'ಕೈ'ಕೊಟ್ಟ ಮಾಯಾವತಿ... ಕಾಂಗ್ರೆಸ್ ಗೆ ಅಳಿವು-ಉಳಿವಿನ ಸವಾಲು!

ಲಕ್ನೋ, ಅಕ್ಟೋಬರ್ 04: ಅಂದು ಮೇ 23, 2018... ಕರ್ನಾಟಕದ ಶಕ್ತಿಸೌಧದ ಮೇಲೆ ದೇಶದ ಘಟಾನುಘಟಿ ನಾಯಕರು ಕೈ ಕೈ ಹಿಡಿದು ನಿಂತಿದ್ದರು. ಕರ್ನಾಟಕದದ ನೂತನ ಮುಖ್ಯಮಂತ್ರಿಯಾಗಿ ಅಂದು ಎಚ್ ಡಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ್ದು ನಿಜ. ಆದರೆ ಆ ಸಭೆ ಮುಖ್ಯಮಂತ್ರಿಯ ಪ್ರಮಾಣವಚನಕ್ಕಿಂತ, ಮಹಾಮೈತ್ರಿಕೂಟದ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಿದ್ದು ಸತ್ಯ!

ಅದಾಗಿ ಕೆಲವೇ ತಿಂಗಳುಗಳು ಕಳೆದಿವೆ.2019 ರ ಲೋಕಸಭಾ ಚುನಾವಣೆಗಾಗಿ ಮೈತ್ರಿಕೂಟ ರೂಪುಗೊಳ್ಳುವ ಮೊದಲೇ ಮಕಾಡೆ ಮಲಗುವ ಸೂಚನೆಗಳು ಕಾಣಿಸುತ್ತಿವೆ. ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳಲಾರೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಹಿಂದೆ ಸರಿದಿದ್ದು ಸಹ ಇಂಥದೇ ಸೂಚನೆ ನೀಡಿದೆ!

ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಆದ್ಯ ಉದ್ದೇಶವನ್ನು ಹೊತ್ತು ಬಿಜೆಪಿ ವಿರೋಧಿ ಪಕ್ಷಗಳೆಲ್ಲ ಒಂದೆಡೆ ಸೇರಲು ನಿರ್ಧರಿಸಿದ್ದು ನಿಜ. ಆದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನೂ ಮೀರಿ ಒಂದಾಗಿದ್ದ ಪಕ್ಷಗಳು ಇದೀಗ ಟಿಕೆಟ್ ಹಂಚಿಕೆಯ ವಿಷಯದಿಂದಾಗಿ ಒಮ್ಮತಕ್ಕೆ ಬರಲಾಗದ ಸ್ಥಿತಿಗೆ ತಲುಪಿವೆ!

ಮಾಯಾವತಿ 'ಕೈ'ಕೊಟ್ಟಿದ್ದು ಕಾಂಗ್ರೆಸ್ಸಿಗೇ ನಷ್ಟ!

ಮಾಯಾವತಿ 'ಕೈ'ಕೊಟ್ಟಿದ್ದು ಕಾಂಗ್ರೆಸ್ಸಿಗೇ ನಷ್ಟ!

ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಬಿಎಸ್ಪಿಗೆ ಸಾಕಷ್ಟು ಬೆಂಬಲಿಗರಿದ್ದಾರೆ. ಅಕಸ್ಮಾತ್ ಬಿಎಸ್ಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದೇ ಆದಲ್ಲಿ ಅದರಿಂದ ಬಿಎಸ್ಪಿಗಿಂತ ಹೆಚ್ಚು ಲಾಭ ಕಾಂಗ್ರೆಸ್ಸಿಗೆ. ಈ ಎರಡು ಪಕ್ಷಗಳು ಒಂದಾದಲ್ಲಿ ಬಿಜೆಪಿಯನ್ನು ಅಧಿಕಾರದಿದ ದೂರವಿಡುವುದೂ ಕಷ್ಟದ ಮಾತಾಗಲಾರದು. ಆದರೆ ಮೈತ್ರಿ ಮಾಡಿಕೊಳ್ಳಲು ಸಾಧ್ಯವಾಗದೆ ಇದ್ದಲ್ಲಿ ಮತಗಳು ಒಡೆದು ಬಿಜೆಪಿಗೇ ಹೆಚ್ಚು ಲಾಭವಾಗುವುದು ಖಂಡಿತ.

ಕಾಂಗ್ರೆಸ್ಸಿಗೆ ಸವಾಲು!

ಕಾಂಗ್ರೆಸ್ಸಿಗೆ ಸವಾಲು!

ಕಾಂಗ್ರೆಸ್ಸಿಗೆ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಅಥವಾ ಮಾಡಿಕೊಳ್ಳದಿರುವುದು ಅಳಿವು ಮತ್ತು ಉಳಿವಿನ ಪ್ರಶ್ನೆ. ಏಕೆಂದರೆ ಕಾಂಗ್ರೆಸ್ ಈಗಿರುವ ಪರಿಸ್ಥಿತಿಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲದ ಮಾತು. 2014 ರ ಲೋಕಸಭಾ ಚುನಾವಣೆಯಲ್ಲಿ ತೋರಿದ ಕಳಪೆ ಪ್ರದರ್ಶನ ಈಗಾಗಲೇ ಕಾಂಗ್ರೆಸ್ ಅನ್ನು ಕುಗ್ಗಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಡಿಸೆಂಬರ್ ನಲ್ಲಿ ನಡೆಯಲಿರುವ ನಾಲ್ಕು ರಾಜ್ಯಗಳ ಚುನಾವಣೆಯನ್ನು ಕರೆಯಲಾಗುತ್ತಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮುಗ್ಗರಿಸಿದ್ದೇ ಆದಲ್ಲಿ ಏಳು ದಶಕಗಳ ಕಾಲ ಅನಭಿಷಿಕ್ತವಾಗಿ ದೇಶವನ್ನು ಆಳಿದ ಕಾಂಗ್ರೆಸ್ ಅಳಿವಿನತ್ತ ಸಾಗಬೇಕಾಗಬಹುದು. ಆದರೆ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡರೆ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಬಿಎಸ್ಪಿ ಟಿಕೆಟ್ ಹಂಚಿಕೆಯ ವಿಷಯದಲ್ಲಿ ತಕರಾರೆತ್ತಬಹುದು ಎಂಬ ಭಯ ಕಾಂಗ್ರೆಸ್ಸಿನದ್ದು.

ಮಾಯಾವತಿ ಕೈಕೊಟ್ಟಿದ್ದೇಕೆ?

ಮಾಯಾವತಿ ಕೈಕೊಟ್ಟಿದ್ದೇಕೆ?

ಇಷ್ಟು ದಿನ ಕುಚಿಕು ಕುಚಿಕು ಎಂಬಂತಿದ್ದ ಬಿಎಸ್ಪಿ ಮತ್ತು ಕಾಂಗ್ರೆಸ್ ನಡುವೆ ವೈಮನಸ್ಯ ಮೂಡಿದ್ದಕ್ಕೆ ಕಾರಣ ಟಿಕೆಟ್ ಹಂಚಿಕೆ ವಿಚಾರ. ಈ ಎರಡು ರಾಜ್ಯಗಳಲ್ಲಿ ಬಿಎಸ್ಪಿ ತಾನು ಬೇಡಿಕೆ ಇಟ್ಟಷ್ಟು ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕೆಂಬ ಷರತ್ತು ವಿಧಿಸಿತ್ತು. ಆದರೆ ಇಷ್ಟೆಲ್ಲ ಉದಾರವಾಗುವುದಕ್ಕೆ ಕಾಂಗ್ರೆಸ್ ಸಿದ್ಧವಿಲ್ಲ. ಮಧ್ಯಪ್ರದೇಶ ವಿಧಾನಸಭೆಯ 230 ಕ್ಷೇತ್ರಗಳಲ್ಲಿ 50 ಕ್ಷೇತ್ರಗಳಲ್ಲಿ ಬಿಎಸ್ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮಾಯಾವತಿ ಬಯಸಿದ್ದರು. ಆದರೆ ಇದಕ್ಕೆ ಕಾಂಗ್ರೆಸ್ ಸಿದ್ಧವಿರಲಿಲ್ಲ.

ರಾಹುಲ್ ನಾಯಕತ್ವದ ಬಗ್ಗೆ ಬೇಸರ?

ರಾಹುಲ್ ನಾಯಕತ್ವದ ಬಗ್ಗೆ ಬೇಸರ?

ಕೆಲವು ಮೂಲಗಳ ಪ್ರಕಾರ ಮಾಯಾವತಿ ಅವರಿಗೆ ರಾಹುಲ್ ಗಾಂಧಿ ನಾಯಕತ್ವದ ಬಗ್ಗೆ ಬೇಸರವಿದೆ. ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಹಲವು ವಿಧಾನಸಭಾ ಚುನಾವಣೆಗಳಲ್ಲಿ ಸೋತಿರುವುದರಿಂದ ಇದು ಬಿಎಸ್ಪಿ ಸಾಧನೆಯ ಮೇಲೂ ಪರಿಣಾಮ ಬೀರಬಹುದು ಎಂಬುದು ಅವರ ಆತಂಕ. ಸೀಟು ಹಂಚಿಕೆಯ ವಿಷಯದಲ್ಲಿ ಉಂಟಾದ ಭಿನ್ನಾಭಿಪ್ರಾಯ ಮೈತ್ರಿಕೂಟದಿಂದ ಹೊರಬರುವುದಕ್ಕೆ ಒಂದು ನೆಪವಷ್ಟೇ.

ಕಾಂಗ್ರೆಸ್ ನದ್ದು ದುರಹಂಕಾರ!

ಕಾಂಗ್ರೆಸ್ ನದ್ದು ದುರಹಂಕಾರ!

ಕಾಂಗ್ರೆಸ್ ಗೆ ಬೆಂಬಲ ನೀಡದೆ ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸುತ್ತಿದ್ದಂತೆಯೇ ಕಾಂಗ್ರೆಸ್ ವಿರುದ್ಧ ಮಾಯಾವತಿ ಹರಿಹಾಯುವುದಕ್ಕೆ ಆರಂಭಿಸಿದ್ದಾರೆ. ಕಾಂಗ್ರೆಸ್ಸಿನದ್ದು ದುರಹಂಕಾರ. ಅಷ್ಟು ಚುನಾವಣೆಗಳಲ್ಲಿ ಸೋತು ಸುಣ್ಣವಾದರೂ ಕಾಂಗ್ರೆಸ್ ನ ದುರಹಂಕಾರ ಮಾತ್ರ ಇನ್ನೂ ಕಡಿಮೆಯಾಗಿಲ್ಲ ಎಂಬುದು ಮಾಯಾವತಿ ಅಭಿಪ್ರಾಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+