ನಿನ್ನೆಲ್ಲ ಸುಳ್ಳು ಗಾಬರಿಗಳ ಬಹುಕಾಲದ ಬಲಿಪಶು
ಇದು ಎಷ್ಟನೇ ಪ್ರೇಮ ಪತ್ರ? ನನಗಂತೂ ನೆನಪಿಲ್ಲ. ನೂರಾ ಅರವತ್ತು, ಎಪ್ಪತ್ನಾಲ್ಕು, ತೊಂಬತ್ತೆಂಟು ಹೀಗೆಲ್ಲ ಲೆಕ್ಕ ಇಡುವ ಜಾಯಮಾನ ನನ್ನದಲ್ಲ. ವರ್ಷದ ಕೊನೆಗೆ ತುಂಟಿಗೊಂದು ಪ್ರೇಮ ಪತ್ರ ಬರೆಯೋಣ ಅಂತ ಶುರು ಮಾಡ್ತಿದ್ದೀನಿ. ವರ್ಷವೆಲ್ಲ ತೋರಿದ ಪ್ರೀತಿ, ಸಿಟ್ಟು, ಸುಖಾ ಸುಮ್ಮನೆ ಕೈಗೆ ಸಿಗದೆ ಓಡಾಡಿದ್ದು, ಬೇಕೆಂತಲೇ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದು, ಒಟ್ಟಿಗೆ ನೋಡಿದ ಸಿನಿಮಾ...
ಎಷ್ಟೆಲ್ಲ ಚಂದದ ನೆನಪುಗಳನ್ನು ಬೊಗಸೆಯಲ್ಲಿಟ್ಟು ಅಲ್ವಿದಾ ಹೇಳುತ್ತಿದೆಯಲ್ಲಾ ಈ ವರ್ಷ! ಮುಂದಿನ ವರ್ಷಕ್ಕೆ ಜೇನಿನಂಥ ಸಿಹಿಯಾದ ನೆನಪುಗಳೆಲ್ಲ ಪುನರ್ದರ್ಶನ ಪ್ರಾಪ್ತಿರಸ್ತು ಎಂದು ಹಾರೈಸಿದಂತೆ ಮನಸ್ಸಿನಲ್ಲೊಂದು ಫೀಲಿಂಗು. ಈ ವರ್ಷವಾದರೂ ನಿನ್ನ ಮನೆಯ ಕಾಂಪೌಂಡಿನ ಎತ್ತರ ಕಡಿಮೆ ಆಗಲಿ, ನಿನ್ನ ತಂಗಿಯ ಅನುಮಾನ ಬುದ್ಧಿ ತೊಲಗಲಿ ಎಂಬ ಪ್ರಾರ್ಥನೆಗೆ ಆ ದೇವರೂ ಗಾಬರಿ ಆಗಬಹುದೇನೋ?

ಈ ವರ್ಷ ನಿನ್ನ ಡಿಗ್ರಿ ಮುಗಿಯತ್ತಲ್ವಾ ಮಾರಾಯ್ತಿ, ಆ ನಂತರ ಐಎಎಸ್ಸೋ ಐಪಿಎಸ್ಸೋ ಮಾಡ್ತಿಯೇನೋ ಅಂತ ನಿನ್ನಪ್ಪ ಕೇಳಿದರೆ, ಸುಮ್ಮನೆ ತಲೆ ಅಲ್ಲಾಡಿಸಬೇಡ. ಅದೇ ಉದ್ದೇಶ ಇರುವ ಎರಡು ಮಕ್ಕಳನ್ನು ನಿಮಗೆ ಹೆತ್ತಿಕೊಡ್ತೀನಿ ಅಂತ ಸೂಚ್ಯವಾಗಿ ಏನನ್ನು ಹೇಳಬೇಕೋ ಅಷ್ಟನ್ನು ಹೇಳಿಬಿಡು.
ವರ್ಷದ ಮೊದಲ ದಿನ ಗಾಂಧಿ ಬಜಾರಿನ ಮೆಕ್ ಡೊನಾಲ್ಡ್ ನಲ್ಲಿ ಕಾಯ್ತಿರ್ತೀನಿ, ತಪ್ಪಿಸಿಕೊಳ್ಳದೆ ಬಂದು ಬಿಡು. ಅಲ್ಲಿಂದ ಸೌತ್ ಎಂಡ್ ಹತ್ತಿರದ ಬಾಬಾ ಚಟ್ಕೋರಾ ಹೋಟೆಲ್ ನಲ್ಲಿ ಊಟ ಮಾಡಿ, ಜಯನಗರ ಸ್ವಾಗತ್ ಮಾಲ್ ನಲ್ಲಿ ಕನ್ನಡ ಸಿನಿಮಾ ನೋಡಿ, ಎಲ್ಲರೂ ದೊಡ್ಡ ಸಂಭ್ರಮ ಎನ್ನುವಂತೆ ಬಿಂಬಿಸುವ ಹೊಸ ವರ್ಷಕ್ಕೆ ಹಾಯ್ ಎಂದು ಬಿಡೋಣ.
ನಿನ್ನೆಲ್ಲ ಸುಳ್ಳು ಗಾಬರಿಗಳಿಗೆ ಬಹು ಕಾಲದ ಬಲಿಪಶು
ಅಮೋಘ- ಹರ್ಷ












Click it and Unblock the Notifications