World Egg Day 2023: ವಿಶ್ವ ಮೊಟ್ಟೆ ದಿನವನ್ನು ಏಕೆ ಆಚರಿಸಲಾಗುತ್ತದೆ? ಅದರ ಮಹತ್ವವೇನು?
ಅಪೌಷ್ಟಿಕತೆ ವಿಶ್ವಾದ್ಯಂತ ಒಂದು ಪ್ರಮುಖ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಮೊಟ್ಟೆಯ ಸೇವನೆಯು ಉತ್ತಮ ಮಾರ್ಗವಾಗಿದೆ. ಮೊಟ್ಟೆಯಲ್ಲಿರುವ ಪೋಷಕಾಂಶಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಶ್ವ ಮೊಟ್ಟೆ ದಿನವನ್ನು ಆಚರಿಸಲಾಗುತ್ತದೆ.
ಮೊಟ್ಟೆಗಳು ಅನೇಕ ಪ್ರಯೋಜನಗಳನ್ನು ಹೊಂದಿದ್ದು ಪ್ರತಿನಿತ್ಯ ಅದನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದಕ್ಕಾಗಿಯೇ ಪ್ರಪಂಚದಾದ್ಯಂತ ಮೊಟ್ಟೆಗಳ ವಿಶೇಷ ದಿನವನ್ನು ಆಚರಿಸಲಾಗುತ್ತದೆ. ಇದನ್ನು ವಿಶ್ವ ಮೊಟ್ಟೆ ದಿನ ಎಂದು ಕರೆಯಲಾಗುತ್ತದೆ. ಅಕ್ಟೋಬರ್ ಎರಡನೇ ಶುಕ್ರವಾರದಂದು ವಿಶ್ವ ಮೊಟ್ಟೆ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸುವುದರ ಹಿಂದೆ ವಿಶೇಷ ಉದ್ದೇಶವಿದೆ. ಹಾಗಾದರೆ ವಿಶ್ವ ಮೊಟ್ಟೆ ದಿನದ ಇತಿಹಾಸ ಏನು ಮತ್ತು ಅದನ್ನು ಆಚರಿಸುವ ಉದ್ದೇಶವೇನು ಎಂದು ತಿಳಿಯೋಣ.

ಏನಿದು 'ವಿಶ್ವ ಮೊಟ್ಟೆ ದಿನ'?
ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ದೇಹದಲ್ಲಿ ಮೊಟ್ಟೆಯಲ್ಲಿರುವ ಪೋಷಕಾಂಶಗಳ ಪ್ರಯೋಜನಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು. ಮಾನವನ ಪೋಷಣೆಯಲ್ಲಿ ಮೊಟ್ಟೆಗಳು ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ ಮಕ್ಕಳಿಂದ ವೃದ್ಧರವರೆಗೆ ಪ್ರತಿಯೊಬ್ಬರೂ ಪ್ರತಿದಿನ ಮೊಟ್ಟೆಯನ್ನು ತಿನ್ನಲು ಸೂಚಿಸಲಾಗುತ್ತದೆ.
ಪ್ರೋಟೀನ್ ಜೊತೆಗೆ ವಿಟಮಿನ್, ಅಮೈನೋ ಆಮ್ಲಗಳು ಮತ್ತು ಲವಣಗಳು ಮೊಟ್ಟೆಯಲ್ಲಿ ಕಂಡುಬರುತ್ತವೆ. ಇದು ದೇಹವನ್ನು ಆರೋಗ್ಯಕರವಾಗಿಡಲು ಅವಶ್ಯಕವಾಗಿದೆ. ಇದರ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಮೊಟ್ಟೆ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಮೊಟ್ಟೆ ದಿನದ ಇತಿಹಾಸ:
ವಿಶ್ವ ಮೊಟ್ಟೆ ದಿನವನ್ನು ಮೊದಲ ಬಾರಿಗೆ 1996ರಲ್ಲಿ ಆಚರಿಸಲಾಯಿತು. ವಿಯೆನ್ನಾದಲ್ಲಿ ನಡೆದ ಸಮ್ಮೇಳನದಲ್ಲಿ ಇಂಟರ್ನ್ಯಾಷನಲ್ ಎಗ್ ಕಮಿಷನ್ (ಐಇಸಿ) ಅಂತರಾಷ್ಟ್ರೀಯ ಮೊಟ್ಟೆ ದಿನವನ್ನು ಆಚರಿಸುವುದಾಗಿ ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ಅಕ್ಟೋಬರ್ ಎರಡನೇ ಶುಕ್ರವಾರದಂದು ವಿಶ್ವ ಮೊಟ್ಟೆ ದಿನವನ್ನು ಆಚರಿಸಲಾಗುತ್ತದೆ. ವಿಶ್ವದ 40 ದೇಶಗಳಲ್ಲಿ ಜನರು ಈ ದಿನವನ್ನು ಅತ್ಯಂತ ಸೃಜನಾತ್ಮಕವಾಗಿ ಆಚರಿಸುತ್ತಾರೆ.
ಮೊಟ್ಟೆಯ ಪ್ರಯೋಜನಗಳ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಹೀಗಾಗಿ ಈ ದಿನ ಮೊಟ್ಟೆಗಳ ಪ್ರಾಮುಖ್ಯತೆ ಮತ್ತು ಪೌಷ್ಟಿಕಾಂಶದ ಮೌಲ್ಯದ ಬಗ್ಗೆ ಮಾಹಿತಿ ಹರಡಲು ಪ್ರಪಂಚದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಮೊಟ್ಟೆಗಳ ಪ್ರಾಮುಖ್ಯತೆ
ಮೊಟ್ಟೆಯನ್ನು ಪೌಷ್ಟಿಕಾಂಶದ ಸಂಪತ್ತು ಎಂದು ಕರೆಯಲಾಗುತ್ತದೆ. ಮೊಟ್ಟೆಯಲ್ಲಿ ಕ್ಯಾಲ್ಸಿಯಂ, ಪ್ರೊಟೀನ್, ವಿಟಮಿನ್ ಎ, ಅಮೈನೋ ಆಮ್ಲಗಳು ಮತ್ತು ಉತ್ತಮ ಕೊಬ್ಬುಗಳಿವೆ. ಮೊಟ್ಟೆಗಳು ಪೋಷಕಾಂಶಗಳ ಆಗರವಾಗಿದೆ. ಹೀಗಾಗಿ ವಿಶ್ವ ಮೊಟ್ಟೆ ದಿನದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಮೊಟ್ಟೆಯ ಆರೋಗ್ಯ ಪ್ರಯೋಜನಗಳನ್ನು ನಾವು ಅರ್ಥಮಾಡಿಕೊಳ್ಳಬೇಕು.
ಒಂದು ಮೊಟ್ಟೆಯನ್ನು ತಿನ್ನುವುದರಿಂದ ನಮಗೆ 6% ವಿಟಮಿನ್ ಎ ಮತ್ತು 6.3 ಗ್ರಾಂ ಪ್ರೋಟೀನ್, 75 ಕ್ಯಾಲೊರಿಗಳು ಸಿಗುತ್ತವೆ. ಆರೋಗ್ಯವಾಗಿರಲು ಅಥವಾ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಮೊಟ್ಟೆ ಉತ್ತಮ ಆಹಾರವಾಗಿದೆ. ಇನ್ನೂ ದೈನಂದಿನ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಿಕೊಳ್ಳುವ ವಿಚಾರಕ್ಕೆ ಬಂದಾಗ ಮೊಟ್ಟೆಗಳಿಗಿಂತ ಉತ್ತಮವಾದ ಆಯ್ಕೆಯನ್ನು ಕಂಡುಹಿಡಿಯುವುದು ಕಷ್ಟ. ಮೊಟ್ಟೆಯ ಬಿಳಿಭಾಗವು 60% ಉತ್ತಮ ಗುಣಮಟ್ಟದ ಪ್ರೋಟೀನ್ ಅನ್ನು ಹೊಂದಿರುತ್ತದೆ ಮತ್ತು ಉಳಿದ ಭಾಗ ದೈನಂದಿನ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಬೇಕಾದ ಆರೋಗ್ಯಕರ ಕೊಬ್ಬು, ಜೀವಸತ್ವಗಳು, ಖನಿಜಗಳು ಮತ್ತು ರೋಗ ನಿರೋಧಕಗಳಿಂದ ತುಂಬಿರುತ್ತದೆ.
ವಿಶ್ವ ಮೊಟ್ಟೆ ದಿನದ ಥೀಮ್
ಪ್ರತಿ ವರ್ಷ ಯಾವುದೇ ವಿಶೇಷ ದಿನವನ್ನು ಹೊಸ ಥೀಮ್‌ನೊಂದಿಗೆ ಆಚರಿಸಲಾಗುತ್ತದೆ. ಕಳೆದ ವರ್ಷದ ವಿಶ್ವ ಮೊಟ್ಟೆ ದಿನದ ಥೀಮ್ ತುಂಬಾ ಆಸಕ್ತಿದಾಯಕವಾಗಿತ್ತು. ವಿಶ್ವ ಮೊಟ್ಟೆ ದಿನದ 2021 ರ ಥೀಮ್ 'ಮೊಟ್ಟೆಗಳನ್ನು ಪ್ರತಿದಿನ ಸೇವಿಸಬೇಕು'. ಈ ವರ್ಷದ ಥೀಮ್ ಬಗ್ಗೆ ಮಾತನಾಡಿದರೆ, 2023 ರ ಥೀಮ್ ಅನ್ನು 'ಆರೋಗ್ಯಕರ ಭವಿಷ್ಯದ ಆಧಾರ' ಎಂದು ಕರೆಯಲಾಗಿದೆ. ಈ ಥೀಮ್ ನಮ್ಮ ದೈನಂದಿನ ಪೋಷಣೆಯಲ್ಲಿ ಮೊಟ್ಟೆಗಳ ಪ್ರಾಮುಖ್ಯತೆಯನ್ನು ವಿವರಿಸುತ್ತದೆ ಮತ್ತು ಜನರು ತಮ್ಮ ದೈನಂದಿನ ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಲು ಪ್ರೋತ್ಸಾಹಿಸುತ್ತದೆ.












Click it and Unblock the Notifications