ಬದುಕಿನಲ್ಲಿ ನಗು ಮರೆತು ಬದುಕುವುದರಲ್ಲಿ ಏನಿದೆ ಮಜಾ?
ಮನುಷ್ಯ ಸಂಘಜೀವಿಯಾಗಿದ್ದು ಸದಾ ಜನರ ನಡುವೆಯೇ ಬದುಕ ಬೇಕಾಗುತ್ತದೆ. ಹೀಗಿರುವಾಗ ನಮ್ಮ ನಡುವೆ ಸಂತಸ ಖುಷಿ ಜತೆಗೆ ಸಣ್ಣ ಪುಟ್ಟ ಮನಸ್ತಾಪಗಳು, ಜಗಳಗಳು ಇದ್ದೇ ಇರುತ್ತವೆ. ಅದಕ್ಕಿಂತ ಹೆಚ್ಚಾಗಿ ನಾವೇ ಮಾಡಿಕೊಳ್ಳುವ ಕಮಿಟ್‌ಮೆಂಟ್‌ಗಳು ನಮ್ಮನ್ನು ಸದಾ ದುಡಿಮೆಗೆ ಒಡ್ಡುತ್ತಿದೆ. ಹಣ ಮಾಡಬೇಕೆಂಬ ಹಪಾಹಪಿಗಳು ನಮಗೆ ಗೊತ್ತಿಲ್ಲದಂತೆ ನಮ್ಮನ್ನು ಜನರ ನಡುವಿನಿಂದ ಅದರಲ್ಲೂ ಸಂಬಂಧದ ಬೆಸುಗೆಯಿಂದ ಬಿಡಿಸಿಕೊಳ್ಳುವಂತೆ ಮಾಡುತ್ತಿದೆ. ಬರೀ ಕೆಲಸದ ನೆಪ ಹೇಳುತ್ತಲೇ ನಮ್ಮನ್ನು ನಾವೇ ಒಂಟಿಯಾಗಿಸುತ್ತಿದ್ದೇವೆ. ಈ ಒಂಟಿತನಗಳು ನಮ್ಮನ್ನು ಯೋಚನೆಗೆ ಒಡ್ಡುವುದನ್ನು ಬಿಟ್ಟು ಬೇರೇನು ಮಾಡುತ್ತಿಲ್ಲ. ಹೀಗಾಗಿ ನಗು ನಮ್ಮ ಬಳಿಗೆ ಸುಳಿಯುತ್ತಿಲ್ಲ.
ಈಗೀಗ ಒತ್ತಡದ ಬದುಕಿನಲ್ಲಿ ಖುಷಿಯಾಗಿ ನಗು, ನಗುತ್ತಾ ಬದುಕುವುದನ್ನು ಮರೆಯುತ್ತಿದ್ದೇವೆ. ಸದಾ ಯಾವುದೋ ಭಾರವನ್ನು ತಲೆ ಮೇಲೆ ಹೊತ್ತುಕೊಂಡವರಂತೆ ಓಡಾಡುತ್ತಿರುತ್ತೇವೆ. ಹಾಗಾಗಿ ನಗು ನಮ್ಮಿಂದ ದೂರವಾಗುತ್ತಿದೆ. ಎದುರಿಗೆ ಸಿಕ್ಕವರನ್ನು ನಗುವಿನಿಂದಲೇ ಸ್ವಾಗತಿಸುವುದನ್ನು ಕೂಡ ಮರೆತುಬಿಟ್ಟಿದ್ದೇವೆ. ಎಲ್ಲವನ್ನು ವ್ಯವಹಾರಿಕ ಎಂಬಂತೆ ನೋಡುವುದನ್ನು ಕಲಿತು ಬಿಟ್ಟಿದ್ದೇವೆ. ನಮ್ಮೊಂದಿಗೆ ನಗುತ್ತಾ ಮಾತನಾಡುವವರನ್ನು ಸಂಶಯದಿಂದ ನೋಡುವ ಮಟ್ಟಕ್ಕೆ ಬೆಳೆದು ಬಿಟ್ಟಿದ್ದೇವೆ.

ಇವತ್ತಿನ ಕಾಲಮಾನದಲ್ಲಿ ನಮ್ಮ ಸಂತಸದ ಕ್ಷಣಗಳನ್ನು ಜನರೊಂದಿಗೆ ಬೆರೆಯುವ ಸಮಯವನ್ನು ಮೊಬೈಲ್ ಕಸಿದುಕೊಂಡಿದೆ. ಮೊಬೈಲ್ ನೋಡುತ್ತಾ ಅದರಲ್ಲೇ ಮುಳುಗಿ ಹೋಗುತ್ತಿದ್ದೇವೆ. ಇದರ ನಡುವೆಯೂ ಒಂದಿಷ್ಟು ಸಮಯ ಮಾಡಿಕೊಂಡು ನಮ್ಮ ಬದುಕನ್ನು ಖುಷಿಯಾಗಿ ಕಳೆಯಲು ನಾವು ಮುಂದೆ ಬರುತ್ತಿಲ್ಲ. ಇದು ನಮಗೆ ನಾವು ಮಾಡಿಕೊಳ್ಳುವ ದ್ರೋಹ ಎಂದರೂ ತಪ್ಪಾಗುತ್ತಿಲ್ಲ. ಇನ್ನು ಕಚೇರಿಗಳಲ್ಲಿ ಕೂಡ ನಾವು ಮನಸ್ಸು ಬಿಚ್ಚಿ ಯಾರೊಂದಿಗೂ ಬೆರೆಯುತ್ತಿಲ್ಲ. ಅದರಲ್ಲೂ ತುಳಿದು ಬದುಕುವ ಮನೋಭಾವ ನಮ್ಮನ್ನು ಸುಖವಾಗಿಡುತ್ತಿಲ್ಲ.
ಮುಖಕ್ಕೊಂದು ನಗು ವ್ಯಾಯಾಮದಂತೆ
ನಮ್ಮ ಜೀವಮಾನದಲ್ಲಿ ನಗುತ್ತಾ ಖುಷಿಯಾಗಿ ಇಲ್ಲದೆ ಹೋದರೆ ಅದರಿಂದ ನಷ್ಟ ನಮಗೆ. ಮುಖ ಸಿಂಡರಿಸಿಕೊಂಡಿರುವುದು.. ಸದಾ ಗಂಭೀರವಾಗಿರುವುದು.. ಯಾರೊಂದಿಗೂ ಬೆರೆಯದೆ ಇರುವುದು.. ಇದೆಲ್ಲವೂ ಮನುಷ್ಯನ ಸ್ವಭಾವಕ್ಕೆ ವಿರುದ್ಧವಾದದ್ದು ಪ್ರಾಣಿಪಕ್ಷಿಗಳನ್ನೇ ನೋಡಿ ಅವು ಎಷ್ಟೇ ಕಚ್ಚಾಡಿದರೂ ಜೊತೆಯಾಗಿರುವುದನ್ನು ರೂಢಿಸಿಕೊಂಡಿರುತ್ತವೆ. ಸದಾ ಲವಲವಿಕೆಯಿಂದ ಇರುತ್ತವೆ. ಆದರೆ ಬುದ್ದಿವಂತ ಪ್ರಾಣಿಗಳಲ್ಲಿ ಒಂದಾದ ಮನುಷ್ಯ ಮಾತ್ರ ಬೆಳಗ್ಗಿನಿಂದ ರಾತ್ರಿವರೆಗೂ ಚಿಂತೆಯಲ್ಲಿ ಕಾಲ ಕಳೆಯುತ್ತಾನೆ.
ನಗುತ್ತಾ, ಖುಷಿಯಾಗಿರುವುದರಿಂದ ಬಹಳಷ್ಟು ಲಾಭವಿದೆ. ಅದನ್ನು ಆರೋಗ್ಯದ ಮತ್ತು ವ್ಯಾವಹಾರಿಕ ದೃಷ್ಟಿಯಿಂದಲೂ ನೋಡಬಹುದಾಗಿದೆ. ಇದನ್ನು ಅರಿಯದ ನಾವು ನಷ್ಟ ಮಾಡಿಕೊಳ್ಳುತ್ತಿದ್ದೇವೆ. ಮೊದಲಿಗೆ ನಗುವುದರಿಂದ ನಮ್ಮೊಳಗಿನ ಅಂಗಾಂಗಳಿಗೆ ರಕ್ತ ಸಂಚಾರವಾಗಿ ನಮ್ಮ ಸಾಮರ್ಥ್ಯ ಹೆಚ್ಚಾಗುವಲ್ಲಿ ಅನುಕೂಲವಾಗುತ್ತದೆ. ನಗು ಅಸ್ತಮಾ, ಬ್ರಾಂಕೈಟಿಸ್ ರೋಗಿಗಳಿಗೆ ಒಳ್ಳೆಯ ವ್ಯಾಯಾಮವಾಗಿದ್ದು, ರಕ್ತದಲ್ಲಿನ ಆಮ್ಲಜನಕ ಪ್ರಮಾಣವನ್ನು ನಗು ಹೆಚ್ಚಿಸುತ್ತದೆ. ಜ್ಞಾಪಕ ಶಕ್ತಿ ವೃದ್ದಿಸುವಲ್ಲಿಯೂ ಸಹಕಾರಿ. ಇದೆಲ್ಲವನ್ನು ಮೀರಿ ನಗು ಮುಖಕ್ಕೊಂದು ವ್ಯಾಯಾಮವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ನಗುವುದಕ್ಕಾಗಿ ಕ್ಲಬ್‌ಗೆ ಹೋಗಬೇಕಾ?
ಇದಿಷ್ಟರಲ್ಲೇ ನಗುವಿನ ಸಾಮರ್ಥ್ಯವೇನು ಎಂಬುದು ಗೊತ್ತಾಗಿ ಬಿಡುತ್ತದೆ. ಹೀಗಿರುವಾಗ ನಗುವುದಕ್ಕೆ ಜಿಪುಣತನವೇಕೆ? ನೋವ ನುಂಗಿ ನಗುವ ಚೆಲ್ಲಿ ಬಿಡಬೇಕು ತಾನೆ? ಈ ಜಗತ್ತಿನಲ್ಲಿ ಯಾರಿಗೆ ಕಷ್ಟವಿಲ್ಲ ಹೇಳಿ? ಕಷ್ಟ ಬಂತು ಅಂಥ ಕೊರಗುವುದಕ್ಕಿಂತ ಎಲ್ಲವನ್ನು ಬದಿಗೊತ್ತಿ ನಗುವುದೇ ನಿಜವಾದ ಬದುಕು ಅಲ್ಲವೆ? ನಮ್ಮ ಒತ್ತಡದ ಬದುಕಿನಲ್ಲಿ ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದೇವೆ. ಈ ಗಂಭೀರತೆ ಮತ್ತು ಅನಿವಾರ್ಯತೆ ನಮ್ಮ ನಗುವನ್ನು ನಮಗೆ ಗೊತ್ತಿಲ್ಲದಂತೆ ಕೊಂದು ಹಾಕಿದೆ. ಮುಖದ ಮೇಲಿನ ನಗುವಿಗೆ ಗ್ರಹಣ ಬಡಿದಿದೆ. ಹೀಗಾಗಿ ಬಹಳಷ್ಟು ಜನ ಮನಸ್ಸಿನಿಂದ ನಗದೆ ಬಲತ್ಕಾರವಾಗಿ ಮುಖದ ಮೇಲೆ ನಗು ತಂದುಕೊಳ್ಳುತ್ತಿದ್ದಾರೆ ಎನ್ನುವುದು ಅವರ ಹಾವಭಾವದಿಂದಲೇ ಗೊತ್ತಾಗುತ್ತಿದೆ.
ನಿಜ ಹೇಳುವುದಾದರೆ ನಗು ಎಂಬುದು ಹಣ ನೀಡಿ ಪಡೆಯುವಂತಹದ್ದಲ್ಲ. ಅದನ್ನು ನಾವು ನಮ್ಮಿಂದಲೇ ಪಡೆದುಕೊಳ್ಳಬೇಕಾಗಿದೆ. ಆದರೆ ದುರಂತವೆಂದರೆ ಇವತ್ತು ನಗುವನ್ನು ಬಲತ್ಕಾರವಾಗಿ ಪಡೆದುಕೊಳ್ಳುವಂತಹ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ಅದಕ್ಕಾಗಿಯೇ ನಗುವಿನ ಕ್ಲಬ್ ಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಅಕ್ಕಪಕ್ಕದವರೊಂದಿಗೆ ನಗುಮೊಗದಿಂದ ಮಾತನಾಡಿದರೂ ಸಾಕು. ಆದರೆ ಅದನ್ನು ಮಾಡದೆ ಕ್ಲಬ್‌ಗೆ ಹೋಗಿ ನಕ್ಕು ಬರುವಂತಹ ಮನಸ್ಥಿತಿ ನಮ್ಮದಾಗುತ್ತಿದೆ. ಇವತ್ತಿನ ಯಾಂತ್ರಿಕ ಬದುಕು ದೈವದತ್ತವಾಗಿ ಬಂದ ನಗು ನಮಗೆ ಗೊತ್ತಿಲ್ಲದಂತೆ ನಮ್ಮ ಮೊಗದಿಂದ ಮರೆಯಾಗುತ್ತಿದೆ.
ವ್ಯಾಪಾರ, ವ್ಯವಹಾರಕ್ಕೆ ನಗುವೇ ಮುಖ್ಯ
ಹಣದ ವ್ಯಾಮೋಹಕ್ಕೆ ಬಿದ್ದ ಮಂದಿ ಸದಾ ದುಡಿಮೆಯಲ್ಲಿಯೇ ತೊಡಗಿರುತ್ತಾರೆ. ಕೆಲಸ ಕಾರ್ಯಗಳಲ್ಲಿ ಲೀನವಾಗಿರುವ ಕಾರಣ ನಗುವುದಕ್ಕೂ ಸಮಯ ಇಲ್ಲದಾಗಿದೆ. ಒತ್ತಡ, ಆತಂಕ, ಕಳವಳ, ಪೈಪೋಟಿಗಳ ನಡುವೆ ನಗು ತನ್ನಿಂದ ತಾನೇ ದೂರ ಸರಿದು ಬಿಟ್ಟಿದೆ. ಹಣದಿಂದಲೇ ಎಲ್ಲವನ್ನೂ ಅಳೆಯುವ ಕೆಟ್ಟ ಸಂಸ್ಕೃತಿಯಿಂದಾಗಿ ನಕ್ಕು ಮಾತನಾಡಿಸುವ ಸಂಪ್ರದಾಯ ದೂರವಾಗಿದ್ದು, ನಗು ಸಹ ವ್ಯವಹಾರಿಕ ಎಂಬಂತೆ ಭಾಸವಾಗ ತೊಡಗಿದೆ. ಇವತ್ತಿಗೂ ಅಷ್ಟೆ. ನಗುವಿನಿಂದ ನಮಗಿರುವ ಉಪಯೋಗದ ಬಗ್ಗೆ ಬಹಳಷ್ಟು ಮಂದಿ ತಿಳಿದೇ ಇಲ್ಲ. ಹಾಗಾಗಿ ಅವರು ಒಂದಲ್ಲ ಒಂದು ರೀತಿಯಲ್ಲಿ ಸೋಲುತ್ತಿದ್ದಾರೆ. ವ್ಯಾಪಾರ, ವ್ಯವಹಾರದಲ್ಲಿ ತೊಡಗಿರುವವರಿಗೆ 'ನಗುವೂ' ಒಂದು ಬಂಡವಾಳ ಎಂಬುದನ್ನು ಮರೆಯುತ್ತಿದ್ದಾರೆ.

ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ವ್ಯಾಪಾರ ಆರಂಭಿಸಿದ್ದೀರಿ ಅಂದುಕೊಳ್ಳಿ. ನಿಮ್ಮಲ್ಲಿಗೆ ಬರುವ ಗ್ರಾಹಕರೊಂದಿಗೆ ನಗು ಮೊಗದಿಂದ ಮಾತನಾಡದೆ ಹೋದರೆ ಗ್ರಾಹಕರು ಖಂಡಿತಾ ಮತ್ತೊಮ್ಮೆ ನಿಮ್ಮ ಬಳಿಗೆ ಬರಲಾರರು. ಹಾಗಾದರೆ ನಗುವಿನ ಮಹತ್ವವೇನು ಎಂಬುದು ಗೊತ್ತಾಯಿತಲ್ಲವೆ? ಆರೋಗ್ಯದ ದೃಷ್ಠಿಯಿಂದಲೂ ನಗು ಸಾಕಷ್ಟು ಉಪಯೋಗಕ್ಕೆ ಬರುತ್ತದೆ. ಶರೀರದಲ್ಲಿರುವ ಎಂಡಾರ್ಫಿನ್ಸ್ ಎಂಬ ರಾಸಾಯನಿಕ ಕಣಗಳು ನಗುವುದರಿಂದ ಅಧಿಕವಾಗಿ ಬಿಡುಗಡೆ ಹೊಂದುತ್ತದೆ. ಈ ರಾಸಾಯನಿಕ ಶರೀರದಲ್ಲಿರುವ ನೋವುಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ. ಎಂಡಾರ್ಫಿನ್ಸ್ ರಾಸಾಯನಿಕಕ್ಕೆ ಮಾಂಸ ಖಂಡಗಳ, ಕೀಲು, ತಲೆ ನೋವನ್ನು ಕಡಿಮೆ ಮಾಡುವ ಶಕ್ತಿಯೂ ಇದಕ್ಕಿದೆ.
ನಗುಮರೆತು ಬದುಕೋದರಲ್ಲಿ ಏನಿದೆ ಮಜಾ?
ನಿದ್ರಾಹೀನತೆಯಿಂದ ಬಳಲುವವರು ನಿದ್ದೆ ಮಾತ್ರೆಗೆ ಮಾರು ಹೋಗದೆ, ನಗುವಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದೇ ಆದರೆ ನಿದ್ದೆ ತನ್ನಿಂದ ತಾನಾಗಿಯೇ ಬರುತ್ತದೆ. ರಕ್ತದೊತ್ತಡ, ಹೃದಯಕ್ಕೆ ಸಂಬಂಧಿಸಿದ ರೋಗಗಳು ಒತ್ತಡದಿಂದ ಬರುತ್ತವೆ. ನಗುವುದರಿಂದ ದೇಹದಲ್ಲಿನ ರಕ್ತನಾಳಗಳಲ್ಲಿ ರಕ್ತ ಸಂಚಾರ ಅಧಿಕವಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ.
ಖಿನ್ನತೆ, ಒತ್ತಡ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಹೀನಗೊಳಿಸುತ್ತದೆ ಎಂಬುದು 'ಸೈಕೋನ್ಯೂರೋ ಇಮ್ಯೂನಾಲಜಿಸ್ಟ್'ಗಳ ಪರಿಶೋಧನೆಗಳಲ್ಲಿ ಬೆಳಕಿಗೆ ಬಂದಿದೆ. ನಗುವುದರಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿ, ನಮ್ಮ ಶರೀರದೊಳಗೆ ಪ್ರವೇಶಿಸಿ ರೋಗ ಹರಡುವ ಬ್ಯಾಕ್ಟಿರಿಯಾಗಳನ್ನು ಸಮರ್ಥವಾಗಿ ನಾಶಮಾಡುತ್ತದೆ. ನಗುವಿನಿಂದ ಇಷ್ಟೆಲ್ಲ ಉಪಯೋಗವಿರುವಾಗ ನಗುಮರೆತು ಬದುಕೋದರಲ್ಲಿ ಏನಿದೆ ಮಜಾ? ನಮ್ಮನ್ನು ನಾವೇ ಕೇಳಿಕೊಳ್ಳಬೇಕಾಗಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications