ಬೆಳಗೆದ್ದು ಕಾಫಿ ಹೀರಿ, ಅಂತಾರಾಷ್ಟ್ರೀಯ ಕಾಫಿ ಡೇ ವಿಶೇಷ ಲೇಖನ ಓದಿ
ಬೆಳಗೆದ್ದು ಯಾರ ಮುಖವನ್ನು ಯಾರು ನೋಡುತ್ತಾರೋ ಗೊತ್ತಿಲ್ಲ, ಬೆಳಗ್ಗೆ ಒಂದು ಕಪ್ ಕಾಫಿಯಿಂದ ಬಹುತೇಕರ ದಿನಚರಿ ಆರಂಭವಾಗುವುದಂತೂ ಸತ್ಯ. ಇಥಿಯೋಪಿಯಾದಲ್ಲಿ ಮೊದಲಿಗೆ ಬಳಕೆಯಾದ ಕಾಫಿ ಕುಡಿಯುವ ಚಟ ದೇಶ, ಭಾಷೆ, ಪಂಥ ಮೀರಿ ಬೆಳೆದಿದೆ. ಪ್ರತಿ ನಿತ್ಯ ಒಂದು ಕಪ್ ಫಿಲ್ಟರ್ ಕಾಫಿ ಹೀರುವುದರಿಂದ ಮನಸ್ಸಿಗೆ ಉಲ್ಲಾಸ, ಶಕ್ತಿವರ್ಧಕ, ಆರೋಗ್ಯಕ್ಕೂ ಹಿತಕರ ಎಂಬ ನಂಬಿಕೆಯಿದೆ.
ಬಗೆ ಬಗೆ ಕಾಫಿ ಇಂದು ಲಭ್ಯವಿದ್ದು, ಬ್ರೆಜಿಲ್, ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಕಾಫಿ ಪ್ರಮುಖ ಬೆಳೆಯಾಗಿದೆ. ಕಾಫಿಯ ಕುರಿತು ಪ್ರಚಾರ ಮಾಡುವ ಸಲುವಾಗಿ ಮತ್ತು ಕಾಫಿ ಎಂಬ ಪಾನಿಯದ ಮಹತ್ವವನ್ನು ಸಾರಿ ಹೇಳುವ ಸಲುವಾಗಿ ಅಕ್ಟೋಬರ್ 1 ಅನ್ನು ಪ್ರತಿವರ್ಷ ಕಾಫಿ ದಿನವನ್ನಾಗಿ ಆಚರಿಸಲಾಗುತ್ತದೆ. ಅಷ್ಟಕ್ಕೂ ಈ ಅಮೋಘ ರುಚಿಯ ಕಾಫಿಯ ಉಪಯೋಗವೇನು? ಕಾಫಿಯನ್ನು ಎಲ್ಲರೂ ಏಕೆ ಕೊಂಡಾಡುತ್ತಾರೆ ಎಂಬುದರ ಬಗ್ಗೆ ಹೆಚ್ಚು ಹುಡುಕಬೇಕಿಲ್ಲ, ಟ್ವಿಟ್ಟರಲ್ಲಿ ಟ್ರೆಂಡ್ ಮೇಲೆ ಒಮ್ಮೆ ಕಣ್ಣು ಹಾಯಿಸಿದರೆ ಸಾಕು...
ಭಾರತದಲ್ಲಿ ಕಾಫಿ ಉತ್ಪಾದನೆ, ಬಳಕೆಯಲ್ಲಿ ಗಣನೀಯ ಪಾಲು ಹೊಂದಿರುವುದು ಕರ್ನಾಟಕ ರಾಜ್ಯ. ಅದರಲ್ಲೂ ಮಲೆನಾಡಿನ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲೇ ಶೇಕಡಾ 70ರಷ್ಟು ಪಾಲು ಇದ್ದರೆ, ಇದರಲ್ಲಿ ಪುಟ್ಟ ಜಿಲ್ಲೆ ಕೊಡಗು ದೇಶದ ಕಾಫಿ ಉತ್ಪಾದನೆಯಲ್ಲಿ ಶೇಕಡಾ 30ಕ್ಕೂ ಅಧಿಕ ಪಾಲು ಹೊಂದಿದೆ.
ಇಥಿಯೋಪಿಯಾದಲ್ಲಿ ಸುಮಾರು11ನೇ ಶತಮಾನದಲ್ಲಿ ಮೊದಲಿಗೆ ಪರಿಚಿತವಾದ ಕಾಫಿ, 1670ನೇ ಇಸವಿಯಲ್ಲಿ ಚಿಕ್ಕಮಗಳೂರು ಸಮೀಪದ ಬಾಬಾ ಬುಡನ್ ಗಿರಿಯಲ್ಲಿ ದೇಶದಲ್ಲೇ ಮೊದಲ ಕಾಫಿ ಬೆಳೆ ಬೆಳೆಯಲಾಯಿತು. 2015ರಿಂದ ಆರಂಭವಾದ #internationalcoffeeday ಟ್ವಿಟ್ಟರ್‌ನಲ್ಲೂ ಟ್ರೆಂಡಿಂಗ್ ಆಗಿದ್ದು, #coffee ಸೇರಿದಂತೆ ವಿವಿಧ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿ ಕಾಫಿ ಕುರಿತ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಕಾಫಿ ನಂಟು
ಕಾಫಿಯನ್ನು ಬೆಂಗಳೂರಿಗೆ ಪರಿಚಯಿಸಿ ಅಲ್ಲೇ ಹುರಿದು ಪುಡಿ ಮಾಡುವ ಮಿಲ್ ಅನ್ನು ಸ್ಥಾಪಿಸಿ ಮನೆ ಮನೆಗಳಿಗೂ ಕಾಫಿ ಮಾರಾಟ ಮಾಡಿದ ಮಹಿಳಾ ಉದ್ಯಮಿಯೇ ದೊಡ್ಡ ಮನೆ ಸಾಕಮ್ಮ. ಬೆಂಗಳೂರಿನ ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿ 1920ನೇ ಇಸವಿಯಲ್ಲಿ ಮೊತ್ತ ಮೊದಲ ಕಾಫಿ ಕ್ಯೂರಿಂಗ್ ಹಾಗೂ ಪೌಡರಿಂಗ್ ಘಟಕವನ್ನು ಸ್ಥಾಪಿಸಿದರು. ಇನ್ನು ಬೆಂಗಳೂರಲ್ಲಿ ಬೈ ಟೂ ಕಾಫಿ ಪದ್ಧತಿಯನ್ನು ಜನಪ್ರಿಯಗೊಳಿಸಿದ್ದು ಬಹುಶಃ ಪ್ರಹಸನ ಪಿತಾಮಹ ಟಿಪಕಲ್ ಕೈಲಾಸಂ ಎನ್ನಬಹುದು. ಆದರೆ, ಇಂದು ಎಷ್ಟೋ ಹೋಟೆಲ್, ದರ್ಶಿನಿಗಳಲ್ಲಿ ಬೈಟೂ ಪದ್ಧತಿಯೇ ರದ್ದು ಮಾಡಿದ್ದಾರೆ.

ಕುರಿಗಾಹಿ ತಂದ ಈ ಹಣ್ಣು, ಬೀಜದ ಕಷಾಯ
ಕಾಫಿ ವಿಷಯಕ್ಕೆ ಬಂದರೆ, ಮೊದಲೇ ಹೇಳಿದಂತೆ ಇಥಿಯೋಪಿಯಾದಲ್ಲಿ ಸುಮಾರು11ನೇ ಶತಮಾನದಲ್ಲಿ ಕಾಫ (Kaffa) ಎಂಬ ಪ್ರಾಂತ್ಯದ ಕುರಿಗಾಹಿ ತಂದ ಈ ಹಣ್ಣು, ಬೀಜದ ಕಷಾಯವೇ ನಾವು ಕುಡಿಯುವ ಕಾಫಿ. ಅಲ್ಲಿಂದ ಮುಂದೆ ಬೇರೆ ಕಡೆಗೆ ಕಾಫಿ ಪರಿಮಳ ಹಬ್ಬಲು ಶುರುವಾಗಿದೆ. ಯೆಮೆನ್, ಇಸ್ತಾನ್ ಬುಲ್, ವೆನಿಸ್, ಪ್ಯಾರೀಸ್, ಇಂಗ್ಲೆಂಡಿಗೆ ತಲುಪಿದೆ. ಇದೇ ಕಾಫಿ ಇಟಲಿ ತಲುಪಿ ಬಗೆ ಬಗೆ ರೀತಿಯಲ್ಲಿ ಬದಲಾವಣೆ ಹೊಂದಿದೆ. ಭಾರತದಲ್ಲಿ ಮೊದಲಿಗೆ ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿಯಲ್ಲಿ ಕಾಫಿ ಬಳಕೆಗೆ ಬಂದಿತು ಎನ್ನುತ್ತದೆ ಇತಿಹಾಸ.

ಕಾಫಿ ಹಲವು ಬಗೆ
ಹುರಿಯದ ಕಾಫಿ ಬೀಜಗಳನ್ನು ಬೀಸಿ ನೀರಿನ ಸ್ಪ್ರೇ ಜೊತೆ ಬೆರೆಸಿ ತಯಾರಿಸಿದ ಕಷಾಯವನ್ನೇ ಎಕ್ಸ್ ಪ್ರೆಸೋ ಅಂತಾರೆ. ಎಕ್ಸ್ ಪ್ರೆಸೋಗೆ ಸ್ವಲ್ಪ ಹಾಲು ಬೆರೆಸಿದರೆ ಮಾಕಿಹಾತೋ.. ಅದಕ್ಕೆ ಸ್ಟೀಮ್ಡ್ ಹಾಲು ಬೆರಸಿದರೆ ಲಾಟ್ಟೆ, ಅದಕ್ಕೆ ಚಾಕಲೋಟ್ ಪುಡಿ ಬೆರಸಿದರೆ ಕೆಪಚಿನೋ. ಎಕ್ಸ್ ಪ್ರೆಸೋ ಹಾಟ್ ಚಾಕಲೋಟ್ ಸ್ಟೀಮ್ಡ್ ಹಾಲು ಬೆರಸಿದರೆ ಮೊಕಾ, ಕೊರೆತೋ, ಅಮೆರಿಕಾನೋ, ಡೆಪೋ, ಇನ್ಸ್ಟಂಗ್ ಕಾಫಿ ಹೀಗೆ ವಿಧವಿಧವಾದ ಕಾಫಿ ತಯಾರಾಗಿದೆ. ಉಡುಪಿ ಹೋಟೆಲ್ ಕಾಫಿ ಒಂಥರಾ ಇರುತ್ತೆ, ಬೈಟು ಕಾಫಿ ಇನ್ನೊಂದು ಥರಾ, ಒಟ್ಟಾರೆ, ಎಷ್ಟೇ ಬಗೆ ಬಗೆ ಬಂದರೂ ಮನೆಯಲ್ಲಿ ಅಮ್ಮ ಮಾಡಿಕೊಡುವ ಫಿಲ್ಟರ್ ಕಾಫಿ ಬೆಸ್ಟ್ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ.
|
ನಾನು ಕಾಫಿ ಲವರ್
ನಾನು ಕಾಫಿ ಲವರ್, ನನಗೆ ಪ್ರತಿದಿನವೂ ಕಾಫಿ ದಿನ, ಪ್ರತಿ ಕ್ಷಣ ಕಾಫಿ ಹೀರಿ ಸಂಭ್ರಮಿಸುತ್ತೇನೆ, ಕಾಫಿ ನನ್ನ ಪ್ರತಿ ದಿನದ ಶಕ್ತಿ, ಆರೋಗ್ಯ ವೃದ್ಧಿಸಲು ಉತ್ತೇಜನಕಾರಿಯಾದೆ, ನಾನು ನನ್ನ ಫಿಲ್ಟರ್ ಕಾಫಿ, ದಕ್ಷಿಣ ಭಾರತೀಯರಿಗೆ ಫಿಲ್ಟರ್ ಕಾಫಿ ಅಚ್ಚುಮೆಚ್ಚು, ಎಲ್ಲರಿಗೂ ಅಂತಾರಾಷ್ಟ್ರೀಯ ಕಾಫಿ #InternationalCoffeeDay ದಿನಾಚರಣೆ ಶುಭಹಾರೈಕೆ ಎಂದು ಟ್ವೀಟ್ ಮಾಡಿರುವ ರಮ್ಯಾ.
|
ಲಸಿಕೆ ಮಹತ್ವದ ಸಂದೇಶ
ಅಂತಾರಾಷ್ಟ್ರೀಯ ಕಾಫಿ ದಿನಾಚರಣೆಯಂದು ಎರಡು ಬಾರಿ ಕಾಫಿ ಹೀರುವುದರ ಜೊತೆಗೆ ಎರಡು ಬಾರಿ ಕೊರೊನಾ ಲಸಿಕೆ ಪಡೆಯಿರಿ ಎಂದು ಲಸಿಕೆ ಮಹತ್ವದ ಬಗ್ಗೆ ಟ್ವೀಟ್ ಮಾಡಿ ಜಾಗೃತಿ ಮೂಡಿಸಲಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಕಾಫಿ ಬಗ್ಗೆ ಕ್ರೇಜ್ ಹೆಚ್ಚುತ್ತಿದ್ದು, ಜೊತೆಗೆ ಇತ್ತೀಚೆಗೆ ಕೊರೊನಾ ಬಾಧೆ ಹೆಚ್ಚಾಗಿರುವುದರಿಂದ ಲಸಿಕೆ ಬಗ್ಗೆ ಹೆಚ್ಚಿನ ಜಾಹೀರಾತುಗಳು ಕಂಡು ಬರುತ್ತಿವೆ.
|
ಟರ್ಕಿಷ್ ಕಾಫಿಯೇ ಬೆಸ್ಟ್ ಎಂದ ಅಧಿಕಾರಿ
ಇಂದು ವಿಶ್ವದಲ್ಲೆಡೆ ವೈವಿಧ್ಯಮಯ ಕಾಫಿ ಸವಿಯಬಹುದಾಗಿದೆ. ಜಾಗತಿಕವಾಗಿ ಟರ್ಕಿಷ್ ಕಾಫಿ ಶ್ರೇಷ್ಠ ಕಾಫಿಗಳಲ್ಲಿ ಒಂದೆನಿಸಿದೆ. ದೆಹಲಿಯ ನನ್ನ ಸ್ನೇಹಿತರು ನನ್ನ ಟ್ವೀಟ್- ರೀಟ್ವೀಟ್ ಮಾಡಿ ಟರ್ಕಿಷ್ ಕಾಫಿ ಟ್ರೆಂಡ್ ಮಾಡಿ, ಟರ್ಕಿಷ್ ಕಾಫಿ ರುಚಿ ಬಗ್ಗೆ ತಿಳಿಯಿರಿ ಎಂದು ಭಾರತದಲ್ಲಿರುವ ಟರ್ಕಿ ದೇಶದ ರಾಯಭಾರಿ ಫಿರಾತ್ ಸುನೆಲ್ ಅವರು ಆಹ್ವಾನ ನೀಡಿದ್ದಾರೆ.
|
ಕಾಫಿ ಉತ್ಪಾದನೆಯಲ್ಲಿ ಬ್ರೆಜಿಲ್ ನಂ.1
ಕಾಫಿ ಉತ್ಪಾದನೆಯಲ್ಲಿ ಬ್ರೆಜಿಲ್ ನಂ.1 ಸ್ಥಾನ ಉಳಿಸಿಕೊಂಡಿದೆ, ನಂತರದ ಸ್ಥಾನ ವಿಯೆಟ್ನಾಂ ಪಾಲಾಗಿದೆ. ಆದರೆ, ಬಳಕೆ ವಿಷಯಕ್ಕೆ ಬಂದರೆ ನೆದರ್ಲೆಂಡ್ ಎಲ್ಲಾ ದೇಶಗಳಿಗಿಂತ ಮುಂದಿದೆ ಎಂದು ವರದಿಯೊಂದನ್ನು ಟ್ವಿಟ್ಟರಲ್ಲಿ ಹಂಚಿಕೊಳ್ಳಲಾಗಿದೆ. ಸರಾಸರಿ 2.41 ಕಪ್ ಪ್ರತಿ ದಿನದಂತೆ ನೆದರ್ಲೆಂಡ್ ಪ್ರಜೆಗಳು ಕಾಫಿ ಹೀರುತ್ತಾರಂತೆ. ಕಚ್ಚಾತೈಲ ಬಿಟ್ಟರೆ ಅತ್ಯಧಿಕ ಮೌಲ್ಯಯುತ ಸರಕು ಎಂದರೆ ಅದು ಕಾಫಿ ಎಂಬುದು ಸುಳ್ಳಲ್ಲ.












Click it and Unblock the Notifications