ಗೆದ್ದರೆ ಮೋದಿ ಜತೆ ವ್ಯವಹರಿಸಲಿರುವ ಮೂರನೇ ಅಧ್ಯಕ್ಷ ಎನಿಸಲಿದ್ದಾರೆ ಬೈಡೆನ್
ನವದೆಹಲಿ, ನವೆಂಬರ್ 5: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರು ಗೆದ್ದು ಅಧ್ಯಕ್ಷ ಗಾದಿಗೆ ಏರಲಿದ್ದಾರೆ ಎಂಬ ಕುತೂಹಲ ತೀವ್ರವಾಗಿದೆ. ಭಾರತದಲ್ಲಿಯೂ ಅಮೆರಿಕ ಚುನಾವಣೆ ಕುತೂಹಲದ ಕೇಂದ್ರವಾಗಿದೆ. ಏಕೆಂದರೆ ಅಧ್ಯಕ್ಷ ಸ್ಥಾನಕ್ಕೆ ಏರುವವರ ಮೇಲೆ ಭಾರತ-ಅಮೆರಿಕ ಸಂಬಂಧದ ಬೆಳವಣಿಗೆ ಅವಲಂಬಿತವಾಗಿರುತ್ತದೆ. ಇದುವರೆಗಿನ ಫಲಿತಾಂಶಗಳಲ್ಲಿ ಜೋ ಬೈಡೆನ್ ಅವರು ಡೊನಾಲ್ಡ್ ಟ್ರಂಪ್ ಅವರಿಗಿಂತ ಮುನ್ನಡೆ ಸಾಧಿಸಿದ್ದು, ಅವರೇ ಅಧ್ಯಕ್ಷ ಹುದ್ದೆಗೆ ಏರುವ ಸಾಧ್ಯತೆಗಳು ದಟ್ಟವಾಗಿವೆ. ಒಂದು ವೇಳೆ ಬೈಡೆನ್ ಗೆದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವ್ಯವಹರಿಸಲಿರುವ ಅಮೆರಿಕದ ಮೂರನೇ ಅಧ್ಯಕ್ಷರೆನಿಸಲಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಬರಾಕ್ ಒಬಾಮ ಅವರು ಎರಡನೆಯ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ನರೇಂದ್ರ ಮೋದಿ ಸರ್ಕಾರ ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದಿತ್ತು. ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ನಡೆದ ಅಮೆರಿಕ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಗೆದ್ದು ಅಧಿಕಾರಕ್ಕೆ ಬಂದಿದ್ದರು. ಈಗ ಪುನಃ ಡೆಮಾಕ್ರಟಿಕ್ ಪಕ್ಷ ಮುನ್ನಡೆ ಸಾಧಿಸಿದೆ. ಹೀಗಾಗಿ ಮೋದಿ ಸರ್ಕಾರದ ಎರಡನೆಯ ಅವಧಿಯಲ್ಲಿ ಅಮೆರಿಕದ ಮೂರನೇ ಅಧ್ಯಕ್ಷರೊಂದಿಗೆ ಮುಖಾಮುಖಿಯಾಗುವ ಸಂಭವ ಹೆಚ್ಚಿದೆ.
ಬೈಡೆನ್ ಅವರ ಆಯ್ಕೆ ಬಳಿಕ ಭಾರತ ಮತ್ತು ಅಮೆರಿಕ ಸಂಬಂಧಗಳು ಯಾವ ಮಟ್ಟಕ್ಕೆ ಬದಲಾಗಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಚೀನಾ ಮತ್ತು ಪಾಕಿಸ್ತಾನಗಳಿಂದ ಗಡಿಯಲ್ಲಿ ಎದುರಾಗುತ್ತಿರುವ ನಿರಂತರ ಬೆದರಿಕೆಗಳು, ಆರ್ಥಿಕ ಮತ್ತು ರಾಜಕೀಯ ಸಂಗತಿಗಳ ವಿಚಾರಗಳಲ್ಲಿ ಬೈಡೆನ್ ಅವರ ಭಾರತದ ಕುರಿತಾದ ನಿಲುವುಗಳು ಹೇಗಿರಲಿವೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ. ಮುಂದೆ ಓದಿ.

ಭಾರತಕ್ಕೆ ಆದ್ಯತೆ-ಬೈಡೆನ್
'ಭಾರತ ಮತ್ತು ಅಮೆರಿಕಗಳು ಸ್ವಾಭಾವಿಕ ಮಿತ್ರ ದೇಶಗಳು ಎಂಬ ಸುದೀರ್ಘ ಕಾಲದ ನಂಬಿಕೆಯನ್ನು ಬೈಡೆನ್ ಮುಂದುವರಿಸಲಿದ್ದಾರೆ. ಭಾರತ-ಅಮೆರಿಕ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಅಧಿಕ ಆದ್ಯತೆ ನೀಡುವ ಕಾರ್ಯವನ್ನು ಬೈಡೆನ್ ಆಡಳಿತ ಮುಂದುವರಿಸಲಿದೆ' ಎಂದು ಬೈಡೆನ್ ಪ್ರಚಾರ ತಂಡ ಹೇಳಿದೆ.

ನಿಲುವಿನಲ್ಲಿ ಬದಲಾವಣೆ ಸಾಧ್ಯತೆ
ಆದರೆ ಭಾರತ ಮತ್ತು ಅಮೆರಿಕ ನಡುವಿನ ಸಮೀಕರಣದಲ್ಲಿ ದೊಡ್ಡ ಬದಲಾವಣೆಗಳು ಉಂಟಾಗಬಹುದು. ಭಾರತದ ಪೌರತ್ವ ತಿದ್ದುಪಡಿ ಕಾಯ್ದೆ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ ರದ್ದತಿ, ಧಾರ್ಮಿಕ ಸ್ವಾತಂತ್ರ್ಯ, ಮಾನವ ಹಕ್ಕುಗಳು ಮುಂತಾದ ಸಂಗತಿಗಳ ವಿಚಾರದಲ್ಲಿ ಅಮೆರಿಕದ ನಿಲುವು ಬದಲಾಗುವ ಸಾಧ್ಯತೆ ಇದೆ. ಭಾರತದ ಈ ಸಂಗತಿಗಳಲ್ಲಿ ಡೊನಾಲ್ಡ್ ಟ್ರಂಪ್ ಸರ್ಕಾರ ಯಾವುದೇ ಹೇಳಿಕೆ ನೀಡಿರಲಿಲ್ಲ.

ಭಾರತದೊಂದಿಗೆ ಒಪ್ಪಂದಗಳು
ಭಾರತದೊಂದಿಗಿನ ಮಾತುಕತೆಗಳು, ಒಪ್ಪಂದಗಳು ಜೋ ಬೈಡೆನ್ ಅವರಿಗೆ ಹೊಸತಲ್ಲ. ಈ ಹಿಂದೆ ಅವರು ಅನೇಕ ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ಭಾರತದೊಂದಿಗೆ ಮಾತುಕತೆ ನಡೆಸಿದ್ದರು. 2008ರಲ್ಲಿ ಅವರು ವಿದೇಶಿ ಸಂಬಂಧದ ಸೆನೆಟ್ ಸಮಿತಿಯ ಅಧ್ಯಕ್ಷರಾಗಿದ್ದಾಗ ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಜತೆಗೆ ಭಾರತ-ಅಮೆರಿಕ ನಿರ್ಮಿತ ಮೊದಲ ಯುದ್ಧ ನೌಕೆ ಐಎನ್ಎಸ್ ಜಲಶ್ವಾದ ನಿರ್ಮಾಣಕ್ಕೆ ನೆರವಾದ ನೇವಲ್ ವೆಸೆಲ್ಸ್ ಟ್ರಾನ್ಸ್‌ಫರ್ ಆಕ್ಟ್, 2005ರ ಸಹ ಪ್ರಾಯೋಜಕರಾಗಿದ್ದರು.

ಜಮ್ಮು ಮತ್ತು ಕಾಶ್ಮೀರ ನೀತಿ
ಜಮ್ಮು ಮತ್ತು ಕಾಶ್ಮೀರದಲ್ಲಿನ ವಿಶೇಷ ಸ್ಥಾನಮಾನ ರದ್ದತಿಯ ವಿಚಾರದಲ್ಲಿ ಟ್ರಂಪ್ ಸರ್ಕಾರದ ನಿಲುವಿಗೆ ವಿರುದ್ಧವಾದ ತೀರ್ಮಾನಗಳನ್ನು ಬೈಡೆನ್ ಸರ್ಕಾರ ತೆಗೆದುಕೊಳ್ಳಬಹುದು. ಚೀನಾದಲ್ಲಿನ ಉಯಿಘುರ್ ಮತ್ತು ಮಯನ್ಮಾರ್‌ನ ರೊಹಿಂಗ್ಯಾ ಮುಸ್ಲಿಮರ ಸಂಕಷ್ಟಗಳ ಪರವಾಗಿ ಧ್ವನಿ ಎತ್ತಿದ್ದ ಬೈಡೆನ್ ಪ್ರಚಾರ ತಂಡವು, ಕಾಶ್ಮೀರದ ವಿಚಾರವಾಗಿಯೂ ಅದೇ ನಿಲುವನ್ನು ಪ್ರದರ್ಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತ-ಚೀನಾ ಸಂಬಂಧ
'ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಸೇರಿದಂತೆ ಯಾವುದೇ ದೇಶವು ತನ್ನ ನೆರೆಯ ದೇಶಕ್ಕೆ ಬೆದರಿಕೆ ಒಡ್ಡಲು ಸಾಧ್ಯವಾಗದಂತೆ ನಿಯಮ ಆಧಾರಿತವಾಗಿ ಭಾರತಕ್ಕೆ ಬೆಂಬಲ ನೀಡುವುದು ಬೈಡೆನ್ ಅವರ ಕಾರ್ಯಸೂಚಿ' ಎಂದು ಹೇಳಲಾಗಿದೆ. ಜತೆಗೆ ಭಾರತವನ್ನು ತನ್ನ ಪ್ರಮುಖ ರಕ್ಷಣಾ ಪಾಲುದಾರ (ಎಂಡಿಪಿ) ಎಂದು ಪರಿಗಣಿಸುವುದನ್ನು ಕೂಡ ಮುಂದುವರಿಸುವುದಾಗಿ ಬೈಡೆನ್ ಭರವಸೆ ನೀಡಿದ್ದಾರೆ.

ಎಚ್1ಬಿ ವೀಸಾ ನಿಯಮ
ಎಚ್1ಬಿ ವೀಸಾ ನಿಯಮಾವಳಿಗಳಿಗೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಅನೇಕ ಗೊಂದಲಮಯ ಹೇಳಿಕೆಗಳನ್ನು ನೀಡಿದ್ದರು. ಬೈಡೆನ್ ಅವರು ಎಚ್1ಬಿ ವೀಸಾ ವ್ಯವಸ್ಥೆಯನ್ನು ಸುಧಾರಣೆ ಮಾಡುವ ಮಾತು ನೀಡಿದ್ದಾರೆ. ಜತೆಗೆ ದೇಶದಲ್ಲಿನ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ವ್ಯವಸ್ಥೆಯನ್ನು ಸಹ ತೆಗೆದುಹಾಕಲು ಉದ್ದೇಶಿಸಿದ್ದಾರೆ.

ಭಾರತ-ರಷ್ಯಾ ಸಂಬಂಧದ ಮೇಲೆ ಕಣ್ಣು
ವ್ಯಾಪಾರ ವಿಚಾರದಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಬೈಡೆನ್ ತೀವ್ರ ಟೀಕಾಪ್ರಹಾರ ನಡೆಸಿದ್ದರು. ಅದರಲ್ಲಿಯೂ ಟಾರಿಫ್ ಸಂಗ್ರಹದ ವಿಚಾರದಲ್ಲಿನ ಟ್ರಂಪ್ ನಡೆಯನ್ನು ಕಟುವಾಗಿ ಟೀಕಿಸಿದ್ದರು. ಭಾರತ ಮತ್ತು ರಷ್ಯಾ ನಡುವಿನ ಬಾಂಧವ್ಯ ಮತ್ತೆ ನಿಕಟವಾಗುತ್ತಿರುವುದರಿಂದ ಒಬಾಮಾ ಅವಧಿಯಲ್ಲಿ ಮಾಡಿದಂತೆ ಬೈಡೆನ್ ಕೂಡ ಅಮೆರಿಕದ ನೀತಿಯಲ್ಲಿ ಬದಲಾವಣೆಗೆ ಮುಂದಾಗುವ ಸಂಭವ ಇದೆ.












Click it and Unblock the Notifications