5 ವರ್ಷದೊಳಿಗಿನ ಮಕ್ಕಳಿಗೆ ಅಂಟುವ "ಟೊಮೇಟೋ ಜ್ವರ"ದ ಬಗ್ಗೆ ಎಚ್ಚರ.. ಎಚ್ಚರ..!
ನವದೆಹಲಿ, ಮೇ 10: ಕೇರಳದಲ್ಲಿ ಶವರ್ಮಾ ಸೇವಿಸಿದ 16 ವರ್ಷದ ಯುವತಿಯೊಬ್ಬರು ಶಿಗೆಲ್ಲಾ ಬ್ಯಾಕ್ಟೀರಿಯಾದಿಂದ ಮೃತಪಟ್ಟಿರುವ ಪ್ರಕರಣ ಮಾಸುವ ಮೊದಲೇ ಮತ್ತೊಂದು ವೈರಸ್ ಬೆಳಕಿಗೆ ಬಂದಿದೆ. ದೇಗುಲಗಳ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಕೇರಳದಲ್ಲಿ ಮೇಲಿಂದ ಮೇಲೆ ವೈರಸ್ ಹಾಗೂ ಬ್ಯಾಕ್ಟೀರಿಯಾಗಳದ್ದೇ ಸದ್ದು ಗದ್ದಲು ಶುರುವಾಗಿ ಬಿಟ್ಟಿದೆ.
ಈಗ ಆ ಪಟ್ಟಿಗೆ ಸೇರಿರುವುದೇ ಟೊಮೇಟೋ ವೈರಸ್ ಅಥವಾ ಟೊಮೇಟೋ ಜ್ವರ. ಕೊರೊನಾ ವೈರಸ್ ಆಯ್ತು, ಶಿಗೆಲ್ಲಾ ಬ್ಯಾಕ್ಟೀರಿಯಾ ಆಯ್ತು, ಈಗ ಇದೇನಪ್ಪಾ ಟೊಮೇಟೋ ಜ್ವರ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ.
ಈ ಟೊಮೇಟೋ ಜ್ವರ ಹರಡುವುದು ಹೇಗೆ?, ಈ ಜ್ವರದ ಬಗ್ಗೆ ದೊಡ್ಡವರಿಗಿಂತ ಮಕ್ಕಳು ಹೆಚ್ಚು ಜಾಗೃತವಾಗಿರಬೇಕಾದ ಅವಶ್ಯಕತೆ ಹೆಚ್ಚಾಗಿರುವುದು ಏಕೆ? ಟೊಮೇಟೋ ಜ್ವರದ ಲಕ್ಷಣಗಳು ಹೇಗಿರುತ್ತವೆ?, ಟೊಮೇಟೋ ಜ್ವರಕ್ಕೆ ಹೇಗೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬುದರ ಕುರಿತು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಕೊಲ್ಲಂ ಜಿಲ್ಲೆಯಲ್ಲೇ 82 ಟೊಮೇಟೊ ಜ್ವರದ ಪ್ರಕರಣ
ಕೇರಳದಲ್ಲಿ ಟೊಮೇಟೋ ಜ್ವರದ ಆತಂಕ ಹೆಚ್ಚಾಗಿದೆ. ಕೊಲ್ಲಂ ಜಿಲ್ಲೆಯೊಂದರಲ್ಲೇ ಬರೋಬ್ಬರಿ 82 ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಸೋಂಕು ತಗುಲಿದವರೆಲ್ಲ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಾಗಿದ್ದು, ವಾಸ್ತವ ಸ್ಥಿತಿಯ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿಗಾ ವಹಿಸಿದೆ. ಆದರೆ ಟೊಮೇಟೋ ಜ್ವರ ಅಂಟಿಕೊಂಡವರೆಲ್ಲ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೇ ಆಗಿರುವುದು ಆತಂಕವನ್ನು ಹುಟ್ಟಿಸುತ್ತಿದೆ. ಎಲ್ಲ ಸೋಂಕಿತರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಟೊಮೇಟೋ ಜ್ವರ ಎಂದರೇನು?
ಟೊಮೇಟೊ ಜ್ವರ ಎನ್ನುವುದು ಅಪರೂಪ ರೀತಿಯ ವೈರಲ್ ಸೋಂಕು ಆಗಿದೆ. ಇದು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಈಗ ಗುರುತಿಸಲಾಗದ ಟೊಮೇಟೋ ಜ್ವರವು ವೈರಲ್ ಜ್ವರವೇ ಅಥವಾ ಚಿಕೂನ್‌ಗುನ್ಯಾ ಅಥವಾ ಡೆಂಗ್ಯೂ ಜ್ವರದ ನಂತರದ ಪರಿಣಾಮವೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಹೆಚ್ಚಾಗಿ ಈ ಜ್ವರದಿಂದ ಬಳಲುತ್ತಿರುವ ಮಕ್ಕಳಲ್ಲಿ ದದ್ದು ಮತ್ತು ಚರ್ಮದ ಕಿರಿಕಿರಿ ಮತ್ತು ನಿರ್ಜಲೀಕರಣ ಕಂಡು ಬರುತ್ತಿದೆ. ಇದರಿಂದ ದೇಹದ ಹಲವು ಭಾಗಗಳಲ್ಲಿ ಗುಳ್ಳೆಗಳನ್ನು ಉಂಟಾಗುತ್ತಿವೆ. ಈ ಗುಳ್ಳೆಗಳು ಸಾಮಾನ್ಯವಾಗಿ ಕೆಂಪು ಬಣ್ಣದ ದುಂಡಗಿನ ಆಕಾರದಲ್ಲಿ ಇರುವುದರಿಂದ ಇದನ್ನು ಟೊಮೇಟೋ ಜ್ವರ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ. ಕೊಲ್ಲಂ ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾತ್ರ ಈ ರೀತಿಯ ಜ್ವರದ ಪ್ರಕರಣಗಳು ವರದಿಯಾಗಿದ್ದು, ಇದು ಇತರ ಪ್ರದೇಶಗಳಿಗೂ ಹರಡಬಹುದು ಎಂದು ರಾಜ್ಯ ಆರೋಗ್ಯ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಟೊಮೇಟೋ ಜ್ವರದ ಲಕ್ಷಣಗಳನ್ನು ತಿಳಿಯಿರಿ
* ಮುಖ್ಯ ಲಕ್ಷಣಗಳಲ್ಲಿ ದದ್ದುಗಳು ಮತ್ತು ಚರ್ಮದ ಕಿರಿಕಿರಿ ಮತ್ತು ನಿರ್ಜಲೀಕರಣ ಆಗಿದೆ
* ಟೊಮೇಟೋ ಜ್ವರ ಪೀಡಿತ ಮಕ್ಕಳಲ್ಲಿ ಟೊಮೇಟೋ ಗಾತ್ರದ ಕೆಂಪು ದದ್ದುಗಳು ಕಂಡು ಬಂದಿವೆ
* ಅಧಿಕ ಜ್ವರ, ದೇಹದ ನೋವು, ಕೀಲು ಊತ ಮತ್ತು ಸುಸ್ತು ಇತರ ಕೆಲವು ಲಕ್ಷಣ
* ಅಲ್ಲದೆ, ಸೋಂಕಿತ ಮಗು ನಿರ್ಜಲೀಕರಣದ ಕಾರಣದಿಂದಾಗಿ ಬಾಯಿಯಲ್ಲಿ ಕಿರಿಕಿರಿ ಉಂಟಾಗುತ್ತದೆ
* ಕೈಗಳು, ಮೊಣಕಾಲುಗಳು, ಪೃಷ್ಠದ ಬಣ್ಣವು ಇತರ ಕೆಲವು ಲಕ್ಷಣಗಳಾಗಿವೆ
* ದದ್ದುಗಳ ಮೇಲೆ ಉಂಟಾಗುವ ಹುಣ್ಣುಗಳಿಂದ ಹುಳುಗಳು ಹೊರಬರುತ್ತವೆ ಎಂದು ಕೆಲವು ರೋಗಿಗಳು ಹೇಳುತ್ತಾರೆ

ಟೊಮೇಟೋ ಜ್ವರದ ಮುನ್ನೆಚ್ಚರಿಕೆ ಕ್ರಮಗಳು
* ನಿಮ್ಮ ಮಗುವಿನಲ್ಲಿ ರೋಗದ ಲಕ್ಷಣಗಳು ಕಂಡು ಬರುತ್ತಿದ್ದಂತೆ ವೈದ್ಯರನ್ನು ಸಂಪರ್ಕಿಸಬೇಕು
* ಸೋಂಕಿತ ಮಕ್ಕಳಿಗೆ ಹೆಚ್ಚು ಹೆಚ್ಚು ಕುದಿಸಿದ ನೀರನ್ನು ಕುಡಿಸುವ ಮೂಲಕ ನೀರಿನಂಶವನ್ನು ಕಾಪಾಡಿಕೊಳ್ಳಬೇಕು
* ಗುಳ್ಳೆಗಳು ಅಥವಾ ದದ್ದುಗಳನ್ನು ತುರಿಸುವುದು ಅಥವಾ ಒಡೆದುಕೊಳ್ಳದಂತೆ ನೋಡಿಕೊಳ್ಳಬೇಕು
* ಸರಿಯಾದ ರೀತಿಯಲ್ಲಿ ಶುಚಿತ್ವ ಮತ್ತು ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು
* ಬಿಸಿ ನೀರಿನಲ್ಲಿಯೇ ಸ್ನಾನ ಮಾಡುವುದು
* ಟೊಮೇಟೋ ಜ್ವರದ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕವನ್ನು ತಪ್ಪಿಸಬೇಕು
* ಜ್ವರದ ದೀರ್ಘಕಾಲೀನ ಪರಿಣಾಮಗಳನ್ನು ತಪ್ಪಿಸಲು ಸರಿಯಾಗಿ ವಿಶ್ರಾಂತಿ ತೆಗೆದುಕೊಳ್ಳಬೇಕು

ಟೊಮೇಟೋ ಜ್ವರದ ಬಗ್ಗೆ ಜಾಗೃತಿ ಅಭಿಯಾನ ಆರಂಭ
ರಾಜ್ಯ ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಟೊಮೇಟೋ ಜ್ವರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದು ವರದಿಯಾಗಿದೆ. ಆರ್ಯಂಕಾವು, ಅಂಚಲ್ ಮತ್ತು ನೆಡುವತ್ತೂರಿನಲ್ಲಿ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಆ ಭಾಗದ ಅಂಗನವಾಡಿ ಕೇಂದ್ರಗಳನ್ನು ಮುಚ್ಚಲಾಗಿದೆ. ಈ ನಡುವೆ ಅಧಿಕಾರಿಗಳು ಗ್ರಾಮಗಳಲ್ಲಿ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ.












Click it and Unblock the Notifications