೃಪೆಯಿಂದ ತುಂಬಿರುತ್ತವೆ. ಈ ದಿನಗಳಲ್ಲಿ ಮನೆಯಲ್ಲಿ ಯಾವುದೇ ಜಗಳಗಳು ಇರಬಾರದು ಎಂಬುದನ್ನು ನೆನಪಿಡಿ. ಕುಟುಂಬದ ಎಲ್ಲ ಸದಸ್ಯರು ಪ್ರೀತಿಯಿಂದ ಬದುಕಬೇಕು ಮತ್ತು ಸಂತೋಷದ ವಾತಾವರಣವನ್ನು ಕಾಪಾಡಿಕೊಳ್ಳಬೇಕು. ಕಲಹ ಇರುವ ಮನೆಗಳಲ್ಲಿ ದೇವಿಯ ಕೃಪೆ ಇರುವುದಿಲ್ಲ. ಮನೆಯಲ್ಲಿ ಅಥವಾ ಹೊರಗೆ ಯಾರೊಂದಿಗೂ ವಾದ-ವಿವಾದಗಳು ನಡೆಯದಂತೆ ನೋಡಿಕೊಳ್ಳಿ.
ಸಂಜೆ ಮಲಗುವುದು ದರಿದ್ರ
ಕೆಲವು ವಿಶೇಷ ಸಂದರ್ಭಗಳಲ್ಲಿ ಹೊರತುಪಡಿಸಿ ಹಗಲು ಅಥವಾ ಸಂಜೆ ಮಲಗಬೇಡಿ. ಒಬ್ಬ ವ್ಯಕ್ತಿಯು ಅನಾರೋಗ್ಯ, ವಯಸ್ಸಾದ ಅಥವಾ ಮಹಿಳೆ ಗರ್ಭಿಣಿಯಾಗಿದ್ದರೆ ಅಂಥವರು ಹಗಲು ಅಥವಾ ಸಂಜೆಯ ಸಮಯದಲ್ಲಿ ಮಲಗಬಹುದು, ಆದರೆ ಆರೋಗ್ಯವಂತ ವ್ಯಕ್ತಿಯು ದಿನ ಅಥವಾ ಸಂಜೆಯ ಸಮಯದಲ್ಲಿ ಮಲಗಬಾರದು. ಶಾಸ್ತ್ರಗಳ ಪ್ರಕಾರ ಅಂತಹ ಸಮಯದಲ್ಲಿ ಮಲಗುವವರು ಬಡತನವನ್ನು ಅನುಭವಿಸುತ್ತಾರೆ.
ಮದ್ಯ ಸೇವನೆ ಅಶುಭ
ಶಾಸ್ತ್ರಗಳ ಪ್ರಕಾರ ಈ ದಿನಗಳಲ್ಲಿ ಯಾವುದೇ ರೀತಿಯ ಮದ್ಯ ಸೇವಿಸುವುದು ತಪ್ಪು. ದೀಪಾವಳಿಯಂದು ಮದ್ಯ ಸೇವಿಸುವವರು ಯಾವಾಗಲೂ ಬಡತನವನ್ನು ಅನುಭವಿಸುತ್ತಾರೆ. ಕುಡಿತದ ಚಟದಿಂದ ಮನೆಯ ನೆಮ್ಮದಿ ಕೆಡುತ್ತದೆ ಹಾಗೂ ಸದಸ್ಯರೆಲ್ಲ ಚಡಪಡಿಸುತ್ತಾರೆ. ಇದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಇಲ್ಲದಿದ್ದರೆ ವಾದಗಳು ಉಂಟಾಗಬಹುದು. ಇದು ಲಕ್ಷ್ಮಿಯನ್ನು ಅವಮಾನಿಸಿದಂತಾಗುತ್ತದೆ.
(ಗಮನಿಸಿ: ಮೇಲೆ ನೀಡಲಾದ ಮಾಹಿತಿ ಅಂತರರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಅವಲಂಬಿಸಿದೆ. ಮಾಹಿತಿ ನೀಡುವುದು ನಮ್ಮ ಏಕೈಕ ಉದ್ದೇಶ. ಯಾವುದೇ ಮಾಹಿತಿ ಅನುಷ್ಠಾನಗೊಳಿಸುವ ಮೊದಲು ಸಂಬಂಧಪಟ್ಟ ವೃತ್ತಿಪರರನ್ನು ಸಂಪರ್ಕಿಸಿ)












Click it and Unblock the Notifications