G. Parameshwara Profile: ದಣಿವರಿಯದ ದಲಿತ ನಾಯಕ ಡಾ. ಜಿ. ಪರಮೇಶ್ವರ ಅವರ ಪರಿಚಯ
ಸತತ ಎರಡು ಅವಧಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ದೀರ್ಘಾವಧಿಯ ಅಧ್ಯಕ್ಷರಾಗಿದ್ದ ಹೆಗ್ಗಳಿಕೆ ಪರಮೇಶ್ವರ್ ಅವರಿಗೆ ಸಲ್ಲುತ್ತದೆ.
ತುಮಕೂರು, ಫೆಬ್ರವರಿ. 28: ರಾಜ್ಯದ ದಲಿತ ರಾಜಕಾರಣಿಗಳಲ್ಲಿ ಕೇಳಿ ಬರುವ ಪ್ರಮುಖ ಹೆಸರು ಡಾ.ಜಿ ಪರಮೇಶ್ವರ ಅವರದ್ದು. ದಲಿತ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿಶ್ವಾಸ ಗಳಿಸಿರುವ ರಾಜಕಾರಣಿಯಾಗಿ ಗಮನ ಸೆಳೆಯುತ್ತಾರೆ. ಕಾಂಗ್ರೆಸ್ ಹಿರಿಯ ನಾಯಕರಾಗಿರುವ ಇವರು ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.
ಕರ್ನಾಟಕದ ಏಳನೇ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಗಂಗಾಧರಯ್ಯ ಪರಮೇಶ್ವರ 1951 ಆಗಸ್ಟ್ 6 ರಂದು ತುಮಕೂರಿನ ಗೊಲ್ಲಹಳ್ಳಿಯಲ್ಲಿ (ಈಗ ಸಿದ್ದಾರ್ಥ ನಗರ ಎಂದು ಕರೆಯುತ್ತಾರೆ) ಜನಿಸಿದರು. ತಾಯಿ ಗಂಗಮಾಳಮ್ಮ ತಂದೆ ಎಚ್.ಎಂ ಗಂಗಾಧರಯ್ಯ. ಪ್ರಾಥಮಿಕ ಶಿಕ್ಷಣವನ್ನು ಗೊಲ್ಲಹಳ್ಳಿ (ಸಿದ್ದಾರ್ಥ ನಗರ) ಮತ್ತು ಹೆಗ್ಗೆರೆಯ ಸರ್ಕಾರಿ ಶಾಲೆಯಲ್ಲಿ ಮುಗಿಸಿ, ಸಿದ್ಧಾರ್ಥ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ತುಮಕೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಂತರ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಸ್ನಾತಕೋತ್ತರ ಪದವಿ ಬಳಿಕ, ಪರಮೇಶ್ವರ ಅವರು ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಸಸ್ಯ ಶರೀರಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ಸಂಕ್ಷಿಪ್ತವಾಗಿ ಕೆಲಸ ಮಾಡಿದ್ದರು. ಬಳಿಕ ವಿದೇಶಕ್ಕೆ ತೆರಳಿ ಸಸ್ಯ ಶರೀರಶಾಸ್ತ್ರದಲ್ಲಿ ಅಡಿಲೇಡ್ ವಿಶ್ವವಿದ್ಯಾಲಯದ ವೈಟ್ ಕೃಷಿ ಸಂಶೋಧನಾ ಕೇಂದ್ರದಿಂದ ಪಿಎಚ್‌ಡಿ ಪದವಿ ಪಡೆದರು.
ಅವರು ಚಿಕ್ಕ ವಯಸ್ಸಿನಲ್ಲೇ ಎನ್‌ಸಿಸಿ ಸೇರಿದ್ದ ಇವರು ಉತ್ತಮ ಅಥ್ಲೀಟ್ ಆಗಿದ್ದರು, ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ 100 ಮೀಟರ್ ಓಟವನ್ನು 10.9 ಸೆಕೆಂಡುಗಳಲ್ಲಿ ಮುಗಿಸಿದ ದಾಖಲೆಯನ್ನು ಹೊಂದಿದ್ದಾರೆ. ಅಂತರ ಕಾಲೇಜು/ವಿಶ್ವವಿದ್ಯಾಲಯದಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಕಾಲೇಜನ್ನು ಮತ್ತು ರಾಷ್ಟ್ರ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.

ಪರಮೇಶ್ವರ ಅವರು ರಾಜಕೀಯಕ್ಕೆ ಬರುವ ಮುನ್ನ ಆಸ್ಟ್ರೇಲಿಯಾದಿಂದ ಮರಳಿ ಬಂದಾಗ ಶ್ರೀ ಸಿದ್ಧಾರ್ಥ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಡಳಿತಾಧಿಕಾರಿಯಾಗಿದ್ದರು. 1989 ರಲ್ಲಿ, ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಉದ್ಘಾಟನೆಗೆ, ಪರಮೇಶ್ವರ ಅವರು ಶಿಕ್ಷಣ ಸಚಿವ ಎಸ್. ಎಂ. ಯಾಹ್ಯಾ ಮತ್ತು ಶ್ರೀ ಸಿದ್ಧಾರ್ಥ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಆಹ್ವಾನಿಸಲು ಹೋಗಿದ್ದರು. ಇದಾದ ನಂತರ ಅಂದಿನ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಪರಮೇಶ್ವರ ಅವರನ್ನು ರಾಜಕೀಯಕ್ಕೆ ಪ್ರವೇಶಿಸುವಂತೆ ಒತ್ತಾಯ ಮಾಡಿದ್ದರು.
*ರಾಜಕೀಯ ಜೀವನ *
1. 1989ರಲ್ಲಿ ಕೊರಟಗೆರೆ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ, ಪ್ರತಿಸ್ಪರ್ಧಿ ಜನತಾದಳದ ಸಿ.ರಾಜವರ್ಧನ್ ವಿರುದ್ಧ ಗೆದ್ದರು.

2. 1993 ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ರೇಷ್ಮೆ ಸಚಿವರಾಗಿ ಕಾರ್ಯ ನಿರ್ವಹಣೆ
3. 1999ರಲ್ಲಿ 55,802 ಮತಗಳ ಅಂತರದಿಂದ ಗೆದ್ದು ದಾಖಲೆ. ಎಸ್.ಎಂ.ಕೃಷ್ಣ ಸಂಪುಟದಲ್ಲಿ ಉನ್ನತ ಶಿಕ್ಷಣ ಖಾತೆ ಜವಾಬ್ದಾರಿ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ.
4. 2004ರಲ್ಲಿ ಮಧುಗಿರಿಯಲ್ಲಿ ಪರಮೇಶ್ವರ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಜನತಾ ದಳದ (ಜಾತ್ಯತೀತ) ಕೆಂಚಮಾರಯ್ಯ ಎಚ್ ವಿರುದ್ಧ ಗೆಲುವು ದಾಖಲು
5. 2010ರ ಅ. 29 ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ನೇಮಕ
6 . 2013ರ ಚುನಾವಣೆ ಕೊರಟಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಸೋಲು
7 . 2014ರ ಜುಲೈ 1 ರಂದು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ
8 . 2015ರ ಅಕ್ಟೋಬರ್‌ನಲ್ಲಿ ಗೃಹ ಸಚಿವರಾಗಿ ನೇಮಕ
9 . 2017ರ ಜೂನ್‌ನಲ್ಲಿ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ
10. 2018 ರಲ್ಲಿ ಮತ್ತೆ ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ
11. 23 ಮೇ 2018 ರಂದು ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ
ಜಿ.ಪರಮೇಶ್ವರ ಅವರು ಕರ್ನಾಟಕದ 8ನೇ ಉಪಮುಖ್ಯಮಂತ್ರಿಯಾಗಿ, ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1989, 1999 ಮತ್ತು 2004 ರಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರಗಳು ಹಾಗೂ ಕ್ಷೇತ್ರ ಪುನರ್ವಿಂಗಡಣೆಯ ನಂತರ 2008, 2018 ರಲ್ಲಿ ಕೊರಟಗೆರೆ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 1993 ರಿಂದ ವಿವಿಧ ಸರಕಾರಗಳ ಆಡಳಿತಗಳಲ್ಲಿ ಹಲವಾರು ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಸತತ ಎರಡು ಅವಧಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ದೀರ್ಘಾವಧಿಯ ಅಧ್ಯಕ್ಷರಾಗಿದ್ದ ಹೆಗ್ಗಳಿಕೆ ಪರಮೇಶ್ವರ್ ಅವರಿಗೆ ಸಲ್ಲುತ್ತದೆ.
ದಲಿತ ಸಮುದಾಯಕ್ಕೆ ಸೇರಿದ ಪರಮೇಶ್ವರ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂಬ ಕೂಗು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಕೇಳಿ ಬರುತ್ತದೆ. ಈ ಬಾರಿಯ ಚುನಾವಣೆಗೆ ದಲಿತ ಸಿಎಂ ಕೂಡಗು ಕೂಡ ಕೇಲಿ ಬಂದಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ತಾನು ಕೂಡ ಸಿಎಂ ಸ್ಥಾನದ ಆಕಾಂಕ್ಷೆ ಎಂದು ಪರಮೇಶ್ವರ್ ಹೇಳಿಕೊಂಡಿದ್ದಾರೆ. ದಲಿತ ಸಿಎಂ ಕೂಗು ಹೆಚ್ಚಾಗುತ್ತಿದ್ದು ಮತ್ತು ದಲಿತ ನಾಯಕ ಎನಿಸಿಕೊಂಡಿರುವ ಪರಮೇಶ್ವರ ಅವರನ್ನು ಒಮ್ಮೆ ಸಿಎಂ ಸ್ಥಾನದಲ್ಲಿ ನೋಡಬೇಕು ಎಂಬುದು ಅವರ ಬೆಂಬಲಿಗರ ಕೂಗಾಗಿದೆ.












Click it and Unblock the Notifications