ಇವಳೂ ಇರಲಿ, ಅವಳೂ ಬರಲಿ: ಒಂದೇ ಮಂಟಪದಲಿ ಇಬ್ಬರಿಗೆ ತಾಳಿ ಕಟ್ಟಿದ ಭೂಪ..!
ಪ್ರೀತಿ ಮಾಡುವುದಕ್ಕೆ ಓಕೆ, ಮದುವೆ ಎಲ್ಲಾ ಯಾಕೆ ಅನ್ನೋ ಪ್ರೇಮಿಗಳ ಸಂಖ್ಯೆಯೇ ಹೆಚ್ಚಚಾಗುತ್ತಿದೆ. ಟೈಮ್ ಪಾಸ್ ಮಾಡುವುದಕ್ಕಾಗಿ ಪ್ರೀತಿ ಮಾಡುವ ಅದೆಷ್ಟು ಪ್ರೇಮಿಗಳ ಮಧ್ಯೆ ಇಲ್ಲೊಬ್ಬ ಭೂಪ ತನ್ನ ಮದುವೆಯಿಂದಲೇ ಸಖತ್ ಸುದ್ದಿ ಮಾಡಿದ್ದಾರೆ.
ಮೂರು ವರ್ಷಗಳಿಂದ ಯುವತಿಯ ಜೊತೆಗೆ ಲಿವ್-ಇನ್ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬ ಮೂರು ವರ್ಷಗಳ ನಂತರ ಆಕೆ ಕೊರಳಿಗೆ ತಾಳಿಭಾಗ್ಯವನ್ನು ನೀಡಿದ್ದಾರೆ. ಇದಿಷ್ಟೇ ಆಗಿದ್ದರೆ ಅದು ಸುದ್ದಿ ಆಗುತ್ತಿರಲಿಲ್ಲ. ಬದಲಿಗೆ ಅದೇ ಮಂಟಪದಲ್ಲಿ ಒಬ್ಬರ ಬದಲಿಗೆ ಇಬ್ಬರಿಗೆ ತಾಳಿ ಕಟ್ಟುವ ಮೂಲಕ ವೈರಲ್ ಆಗಿದ್ದಾನೆ.
ಒಂದೇ ಮಂಟಪದಲ್ಲಿ ಇಬ್ಬರು ಪ್ರೇಯಸಿಯರಿಗೆ ವ್ಯಕ್ತಿಯೊಬ್ಬ ತಾಳಿ ಕಟ್ಟಿರುವ ಘಟನೆ ಜಾರ್ಖಂಡ್ ಲೋಹರ್ದಗಾದ ಭಾಂದ್ರಾ ಬ್ಲಾಕ್‌ನ ಬಂಡಾ ಗ್ರಾಮದಲ್ಲಿ ನಡೆದಿದೆ. ಕುಸುಮಾ ಲಾಕ್ರಾ ಮತ್ತು ಸ್ವಾತಿ ಕುಮಾರಿ ಎಂಬ ಇಬ್ಬರನ್ನು ಪ್ರೀತಿಸಿದ ಸಂದೀಪ್ ಓರಾನ್ ಎಂಬಾತ ಒಂದೇ ಮಂಟಪದಲ್ಲಿ ಇಬ್ಬರಿಗೂ ತಾಳಿ ಕಟ್ಟಿದ್ದಾನೆ. ಇಬ್ಬರ ಜೊತೆಗೆ ಹುಟ್ಟಿದ ಪ್ರೀತಿ ಹಾಗೂ ವೈರಲ್ ಸುದ್ದಿ ಮಾಡಿದ ಮದುವೆಯ ಕುರಿತು ಈ ವರದಿಯಲ್ಲಿ ಓದಿ ತಿಳಿಯಿರಿ.

ಲಿವ್-ಇನ್ ಪ್ರೇಮಿಗಳ ಪ್ರೀತಿಗೆ ಮಗುವೇ ಸಾಕ್ಷಿ
ಜಾರ್ಖಂಡ್ ಲೋಹರ್ದಗಾದ ಭಾಂದ್ರಾ ಬ್ಲಾಕ್‌ನ ಬಂಡಾ ಗ್ರಾಮದಲ್ಲಿ ಸಂದೀಪ್ ಓರಾನ್ ಮತ್ತು ಕುಸುಮ ಲಾಕ್ರಾ ಲಿವ್-ಇನ್ ಸಂಬಂಧದಲ್ಲಿ ಜೀವನ ನಡೆಸುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಮದುವೆ ಆಗದೇ ಲಿವ್-ಇನ್ ಸಂಬಂಧದಲ್ಲಿದ್ದ ಈ ದಂಪತಿಯ ಪ್ರೀತಿಗೆ ಒಂದು ಮಗು ಕೂಡ ಸಾಕ್ಷಿಯಾಗಿತ್ತು. ಅಲ್ಲಿಂದ ಬದುಕಿನ ಬಂಡಿ ಸಾಗಿಸುವುದಕ್ಕಾಗಿ ದುಡಿಮೆಯನ್ನು ಹುಡುಕಿ ಹೊರಟ ಸಂದೀಪ್ ಓರಾನ್, ಪಶ್ಚಿಮ ಬಂಗಾಳಕ್ಕೆ ತೆರಳಿದರು.

ಇಟ್ಟಿಗೆ ಗೂಡು ಕೆಲಸದ ಮಧ್ಯೆ ಹುಟ್ಟಿದ ಒಲವು
ಪಶ್ಚಿಮ ಬಂಗಾಳದ ಇಟ್ಟಿಗೆ ಗೂಡಿನಲ್ಲಿ ಸಂದೀಪ್ ಓರಾನ್ ಉದ್ಯೋಗ ಕಂಡುಕೊಂಡರು. ಕುಸುಮ ಲಾಕ್ರಾರನ್ನು ಜಾರ್ಖಂಡ್ ನಲ್ಲೇ ಬಿಟ್ಟು ಬಂದಿದ್ದ ಸಂದೀಪ್ ಓರಾನ್ ಎದೆಯಲ್ಲಿ ಹೊಸ ಪ್ರೀತಿಯ ಪುಷ್ಪ ಅರಳಿತು. ಇಲ್ಲಿ ಸಂದೀಪ್ ಓರಾನ್ ಮನಸ್ಸು ಗೆದ್ದ ಯುವತಿಯೇ ಸ್ವಾತಿ ಕುಮಾರಿ. ಆಕೆಯ ಜೊತೆ ಪ್ರೀತಿಗೆ ಬಿದ್ದ ಸಂದೀಪ್ ಓರಾನ್, ಜಾರ್ಖಂಡ್ ನಿವಾಸಕ್ಕೆ ವಾಪಸ್ಸಾದ ನಂತರದಲ್ಲೂ ಸ್ವಾತಿ ಕುಮಾರಿಯ ಜೊತೆಗಿನ ನಂಟು ಮುಂದುವರಿಸಿದನು. ಇದೀಗ ಅವಳೂ ಇರಲಿ, ಇವಳೂ ಬರಲಿ ಎನ್ನುವ ರಾಗವನ್ನು ಹಾಡಿದ್ದಾನೆ.

ನನಗೆ ಅವಳೂ ಇರಲಿ, ಇವಳೂ ಬರಲಿ ಎಂದ ಮಧುಮಗ
ಜಾರ್ಖಂಡ್ ಜೊತೆಗಾತಿ ಕುಸುಮ ಲಾಕ್ರಾನೊಂದಿಗೆ ಸಂದೀಪ್ ಓರಾನ್ ನಂಟು ಗ್ರಾಮಸ್ಥರಿಗೆ ಮೊದಲೇ ತಿಳಿದಿತ್ತು. ಇದರ ಜೊತೆಗೆ ಸ್ವಾತಿ ಕುಮಾರಿ ಜೊತೆಗೆ ಆತನ ಸಂಪರ್ಕದ ಬಗ್ಗೆ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರು ಪಂಚಾಯಿತಿ ಕರೆದರು. ಈ ಪಂಚಾಯಿತಿಯಲ್ಲಿ ಸ್ವಾತಿ ಕುಮಾರಿಯೂ ಇರಲಿ, ಕುಸುಮ ಲಾಕ್ರಾ ಕೂಡ ಬರಲಿ, ನಾನು ಇಬ್ಬರನ್ನೂ ಮದುವೆ ಆಗುತ್ತೇನೆ ಎಂದು ಸಂದೀಪ್ ಓರಾನ್ ವಾದ ಮಂಡಿಸಿದನು.

ನಿನಗೆ ಬೇಕಾದವನೇ ನನಗೂ ಬೇಕು ಎಂದ ಯುವತಿ
ನನಗೆ ಇಬ್ಬರೂ ಬೇಕು ಅನ್ನೋ ಸಂದೀಪ್ ಓರಾನ್ ವಾದಕ್ಕೆ ಯುವತಿಯರು ಕೂಡ ಸಹಮತ ವ್ಯಕ್ತಪಡಿಸಿದರು. ಚಿತ್ತ ಕದ್ದ ಚೆಲುವನ ಜತೆಗೆ ಸಪ್ತಪದಿ ತುಳಿಯುವುದಕ್ಕೆ ಸ್ವಾತಿ ಕುಮಾರಿ ಹಾಗೂ ಕುಸುಮ ಲಾಕ್ರಾ ಕೂಡ ಸೈ ಎಂದರು. ಇಬ್ಬರು ಯುವತಿಯರನ್ನು ಮದುವೆ ಆಗುವ ವಾದಕ್ಕೆ ಗ್ರಾಮಸ್ಥರು ಕೂಡ ವಿರೋಧ ವ್ಯಕ್ತಪಡಿಸಲಿಲ್ಲ. ಇಬ್ಬರು ಯುವತಿಯರನ್ನು ಒಂದೇ ಮಂಟಪದಲ್ಲಿ ಮದುವೆಯಾದ ಸಂದೀಪ್ ಓರಾನ್, ಚೆಲುವೆಯರ ಕೊರಳಿಗೆ ತಾಳಿ ಕಟ್ಟಿ ಭೇಷ್ ಎನಿಸಿಕೊಂಡನು. ಇದೇ ನೋಡಿ ಒಂದು ಮಂಟಪದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ ಭೂಪನ ಬಯೋಡಾಟಾ.












Click it and Unblock the Notifications