Video Viral: ಮಹಾಕುಂಭ ಮೇಳದಲ್ಲಿ ಮೊಬೈಲ್ ಮೂಲಕವೇ ಪತಿಗೆ ಪುಣ್ಯಸ್ನಾನ ಮಾಡಿಸಿದ ಪತ್ನಿ! ವಿಡಿಯೋ ನೋಡಿ
ಬೆಂಗಳೂರು, ಫೆಬ್ರವರಿ 26: ಶಿವರಾತ್ರಿಗೆ ಕೊನೆಗೊಳ್ಳಲಿರುವ ಪ್ರಯಾಗ್ ರಾಜ್ ಮಹಾಕುಂಭ ಮೇಳದಲ್ಲಿ ಮಹಿಳೆಯೊಬ್ಬರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ತ್ರಿವೇಣಿ ಸಂಗಮಕ್ಕೆ ಪತಿಯ ಅನುಪಸ್ಥಿತಿಯಲ್ಲಿ ಬಂದಿದ್ದ ಈ ಮಹಿಳೆ ಪತಿಗೆ ವಿಡಿಯೋ ಕರೆ ಮಾಡಿ ಪುಣ್ಯಸ್ನಾನ ಮಾಡಿದ್ದಾರೆ. ಇದೊಂದು ಅಸಾಂಪ್ರದಾಯಿಕ ಎಂದು ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಳೆದ ಎರಡು ದಿನಗಳಿಂದ ಸದ್ದು ಮಾಡುತ್ತಿದ್ದು, ಇಂತಹ ಆಚರಣೆ, ಜನರ ವಿಧಾನಗಳ ಬಗ್ಗೆ ಚರ್ಚೆ ಹುಟ್ಟು ಹಾಕಿದೆ.
ಪ್ರಯಾಗ್ ರಾಜ್‌ನಲ್ಲಿ ದೇಶದ ಅತೀ ದೊಡ್ಡ ಧಾರ್ಮಿಕ ಉತ್ಸವವಾದ ಮಹಾಕುಂಭ ಮೇಳವು ಬಹು ವಿಜೃಂಭಣೆಯಿಂದ ನಡೆಯುತ್ತಿದೆ. ಮೂರು ನದಿಗಳ ಪವಿತ್ರ ತ್ರಿವೇಣಿ ಸಂಗಮದಲ್ಲಿ ಜರುಗಿದೆ. ಇಂದು (ಫೆಬ್ರವರಿ 26) ಶಿವರಾತ್ರಿಯಂದು ಕೊನೆಗೊಳ್ಳಲಿದೆ. ಈ ವರೆಗೆ ಸುಮಾರು 63 ಕೋಟಿ ಭಕ್ತರು ಇಲ್ಲಿಗೆ ಬಂದು ಧಾರ್ಮಿಕ ಆಚರಣೆ ಮಾಡಿದ್ದಾರೆ. ಗಂಗೆಯಲ್ಲಿ ಮಿಂದೆಂದಿದ್ದಾರೆ. ಪುಣ್ಯಸ್ನಾನದ ಮೂಲಕ ಪುನೀತರಾಗಿದ್ದಾರೆ. ಪಾಪ ಕಳೆದುಕೊಂಡಿದ್ದಾರೆ. ಆ ಮಟ್ಟಿಗೆ ಕೋಟ್ಯಾಂತರ ಭಕ್ತರನ್ನು ಮಹಾಕುಂಭ ಮೇಳವು ಆಕರ್ಷಿಸಿದೆ.

ತ್ರಿವೇಣಿ ಸಂಗಮಕ್ಕೆ ಬಂದವರು, ಪುಣ್ಯಸ್ನಾನ ಮಾಡಿಯೇ ಮರಳಬೇಕಿದೆ. ಕೆಲವರು ಇಲ್ಲಿಗೆ ಹೋಗದ ಹಿನ್ನೆಲೆ ಗಂಗೇ ನೀರು ತರಸಿಕೊಂಡಿದ್ದಾರೆ. ಕೆಲವರ ಭಾವಚಿತ್ರ ಹಿಡಿದು ಗಂಗೆಯಲ್ಲಿ ಮುಳುಗಿಸಿ ಪುಣ್ಯ ಪ್ರಾಪ್ತಿಗೆ ಪ್ರಾರ್ಥಿಸಿದ್ದಾರೆ. ಹೀಗೆ ಅನೇಕ ಹೊಸ ಹೊಸ ವಿಧಾನಗಳನ್ನು ಅನುಸರಿಸುವ ಮೂಲಕ ಮಹಾಕುಂಭ ಮೇಳದ ಧಾರ್ಮಿಕ ಆಚರಣೆಯಲ್ಲಿ ಪರೋಕ್ಷವಾಗಿ, ಸಾಂಕೇತಿಕವಾಗಿ ಪಾಲ್ಗೊಂಡಿದ್ದಾರೆ. ಕೆಲವರು ಪುಣ್ಯಸ್ನಾನಕ್ಕಾಗಿ ಅನುಸರಿಸಿದ ನವೀನ ವಿಧಾನಗಳು ವೈರಲ್ ಆಗುತ್ತಿವೆ. ಈ ಸಾಲಿನಲ್ಲಿ ಮೊಬೈಲ್ ಕರೆ ಮೂಲಕ ಪತಿಗೆ ಪುಣ್ಯಸ್ನಾನ ಮಾಡಿಸಿ ಪತ್ನಿಯ ವಿಡಿಯೋ ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ಏನಿದೆ?
ತ್ರಿವೇಣಿ ಸಂಗಮದಲ್ಲಿ ಧಾರ್ಮಿಕ ಕಾರ್ಯ ಮುಗಿಸಿದ ಪತ್ನಿಯು ತನ್ನ ಪತಿಗೆ ಮೊಬೈಲ್ ಮೂಲಕ ವಿಡಿಯೋ ಕರೆ ಮಾಡಿದ್ದಾರೆ. ಮನೆಯಲ್ಲಿ ಒಬ್ಬಂಟಿಯಾಗಿದ್ದ ಪತಿಯು ವಿಡಿಯೋ ಕರೆಯಲ್ಲಿ ಕೈ ಮುಗಿದು ನಿಲ್ಲುತ್ತಾರೆ. ಆಗ ನೀರಿನಲ್ಲಿ ನಿಂತಿದ್ದ ಪತ್ನಿ ತನ್ನ ಸಂಪೂರ್ಣ ಮೊಬೈಲ್ ಅನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸುತ್ತಾಳೆ. ಈ ಮೂಲಕ ಅನುಪಸ್ಥಿತಿಯ ಪತಿಯು ತನ್ನೊಂದಿಗೆ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡರು ಎಂಬುದು ಪತ್ನಿ ಭಾವನೆಯಾಗಿದೆ.
ನೆಟ್ಟಿಗರು ಹೇಳಿದ್ದೇನು?
ಇವರಿಬ್ಬರ ವಿಡಿಯೋ ಕರೆಯನ್ನು ಮತ್ತೊಬ್ಬರು ಸೆರೆ ಹಿಡಿದಿದ್ದಾರೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೆಲವರು ಜನರ ಪುಣ್ಯಸ್ನಾನದ ವೇಳೆ ಕೈಗೊಂಡ ಹೊಸ ವಿಧಾನಗಳು, ನಂಬಿಕೆಗಳನ್ನು ಆಶ್ಚರ್ಯ ಪಟ್ಟು ನೋಡಿದ್ದಾರೆ. ಇನ್ನೂ ಹಲವರು ಇದೊಂದು ಅಸಾಂಪ್ರದಾಯಿಕ ಎಂದು ನಗಾಡಿದ್ದಾರೆ.
ನೆಟ್ಟಿಗರು ಈ ವಿಡಯೋ ಘಟನೆಯನ್ನು ಮನರಂಜನೆಯಂತೆ ಪರಿಗಣಿಸಿದ್ದಾರೆ. ಇದೆಲ್ಲ ಅಪನಂಬಿಕೆ ಎಂದು ಕೆಲವರು ಹೇಳಿದ್ದಾರೆ. ಮೊಬೈಲ್ ನೀರಿನಲ್ಲೇ ಜಾರಿ ಹೋಗಿದ್ದರೆ, ಪತಿ ಇರುವಾಗಲೇ ಪತ್ನಿಯಿಂದ ಮೋಕ್ಷ ಸಿಕ್ಕಿ ಬಿಡುತ್ತಿತ್ತು ಎಂದು ನೆಟ್ಟಿಗರು ಹಾಸ್ಯ ಮಾಡಿದ್ದಾರೆ. ಪ್ರಯಾಗ್‌ರಾಜ್ ಬರುವುದನ್ನು ಮಿಸ್ ಮಾಡಿಕೊಂಡು ಸ್ನೇಹಿತರಿಗೆ ಟ್ಯಾಗ್ ಮಾಡಿ ಎಂದು ಕೆಲವರು ತಮಾಷೆ ಮಾಡಿದ್ದಾರೆ. ಒಟ್ಟಾರೆ ಈ ವೈರಲ್ ವಿಡಿಯೋ ಆನ್‌ಲೈನ್‌ನಲ್ಲಿ ಚರ್ಚೆ ಹುಟ್ಟು ಹಾಕಿದೆ.
ಜನರು ಕೆಲವು ಆಚರಣೆಗಳಿಗೆ ತಾವು ದೈಹಿಕವಾಗಿ ಇಲ್ಲದಿದ್ದರೂ ಸಹ ಸಾಂಪ್ರದಾಯಿಕ ಆಚರಣೆ ಕೈ ಬಿಡಬಾರದು ಎಂಬ ನಂಬಿಕೆಯಿಂದ ಇಂತಹ ಕಾರ್ಯ ಪೂರೈಸಲು ಮೀಸಲಿಡುವ ಸಮಯ ಎಂಥಹ ಅದ್ಭುತ ಅಂತಲೂ ಕೆಲವರು ಹೇಳಿದ್ದಾರೆ.












Click it and Unblock the Notifications