ಪ್ರೇಮಿಗಳೇ ಹುಷಾರ್! ನಿರ್ಜನ ಪ್ರದೇಶದತ್ತ ಹೆಜ್ಜೆಯಿಡುವ ಮುನ್ನ ಈ ವಿಚಾರ ನೆನಪಿರಲಿ
ಯಾರು ಇಲ್ಲದ ನಿರ್ಜನ ಪ್ರದೇಶದಲ್ಲಿ ಕುಳಿತು ಕಾಲ ಕಳೆಯಬೇಕೆಂದು ಬಯಸುವುದು ಪ್ರೇಮಿಗಳ ಸಹಜ ಗುಣ. ಆದರೆ ದಯವಿಟ್ಟು ಅಂತಹ ಆಲೋಚನೆಗಳಿದ್ದರೆ ತಲೆಯಿಂದ ಮೊದಲು ತೆಗೆದುಹಾಕಿ. ಏಕೆಂದರೆ ಇತ್ತೀಚೆಗಿನ ವರ್ಷಗಳಲ್ಲಿ ನಿರ್ಜನ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡ ಪ್ರೇಮಿಗಳು ದುಷ್ಕರ್ಮಿಗಳಿಂದ ಅನುಭವಿಸಿದ ಸಂಕಷ್ಟಗಳು ಎಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗ ಪ್ರೇಮಿಗಳ ದಿನಾಚರಣೆ ಗುಂಗಿನಲ್ಲಿರುವ ಪ್ರೇಮಿಗಳು ಈ ಬಗ್ಗೆ ಎಚ್ಚರ ವಹಿಸುವುದು ಬಹು ಮುಖ್ಯವಾಗಿದೆ.
ಪ್ರೇಮಿಗಳಿಗೂ ಪಾರ್ಕ್, ಕೆರೆಗಳಿಗೆ ಅದೇನೋ ಸಂಬಂಧವಿದೆ. ಕೆರೆ ದಡದಲ್ಲಿ ಕುಳಿತು ಮಾತನಾಡುತ್ತಾ ನೀರಿಗೆ ಕಲ್ಲು ಹಾಕುವುದು.. ಪಾರ್ಕ್ ನಲ್ಲಿ ಹರಟೆ ಹೊಡೆಯುತ್ತಾ ಹುಲ್ಲು ಕೀಳುವುದು.. ಪ್ರೇಮಿಗಳು ಮಾಡುವ ಮಾಮೂಲಿ ತರ್ಲೆಯಾಗಿದೆ. ಬಹಳಷ್ಟು ಪ್ರೇಮಿಗಳು ಪ್ರಶಾಂತ ಮತ್ತು ಜನವಿರಳವಾದ ಪ್ರದೇಶ, ಪಾರ್ಕ್, ಕೆರೆಗಳನ್ನು ಹುಡುಕಿಕೊಂಡು ಹೋಗುತ್ತಿದ್ದು ಅಂತಹ ಸ್ಥಳಗಳಲ್ಲಿ ಆರಾಮಾಗಿ ನೆಮ್ಮದಿಯಾಗಿ ವಿಹರಿಸಬಹುದೆಂದು ಬಯಸುತ್ತಾರೆ. ಆದರೆ ಅದು ಎಷ್ಟರ ಮಟ್ಟಿಗೆ ಸೇಪ್ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗುತ್ತದೆ.

ಜನಸಂದಣಿಯಿರುವ ಪ್ರವಾಸಿ ತಾಣಗಳಾದ ಪಾರ್ಕ್‌ನಲ್ಲಿ ಸ್ವಚ್ಛಂಧವಾಗಿ ವಿಹರಿಸಲು ಸಾಧ್ಯವಾಗುವುದಿಲ್ಲ. ಪರಿಚಿತರು ನೋಡಿದರೆ ಎಂಬ ಭಯದಿಂದ ನಿರ್ಜನ ಪ್ರದೇಶದತ್ತ ಪ್ರೇಮಿಗಳು ಮುಖ ಮಾಡುವುದು ಕಾಣಿಸುತ್ತಿದೆ. ಅದರಲ್ಲೂ ಕಾಲೇಜಿಗೆ ಚಕ್ಕರ್ ಹೊಡೆದು, ಪಾರ್ಕ್ ಗಳಲ್ಲಿ ಕುಳಿತು ಕೊಳ್ಳುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಸಿನಿಮಾ ನೋಡುವುದು, ಹೋಟೆಲ್ ಗಳಲ್ಲಿ ಸಮಯ ಕಳೆಯುವುದು ಹೀಗೆ ತಮ್ಮದೇ ಆದ ಲೋಕದಲ್ಲಿ ವಿಹರಿಸುವ ಪ್ರಯತ್ನ ಮಾಡುತ್ತಾರೆ.
ಯಾರು ಇಲ್ಲದ ಸ್ಥಳ ಸೇಫ್ ಅಲ್ಲ
ಪಾರ್ಕ್, ಹೋಟೆಲ್ ಹೀಗೆ ಜನ ಓಡಾಡುವ ಪ್ರದೇಶಗಳಲ್ಲಿ ಪ್ರೇಮಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಕೆಲವರು ಅವರತ್ತ ನೋಟ ಬೀರಿದರೂ ಅಯ್ಯೋ ನಮಗೆ ಏಕೆ ಎಂದು ಕೊಂಡು ಅವರ ಪಾಡಿಗೆ ಹೋಗಬಹುದು. ಇನ್ನು ಕೆಲವರು ದುರುಗುಟ್ಟಿ ನೋಡಬಹುದು ಅಷ್ಟೇ. ಆದರೆ ನಿರ್ಜನ ಪ್ರದೇಶದಲ್ಲಿ ನಮ್ಮ ಪಾಡಿಗೆ ತಾವು ಶೃಂಗಾರ ಚಟುವಟಿಕೆಯಲ್ಲಿ ತೊಡಗಿಕೊಂಡು ಖುಷಿಯಾಗಿ ಸಮಯ ಕಳೆಯಬಹುದೆಂದು ಕೊಂಡರೆ ಅದು ಅಪಾಯ.

ಪ್ರೇಮಕ್ಕೆ ಶರಣಾದ ಬಳಿಕ ಜತೆಯಲ್ಲಿರಬೇಕೆಂದು ಬಯಸುವುದು ಸಹಜ. ಹಾಗೆಂದು ನಾವೆಲ್ಲದ್ದೇವೆ? ನಾವೇನು ಮಾಡುತ್ತಿದ್ದೇವೆ ಎಂಬ ಪ್ರಜ್ಞೆಯೂ ಪ್ರೇಮಿಗಳಲ್ಲಿರಬೇಕು. ಸಾರ್ವಜನಿಕವಾಗಿ ನಮ್ಮ ವರ್ತನೆಯೂ ಹೇಗಿರಬೇಕು? ಎಂಬ ಬಗ್ಗೆಯೂ ಅರಿವಿರಬೇಕು. ಅದು ಇಲ್ಲದೆ ಹೋದರೆ ಅಂತಹವರನ್ನು ಪ್ರೇಮಿಗಳೆಂದು ಕರೆಯಲಾಗದು. ಅದರಲ್ಲೂ ಮನೆಯಲ್ಲಿ ಅಪ್ಪ ಅಮ್ಮ ಕಷ್ಟಪಟ್ಟು ಸಾಲ ಮಾಡಿ ಕಾಲೇಜಿಗೆ ಕಳಿಸಿದರೆ ಸರಿಯಾಗಿ ಓದದೆ ಓದುವ ಸಮಯದಲ್ಲಿ ಪ್ರೀತಿ, ಪ್ರೇಮವೆಂದು ಅಡ್ಡಾಡುವುದು, ಅದರಲ್ಲೂ ನಿರ್ಜನ ಪ್ರದೇಶಗಳಿಗೆ ತೆರಳಿ ಸಮಸ್ಯೆಗಳನ್ನು ಎಳೆದುಕೊಳ್ಳುವುದೆಷ್ಟು ಸರಿ?
ಪ್ರೇಮಿಗಳೇ ನಿಮ್ಮ ಎಚ್ಚರದಲ್ಲಿ ನೀವಿರಿ
ನಿರ್ಜನ ಪ್ರದೇಶದಲ್ಲಿದ್ದ ಪ್ರೇಮಿಗಳ ಮೇಲೆ ಹಲ್ಲೆ ನಡೆಸಿ ಅವರಿಂದ ಹಣ ಮೊಬೈಲ್, ಚಿನ್ನಾಭರಣಗಳನ್ನು ಕಿತ್ತು ಕಳಿಸುವುದೇ ಕೆಲವರಿಗೆ ದಂಧೆಯಾಗಿದೆ. ಅದಕ್ಕೂ ಮೀರಿ ಪ್ರಿಯತಮನ ಮೇಲೆ ಹಲ್ಲೆ ಮಾಡಿ ಪ್ರಿಯತಮೆ ಮೇಲೆ ಅತ್ಯಾಚಾರ ಎಸಗಿದ ಭೀಕರ ಘಟನೆಯೂ ಮೈಸೂರಿನಲ್ಲಿ ಕೆಲವು ವರ್ಷಗಳ ಹಿಂದೆ ನಡೆದಿತ್ತು.

ಅದನ್ನು ಯಾರೂ ಮರೆತಿರಲಾರರು. ಇನ್ನು ದೌರ್ಜನ್ಯಕ್ಕೆ ಒಳಗಾದ ಪ್ರೇಮಿಗಳು ಮಾನ ಮರ್ಯಾದೆಗೆ ಅಂಜಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಲ್ಲ ದೂರು ನೀಡಲ್ಲ ಎಂಬ ಧೈರ್ಯವೂ ದುಷ್ಕರ್ಮಿಗಳಿಗೆ ಇಂತಹ ದುಷ್ಕೃತ್ಯಗಳನ್ನು ಮುಂದುವರೆಸಲು ಸಹಕಾರಿಯಾಗಿದೆ.
ಇನ್ನು ನಿರ್ಜನ ಪ್ರದೇಶಗಳಿಗೆ ತೆರಳುವ ಪ್ರೇಮಿಗಳಿಗೂ ಎಚ್ಚರ ನೀಡಿ ಪೊಲೀಸರು ವಾಪಾಸ್ಸು ಕಳಿಸುತ್ತಾರೆ. ಆದರೂ ಕೆಲವು ಪ್ರೇಮಿಗಳು ಪೊಲೀಸರ ಕಣ್ಣು ತಪ್ಪಿಸಿ ನಿರ್ಜನ ಪ್ರದೇಶಗಳಿಗೆ ಹೋಗುವುದು ನಡೆಯುತ್ತಲೇ ಇರುತ್ತದೆ. ಆದರೆ ಪ್ರೇಮಿಗಳ ದಿನಾಚರಣೆಯ ಹುಮ್ಮಸ್ಸಿನಲ್ಲಿರುವ ಈ ಸಮಯದಲ್ಲಿ ಪ್ರೇಮಿಗಳು ಒಂದಷ್ಟು ಎಚ್ಚರಿಕೆ ವಹಿಸುವುದು ಒಳ್ಳೆಯದು. ಪ್ರೇಮಿಸಬೇಡಿ, ಎಲ್ಲೆಂದರಲ್ಲಿ ಓಡಾಡಬೇಡಿ ಎಂದು ಹೇಳಲು ಯಾರಿಗೂ ಅಧಿಕಾರವಿಲ್ಲ. ಆದರೂ ನಿಮ್ಮ ಎಚ್ಚರದಲ್ಲಿ ನೀವು ಇರಿ ಎಂಬ ಸಲಹೆಯನ್ನಷ್ಟೆ ನೀಡಬಹುದು. ಅಂದ ಹಾಗೆ ಪ್ರೇಮಿಗಳ ದಿನಾಚರಣೆಯ ಈ ಸಮಯದಲ್ಲಿ ನಿಮ್ಮ ಪ್ರೀತಿ ಚಿರವಾಗಿರಲಿ ಎಂಬುದು ನಮ್ಮ ಹಾರೈಕೆಯಾಗಿದೆ.












Click it and Unblock the Notifications