Namma Metro; ಹಳದಿ ಮಾರ್ಗ ಜೂನ್‌ಗೆ ಪೂರ್ಣ, ನಿಲ್ದಾಣಗಳು
ನಮ್ಮ ಮೆಟ್ರೋದ ಆರ್. ವಿ. ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ ಕಾಮಗಾರಿ ಬಹುತೇಕ ಮುಗಿದಿದೆ. ಈ ಮಾರ್ಗ ಜೂನ್‌ನಲ್ಲಿ ಸಂಚಾರಕ್ಕೆ ಮುಕ್ತವಾಗಲಿದ್ದು, 16 ನಿಲ್ದಾಣಗಳನ್ನು ಒಳಗೊಂಡಿದೆ.
ಬೆಂಗಳೂರು ನಗರದ ಜನರ ಸಂಚಾರದ ಜೀವನಾಡಿ ಬಿಎಂಟಿಸ್ ಬಸ್ ಆಗಿತ್ತು. ಆದರೆ ಈಗ ನಮ್ಮ ಮೆಟ್ರೋ ಜನರನ್ನು ಆಕರ್ಷಿಸುತ್ತಿದೆ. ಸುಮಾರು 4 ಲಕ್ಷಕ್ಕೂ ಅಧಿಕ ಜನರು ಪ್ರತಿ ದಿನ ಮೆಟ್ರೋ ರೈಲಿನಲ್ಲಿ ಸಂಚಾರ ನಡೆಸುತ್ತಿದ್ದಾರೆ.
2023 ಬೆಂಗಳೂರು ನಗರದ ಪಾಲಿಗೆ ಮಹತ್ವ ವರ್ಷವಾಗಿದೆ. ನಗರದ ನಮ್ಮ ಮೆಟ್ರೋ ಜಾಲಕ್ಕೆ ಒಟ್ಟು 30.09 ಕಿ. ಮೀ. ಮಾರ್ಗ ಮತ್ತೆ ಸೇರ್ಪಡೆಯಾಗುತ್ತಿದೆ. ಈ ಮೂಲಕ ನಗರದ ಸಂಚಾರ ದಟ್ಟಣೆ ಮತ್ತಷ್ಟು ಕಡಿಮೆ ಮಾಡುವತ್ತ ಬಿಎಂಆರ್‌ಸಿಎಲ್ ಹೆಜ್ಜೆ ಹಾಕಿದೆ.
ಈ ವರ್ಷ ಒಟ್ಟು ಮೂರು ಮಾರ್ಗಗಳು ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿವೆ. ಅದರಲ್ಲಿಯೂ ಲಕ್ಷಾಂತರ ಐಟಿ ಉದ್ಯೋಗಿಗಳಿಗೆ ಸಹಾಯಕವಾಗುವ ವೈಟ್‌ಫೀಲ್ಡ್ ಮಾರ್ಗ ಮಾರ್ಚ್‌ನಲ್ಲಿ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ. ಈ ಮಾರ್ಗದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ರೈಲುಗಳ ಪ್ರಾಯೋಗಿಕ ಸಂಚಾರವೂ ಆರಂಭವಾಗಿದೆ.
2023ರಲ್ಲಿ ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್ ಸೇರಿ ಎರಡು ಟೆಕ್ ಹಬ್‌ಗಳನ್ನು ಮೆಟ್ರೋ ಸಂಪರ್ಕಿಸಲಿದೆ. ಸದ್ಯ ನಗರದಲ್ಲಿ 56 ಕಿ. ಮೀ. ಮಾರ್ಗದಲ್ಲಿ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿವೆ. ಜನರಿಂದಲೂ ಮೆಟ್ರೋ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ನಗರದಲ್ಲಿನ ಸಂಚಾರದ ಅವಧಿಯೂ ಕಡಿತಗೊಳ್ಳುತ್ತಿದೆ.

ಜೂನ್‌ನಲ್ಲಿ ಹಳದಿ ಮಾರ್ಗ ಪೂರ್ಣ
ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಕಾಮಗಾರಿಗಳು ಅಂತಿಮ ಹಂತದಲ್ಲಿವೆ. 18.82 ಕಿ. ಮೀ. ಉದ್ದವನ್ನು ಈ ಕಾರಿಡಾರ್ ಒಳಗೊಂಡಿದೆ. ಇದರಲ್ಲಿ ಒಟ್ಟು 16 ನಿಲ್ದಾಣಗಳಿವೆ. 2023ರಲ್ಲಿ ನಗರದಲ್ಲಿ ಸಂಚಾರಕ್ಕೆ ಮುಕ್ತವಾಗುವ ನಮ್ಮ ಮೆಟ್ರೋ ಮಾರ್ಗವಿದಾಗಿದೆ.
ಒಟ್ಟು ಮೂರು ಪ್ಯಾಕೇಜ್‌ಗಳಲ್ಲಿ ಇದರ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ಪೂರ್ಣಗೊಂಡಿದೆ. ಬಿಎಂಆರ್‌ಸಿಎಲ್ ಅಧಿಕಾರಿಗಳ ನಿರೀಕ್ಷೆಯಂತೆ ಜೂನ್‌ನಲ್ಲಿ ಈ ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಬೇಕಿದೆ.

ಹಳದಿ ಮಾರ್ಗ ಎಂದು ಏಕೆ ಹೆಸರು?
ನಮ್ಮ ಮೆಟ್ರೋದ ಹಳದಿ ಮಾರ್ಗ ಹಲವು ವಿಶೇಷತೆಗಳನ್ನು ಹೊಂದಿದೆ. ಈ ಮಾರ್ಗದಲ್ಲಿನ 16 ನಿಲ್ದಾಣಗಳು ಹಳದಿ ಮೇಲ್ಛಾವಣಿಯನ್ನು ಹೊಂದಿದೆ. ಆರ್. ವಿ. ರಸ್ತೆಯಿಂದ ಆರಂಭವಾಗುವ ಮಾರ್ಗದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ವೈರಲ್ ಆಗಿವೆ.
ಈ ಮಾರ್ಗದಲ್ಲಿ ಎಲೆಕ್ಟ್ರಾನಿಕ್ ಸಿಟಿ ನಿಲ್ದಾಣ ಮಾತ್ರ ವಿಶೇಷವಾಗಿದೆ. ನಿಲ್ದಾಣ ವಿಶೇಷ ವಿನ್ಯಾಸದಿಂದ ಕೂಡಿದ್ದು, ಇನ್ಫೋಸಿಸ್ ಸಂಸ್ಥೆ ನಿಲ್ದಾಣವನ್ನು ಅಭಿವೃದ್ಧಿಗೊಳಿಸಿದೆ. ಕಾರ್ಪೊರೇಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಬಿಎಂಆರ್‌ಸಿಎಲ್ ನಿಲ್ದಾಣದ ವಿನ್ಯಾಸ ಅಂತಿಮಗೊಳಿಸಿದೆ.

ಡಬಲ್ ಡೆಕ್ಕರ್ ಎಲಿವೇಟೆಡ್ ಕಾರಿಡಾರ್
ಹಳದಿ ಮಾರ್ಗದ ಇನ್ನೊಂದು ವಿಶೇಷ ಎಂದರೆ ಮೆಟ್ರೋ ರೈಲುಗಳ ಜೊತೆ ಉಳಿದ ವಾಹನಗಳು ಸಂಚಾರ ನಡೆಸಲು ಅನುಕೂಲವಾಗುವ ನಗರ ಮೊದಲ ಡಬಲ್ ಡೆಕ್ಕರ್ ಎಲಿವೇಟೆಡ್ ಕಾರಿಡಾರ್. ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ತನಕ ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗುತ್ತಿದೆ. ಜಯದೇವ ವೃತ್ತದಲ್ಲಿ ಮಾರ್ಗ ಬದಲಾವಣೆ ಮಾಡುವ ಪ್ರಮುಖ ಜಂಕ್ಷನ್ ನಿಲ್ದಾಣ ನಿರ್ಮಾಣ ವಾಗುತ್ತಿದೆ. 5 ಹಂತದ ಸಾರಿಗೆ ವ್ಯವಸ್ಥೆಯನ್ನು ಇದು ಒಳಗೊಂಡಿದ್ದು, ನೆಲದಿಂದ 29 ಮೀಟರ್ ಎತ್ತರದಲ್ಲಿದೆ.

ಹಳದಿ ಮಾರ್ಗದ ನಿಲ್ದಾಣಗಳು
ಹಳದಿ ಮಾರ್ಗದಲ್ಲಿ ಕಾಮಗಾರಿಗಳು ಬಹುತೇಕ ಪೂರ್ಣಗೊಳ್ಳುತ್ತಾ ಬಂದಿದೆ. ಹಳಿ ಜೋಡಣೆ ಕಾರ್ಯ ಪೂರ್ಣಗೊಂಡರೆ ಬಿಎಂಆರ್‌ಸಿಎಲ್ ರೈಲುಗಳ ಪ್ರಾಯೋಗಿಕ ಸಂಚಾರ ಆರಂಭ ಮಾಡಲಿದೆ. ಬಳಿಕ ವಾಣಿಜ್ಯ ಸಂಚಾರದ ದಿನಾಂಕ ನಿಗದಿ ಮಾಡಲಾಗುತ್ತದೆ.
ಈ ಮಾರ್ಗದಲ್ಲಿ ಆರ್. ವಿ. ರಸ್ತೆ, ಬಿಟಿಎಂ ಬಡಾವಣೆ, ಸಿಲ್ಕ್ ಬೋರ್ಡ್, ಎಚ್‌ಎಸ್‌ಆರ್ ಲೇಔಟ್, ಆಕ್ಸ್‌ಫರ್ಡ್ ಕಾಲೇಜು, ಮುನೇಶ್ವರ ನಗರ, ಚಿಕ್ಕಬೇಗೂರು, ಬಸಾಪುರ ರಸ್ತೆ, ಹೊಸ ರೋಡ್, ಎಲೆಕ್ಟ್ರಾನಿಕ್ ಸಿಟಿ-1, ಎಲೆಕ್ಟ್ರಾನಿಕ್ ಸಿಟಿ-2, ಹುಸ್ಕೂರು ರಸ್ತೆ, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರ ನಿಲ್ದಾಣಗಳಿವೆ.












Click it and Unblock the Notifications