ಪ್ರಧಾನಿ ಮೋದಿ ಸಭೆ ಮೇಲೆ ಕಣ್ಣು; ಭಾರತ ಆಗುತ್ತಾ ಮತ್ತೆ ಲಾಕ್ ಡೌನ್!?
ನವದೆಹಲಿ, ಏಪ್ರಿಲ್ 25: ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಅಲೆಗಳ ಆಟ ಶುರುವಾದಂತೆ ಕಾಣುತ್ತಿದೆ. ಕಳೆದ ಎರಡು ವಾರಗಳಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ನಿಧಾನಗತಿಯ ಏರಿಕೆ ಕಂಡು ಬಂದಿದೆ.
ದೇಶದಲ್ಲಿ ಕೊರೊನಾವೈರಸ್ ಏರಿಕೆ ನಡುವೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಏಪ್ರಿಲ್ 27ರಂದು ನಡೆಯಲಿರುವ ಪರಿಶೀಲನಾ ಸಭೆಯಲ್ಲಿ ಆಯಾ ರಾಜ್ಯಗಳಲ್ಲಿನ ಕೋವಿಡ್-19 ಪರಿಸ್ಥಿತಿ ಹಾಗೂ ಅಂಕಿ-ಅಂಶಗಳ ಕುರಿತು ಚರ್ಚೆ ನಡೆಯಲಿದೆ.
ಕೊರೊನಾವೈರಸ್ ಹೋಯ್ತು ಹೋಯ್ತು ಅನ್ನುವಷ್ಟರಲ್ಲೇ ಮತ್ತೊಂದು ರೂಪಾಂತರದ ರೀತಿಯಲ್ಲಿ ಮಹಾಮಾರಿ ಸುದ್ದಿ ಆಗುತ್ತಿದೆ. ಕೊಂಚ ಮೈ ಮರೆಯರೆ ಹೊಸ ರೂಪಾಂತರ ಅಂಟಿಕೊಳ್ಳುವ ಅಪಾಯ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನಡೆಸಲಿರುವ ಸಭೆಯು ಸಾಕಷ್ಟು ಮಹತ್ವ ಪಡೆದುಕೊಳ್ಳಲಿದೆ. ಕೋವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ರಾಜ್ಯಗಳಿಗೆ ಪ್ರಧಾನಿ ಮೋದಿ ಯಾವೆಲ್ಲ ಸಲಹೆಗಳನ್ನು ನೀಡಬಹುದು?, ದೇಶದಲ್ಲಿ ಕೊರೊನಾವೈರಸ್ ಏರಿಳಿತ ಹೇಗಿದೆ?, ಯಾವ ರಾಜ್ಯದಲ್ಲಿ ಮಹಾಮಾರಿಯ ಅಪಾಯ ಹೆಚ್ಚಾಗಿದೆ ಎನ್ನುವುದರ ಕುರಿತು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಪ್ರಧಾನಿ ಮೋದಿ ಸಭೆಯಲ್ಲಿ ರಾಜೇಶ್ ಭೂಷಣ್ ಮಾಹಿತಿ ಮಂಡನೆ
ಏಪ್ರಿಲ್ 27ರಂದು ನಡೆಯಲಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು, ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಹಾಗೂ ಇನ್ನೂ ಕೆಲವು ಸಚಿವರು ಹಾಜರಿರಲಿದ್ದಾರೆ. ಈ ವೇಳೆ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಕೋವಿಡ್-19 ಕುರಿತು ಮಾಹಿತಿ ಮಂಡನೆ ಮಾಡಲಿದ್ದಾರೆ. ರಾಜ್ಯವಾರು ಕೋವಿಡ್-19 ಪ್ರಕರಣಗಳ ಏರಿಳಿತ, ಕೊರೊನಾವೈರಸ್ ಲಸಿಕೆ ವಿತರಣೆ ಪ್ರಮಾಣ, ವಿಶೇಷವಾಗಿ ಬೂಸ್ಟರ್ ಡೋಸ್ ಲಸಿಕೆ ವಿತರಣೆಯ ವೇಗದ ಬಗ್ಗೆ ಪ್ರಧಾನಿ ನೇತೃತ್ವದ ಸಭೆಯಲ್ಲಿ ಹೇಳಲಿದ್ದಾರೆ. ತದನಂತರದಲ್ಲಿ ದೇಶದಲ್ಲಿ ಕಟ್ಟುನಿಟ್ಟಿನ ನಿಮಯಗಳನ್ನು ಜಾರಿಗೊಳಿಸಿದರೇ ಸಾಕೇ ಅಥವಾ ಮತ್ತೊಂದು ಅವಧಿಗೆ ಲಾಕ್ ಡೌನ್ ಮಾಡಬೇಕೇ ಎನ್ನುವುದನ್ನು ನಿರ್ಧರಿಸಲಾಗುವುದು ಎಂದು ಹೇಳಲಾಗುತ್ತಿದೆ.

ವಾಸ್ತವ ಸ್ಥಿತಿಯ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಪರಿಶೀಲನೆ
ಈ ಹಿಂದೆ ದೇಶಾದ್ಯಂತ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ವ್ಯಾಪಿಸಿದ ಸಂದರ್ಭದಲ್ಲೂ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಸಭೆ ನಡೆಸಿದ್ದರು. ಈ ಹಂತದಲ್ಲಿ ಪ್ರಮುಖ ನಗರ, ಜಿಲ್ಲೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿದ ವಾಸ್ತವ ಸ್ಥಿತಿ ಹಾಗೂ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಗೆ ಕಾರಣವಾಗಿರುವ ಅಂಶಗಳನ್ನು ಪಟ್ಟಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತಿತ್ತು. ಪರಿಸ್ಥಿತಿ ಅವಲೋಕನದ ನಂತರದಲ್ಲಿ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ನೀಡಲಾಗುತ್ತಿತ್ತು. ಬುಧವಾರ ನಡೆಯಲಿರುವ ಸಭೆಯಲ್ಲೂ ಇಂಥದ್ದೇ ಪ್ರಕ್ರಿಯೆ ನಡೆಯುವ ನಿರೀಕ್ಷೆಗಳಿವೆ. ಆದರೆ ಭಾರತದಲ್ಲಿ ಈ ಹಂತದಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಸಾಧ್ಯತೆಗಳು ತೀರಾ ವಿರಳವಾಗಿವೆ.

ಮಾಸ್ಕ್ ಧರಿಸುವುದು ಕೆಲವು ರಾಜ್ಯಗಳಲ್ಲಿ ಈಗಾಗಲೇ ಕಡ್ಡಾಯ
ಕೋವಿಡ್-19 ರೂಪಾಂತರ ಪ್ರಬೇಧದ ಆತಂಕ ಹೆಚ್ಚುತ್ತಿದ್ದಂತೆ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಇದರ ಹಿನ್ನೆಲೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರಗಳು ಈಗಾಗಲೇ ಕೆಲವು ಕಡೆಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿವೆ. ದೆಹಲಿ, ಹರಿಯಾಣ, ಪಂಜಾಬಿನಲ್ಲಿ ಮಾಸ್ಕ್ ಧರಿಸುವುದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಸರ್ಕಾರವೇ ಮಾರ್ಗಸೂಚಿ ಹೊರಡಿಸಿದೆ. ದೆಹಲಿಯಲ್ಲಿ ಮಾಸ್ಕ್ ಧರಿಸದಿದ್ದರೆ 500 ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆಯನ್ನೂ ನೀಡಲಾಗಿದೆ.

ನಾಲ್ಕನೇ ಅಲೆ ಭೀತಿಗೆ ಅಂಕಿ-ಸಂಖ್ಯೆಗಳೇ ಕಾರಣ
ಭಾರತದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ನಿರಂತರವಾಗಿ ಎರಡು ಸಾವಿರದ ಗಡಿ ದಾಟುತ್ತಿದೆ. ಕಳೆದ 24 ಗಂಟೆಗಳಲ್ಲಿ 2,541 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 30 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 1,862 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 43,060,086ಕ್ಕೆ ಏರಿಕೆಯಾಗಿದೆ. ಈ ಪೈಕಿ 42,521,341 ಸೋಂಕಿತರು ಗುಣಮುಖರಾಗಿದ್ದರೆ, 522,223 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 16,522 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications