Karnataka Budget 2023; ತುಮಕೂರು ಜಿಲ್ಲೆಯ ನಿರೀಕ್ಷೆಗಳು

ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆಬ್ರವರಿ 17ರಂದು 2023-24ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕದ ತುಮಕೂರು ಜಿಲ್ಲೆಯ ನಿರೀಕ್ಷೆಗಳೇನು?.

ಕರ್ನಾಟಕದ ರಾಜಧಾನಿ ಬೆಂಗಳೂರು ನಗರಕ್ಕೆ ಹತ್ತಿರವಿರುವ, ಬೆಂಗಳೂರು-ಪುಣೆ ಹೆದ್ದಾರಿಯನ್ನು ತನ್ನ ಒಡಲಿಲ್ಲಿ ಇಟ್ಟುಕೊಂಡಿರುವ, ಪಕ್ಕದ ಆಂಧ್ರ ಪ್ರದೇಶ ರಾಜ್ಯದ ಜೊತೆ ಗಡಿ ಹಂಚಿಕೊಂಡಿರುವ ಅಭಿವೃದ್ಧಿಯಾಗಲು ಇನ್ನೂ ಸಾಕಷ್ಟು ಅವಕಾಶವಿರುವ ಜಿಲ್ಲೆ ತುಮಕೂರು.

ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿರುವ ಸಿದ್ದಗಂಗಾ ಮಠ, ತೆಂಗು ಬೆಳೆಗೆ ಪ್ರಸಿದ್ಧವಾಗಿರುವ ತಿಪಟೂರು, ಕರ್ನಾಟಕದ ಹೆಮ್ಮೆಯ ಪಾವಗಡ ಸೌರ ಪಾರ್ಕ್, ಫುಡ್ ಪಾರ್ಕ್, ಹೆಚ್‌ಎಎಲ್‌ನ ಹೆಲಿಕಾಪ್ಟರ್ ಉತ್ಪಾದನಾ ಘಟಕ ಎಲ್ಲವೂ ಇರುವುದು ತುಮಕೂರಿನಲ್ಲಿ. ಕೃಷಿ ಮತ್ತು ಕೈಗಾರಿಕೆ ಜಿಲ್ಲೆಯ ಜನರ ಜೀವನೋಪಾಯದ ದಾರಿಯಾಗಿವೆ.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಕುಣಿಗಲ್, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ, ಸಿರಾ, ಪಾವಗಡ ಮತ್ತು ಮಧುಗಿರಿ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಜೆ. ಸಿ. ಮಾಧುಸ್ವಾಮಿ (ಚಿಕ್ಕನಾಯಕನಹಳ್ಳಿ), ಬಿ. ಸಿ. ನಾಗೇಶ್ (ತಿಪಟೂರು) ಸಚಿವರಾಗಿದ್ದಾರೆ.

Karnataka Budget Expectations Of Tumakuru District

ರಸ್ತೆ, ರೈಲು ಮೂಲಕ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ. ಒಂದು ಕಡೆ ಬೆಂಗಳೂರಿನಿಂದ ಶಿವಮೊಗ್ಗ, ಉತ್ತರ ಕರ್ನಾಟಕ ಭಾಗಕ್ಕೆ ಹೋಗುವ ವಾಹನಗಳು ತುಮಕೂರು ಮೂಲಕ ಸಾಗಬೇಕು. ಮತ್ತೊಂದು ಕಡೆ ಕರಾವಳಿ ಭಾಗಕ್ಕೆ ಹೋಗುವ ವಾಹನಗಳು ಜಿಲ್ಲೆಯ ಕುಣಿಗಲ್ ಮೂಲಕ ಓಡಾಟ ನಡೆಸುತ್ತವೆ.

ಫೆಬ್ರವರಿ ಮೊದಲ ವಾರದಲ್ಲಿ ತುಮಕೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಹೆಚ್‌ಎಎಲ್ ಹೆಲಿಕಾಪ್ಟರ್ ಕಾರ್ಖಾನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ತುಮಕೂರು ಕೈಗಾರಿಕಾ ಟೌನ್‌ಶಿಪ್ ಮತ್ತು ತುಮಕೂರಿನ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ಎರಡು ಜಲ ಜೀವನ್ ಮಿಷನ್ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ.

ತುಮಕೂರು ಜಿಲ್ಲೆ 11 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಇದರ ಜೊತೆಗೆ ನೂರಾರು ಸಮಸ್ಯೆಗಳು ಸಹ ಜಿಲ್ಲೆಯಲ್ಲಿವೆ. ರಾಜಧಾನಿಗೆ ಹತ್ತಿರವಿರುವ ತುಮಕೂರು ಇನ್ನಷ್ಟು ಅಭಿವೃದ್ಧಿಯಾಗಬೇಕು, ಕೈಗಾರಿಕೆಗಳು ಬರಬೇಕು, ಜಿಲ್ಲೆಯ ಯುವ ಜನರಿಗೆ ಸ್ಥಳೀಯ ಮಟ್ಟದಲ್ಲಿಯೇ ಉದ್ಯೋಗ ಸಿಗಬೇಕು. ಪ್ರಮುಖವಾಗಿ ಶಾಶ್ವತ ನೀರಾವರಿ ಸೌಲಭ್ಯಗಳು ಆಗಬೇಕು ಎಂಬ ಹಲವು ನಿರೀಕ್ಷೆಗಳು ಜನರಲ್ಲಿವೆ.

ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವುದು ತುಮಕೂರು. ಇಲ್ಲಿ 1000 ಎಕರೆ ಪ್ರದೇಶದಲ್ಲಿ ಟೌನ್‌ಶಿಪ್ ಬರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ವರ್ಷ ಭರವಸೆ ನೀಡಿದ್ದರು. ಮಾತಿನ ಭರವಸೆಗಳು ಸಾಕು, ಮೊದಲು ಕೆಲಸ ಮಾಡಿ ತೋರಿಸಿ, ನಗರ ಕೇಂದ್ರೀಕರಣ ಬಿಡಿ ಹಳ್ಳಿಗಳ ಕಡೆಗೂ ನೋಡಿ ಎಂದು ಜಿಲ್ಲೆಯ ಜನರು ಹೇಳುತ್ತಿದ್ದಾರೆ.

Karnataka Budget Expectations Of Tumakuru District

ತುಮಕೂರು ಜಿಲ್ಲೆಯ ಬಜೆಟ್ ನಿರೀಕ್ಷೆಗಳು

ನೀರಾವರಿ ಸೌಲಭ್ಯಗಳು; ತುಮಕೂರು ಜಿಲ್ಲೆಯ ವಿವಿಧ ತಾಲೂಕುಗಳ ಸಮಸ್ಯೆಗಳಲ್ಲಿ ನೀರಾವರಿಯೂ ಒಂದು. ಹೇಮಾವತಿ ನದಿ ನೀರನ್ನು ತಂದು ಜಿಲ್ಲೆಯ ಕೆರೆಗಳನ್ನು ತುಂಬಿಸುವ ಕೆಲಸಗಳಿಗೆ ಸರಿಯಾಗಿ ಅನುದಾನ ಸಿಕ್ಕಿ, ವೇಗ ಪಡೆಯಬೇಕಿದೆ.

ಸುಮಾರು 10 ವರ್ಷಗಳಿಂದ ನಡೆಯುತ್ತಲೇ ಇರುವ ಎತ್ತಿನಹೊಳೆ ಯೋಜನೆ ಪೂರ್ಣಗೊಂಡರೆ ಜಿಲ್ಲೆಗೆ ಶಾಶ್ವತ ಕುಡಿಯುವ ನೀರು ಸಿಗಲಿದೆ. ಆದರೆ ಯೋಜನೆ ಕಾಗದದಲ್ಲಿ, ನಾಯಕರ ಭಾಷಣದಲ್ಲಿ ಮೂಡಿ ಬಂದಷ್ಟು ಸಲೀಸಾಗಿ ಜನರ ಬಳಿ ನೀರು ತಲುಪಿಲ್ಲ ಎಂಬುದು ದುರಂತವೇ ಸರಿ.

ತುಮಕೂರಿನ ಪಾವಗಡ ತಾಲೂಕು ಹೆಸರು ಕೇಳಿದರೆ ಕಣ್ಣಮುಂದೆ ಬರುವುದು ಬರಗಾಲ, ಫ್ಲೋರೈಡ್ ಯುಕ್ತ ನೀರು. ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ 230 ಕಿ. ಮೀ. ದೂರದಲ್ಲಿರುವ ಪಾವಗಡಕ್ಕೆ ನೀರು ಪೂರೈಕೆ ಮಾಡುವ 2250 ಕೋಟಿ ರೂ. ಮೊತ್ತದ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಯೋಜನೆ ಎಲ್ಲಿಗೆ ಬಂದಿದೆ, ಈಗಿನ ಸರ್ಕಾರ ಏನು ನೀಡಲಿದೆ? ಕಾದು ನೋಡಬೇಕಿದೆ.

ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ; ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡಲು ನಗರದ ಸುತ್ತಲಿನ ಜಿಲ್ಲೆಗಳ ಅಭಿವೃದ್ಧಿ ಮಾಡುತ್ತೇವೆ ಎಂದು ಸರ್ಕಾರಗಳು ಪದೇ ಪದೇ ಹೇಳುತ್ತವೆ. ಆದರೆ ಇದು ಜಾರಿಗೆ ಬರಬೇಕು. ತುಮಕೂರು ಜಿಲ್ಲೆಯಲ್ಲಿ ಕೈಗಾರಿಕೆಗಳು ಇನ್ನಷ್ಟು ಅಭಿವೃದ್ಧಿಯಾಗಬೇಕು, ಉದ್ಯೋಗ ಸೃಷ್ಟಿಯಾಗಬೇಕು. ಸಾಫ್ಟ್‌ವೇರ್ ಕಂಪನಿಗಳು ಕಚೇರಿ ಆರಂಭಿಸಲು ಸರ್ಕಾರಗಳು ಬೆಂಬಲ ನೀಡಬೇಕು. ಈ ಮೂಲಕ ಜಿಲ್ಲೆಯ ಯುವ ಜನತೆಗೆ ಸ್ಥಳೀಯ ಮಟ್ಟದಲ್ಲಿಯೇ ಉದ್ಯೋಗ ಸಿಗುವಂತೆ ಆಗಬೇಕಿದೆ.

ಕೃಷಿ ಕ್ಷೇತ್ರದಲ್ಲಿಯೂ ಅವಕಾಶ; ರಾಜ್ಯದಲ್ಲಿ ತೆಂಗು ಬೆಳೆಯುವ 16 ಜಿಲ್ಲೆಗಳಲ್ಲಿ ತುಮಕೂರು ಜಿಲ್ಲೆ ನಂಬರ್ 1. ತಿಪಟೂರು ಭಾಗದ ಕೊಬ್ಬರಿಗೆ ಉತ್ತರ ಭಾರತದಲ್ಲಿ ಭಾರೀ ಬೇಡಿಕೆ ಇದೆ. ತೆಂಗಿನ ನಾರಿನ ಉತ್ಪನ್ನಗಳು, ತೆಂಗಿನ ಚಿಪ್ಪು, ಮಟ್ಟೆಗಳಿಗೂ ಕರ್ನಾಟಕ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿ ಅಧಿಕ ಬೇಡಿಕೆ ಇದೆ.

ಆದರೆ ಎಲ್ಲಾ ಜಿಲ್ಲೆಗಳಂತೆ ಇಲ್ಲಿಯ ರೈತರು ಸಹ ಬೆಲೆ ಕುಸಿದಾಗ ಆತಂಕಗೊಳ್ಳುತ್ತಾರೆ. ರೈತರ ಸಂಕಷ್ಟ ದೂರ ಮಾಡುವ, ಬೆಂಬಲ ಬೆಲೆ ದೊರಕುವಂತೆ ಮಾಡುವ ಅಗತ್ಯವಿದೆ. ಹಣ್ಣು, ತರಕಾರಿಗಳನ್ನು ಸಹ ಬೆಳಯುವ ರೈತರು ಇದ್ದು, ಅವರೂ ಇದೇ ಮಾದರಿಯ ಸಮಸ್ಯೆ ಎದುರಿಸುತ್ತಿದ್ದಾರೆ.

ಸಾರಿಗೆ ಮತ್ತು ಸಂಚಾರ; ತುಮಕೂರು ಜಿಲ್ಲೆ ರೈಲು, ಬಸ್ ಮೂಲಕ ಉತ್ತಮ ಸಾರಿಗೆ ಸೌಲಭ್ಯ ಹೊಂದಿದೆ. ಆದರೆ ಜಿಲ್ಲೆಯಿಂದ ಬೆಂಗಳೂರಿಗೆ ಪ್ರತಿನಿತ್ಯ ಸಂಚಾರ ನಡೆಸುವ ಸಾವಿರಾರು ಜನರಿದ್ದಾರೆ. ಅವರಿಗೆ ಅಗತ್ಯವಾಗುವಂತೆ ಹೆಚ್ಚುವರಿ ರೈಲು, ಬಸ್‌ಗಳ ಅಗತ್ಯವಿದೆ. ಆಂಧ್ರದ ಜೊತೆ ಗಡಿ ಹಂಚಿಕೊಂಡಿರುವ ತಾಲೂಕುಗಳಲ್ಲಿ ಸರ್ಕಾರಿ ಬಸ್ ಸೇವೆ ಉತ್ತಮವಾಗಬೇಕು.

ತುಮಕೂರು ನಗರ ಬೆಳೆಯುತ್ತಿದ್ದು, ಸ್ಮಾರ್ಟ್‌ ಸಿಟಿಯಾಗಿದೆ. ಆದರೆ ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ದಿನ ದಿನ ಹೆಚ್ಚಾಗುತ್ತಿದೆ. ತುಮಕೂರು-ಶಿವಮೊಗ್ಗ 6 ಪಥದ ಹೆದ್ದಾರಿ ಕಾಮಗಾರಿ ವೇಗ ಪಡೆದುಕೊಳ್ಳಬೇಕು. ಬೆಂಗಳೂರು-ತುಮಕೂರು ನಡುವೆ ರೈಲು ಸಂಚಾರ ಇನ್ನಷ್ಟು ಹೆಚ್ಚಾಗಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+