Viral Video: ವ್ಯವಹಾರದಲ್ಲಿ ಭಾರೀ ನಷ್ಟ, ಕೆಲಸವೂ ಹೋಯ್ತು; ಗೋವಾದಲ್ಲಿ ಅಪರಿಚಿತನಿಗೆ ಆಸರೆಯಾದ ಮಹಿಳೆ
ಗೋವಾ ಪ್ರವಾಸಕ್ಕೆ ತೆರಳಿದ್ದ ಮಹಿಳೆಯೊಬ್ಬರಿಗೆ ಅಲ್ಲಿನ ಬೀಚ್‌ಗಳು, ಪ್ರವಾಸಿ ತಾಣಗಳಿಗಿಂತಲೂ ವಿಭಿನ್ನವಾದ ಮಾನವೀಯ ಅನುಭವವೊಂದು ಎದುರಾಗಿದೆ. ಆಕಸ್ಮಿಕವಾಗಿ ಭೇಟಿಯಾದ ವ್ಯಕ್ತಿಯೊಬ್ಬರು ತಮ್ಮ ಉದ್ಯೋಗ ಕಳೆದುಕೊಂಡು, ವ್ಯವಹಾರದಲ್ಲಿ ಭಾರೀ ನಷ್ಟ ಅನುಭವಿಸುತ್ತಿರುವ ವಿಚಾರವನ್ನು ಹೇಳಿಕೊಂಡಿದ್ದಾರೆ. ಇದನ್ನು ಕೇಳಿದ ಮಹಿಳೆ, ಅಪರಿಚಿತ ವ್ಯಕ್ತಿಗೆ ಸಾಧ್ಯವಾದಷ್ಟು ಸಹಾಯ ಮಾಡುವ ಭರವಸೆ ನೀಡಿದ್ದಾರೆ.
Instagram ಬಳಕೆದಾರರಾದ ನಿಶ್ಚಿತಾ ನರೇನ್ ಅವರು ಈ ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದು,"ಪ್ರತಿ ಪ್ರವಾಸವೂ ಬೀಚ್‌ಗಳ ಬಗ್ಗೆ ಇರುವುದಿಲ್ಲ. ಕೆಲವೊಮ್ಮೆ ದೇವರು ನಿಮ್ಮ ದಾರಿಗೆ ಕಳುಹಿಸುವ ಜನರ ಬಗ್ಗೆಯೂ ಇರುತ್ತದೆ ಎಂದು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ನಿಶ್ಚಿತಾ ಅವರು ಭದ್ರತಾ ಸಿಬ್ಬಂದಿಯಂತೆ ಕಾಣುವ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತದೆ. ಮಾತುಕತೆಯ ವೇಳೆ ಅವರು ಆ ವ್ಯಕ್ತಿ ಎಲ್ಲಿಂದ ಬಂದಿದ್ದಾರೆ ಹಾಗೂ ಗೋವಾಕ್ಕೆ ಏಕೆ ಬಂದಿದ್ದಾರೆ ಎಂದು ಪ್ರಶ್ನಿಸುತ್ತಾರೆ.
ವ್ಯವಹಾರದಲ್ಲಿ ಭಾರೀ ನಷ್ಟ
ತಾನು ಮಹಾರಾಷ್ಟ್ರದವನು ಎಂದು ಹೇಳಿದ ವ್ಯಕ್ತಿ, ಗೋವಾಕ್ಕೆ ವ್ಯವಹಾರ ಆರಂಭಿಸುವ ಉದ್ದೇಶದಿಂದ ಬಂದಿದ್ದಾಗಿ ತಿಳಿಸುತ್ತಾರೆ. ಆದರೆ ವ್ಯವಹಾರ ನಿರೀಕ್ಷೆಯಂತೆ ನಡೆಯದೆ ಭಾರೀ ನಷ್ಟವಾಗಿದೆ ಎಂದು ನೋವು ತೋಡಿಕೊಂಡಿದ್ದಾರೆ.
"ನಾನು ಮಹಾರಾಷ್ಟ್ರದವನು. ಸ್ವಲ್ಪ ವ್ಯವಹಾರ ಮಾಡಲು ಬಂದಿದ್ದೆ. ಆದರೆ ನನಗೆ ಸಂಪೂರ್ಣ ನಷ್ಟವಾಗಿದೆ" ಎಂದು ಅವರು ಹೇಳಿರುವುದು ವಿಡಿಯೋದಲ್ಲಿ ಕೇಳಿಸುತ್ತದೆ.
ಸಹಾಯ ಮಾಡುವುದಾಗಿ ಭರವಸೆ
ಆತನ ಪರಿಸ್ಥಿತಿಯನ್ನು ಕೇಳಿದ ನಿಶ್ಚಿತಾ, ಧೈರ್ಯ ತುಂಬುವ ರೀತಿಯಲ್ಲಿ ಮಾತನಾಡಿದ್ದಾರೆ. ಅಗತ್ಯವಿದ್ದರೆ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿರುವ ಅವರು, ತಮ್ಮ ಕೈಲಾದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.
"ನಮ್ಮ ಕೈಲಾದಷ್ಟು ನಾವು ಸಹಾಯ ಮಾಡುತ್ತೇವೆ"ಎಂದು ನಿಶ್ಚಿತಾ ಹೇಳುತ್ತಾರೆ. ಸಾಧ್ಯವಾದರೆ ಮತ್ತಷ್ಟು ಜನರ ಸಹಾಯವನ್ನೂ ಪಡೆಯಲು ಪ್ರಯತ್ನಿಸುವುದಾಗಿ ಅವರು ತಿಳಿಸಿದ್ದಾರೆ.
ನನ್ನನ್ನ ಮರೆಯಬೇಡಿ
ಈ ವೇಳೆ ಆ ವ್ಯಕ್ತಿ ಭಾವುಕರಾಗಿರುವುದು ಕಂಡುಬರುತ್ತದೆ. ಜೀವನದಲ್ಲಿ ಎಲ್ಲರಿಗೂ ಕೆಲವೊಮ್ಮೆ ಕಷ್ಟಗಳು ಎದುರಾಗುತ್ತವೆ ಎಂದು ಹೇಳುವ ಅವರು, ನಿಶ್ಚಿತಾ ಅವರಿಗೆ ತಮ್ಮ ಪ್ರವಾಸವನ್ನು ಆನಂದಿಸುವಂತೆ ಸಲಹೆ ನೀಡುತ್ತಾರೆ. ಜೊತೆಗೆ, ತಮ್ಮನ್ನು ಮರೆಯಬೇಡಿ ಎಂಬ ರೀತಿಯಲ್ಲಿ ಭಾವುಕವಾಗಿ ಮಾತನಾಡುತ್ತಾರೆ.
ಮಾತುಕತೆಯ ಕೊನೆಯಲ್ಲಿ ನಿಶ್ಚಿತಾ ಅವರು ಆ ವ್ಯಕ್ತಿಗೆ ತಿನ್ನಲು ಏನನ್ನಾದರೂ ನೀಡಲು ಮುಂದಾಗುತ್ತಾರೆ. ಕೆಲವೇ ನಿಮಿಷಗಳ ಈ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಹಲವರ ಗಮನ ಸೆಳೆದಿದೆ.
Viral Video: ನಿಶ್ಚಿತಾ ಕಾರ್ಯಕ್ಕೆ ಮೆಚ್ಚುಗೆ
ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ನಿಶ್ಚಿತಾ ಅವರು ಅಪರಿಚಿತ ವ್ಯಕ್ತಿಯೊಂದಿಗೆ ಮಾತನಾಡಿ, ಆತನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸಹಾಯಕ್ಕೆ ಮುಂದಾಗಿರುವುದನ್ನು ಮೆಚ್ಚಿಕೊಂಡಿದ್ದಾರೆ.
"ನೀವು ನಿಜಕ್ಕೂ ಆಶೀರ್ವಾದದಂತಿದ್ದೀರಿ", "ದೇವರು ನಿಮಗೆ ಆಶೀರ್ವಾದ ನೀಡಲಿ. ನೀವು ಮಾಡುತ್ತಿರುವ ಒಳ್ಳೆಯ ಕೆಲಸ ಮುಂದುವರಿಸಿ", "ದೇವರು ನಿಮಗೆ ಇನ್ನಷ್ಟು ಶಕ್ತಿ, ಶಾಂತಿ ಮತ್ತು ಸಂತೋಷ ನೀಡಲಿ" ಎಂಬಂತಹ ಕಾಮೆಂಟ್‌ಗಳು ಬಂದಿವೆ.
ಕೆಲವರು ನಿಶ್ಚಿತಾ ಅವರ ಮಾನವೀಯ ನಡೆ ಇತರರಿಗೂ ಸ್ಫೂರ್ತಿಯಾಗಲಿ ಎಂದು ಆಶಿಸಿದ್ದಾರೆ. ಮತ್ತೊಂದೆಡೆ, ಆ ವ್ಯಕ್ತಿಗೆ ನೇರವಾಗಿ ಸಹಾಯ ಮಾಡಲು ಆಸಕ್ತಿ ಹೊಂದಿರುವವರೂ ಮುಂದೆ ಬಂದಿದ್ದಾರೆ.
ಗೋವಾದ ವ್ಯಕ್ತಿಯೊಬ್ಬರು, "ನಾನು ಗೋವಾದವನು. ಈ ವ್ಯಕ್ತಿಯನ್ನು ನೀವು ಎಲ್ಲಿ ಭೇಟಿಯಾದಿರಿ ಎಂದು ತಿಳಿದುಕೊಳ್ಳಲು ಬಯಸುತ್ತೇನೆ. ಅವರು ಮಹಾರಾಷ್ಟ್ರದವರು ಎಂದು ಹೇಳಿದ್ದಾರೆ. ಅವರನ್ನು ಸುರಕ್ಷಿತವಾಗಿ ಕುಟುಂಬದ ಬಳಿಗೆ ಕಳುಹಿಸಲು ನಾನು ಸಹಾಯ ಮಾಡಲು ಬಯಸುತ್ತೇನೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು,"ಅವರು ಇನ್ನೂ ಕೆಲಸ ಹುಡುಕುತ್ತಿದ್ದಾರೆಯೇ? ಅವರ ಸಂಪರ್ಕ ವಿವರಗಳನ್ನು ಹಂಚಿಕೊಳ್ಳಬಹುದೇ?" ಎಂದು ಪ್ರಶ್ನಿಸಿದ್ದಾರೆ.


Click it and Unblock the Notifications
