ಅಂಗವಿಕಲರು: ನೋವು, ಹೋರಾಟ ಮತ್ತು ಪ್ರೇರಣಾ ಟ್ರಸ್ಟ್‌ನ ಕನಸು..
ಅಂಗವಿಕಲರು, ಅಂಗವಿಕಲತೆ... ದೇಹದ ಯಾವುದೋ ಒಂದು ಅಥವಾ ಬಹು ಅಂಗಗಳು ಊನ ಆಗಿರುತ್ತವೆ. ನಮ್ಮದು ಹಾಗಂತ ವಿಶೇಷಚೇತನ, ವಿಕಲಚೇತನ ಎಂದು ನಮ್ಮನ್ನ ಕರೆಯುವುದಾದರೆ ನಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿದು ಹೋಗುತ್ತವೆಯೇ ? ಖಂಡಿತ ಇಲ್ಲ. ನಾವು ಅಂಗವಿಕಲರು ಆಗಿದ್ದರಿಂದ ನಮ್ಮ ಬದುಕು - ಸರ್ಕಾರ, ಸರ್ಕಾರಿ ಕಚೇರಿಗಳು, ಅಧಿಕಾರಿಗಳು ಮತ್ತು ಸಮಾಜವನ್ನು ಹೆಚ್ಚು ಅವಲಂಬಿಸಿರುತ್ತೆ. ಆದರೆ, ದುರಾದೃಷ್ಟ ಏನೆಂದರೆ ನಾವು ಅಲ್ಲೆಲ್ಲ ಹೋದಾಗ "ಅಯ್ಯೋ ನೀವ್ಯಾಕೆ ಬಂದ್ರಪ್ಪ, ನೀವ್ ಮೊದ್ಲೆ ಕೈ ಕಾಲು ಆಗಲ್ಲ ಅದ್ರಲ್ಲಿ ಇಲ್ಲಿತನಕ ಯಾಕ್ ಬರ್ತೀರಿ!? ಅಯ್ಯೋ ಪಾಪ, ಅಂದಾಗ ನಮ್ಮ ಉತ್ಸಾಹದ ಕೊಲೆ ಆಗೋಗುತ್ತೆ. ನಾವು ಎಲ್ಲಿಯಾದರೂ ಹೊರಡುವ ಮುನ್ನ ನೂರಾರು ಬಾರಿ ಅವರಿವರ ಮಾತನ್ನ ಮೆಲುಕು ಹಾಕುತ್ತಾ ಹೋಗೋದು ಬೇಡ್ವ ಅಂತ ಯೋಚಿಸ್ತಿವಿ. ನನಗಂತೂ ಕೆಲವು ಅಧಿಕಾರಿಗಳು "ನಾನೇನಾದರೂ ನಿನ್ನ ತರ ಇರ್ತಿದ್ರೆ ಮನೆಯಲ್ಲೇ ಆರಾಮಾಗಿ ಇರ್ತಿದ್ದೆ" ಈ ಆರಾಮು ಹರಾಮು ಅಂತ ಅವರಿಗೆ ಹೇಗೆ ಹೇಳೋದು!
2011ರ ಗಣತಿಯ ಪ್ರಕಾರ, ಕರ್ನಾಟಕದಲ್ಲಿ ಸುಮಾರು 14 ಲಕ್ಷ ಅಂಗವಿಕಲರು ಇದ್ದೇವೆ. ಸದ್ಯಕ್ಕೆ ನಮ್ಮ ಪ್ರೇರಣಾ ಟ್ರಸ್ಟ್ ತುಮಕೂರು ಕೇಂದ್ರಿತವಾಗಿ ಕೆಲ್ಸ ಮಾಡ್ತಿದೆ. ಇಲ್ಲಿ 46 ಸಾವಿರ ಜನಸಂಖ್ಯೆ ಇದೆ ನಮ್ಮವರದ್ದು. ಇಷ್ಟೇ ಪ್ರಮಾಣದ ಕುಟುಂಬಗಳು ಅವಲಂಬಿತ, ನಾವು ಫ್ಯಾಮಿಲಿ ಮೇಲೋ ಇಲ್ಲ ಫ್ಯಾಮಿಲಿ ನಮ್ಮ ಮೇಲೋ ಒಟ್ಟಿನಲ್ಲಿ ನಮ್ಮ ವರ್ಗ ಏನಿದೆ ಸಣ್ಣ ಪುಟ್ಟ ಬೆನಿಫಿಟ್ ಪಡೆದು ಹೇಗೋ 'ಜೀವನ' ಸಾಗ್ತಿದೆ. ಸಾಧನೆ ಯಾವ ರಂಗದಲ್ಲಿ ಮಾಡೋದು ಅನ್ನೋದು ಅಯೋಮಯ ಸ್ಥಿತಿ.

ಯಾರೋ ಇಂತಿಂಥ ಟೆಕ್ನಾಲಜಿ ಕಂಡುಹಿಡಿದರು ಇನ್ಯಾರೋ ಕಂಟೆಂಟ್ ಕ್ರೀಯೆಟರಿನಲ್ಲಿ ಫೇಮಸ್ ಆಗಿದ್ದಾರೆ. ಮತ್ತೆಲ್ಲೋ ಸಾಮಾಜಿಕ ಜೀವನ ಬದಲಾವಣೆಗೆ ಕಾರಣರಾದರು! ಉಫ್ ಇಲ್ಲೆಲ್ಲಾ ಹುಡುಕಿ ನೋಡಿ ನಾವಿಲ್ಲ, ಬಹಳಷ್ಟು ಬೇರೆ ದೇಶದಲ್ಲಿ ಅಂಗವಿಕಲ ಸಾಧಕರನ್ನು ನೀವೆಲ್ಲ ನೋಡಿಯೇ ಇರ್ತೀರಿ. ಇಂತಹ ಪರಿಸ್ಥಿತಿಯಲ್ಲಿ ನೀನ್ಯಾಕೆ ಬಂದೆ, ನಿಂಗೆ ಕೈ ಆಗಲ್ಲ ಕಾಲ್ ಆಗಲ್ಲ ಯಾಕ್ರೀ ಬರ್ತೀರಿ? ಪಾಪ ಎಷ್ಟು ಓಡಾಡ್ತಿ ಕಷ್ಟ ಅಲ್ವ ಅನ್ನುವವರ ಸಾಲು ಸಾಲುಗಳೇ ಇದೆ. ಅದರಲ್ಲಿ ಈ ಎಕ್ಸ್ಟ್ರಾ ಫಿಟ್ಟಿಂಗ್ ಬೇರೆ 'ದಿವ್ಯಾಂಗ' ಅಂತೇಳಿ ಹೊಸ ಪದ ಬೇರೆ ಸೃಷ್ಟಿ ಮಾಡಿದ್ದಾರೆ.
ಓಕೆ ಆಗ್ಲಿ ನಿಮ್ಮ ಪ್ರೀತಿ ಒಪ್ಪಿಕೊಳ್ಳೋಣ. ದಿನ ನಿತ್ಯ ಬಳಸುವ ಸಾರಿಗೆ ವ್ಯವಸ್ಥೆಯಲ್ಲಿ ನಮಗೆ ಅನುಕೂಲಕರವಾಗಿ ಇದ್ಯಾ? ಖಂಡಿತ ಇಲ್ಲ ಅನ್ನೋದು ನಿಮಗೂ ಗೊತ್ತು. ಹೋಗ್ಲಿ ನಿಮ್ಗೆ ವಯಸ್ಸಾದಾಗ ನೀವು ಒಂದು ರೀತಿಯ ಅಂಗವಿಕಲರೇ ಅಲ್ವ, ಅಲ್ಲ ಅಂದುಕೊಂಡರೆ ವೃದ್ಧಾಶ್ರಮಗಳು ಯಾಕಿದ್ದಾವೆ ಯೋಚಿಸಿ. ಸೋಮಾರಿ ಕಟ್ಟೆಗಳಲ್ಲಿ, ವಾಕಿಂಗ್ ಹೋಗುವ ಜಾಗಗಳಲ್ಲಿ ಪಾರ್ಕ್‌ಗಳಲ್ಲಿ ವೃದ್ಧರು ಹೆಚ್ಚಾಗಿ ಕಾಣುತ್ತಾರಲ್ಲವೇ ಈ ಸಮಸ್ಯೆ ಯಾಕೆ ಸೃಷ್ಟಿ ಆಗ್ತಿದೆ ಅಂತ ಯೋಚನೇ ಮಾಡಿದ್ದೀರ? ಇದು ಸಮಸ್ಯೆ ಅಂತಂದುಕೊಂಡರೆ ಮಾನಸಿಕ ಅಂಗವಿಕಲತೆಯೂ ಕ್ಷಣದಲಿ ದೂರಾಗ್ತದೆ ಅನ್ಸಲ್ವ!
ನಾನು 10ನೇ ತರಗತಿಗೆ ಬಂದಿದ್ದರು ಸಹ ಮನೆಯ ಹೊಸ್ತಿಲು ದಾಟಿ ಹೊರಗೆ ಕುಳಿತುಕೊಳ್ತಿರಲಿಲ್ಲ ಅಷ್ಟು ಮುಜುಗರ ಆಗ್ತಿತ್ತು. ನಡೆದಾಡಿಕೊಂಡು ಹೋಗುವವರ ಮಧ್ಯೆ ನಾವು ಹೇಗಪ್ಪ ತೆವಲಿಕೊಂಡು ಹೋಗೋದು? ಅತೀವ ಹಿಂಸೆ ಆಗ್ತಿತ್ತು. ಆಗುತ್ತೆ ಈಗಲೂ ಬಹು ನಮ್ಮ ಅಂಗವಿಕಲ ವ್ಯಕ್ತಿಗಳಿಗೆ. ನಾವು ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ (ರಿ) ಪ್ರಾರಂಭ ಮಾಡಿದ್ದೆ ನನ್ನಂತಹ ಅಂಗವಿಕಲ ಮಕ್ಕಳಿಗೆ ಮಾನಸಿಕ ಧೈರ್ಯ ತುಂಬಲು, ಈ ಸಮಾಜದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ 'ವಿಕಲ' ರೇ ಇದನ್ನು ಅರ್ಥಮಾಡಿಕೊಂಡರೆ ಇಡೀ ಸಮಾಜವೇ ಅಂಗವೈಕಲ್ಯರಿಗೆ ಇನ್ನು ಹೆಚ್ಚಿನ ಸವಲತ್ತು ಧೈರ್ಯ ಸ್ಥೈರ್ಯ ದೊರಕಿಸಿಕೊಡಲು ನಿಲ್ಲುತ್ತೆ.
ನಮ್ಮ #preranatrust 21 ರೀತಿಯ ಅಂಗವಿಕಲರಿಗಾಗಿ ಒಂದು ಸುಸಜ್ಜಿತವಾದ ಟ್ರೈನಿಂಗ್ ಸೆಂಟರ್ ಕಟ್ಟುವ ಕನಸು ಕಂಡಿದೆ. ಅದಕ್ಕಾಗಿ ನಾವು ಎಡೆಬಿಡದೆ ಕೆಲಸ ಸಹ ಮಾಡುತ್ತಿದ್ದೇವೆ. ತುಮಕೂರಿನ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಒಂದು ಬಾಡಿಗೆ ಕಟ್ಟಡದಲ್ಲಿ ಅಂಗವಿಕಲರಿಗಾಗಿ ಟ್ರೈನಿಂಗ್ ಸೆಂಟರ್ ಪ್ರಾರಂಭ ಮಾಡಿದೀವಿ. ಜೊತೆಗೆ 25 ಜನ ವಯೋವೃದ್ಧರಿಗೆ ಪ್ರೇರಣಾ ನಿರಾಶ್ರಿತರ ಧಾಮವು ಆಗಿದೆ. ಬಹಳ ವರ್ಷಗಳಿಂದ ಅಂಧರಿಗೆ ಚೆಸ್ ಟೂರ್ನಮೆಂಟ್ ಆಯೋಜನೆ ಮಾಡಿ ನಗದು ಬಹುಮಾನ ಕೊಡುತ್ತಿದ್ದೇವೆ. ಪ್ರತಿ ತಿಂಗಳು ಬಡ ಅಂಗವಿಕಲ ಕುಟುಂಬಗಳಿಗೆ ಉಚಿತ ಫುಡ್ ಕಿಟ್ ವಿತರಣೆ ಮಾಡ್ತಿದ್ದೇವೆ. ಸರ್ಕಾರಗಳು ತನ್ನ ಸ್ಥಳೀಯ ಕಚೇರಿಗಳಲ್ಲಿ ನಮ್ಮ ಅಂಗವಿಕಲ ವ್ಯಕ್ತಿಗಳಿಗೆ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸಕ್ಕೆ ಸೇರಿಸಿಕೊಳ್ಳಲು ಮನವಿಗಳನ್ನು ಮಾಡುತ್ತಿದ್ದೇವೆ.
ಇದಕ್ಕಾಗಿ ಬೇಕಾದ ಕೌಶಲ್ಯ ತರಬೇತಿ ಕಾರ್ಯಕ್ರಮ ನಮ್ಮ ಪ್ರೇರಣಾದ ವತಿಯಿಂದಲೇ ಕೊಡುವ ಬೃಹತ್ ಯೋಜನೆ ಹಾಕಿಕೊಂಡಿದ್ದೇವೆ. ನಿಮ್ಮ ಸಹಾಯ ಮತ್ತು ಬೆಂಬಲ ಇದ್ದರೆ ನಾವು ಮತ್ತಷ್ಟು ವೇಗವಾಗಿ ನಮ್ಮ ಅಂಗವಿಕಲರಿಗೆ ತಲುಪಬಹುದು. Prerana disabled welfare trust ಎಂದು ಗೂಗಲ್ ಸರ್ಚ್ ಮಾಡಿದರೆ ನಮ್ಮ ಎಲ್ಲಾ ಸೋಷಿಯಲ್ ಮೀಡಿಯಾ ಪೇಜುಗಳು (ಫೇಸ್‌ಬುಕ್ ಪೇಜ್, ಇನ್ಸ್ಟಾಗ್ರಾಂ, ಲಿಂಕ್ಡ್‌ಇನ್, ವೆಬ್‌ಸೈಟ್ X ಟ್ವಿಟ್ಟರ್) ಸಿಗುತ್ತವೆ. ನಮ್ಮ ವೆಬ್‌ಸೈಟ್ ಸಹ ಇದೆ.
ಎಸ್.ಬಾಬು, ಮನಸೇ ಕಾರ್ಯದರ್ಶಿ ಪ್ರೇರಣಾ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ (ರಿ) ಮೊಬೈಲ್: 8660178143 / 8217593354 / 7483835728












Click it and Unblock the Notifications