ಚಾಂದಿನಿ ಚೌಕ್ ಕ್ಷೇತ್ರದಲ್ಲಿ ಭಾರಿ ಹಿನ್ನಡೆ ಅನುಭವಿಸಿದ ಎಎಪಿ
ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ ಪ್ರಮುಖವಾಗಿರುವ ಚಾಂದಿನಿ ಚೌಕ್ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಭಾರಿ ಹಿನ್ನಡೆಯುಂಟಾಗಿದೆ. ಈ ಕ್ಷೇತ್ರದ ಶಾಸಕಿ ಅಲ್ಕಾ ಲಂಬಾ ಅವರು, ಎಎಪಿ ವಿರುದ್ಧದ ತಮ್ಮ ಅಸಮಾಧಾನ ಮುಂದುವರೆಸಿದ್ದು, ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲ್ಲ ಎಂದು ಹೇಳಿದ್ದಾರೆ.
'ನಾಲ್ಕು ತಿಂಗಳಿನಿಂದ ಶಾಸಕಾಂಗ ಸಭೆಗೆ ಆಹ್ವಾನ ಸಿಗದ ಕಾರಣ, ಪಕ್ಷದ ಪರ ನಾನು ಪ್ರಚಾರ ಮಾಡುವುದಿಲ್ಲ. ಶಾಸಕಿಯಾಗಿ ನಾನು ನನ್ನ ಕ್ಷೇತ್ರದ ಜನರ ಸೇವೆ ಮುಂದುವರೆಸುವೆ ಎಂದು ಚಾಂದಿನಿ ಚೌಕ್ ಕ್ಷೇತ್ರದ ಶಾಸಕಿ ಅಲ್ಕಾ ಲಂಬಾ ಸ್ಪಷ್ಟಪಡಿಸಿದ್ದಾರೆ.
ನಾಲ್ಕು ತಿಂಗಳಿನಿಂದ ಪಕ್ಷದ ಪ್ರಮುಖರನ್ನು ಸಂಪರ್ಕಿಸಲು ಯತ್ನಿಸಿ, ವಿಫಲಳಾಗಿದ್ದೇನೆ. ಹೀಗಾಗಿ ನಾನು ಈ ಬಾರಿ ಪಕ್ಷದ ಪರ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದಾರೆ. ನನಗೆ ಸದ್ಯಕ್ಕೆ ಯಾವುದೇ ಆಫರ್ ಬಂದಿಲ್ಲ, ಯಾರೊಬ್ಬರೂ ನನ್ನನ್ನು ಭೇಟಿ ಮಾಡಿ ಮಾತನಾಡಿಲ್ಲ, ಆದರೆ, ಈ ರೀತಿ ಆಫರ್ ಬಂದರೆ ಅದನ್ನು ಗೌರವಯುತವಾಗಿ ಪರಿಗಣಿಸುತ್ತೇನೆ. ಕಾಂಗ್ರೆಸ್ ಜತೆ 20 ವರ್ಷಗಳ ನಂಟಿದೆ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು

ಚಾಂದಿನಿ ಚೌಕ್ ಕ್ಷೇತ್ರದಲ್ಲಿ ಅಭ್ಯರ್ಥಿಗಳ್ಯಾರು?
ಚಾಂದಿನಿ ಚೌಕ್ ಕ್ಷೇತ್ರದಲ್ಲಿ ಪಂಕಜ್ ಗುಪ್ತಾ ಅವರು ಎಎಪಿ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ ನಿಂದ ಜೆಪಿ ಅಗರವಾಲ್ ಕಣದಲ್ಲಿದ್ದಾರೆ, ಬಿಜೆಪಿಯಿಂದ ಹಾಲಿ ಸಂಸದ, ಕೇಂದ್ರ ಸಚಿವ ಡಾ. ಹರ್ಷ್ ವರ್ಧನ್ ಮತ್ತೊಮ್ಮೆ ಸಂಸತ್ತಿಗೆ ಆಯ್ಕೆ ಬಯಸಿ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಮೇ 12ರಂದು ಚಾಂದಿನಿ ಚೌಕ್ ನಲ್ಲಿ ಮತದಾನ
ಮೇ 12ರಂದು ಚಾಂದಿನಿ ಚೌಕ್ ಸೇರಿ ದೆಹಲಿಯ ಎಲ್ಲಾ 7 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇದು 2019ರ ಲೋಕಸಭೆ ಚುನಾವಣೆಯ 6ನೇ ಹಂತವಾಗಿದ್ದು, ಅಂದು ಕೇಂದ್ರಾಡಳಿತ ಪ್ರದೇಶ ದೆಹಲಿ ಸೇರಿದಂತೆ 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನವಾಗಲಿದೆ. ಮೇ 23ರಂದು ಫಲಿತಾಂಶ ಹೊರ ಬರಲಿದೆ.

ಅಲ್ಕಾ ಬೇಸರದ ಮಾತುಗಳು:
ದೆಹಲಿಯಲ್ಲದೆ, ಹರ್ಯಾಣ, ಪಂಜಾಬ್ ನಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಇನ್ನಿಲ್ಲದ್ದಂತೆ ಬೇಡಿದ ಎಎಪಿಯ ಹುಳುಕು ಎಲ್ಲರಿಗೂ ಗೊತ್ತಾಗಿದೆ ಎಂದು ಅಲ್ಕಾ ಹೇಳಿದ್ದಾರೆ.2013ರಲ್ಲಿ ಆಮ್ ಆದ್ಮಿ ಪಕ್ಷ ಸೇರಿದ ಲಂಬಾ, ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದಿಂದ 2015ರಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು.
|
ಬಿಜೆಪಿ ವಿರುದ್ಧ ಕಾಂಗ್ರೆಸ್ ಮಾತ್ರ ಪ್ರಬಲ
ಬಿಜೆಪಿಯನ್ನು ಆಡಳಿತದಿಂದ ದೂರ ಇಡಬಲ್ಲ ಪಕ್ಷ ಎಂದೆನಿಸಿದ್ದರಿಂದ ನಾನು ಎಎಪಿ ಸೇರಿದೆ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಚಾಂದಿನಿ ಚೌಕ್ ಹಾಗೂ ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಪ್ರಭಾವ ಹೆಚ್ಚಿಸಿಕೊಂಡಿದೆ. ಎಎಪಿ ಉದ್ದೇಶವೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದೇ ಆಗಿದ್ದಲ್ಲಿ ನಾನು ಕಾಂಗ್ರೆಸ್ ಸೇರಿ ಅಧಿಕೃತವಾಗಿ ಮೂಲ ಉದ್ದೇಶದ ಪರ ಹೋರಾಟ ನಡೆಸುವುದರಲ್ಲಿ ತಪ್ಪೇನಿಲ್ಲ ಎಂದಿದ್ದರು.
|
ಅಲ್ಕಾ ಲಂಬಾ ರಾಜೀನಾಮೆ ಹೆಚ್ಚಾದ ಒತ್ತಡ
ಕಳೆದ ತಿಂಗಳು ಗ್ರೇಟರ್ ಕೈಲಾಶ್ ಕ್ಷೇತ್ರದ ಎಎಪಿ ಶಾಸಕ ಸೌರಭ್ಭಾರದ್ವಾಜ್ ಜೊತೆ ಅಲ್ಕಾ ಲಂಬಾ ಟ್ವೀಟ್ ವಾರ್ ನಡೆಸಿದ್ದರು.ನಂತರ ಲಂಬಾ ಅವರ ರಾಜೀನಾಮೆಗೆ ಆಗ್ರಹಿಸಿದ್ದರು.
ಈ ಕುರಿತು ಮಾತನಾಡಿದ ಲಂಬಾ, ಪಕ್ಷದ ನಾಯಕರು ಪದೇ ಪದೇ ನನ್ನ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಏನೇ ಆಗಿದ್ದರೂ ಪಕ್ಷ ಮತ್ತು ನನ್ನ ನಡುವೆ ಆಗಿದೆ. ನನ್ನ ಕ್ಷೇತ್ರದ ಜನರ ಕೈಯನ್ನು ನಾನು ಬಿಡುವುದಿಲ್ಲ. ಅವರಿಂದ ಆಯ್ಕೆಯಾಗಿರುವ ನಾನು ಅವರ ಒಳಿತಿಗೆ ಪ್ರಾರ್ಥಿಸುತ್ತೇನೆ. ನನ್ನ ಕ್ಷೇತ್ರದ ಅಭಿವೃದ್ಧಿಯತ್ತ ಮಾತ್ರ ನಾನು ಗಮನ ಹರಿಸುತ್ತೇನೆ ಎಂದರು.











Click it and Unblock the Notifications