ಗ್ರಾಮ ಪಂಚಾಯಿತಿ; ಅಭ್ಯರ್ಥಿಗೆ ಲಾಭದಾಯಕ ಹುದ್ದೆ ಮಾಹಿತಿ
ಬೆಂಗಳೂರು, ಡಿಸೆಂಬರ್ 08: ಕರ್ನಾಟಕದಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳು ಘೋಷಣೆಯಾಗಿವೆ. ಡಿಸೆಂಬರ್ 22 ಮತ್ತು 27ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ಕಣಕ್ಕಿಳಿಯುವ ಅಭ್ಯರ್ಥಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು ಎಂಬ ನಿಯಮವಿದೆ.
ರಾಜ್ಯ ಚುನಾವಣಾ ಆಯೋಗ ಲಾಭದಾಯಕ ಹುದ್ದೆಯ ಕುರಿತು ಅಭ್ಯರ್ಥಿ, ಮತದಾರ ಮತ್ತು ಸಾರ್ವಜನಿಕರ ತಿಳುವಳಿಕೆಗಾಗಿ ಮಾಹಿತಿಯನ್ನು ನೀಡಿದೆ. ನಾಮಪತ್ರವನ್ನು ಸಲ್ಲಿಸುವ ಅಭ್ಯರ್ಥಿ ಈ ಕುರಿತು ಮಾಹಿತಿ ತಿಳಿದಿರಬೇಕು. ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರದ ಅಥವಾ ಯಾವುದೇ ಸ್ಥಳೀಯ ಸಂಸ್ಥೆ ಅಥವಾ ಬೇರೆ ಯಾವುದೇ ಪ್ರಾಧಿಕಾರದಡಿಯಲ್ಲಿ ಲಾಭದಾಯಕ ಹುದ್ದೆ ಹೊಂದಿದ್ದರೆ ಅಂತಹ ವ್ಯಕ್ತಿಯು ಗ್ರಾಮ ಪಂಚಾಯಿತಿ ಸದಸ್ಯನಾಗಲು ಅನರ್ಹ.
ಸ್ಥಳೀಯ ಸಂಸ್ಥೆಗಳ (ನಗರ ಸ್ಥಳೀಯ ಸಂಸ್ಥೆಗಳ ಅಥವಾ ಪಂಚಾಯತ್ ಸಂಸ್ಥೆಗಳ) ಅಧ್ಯಕ್ಷ ಅಥವಾ ಉಪಾಧ್ಯಕ್ಷ ಹುದ್ದೆ ಹೊಂದಿರುವ ವ್ಯಕ್ತಿ ಮೇಲಿನ ಉದ್ದೇಶಕ್ಕೆ ಲಾಭದಾಯಕ ಹುದ್ದೆ ಹೊಂದಿರುವನೆಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅನುದಾನಿತ ಶಾಲೆ ಮತ್ತು ಕಾಲೇಜುಗಳಲ್ಲಿನ ಭೋದನಾ ಸಿಬ್ಬಂದಿಯು ಯಾವುದೇ ಸರ್ಕಾರ ಅಥವಾ ಬೇರಾವುದೇ ಪ್ರಾಧಿಕಾರದಡಿಯಲ್ಲಿ ಲಾಭದಾಯಕ ಹುದ್ದೆ ಹೊಂದಿರುವುದಿಲ್ಲ.
ಗ್ರಾಮ ಸಹಾಯಕರು ನಿಗದಿತ ಗೌರವಧನ ಪಡೆಯುತ್ತಿದ್ದಾರೆಂದು ಹಾಗೂ ಸದರಿಯವರುಗಳನ್ನು ರಾಜ್ಯ ಸರ್ಕಾರದ ಯಾವುದೇ ಸೇವೆಯ ಯಾವುದೇ ನಿರ್ದಿಷ್ಟ ಹುದ್ದೆಗೆ ನೇಮಕವಾಗಿಲ್ಲವೆಂದು ಪರಿಗಣಿಸಲಾಗಿದೆ. ಅವರು ರಾಜ್ಯ ಸರ್ಕಾರದಿಂದ ಸ್ವಲ್ಪ ಮೊತ್ತದ ಹಣ ಪಡೆಯುತ್ತಿದ್ದಾಗ್ಯೂ ಅವರು ಯಾವುದೇ ನಿರ್ದಿಷ್ಟ ಹುದ್ದೆ, ಕಛೇರಿ ಹೊಂದಿರುವುದಿಲ್ಲವಾದ್ದರಿಂದ ಅವರು ಸರ್ಕಾರದಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆ ಹೊಂದಿದವರಾಗುವುದಿಲ್ಲ. ಪಡಿತರ ಅಂಗಡಿಗಳನ್ನು ಹೊಂದಿರುವವರು ಯಾವುದೇ ಲಾಭದಾಯಕ ಹುದ್ದೆ ಹೊಂದಿರುವುದಿಲ್ಲ.

ಲಾಭದಾಯಕ ಹುದ್ದೆಗಳ ವಿವರ
ಸಹಕಾರಿ ಸಂಘಗಳ ಕಾಯ್ದೆಯಡಿಯಲ್ಲಿ ಸಹಕಾರಿ ಸಂಘಗಳನ್ನು ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಸಹಕಾರಿ ಸಂಸ್ಥೆಯ ಆಡಳಿತ ಸಮಿತಿಯು ಚುನಾಯಿತ ಸದಸ್ಯರನ್ನೊಳಗೊಂಡ ಸಮಿತಿಯಾಗಿದ್ದು ಸಹಕಾರಿ ಸಂಘಗಳ ನೌಕರರನ್ನು ಸೇವೆಗೆ ನೇಮಕ ಮಾಡಿಕೊಳ್ಳುವ ಜವಾಬ್ದಾರಿ, ಹಾಗೂ ಸೇವೆಯಿಂದ ತೆಗೆದುಹಾಕುವ ಅಧಿಕಾರವನ್ನು ಹೊಂದಿರುತ್ತದೆ. ಸಹಕಾರಿ ಸಂಘಗಳಲ್ಲಿ ಲಾಭದಾಯಕ ಹುದ್ದೆ ಹೊಂದಿರುವ ವ್ಯಕ್ತಿಯನ್ನು ಪಂಚಾಯತಿ ಚುನಾವಣೆಗೆ ಅನರ್ಹಗೊಳಿಸುವಂತಿಲ್ಲವೆಂದು ಹೈಕೋರ್ಟ್ ಆದೇಶ ನೀಡಿದೆ. ಆದ್ದರಿಂದ, ಸಹಕಾರಿ ಸಂಘಗಳ ನೌಕರರು ಲಾಭದಾಯಕ ಹುದ್ದೆಯನ್ನು ಹೊಂದಿದ್ದಾರೆ ಎಂದು ಪರಿಗಣಿಸುವುದಿಲ್ಲ.
ಸರ್ಕಾರ ರಚಿಸಿರುವ ಸಮಿತಿಗಳ ಸದಸ್ಯರು ಹಾಗೂ ಸರ್ಕಾರಿ ನಿಗಮಗಳ ನಿರ್ದೇಶಕರು ಮತ್ತು ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ಮಂಡಳಿಗಳ ನಿರ್ದೇಶಕರು ಪರಿಹಾರ ಭತ್ಯೆ ಹೊರತುಪಡಿಸಿದ ಪರಿಹಾರಧನ ಪಡೆಯುತ್ತಿದ್ದರೆ ಅಥವಾ ಪಡೆಯಲು ಅರ್ಹರಾಗಿದ್ದಲ್ಲಿ ಅವರು ಸ್ಪರ್ಧಿಸಲು ಅನರ್ಹರು.

ಅಂಗನವಾಡಿ ಕಾರ್ಯಕರ್ತೆ ಅರ್ಹರೇ?
ಅಂಗನವಾಡಿ ಕಾರ್ಯಕರ್ತರು ಲಾಭದಾಯಕ ಹುದ್ದೆ ಹೊಂದಿದವರಾಗುವುದಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅವರು ಸ್ಪರ್ಧಿಸಲು ಅರ್ಹರಾಗುತ್ತಾರೆ. ಶಿಕ್ಷಣ ಇಲಾಖೆಯಲ್ಲಿ 'ಪ್ರೇರಕ' ಎಂದು ನೇಮಕಾತಿ ಹೊಂದಿ ಗೌರವಧನ ಪಡೆದು ಕೆಲಸ ಮಾಡುತ್ತಿರುವವರು ಲಾಭದಾಯಕ ಹುದ್ದೆ ಅರ್ಥ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅವರು ಚುನಾವಣೆಗಳಲ್ಲಿ ಸ್ಪರ್ಧಿಸಲು ಅರ್ಹರಾಗುತ್ತಾರೆ.

ಗ್ರಂಥಾಲಯ ಮೇಲ್ವಿಚಾರಕ
ಗ್ರಂಥಾಲಯಗಳಲ್ಲಿ ಮೇಲ್ವಿಚಾರಕರಾಗಿ ಅಯ್ಕೆಗೊಂಡು ಮಾಸಿಕ ವೇತನ ರೂ. 750/- ಗೌರವಧನವನ್ನಾಗಿ ಪಡೆದು ಕರ್ತವ್ಯ ನಿರ್ವಹಿಸುತ್ತಿರುವವರು ಚುನಾವಣೆಯಲ್ಲಿ ಸ್ಪರ್ಧಿಸಬಹುದು.
ಬಿಸಿಯೂಟ ಯೋಜನೆಯಡಿ ನೇಮಕಗೊಂಡು ಅಡುಗೆ ಕೆಲಸವನ್ನು ನಿರ್ವಹಿಸುವವರು ಲಾಭದಾಯಕ ಹುದ್ದೆಯನ್ನು ಹೊಂದಿದವರಾಗುವುದಿಲ್ಲ. ಬಿಸಿಯೂಟ ಯೋಜನೆಯಡಿಯಲ್ಲಿ ಕೆಲಸ ಮಾಡುವ ಅಡುಗೆಯವರು ಚುನಾವಣೆಗಳಲ್ಲಿ ಸ್ಪರ್ಧಿಸಬಹುದು.

ಉಪನ್ಯಾಸಕರು ಸ್ಪರ್ಧಿಸಬಹುದೇ?
ವಿಶ್ವವಿದ್ಯಾಲಯಗಳು ರಾಜ್ಯ ಸರ್ಕಾರದ ನಿಯಂತ್ರಣಕ್ಕೊಳಪಟ್ಟಿದ್ದು ಅವುಗಳು ಇತರೆ ಪ್ರಾಧಿಕಾರ ಪದವ್ಯಾಪ್ತಿಯಲ್ಲಿ ಬರುತ್ತವೆ. ವಿಶ್ವವಿದ್ಯಾಲಯ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯದ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಉಪನ್ಯಾಸಕರು ಸರ್ಕಾರದ ನಿಯಂತ್ರಣಕ್ಕೊಳಪಡುವ ಇತರೆ ಪ್ರಾಧಿಕಾರ ಅಡಿಯಲ್ಲಿ ಲಾಭದಾಯಕ ಹುದ್ದೆ ಹೊಂದಿದವರಾಗಿರುತ್ತಾರೆ.
ಸಾರ್ವಜನಿಕ ಉದ್ದಿಮೆಗಳು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ನಿಯಂತ್ರಣಕ್ಕೊಳಪಟ್ಟಿರುತ್ತವೆ. ಅವುಗಳ ನೌಕರರು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ನಿಯಂತ್ರಣಕ್ಕೊಳಪಟ್ಟ ಪ್ರಾಧಿಕಾರದ ಅಡಿಯಲ್ಲಿ ಲಾಭದಾಯಕ ಹುದ್ದೆ ಹೊಂದಿರುವವರೆಂದು ಪರಿಗಣಿಸಲಾಗುತ್ತದೆ.

ಬ್ಯಾಂಕ್ ಸಿಬ್ಬಂದಿ ಸ್ಪರ್ಧಿಸಬಹುದೇ?
ರಾಷ್ಟ್ರೀಕೃತಗೊಳ್ಳದ ಬ್ಯಾಂಕುಗಳನ್ನು ಸರ್ಕಾರದ ನಿಯಂತ್ರಣಕ್ಕೊಳಪಟ್ಟ ಪ್ರಾಧಿಕಾರವೆಂದು ಅರ್ಥೈಸುವಂತಿಲ್ಲ. ಅದರ ನೌಕರರು ಯಾವುದೇ ಲಾಭದಾಯಕ ಹುದ್ದೆ ಹೊಂದಿದವರಾಗುವುದಿಲ್ಲ.
ಆದರೆ, ರಾಷ್ಟ್ರೀಕೃತ ಬ್ಯಾಂಕುಗಳು ಕೇಂದ್ರ ಸರ್ಕಾರದ ನಿಯಂತ್ರಣ ಅಥವಾ ಸ್ವಾಮ್ಯಕ್ಕೆ ಒಳಪಟ್ಟಿರುವುದರಿಂದ ಹಾಗೂ ಅವು ಸರ್ಕಾರಿ ಪ್ರಾಧಿಕಾರ ಪದದ ವ್ಯಾಪ್ತಿಗೊಳಪಡುವುದರಿಂದ ರಾಷ್ಟ್ರೀಕೃತ ಬ್ಯಾಂಕ್ ನೌಕರರು ಪಂಚಾಯತ್ ಸಂಸ್ಥೆಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಲು ಅನರ್ಹರಾಗುತ್ತಾರೆ.

ಇವರುಗಳು ಸ್ಪರ್ಧಿಸುವಂತಿಲ್ಲ
ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ, ಪಟ್ಟಣ ಪಂಚಾಯತಿ, ಮುನ್ಸಿಪಾಲಿಟಿ, ನಗರಸಭೆ ಮತ್ತು ನಗರ ಪಾಲಿಕೆಗಳು ಸ್ಥಳೀಯ ಸಂಸ್ಥೆಗಳಾಗಿವೆ. ಅವುಗಳು ರಾಜ್ಯ ಸರ್ಕಾರದ ನಿಯಂತ್ರಣಕ್ಕೊಳಪಟ್ಟಿವೆ. ಆದುದರಿಂದ ಈ ಸ್ಥಳೀಯ ಸಂಸ್ಥೆ ನೌಕರರು ಲಾಭದಾಯಕ ಹುದ್ದೆ ಹೊಂದಿದವರಾಗಿರುತ್ತಾರೆ. ಅವರು ಸ್ಪರ್ಧಿಸುವಂತಿಲ್ಲ.
ರಾಜ್ಯ ವಿಧಾನಮಂಡಲಗಳಿಗೆ ನಡೆಯುವ ಚುನಾವಣಾ ಉದ್ದೇಶಗಳಿಗಾಗಿ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೆ ಕಾನೂನಿನಿಂದ ಅಥವಾ ಅದರಡಿಯಲ್ಲಿ ಹಾಗೂ ಅನರ್ಹರಾಗಿದ್ದರೆ ಆತನು ಗ್ರಾಮ ಪಂಚಾಯತಿ ಸದಸ್ಯನಾಗಿ ಚುನಾಯಿತನಾಗಲು ಮತ್ತು ಸದಸ್ಯನಾಗಿರಲು ಅನರ್ಹನಾಗಿರುತ್ತಾನೆ.












Click it and Unblock the Notifications