ಛಾಯಾಗ್ರಹಣ ಕ್ಷೇತ್ರದ ದೈತ್ಯ ಶಕ್ತಿ ಡಾಗೈರ್: ಫೋಟೋಗ್ರಾಫರ್ ಡೇ ವಿಶೇಷವೇನು?
ಇಂದು ಛಾಯಾಗ್ರಹಣ ಕ್ಷೇತ್ರ ವ್ಯಾಪ್ತಿಗೂ ಮೀರಿ ಬೆಳೆದಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ವಿವಿಧ ನಮೂನೆಯ ಕ್ಯಾಮರಾಗಳು ಆವಿಷ್ಕಾರಗೊಂಡಿವೆ. ಇದರ ಜತೆಗೆ ಮೊಬೈಲ್ ಗಳಲ್ಲಿಯೇ ಯಾರು ಯಾವಾಗ ಬೇಕಾದರೂ ಛಾಯಾಚಿತ್ರಗಳನ್ನು ತೆಗೆಯುವ ಮಟ್ಟಿಗೆ ಬೆಳೆದು ನಿಲ್ಲುವುದರೊಂದಿಗೆ ಛಾಯಾಗ್ರಹಣ ಕ್ಷೇತ್ರದಲ್ಲಿ ಹತ್ತು ಹಲವು ರೀತಿಯ ಕ್ರಾಂತಿಗಳಾಗಿರುವುದು ನಮ್ಮ ಕಣ್ಣಮುಂದೆಯೇ ಇದೆ. ಆದರೆ ಈ ಛಾಯಾಗ್ರಹಣ ಕ್ಷೇತ್ರ ಬೆಳೆದು ಬಂದ ಹಾದಿ ಮಾತ್ರ ರೋಚಕವಾಗಿದೆ.
ಮೊದಲೆಲ್ಲ ಫೋಟೋ ತೆಗೆಸಿ ಅದನ್ನು ಕಟ್ಟು ಹಾಕಿಸಿ ಮನೆಯಲ್ಲಿಡುವುದೇ ಒಂದು ಸಂಭ್ರಮವಾಗಿತ್ತು. ಕೆಲವರಿಗೆ ಫೋಟೋ ತೆಗೆಸಿಕೊಳ್ಳುವುದು ಕೂಡ ಸುಲಭದ ಮಾತಾಗಿರಲಿಲ್ಲ. ಹೀಗಾಗಿ ಹಲವರ ಬಳಿ ಇವತ್ತಿಗೂ ಬಾಲ್ಯದ, ಯೌವನದ ಚಿತ್ರಗಳೇ ಇಲ್ಲದಾಗಿದೆ. ಆ ಕಾಲದಲ್ಲಿ ಫೋಟೋ ಎನ್ನುವುದು ಬಹಳಷ್ಟು ಜನರ ಪಾಲಿಗೆ ಮರೀಚಿಕೆಯಾಗಿತ್ತು. ಕ್ಯಾಮರಾ ಸಿಕ್ಕಿಸಿಕೊಂಡು ಓಡಾಡುವ ಛಾಯಾಗ್ರಾಹಕನನ್ನು ಜನ ಅಚ್ಚರಿಯಿಂದ ನೋಡುತ್ತಿದ್ದರು.

ಕಾಲಕಳೆದಂತೆಲ್ಲ ಛಾಯಾಗ್ರಹಣ ಕ್ಷೇತ್ರದಲ್ಲಿ ಅಚ್ಚರಿಯ ಬದಲಾವಣೆಗಳಾಗಿದ್ದು, ಇವತ್ತು ಮೊಬೈಲ್ ಬಂದ ಬಳಿಕವಂತು ಫೋಟೋ ತೆಗೆಯುವುದು ಅಂಗೈನ ಕನ್ನಡಿಯಾಗಿದೆ. ಹೀಗಾಗಿ ಭಿನ್ನ, ವಿಶಿಷ್ಟ ಚಿತ್ರಗಳೆಲ್ಲವನ್ನು ನಾವು ನೋಡಲು ಸಾಧ್ಯವಾಗಿದೆ. ಫೋಟೋ ಹಾಗೆ ಒಂದು ಪುಟದಲ್ಲಿ ಹೇಳುವ ವಿಚಾರವನ್ನು ಒಂದೇ ಒಂದು ಫೋಟೋ ಹೇಳಿ ಬಿಡುತ್ತದೆ. ಅಷ್ಟೇ ಅಲ್ಲ ಆ ಫೋಟೋದಲ್ಲಿ ಸೆರೆಯಾದ ಸುಂದರ ದೃಶ್ಯ ಮನಪಟಲದಲ್ಲಿ ಅಚ್ಚೊತ್ತಿದಂತೆ ಉಳಿದು ಬಿಡುತ್ತದೆ.
ಎಲ್ಲರೂ ಫೋಟೋ ತೆಗೆಯಬಹುದಷ್ಟೆ
ಎಲ್ಲರೂ ಫೋಟೋಗಳನ್ನು ತೆಗೆಯಬಹುದು ಆದರೆ ಒಳ್ಳೆಯ ಫೋಟೋಗ್ರಾಫರ್ ಎಲ್ಲರೂ ಆಗಲು ಸಾಧ್ಯವಿಲ್ಲ. ಹೀಗಾಗಿಯೇ ಕೆಲವೇ ಕೆಲವರು ಮಾತ್ರ ಖ್ಯಾತ ಛಾಯಾಗ್ರಾಹಕರಾಗಿ ನಮ್ಮೊಡನೆ ಉಳಿದುಕೊಂಡಿರುವುದನ್ನು ನಾವು ಕಾಣಬಹುದಾಗಿದೆ. ಇವತ್ತಿನ ದಿನಗಳಲ್ಲಿ ಯಾವುದೇ ಸಮಾರಂಭವಿರಲಿ ಅಲ್ಲಿ ಛಾಯಾಗ್ರಾಹಕನಿಲ್ಲದೆ ಅದು ಪೂರ್ಣವಾಗದು. ಸುದ್ದಿ ಮನೆಯಲ್ಲಿಯೂ ಅಷ್ಟೆ ಸುದ್ದಿಗೊಂದು ಚಿತ್ರವಿರಲೇ ಬೇಕು. ಆ ಚಿತ್ರವೇ ಸುದ್ದಿಯ ಜೀವಾಳವಾಗಿ ಬಿಡಲಿದೆ.
ಎಲ್ಲ ವಿಶೇಷ ದಿನಗಳಿರುವಂತೆ ಛಾಯಾಗ್ರಾಹಕರಿಗೂ ಒಂದು ದಿನವಿದ್ದು, ಅದರಂತೆ ಆಗಸ್ಟ್ 19ನ್ನು ವಿಶ್ವ ಛಾಯಾಗ್ರಾಹಕರ ದಿನವನ್ನಾಗಿ ವಿಶ್ವದ ಎಲ್ಲಡೆ ಆಚರಿಸಲಾಗುತ್ತಿದೆ. ಈ ದಿನ ಬರೀ ಕಾರ್ಯಕ್ರಮಗಳಿಗಷ್ಟೇ ಸೀಮಿತಗೊಳಿಸದೆ ಛಾಯಾಗ್ರಹಣ ಕ್ಷೇತ್ರ ನಡೆದು ಬಂದ ಹಾದಿಯನ್ನು ಮೆಲುಕು ಹಾಕಬೇಕಾಗುತ್ತದೆ. ಫೋಟೋಗ್ರಫಿ ಕೆಲವರಿಗೆ ಹವ್ಯಾಸವಾದರೆ ಮತ್ತೆ ಕೆಲವರಿಗೆ ವೃತ್ತಿಯಾಗಿದೆ. ಹೀಗಾಗಿ ಇಬ್ಬರೂ ಪ್ರತ್ಯೇಕವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ.
ದೃಶ್ಯಗಳಿಗೆ ಜೀವ ತುಂಬುವ ಕಲೆಗಾರ
ಮದುವೆ ಇನ್ನಿತರೆ ಶುಭ ಸಮಾರಂಭದಲ್ಲಿ ಪಾಲ್ಗೊಂಡು ಫೋಟೋ ತೆಗೆಯುವ ಫೋಟೋಗ್ರಾಫರ್‌ಗೂ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಫೋಟೋಗ್ರಾಫರ್‌ಗೂ ಅಜಗಜಾಂತರ ವ್ಯತ್ಯಾಸಗಳಿರುತ್ತವೆ. ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಫೋಟೋಗ್ರಾಫರ್ ಸದಾ ಕ್ರಿಯಾಶೀಲನಾಗಿರಬೇಕು, ಅಷ್ಟೇ ಅಲ್ಲ ಎಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸುವ, ಮತ್ತು ಸಮಯದೊಂದಿಗೆ ಓಡುವ ಗುಣವನ್ನು ಹಾಗೂ ಧೈರ್ಯವನ್ನು ಹೊಂದಿರಬೇಕಾಗಿರುತ್ತದೆ.
ಸಾಮಾನ್ಯವಾಗಿ ನಮ್ಮ ಕಣ್ಣಿಗೆ ಹತ್ತಾರು ಅಪರೂಪದ ದೃಶ್ಯಗಳು ಕಾಣಸಿಗುತ್ತವೆ. ಆದರೆ ಅದು ನಮಗೆ ವಿಶೇಷ ಎನಿಸುವುದಿಲ್ಲ. ಆದರೆ ಅದೇ ದೃಶ್ಯವನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದು ಅದಕ್ಕೊಂದು ಜೀವ ತುಂಬುವಲ್ಲಿ ಫೋಟೋ ಗ್ರಾಫರ್ ಸಫಲನಾಗಿಬಿಡುತ್ತಾನೆ. ಕೆಲವೊಮ್ಮೆ ಅಪರೂಪದ ಚಿತ್ರಗಳಿಗಾಗಿ ಫೋಟೋಗ್ರಾಫರ್ ದಿನ, ವಾರ, ತಿಂಗಳಾನುಗಟ್ಟಲೆ ಕಾಯಬೇಕಾಗುತ್ತದೆ.
ಛಾಯಾಗ್ರಹಣದ ಪಿತಾಮಹ ಎಲ್.ಜೆ.ಎಂ.ಡಾಗೈರ್
ಉದಾಹರಣೆಗೆ ದಟ್ಟ ಕಾಡಿನಲ್ಲಿ ವಾಸಿಸುವ ಅಪರೂಪದ ಪಕ್ಷಿಯನ್ನು ಕಂಡ ಫೋಟೋಗ್ರಾಫರ್ ಆ ಪಕ್ಷಿ ಗೂಡುಕಟ್ಟುವ, ಮೊಟ್ಟೆಯಿಡುವ, ಮರಿಮಾಡಿ ಮರಿಗಳಿಗೆ ಗುಟುಕು ನೀಡುವ ಸುಂದರ ದೃಶ್ಯಗಳನ್ನು ತನ್ನ ಕ್ಯಾಮರಾದಲ್ಲಿ ಸೆರೆಹಿಡಿದು ಫೋಟೋಗಳನ್ನು ನಮ್ಮ ಮುಂದಿಟ್ಟರೆ ಅದನ್ನು ನೋಡಿ ನಾವು ವಾವ್ ಎಷ್ಟೊಂದು ಸುಂದರವಾಗಿದೆ ಎಂದು ಉದ್ಘರಿಸುತ್ತೇವೆ. ಆದರೆ ಅಂತಹ ಅಪರೂಪದ ಚಿತ್ರಗಳನ್ನು ತೆಗೆಯಬೇಕಾದರೆ ಆತ ಎಷ್ಟೊಂದು ಶ್ರಮಪಟ್ಟಿದ್ದಾನೆ ಎಂಬುವುದು ನಮಗೆ ತಿಳಿಯುವುದೇ ಇಲ್ಲ.

ಇವತ್ತು ಛಾಯಾಗ್ರಹಣ ಕ್ಷೇತ್ರ ಎಲ್ಲಾ ವಿಧದ ತಂತ್ರಜ್ಞಾನದೊಂದಿಗೆ ಅಭಿವೃದ್ಧಿಯಾಗಿದೆ. ಆದರೆ ಇಷ್ಟೊಂದು ಅಭಿವೃದ್ಧಿ ಒಮ್ಮೆಲೇ ಆಗಿಲ್ಲ ಬದಲಿಗೆ ಹಂತಹಂತವಾಗಿ ಅಭಿವೃದ್ಧಿಯಾಗಿರುವುದನ್ನು ನಾವು ಒಪ್ಪಲೇ ಬೇಕಾಗುತ್ತದೆ. ಛಾಯಾಗ್ರಹಣ ಕ್ಷೇತ್ರದ ಅಭಿವೃದ್ಧಿಯಾಗಲು ಹಲವರು ತಮ್ಮದೇ ಆದ ತಂತ್ರಜ್ಞಾನವನ್ನು ಬಳಸಿ ಹೊಸ ಪ್ರಯೋಗಗಳನ್ನು ಕೂಡ ಮಾಡಿದ್ದಾರೆ. ಅಂತಹವರ ಸಾಲಿಗೆ ಫ್ರಾನ್ಸ್ ದೇಶದ ಎಲ್.ಜೆ.ಎಂ.ಡಾಗೈರ್ ಸೇರುತ್ತಾರೆ. ಅವರನ್ನು ಛಾಯಾಗ್ರಹಣದ ಪಿತಾಮಹ ಎಂದು ಕೂಡ ಕರೆಯಲಾಗುತ್ತದೆ. ವಿಶ್ವ ಛಾಯಾಗ್ರಾಹಕರ ದಿನದಂದು ಪ್ರತಿಯೊಬ್ಬರು ಡಾಗೈರ್‌ನ್ನು ನೆನಪಿಸಿಕೊಳ್ಳಲೇ ಬೇಕು. ಏಕೆಂದರೆ ಅವರು ಛಾಯಾಗ್ರಹಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.
ಛಾಯಾಗ್ರಹಣ ಕ್ಷೇತ್ರದಲ್ಲಿ ಸಾಧನೆಯ ಹಾದಿ
ಫ್ರಾನ್ಸ್ನ ಕುಗ್ರಾಮವಾದ ಕಾರ್ ಮೆಲ್ಲೀಸ್ ಎಂಬಲ್ಲಿ 18ನೇ ನವೆಂಬರ್ 1787ರಲ್ಲಿ ಡಾಗೈರ್ ಜನಿಸಿದರು. ವಿದ್ಯಾಭ್ಯಾಸದ ಬಳಿಕ ಹೊಟ್ಟೆಪಾಡಿಗಾಗಿ ಬೇರ ಬೇರೆ ವೃತ್ತಿಗಳನ್ನು ಮಾಡಿದರಾದರೂ ಕೊನೆಗೆ 1829ರಲ್ಲಿ ಛಾಯಾಗ್ರಹಣದ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ಶ್ರಮವಹಿಸಿ ದುಡಿದ ಅವರು ಛಾಯಾಗ್ರಹಣಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಆಸಕ್ತಿಯಿಂದ ತಿಳಿದುಕೊಂಡರು. ಅಷ್ಟೇ ಅಲ್ಲ ಕೇವಲ ನಾಲ್ಕು ವರ್ಷದ ಅವಧಿಯಲ್ಲಿ ಅಂದರೆ 1833ರ ವೇಳೆಗೆ ಇಡೀ ಕಂಪೆನಿಯ ಚುಕ್ಕಾಣಿಯನ್ನು ತಮ್ಮ ಕೈಗೆ ಪಡೆದುಕೊಂಡರು.
ಇದಾದ ನಂತರ ಹೆಚ್ಚಿನ ಶ್ರಮವಹಿಸಿ ದುಡಿದ ಅವರು ಕೆಲವೇ ವರ್ಷಗಳಲ್ಲಿ ಎಲ್ಲೆಡೆ ಡಾಗೈರ್ ಕಂಪೆನಿ ಎಂದೇ ಕರೆಸಿಕೊಳ್ಳುವಷ್ಟರ ಮಟ್ಟಿಗೆ ಬೆಳೆದು ನಿಂತರು. ಛಾಯಾಗ್ರಹಣ ಕ್ಷೇತ್ರದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ತುಡಿತದಲ್ಲಿದ್ದ ಅವರು ಬೆಳ್ಳಿ ಲೇಪನದ ಫಲಕಗಳನ್ನು ಬಳಸಿ ಅವುಗಳ ಮೇಲೆ ಅಯೋಡೈಡ್ ನ್ನು ಲೇಪಿಸಿ ನಂತರ ಅದನ್ನು ಅಯೋಡಿನ್ ಹಬೆಯೊಂದಿಗೆ ವರ್ತಿಸುವಂತೆ ಮಾಡಿ ಚಿತ್ರಗ್ರಹಣದ ಕಾಲವನ್ನು ಎಂಟು ಗಂಟೆಯಿಂದ ಮೂವತ್ತು ನಿಮಿಷಕ್ಕೆ ಸೀಮಿತಗೊಳಿಸಿ ಒಮ್ಮೆಲೆ ಪಾಸಿಟಿವ್ (ಧನ) ಪ್ರಿಂಟನ್ನು ಪಡೆಯುವ ತಂತ್ರವನ್ನು ಕಂಡು ಹಿಡಿದರು.
ಡಾಗೈರ್‌ನ್ನು ಎಲ್ಲರೂ ನೆನಪಿಸಿಕೊಳ್ಳಬೇಕು
1837ರ ಸುಮಾರಿಗೆ ಲವಣಜಲದಲ್ಲಿ ಈ ಚಿತ್ರವನ್ನು ಮುಳುಗಿಸಿ ಅದರ ಶಾಶ್ವತ ಚಿತ್ರವನ್ನು ಪಡೆದು ಸಫಲರಾದರು. ಈ ವಿಧಾನದಿಂದ ಒಮ್ಮೆಲೆ ಒಂದೇ ಪಾಸಿಟಿವ್ ಚಿತ್ರವನ್ನು ಪಡೆಯಲು ಸಾಧ್ಯವೇ ವಿನಃ ಅದಕ್ಕಿಂತ ಹೆಚ್ಚಿನ ಚಿತ್ರಗಳನ್ನು ಪಡೆಯಲು ಸಾಧ್ಯವಿಲ್ಲ ಎಂಬುವುದನ್ನು ಮನದಟ್ಟು ಮಾಡಿಕೊಂಡರು. ಡಾಗೈರ್‌ರವರು ಬರೆದ ಕಿರುಪುಸ್ತಕ 'ಡಾಗೈರ್‌ವಿಧಾನ'ವೆಂದು ವಿಶ್ವದ ಹನ್ನೆರಡು ಭಾಷೆಯಲ್ಲಿ ಪ್ರಕಟವಾಗಿರುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ.
ಈ ವಿಧಾನ ವಿಶ್ವದ ಎಲ್ಲಾ ಸ್ಟುಡಿಯೋಗಳಲ್ಲಿ ಆರಂಭವಾಗಲು ಕೂಡ ಕಾರಣವಾಯಿತು. ಹೀಗೆ ಛಾಯಾಗ್ರಹಣ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೈದ ಡಾಗೈರ್ 10ನೇ ಜುಲೈ 1851ರಲ್ಲಿ ತಮ್ಮ 66ನೇ ವಯಸ್ಸಿಗೆ ನಿಧನರಾದರು. ಅಂತಹ ಸಾಧಕನ ನೆನಪಿಗಾಗಿ ಪ್ರತಿವರ್ಷ ಆಗಸ್ಟ್ 19ನ್ನು 'ವಿಶ್ವ ಛಾಯಾಗ್ರಾಹಕರ ದಿನಾಚರಣೆ'ಯಾಗಿ ಆಚರಿಸಲಾಗುತ್ತದೆ. ಈ ದಿನ ಛಾಯಾಗ್ರಹಣ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದ ಡಾಗೈರ್‌ನ್ನು ಎಲ್ಲರೂ ನೆನಪಿಸಿಕೊಳ್ಳುತ್ತಾರೆ.












Click it and Unblock the Notifications