Punganur Cow: ಮೋದಿಯಿಂದ ಮುದ್ದಾಡಿಸಿಕೊಂಡ ವಿಶ್ವದ ಅತಿ ಚಿಕ್ಕ ಪುಂಗನೂರು ಹಸು ಹಾಲಿನ ವಿಶೇಷತೆ ಏನು ಗೊತ್ತಾ?
ಪುಂಗನೂರು ವಿಶ್ವದ ಅತ್ಯಂತ ಚಿಕ್ಕ ಹಸುಗಳಲ್ಲಿ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಸುವಿನ ಜೊತೆ ಹಲವು ಬಾರಿ ಕಾಣಿಸಿಕೊಂಡಿದ್ದಲ್ಲದೆ ಪ್ರಧಾನಿ ನಿವಾಸದಲ್ಲಿಯೂ ಈ ವಿಶೇಷ ಹಸುಗಳನ್ನು ಸಾಕಲಾಗಿದೆ. ವಿಶೇಷವೆಂದರೆ ಪುಂಗನೂರು ಗೋವು ವೇದಕಾಲದಿಂದಲೂ ಇದೆ. ಪುಂಗನೂರು ಹಸುವಿನ ಪೌರಾಣಿಕ ಕಥೆಯು ಮಹರ್ಷಿ ವಿಶ್ವಾಮಿತ್ರನೊಂದಿಗೆ ಸಹ ಸಂಬಂಧಿಸಿದೆ. ವಿಶೇಷವಾಗಿ ಇದರ ಹಾಲು ಅಮೃತದಂತೆ ಎಂದು ಹೇಳಲಾಗುತ್ತದೆ.
ಪ್ರಸ್ತುತ ಪ್ರಪಂಚದಲ್ಲಿ ಈ ತಳಿಯ ಹಸುಗಳು ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇವೆ. ಆದರೆ ಇದು ವಿಶ್ವದ ಅತ್ಯಂತ ದುಬಾರಿ ಹಸುಗಳಲ್ಲಿ ಒಂದು. 2.5 ಅಡಿಯ ಈ ಹಸು ಲಕ್ಷ ಬೆಲೆ ಬಾಳುತ್ತದೆ. ಹಾಗಾದರೆ ಈ ಹಸುವಿನ ವಿಶೇಷತೆ ಏನು ಮತ್ತು ಅದನ್ನು ಚಿನ್ನದ ಗಣಿ ಎಂದು ಏಕೆ ಕರೆಯುತ್ತಾರೆ ಎಂಬುದನ್ನು ತಿಳಿಯೋಣ.

ಪುಂಗನೂರು ಎಂದು ಕರೆಯಲು ಕಾರಣವೇನು?
ಈ ಹಸು ಹೆಚ್ಚಾಗಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಪ್ರದೇಶದಲ್ಲಿ ಕಂಡುಬರುತ್ತದೆ. ಆದುದರಿಂದ ಇದಕ್ಕೆ ಪುಂಗನೂರು ಎಂದು ಹೆಸರು ಬಂತು. ನೋಟದಲ್ಲಿ ಚಿಕ್ಕದಾಗಿ ಕಾಣುವ ಮೂಲಕ ಕರು ಎಂದು ಅನಿಸಿದರೂ ಇದರ ದೇಹ ರಚನೆ ನೋಡಿದರೆ ಪುಂಗನೂರು ಎಂದು ಗೊತ್ತಾಗುತ್ತದೆ. ಇದರ ಹಾಲು ತುಂಬಾ ಗಟ್ಟಿಯಾಗಿರುತ್ತದೆ. ಇದಲ್ಲದೆ ಇದು ಇತರ ಹಸುಗಳಿಗಿಂತ ಹೆಚ್ಚು ಬೆಣ್ಣೆಯನ್ನು ಉತ್ಪಾದಿಸುತ್ತದೆ.
ಪುಂಗನೂರು ಹಸು ಎಷ್ಟು ಹಾಲು ಕೊಡುತ್ತದೆ?
ಪುಂಗನೂರು ಹಸುಗಳು ಸಾಮಾನ್ಯ ಹಸುಗಳಿಗಿಂತ ತುಂಬಾ ಚಿಕ್ಕದಾಗಿವೆ. ಈ ಚಿಕ್ಕ ಪುಂಗನೂರು ಹಸುಗಳ ಎತ್ತರ 70 ರಿಂದ 90 ಸೆಂ ಮತ್ತು ತೂಕ 115 ಕೆಜಿಯಿಂದ 200 ಕೆಜಿ ವರೆಗೆ ಇರುತ್ತದೆ. ಈ ಹಸು ದಿನಕ್ಕೆ 3 ಲೀಟರ್ ವರೆಗೆ ಹಾಲು ನೀಡುತ್ತದೆ. ಚಿಕ್ಕ ಪುಂಗನೂರು ಹಸುಗೆ ಹೋಲಿಸಿದರೆ ಪ್ರಸಿದ್ಧ ಓಂಗೋಲ್ ಬುಲ್ನ ಉದ್ದವು 1.70 ಮೀಟರ್ ಇರುತ್ತದೆ ಮತ್ತು ತೂಕವು 500 ಕಿಲೋಗ್ರಾಂ ಇರುತ್ತದೆ. ಎರಡೂ ಜಾನುವಾರುಗಳ ಮೂಲ ಆವಾಸಸ್ಥಾನ ಆಂಧ್ರ ಪ್ರದೇಶವಾಗಿದೆ. ಚಿತ್ತೂರು ಜಿಲ್ಲೆಯ ಪಲಮನೇರ್‌ನಲ್ಲಿರುವ ಜಾನುವಾರು ಸಂಶೋಧನಾ ಕೇಂದ್ರದ ಪ್ರಕಾರ, ಚಿತ್ತೂರು ಜಿಲ್ಲೆ ಈ ಜಾನುವಾರುಗಳ ಕೊನೆಯ ಆಶ್ರಯವಾಗಿದ್ದು, ಜಾನುವಾರು ಸಂಶೋಧನಾ ಕೇಂದ್ರವು ಅವುಗಳನ್ನು ಸಂರಕ್ಷಿಸುತ್ತಿದೆ.
ಪುಂಗನೂರು ಹಸುಗಳ ಧಾರ್ಮಿಕ ಗುಣಲಕ್ಷಣಗಳು
ಪುಂಗನೂರು ಹಸುಗಳಿಗೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವವಿದೆ. ಈ ಹಸುಗಳಲ್ಲಿ ಮಹಾಲಕ್ಷ್ಮಿ ನೆಲೆಸಿದ್ದಾಳೆ ಎಂದು ಜನರು ನಂಬುತ್ತಾರೆ. ಅದಕ್ಕಾಗಿಯೇ ದಕ್ಷಿಣ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿನ ಶ್ರೀಮಂತ ಜನರು ಈ ಹಸುಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಪ್ರತಿದಿನ ಪೂಜಿಸುತ್ತಾರೆ.

ಮಾತ್ರವಲ್ಲದೆ ಈ ಹಸುಗಳ ಹಾಲನ್ನು ಅತ್ಯಂತ ಪವಿತ್ರ ಮತ್ತು ಪೌಷ್ಟಿಕವೆಂದು ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿಯೇ ವಿಶ್ವವಿಖ್ಯಾತ ತಿರುಪತಿ ಬಾಲಾಜಿ ದೇವಸ್ಥಾನ ಸೇರಿದಂತೆ ದಕ್ಷಿಣದ ಹಲವು ಪ್ರಸಿದ್ಧ ದೇವಸ್ಥಾನಗಳಲ್ಲಿ ಕೇವಲ ಪುಂಗನೂರಿನ ಹಸುವಿನ ಹಾಲನ್ನು ಕ್ಷೀರಾಭಿಷೇಕಕ್ಕೆ ಬಳಸುತ್ತಾರೆ ಎಂದು ಹೇಳಲಾಗುತ್ತದೆ.
ಪುಂಗನೂರು ಹಸುವಿನ ಹಾಲಿನ ಪೌಷ್ಟಿಕಾಂಶ
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಕಂಡುಬರುವ ಪುಂಗನೂರು ಹಸು ಅತ್ಯಂತ ವಿಶಿಷ್ಟವಾಗಿದೆ. ಇದನ್ನು 'ಎಲ್ಲ ಹಸುಗಳ ತಾಯಿ' ಎಂದೂ ಕರೆಯುತ್ತಾರೆ. ಪುಂಗನೂರು ಹಸು ಸಣ್ಣ ಗಾತ್ರದ ಹಸುವಾಗಿದ್ದು ಇದು ತುಂಬಾ ಪ್ರಬಲವಾಗಿದೆ ಮತ್ತು ಇದರ ಹಾಲು ಅಧಿಕ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಇತರ ಅಗತ್ಯ ಪೋಷಕಾಂಶಗಳು ಇವೆ. ವಿಶೇಷವೆಂದರೆ ಸಾಮಾನ್ಯ ಹಸುವಿನ ಹಾಲಿನಲ್ಲಿ ಶೇ.3-4ರಷ್ಟು ಕೊಬ್ಬಿನಾಂಶವಿದ್ದರೆ, ಪುಂಗನೂರು ತಳಿಯ ಹಾಲಿನಲ್ಲಿ ಶೇ.8ರ ವರೆಗೆ ಕೊಬ್ಬು ಕಂಡುಬರುತ್ತದೆ.

ಪುಂಗನೂರು ಹಸುವಿನ ಬೆಲೆ
ಪುಂಗನೂರು ಹಸುವಿನ ಬೆಲೆ ಇತರ ಹಸುಗಳಿಗಿಂತ ಹೆಚ್ಚಾಗಿದೆ. ಇದರ ಬೆಲೆ 1 ಲಕ್ಷದಿಂದ 10 ಲಕ್ಷ ರೂಪಾಯಿವರೆಗೆ ಇದೆ. ನೀವು ಜೋಡಿಯನ್ನು ಖರೀದಿಸಲು ಬಯಸಿದರೆ ಬೆಲೆ ಸ್ವಲ್ಪ ಹೆಚ್ಚಿರಬಹುದು. ಆದರೆ ಡಾ.ಕೃಷ್ಣಂ ರಾಜು ಅವರು ಹಣಕ್ಕಾಗಿ ಒಂದೇ ಒಂದು ಹಸುವನ್ನೂ ಮಾರಾಟ ಮಾಡಿಲ್ಲ, ಬದಲಿಗೆ ಅವರ ಸ್ಥಳದಿಂದ ಹಸುಗಳನ್ನು ತೆಗೆದುಕೊಂಡವರು ತಮ್ಮದೇ ಆದ ಮಟ್ಟದಲ್ಲಿ ಅವುಗಳನ್ನು ಸಾಕಿ ನಂತರ ಮಾರಾಟ ಮಾಡಿರಬೇಕು ಎಂದು ಹೇಳಿಕೊಳ್ಳುತ್ತಾರೆ. ಇಲ್ಲಿಯವರೆಗೆ ಈ ಹಸುಗಳನ್ನು ಅವರು ಎಲ್ಲರಿಗೂ ಉಚಿತವಾಗಿ ನೀಡುತ್ತಿದ್ದರು. ಪ್ರಸ್ತುತ ಇಡೀ ದೇಶದಲ್ಲಿ ಇಂತಹ ಹಸುಗಳ ಸಂಖ್ಯೆ ಕೇವಲ 300-500 ಎಂದು ಅವರು ಅಂದಾಜಿಸಿದ್ದಾರೆ. 2019 ರ ಅಂಕಿಅಂಶಗಳ ಪ್ರಕಾರ 3 ರಿಂದ 5 ಅಡಿ ಎತ್ತರವಿರುವ ಮೂಲ ಪುಂಗನೂರು ಹಸು ಸಂಖ್ಯೆ 13 ಸಾವಿರಕ್ಕಿಂತ ಸ್ವಲ್ಪ ಹೆಚ್ಚಿತ್ತು.












Click it and Unblock the Notifications