ಇಂಟರ್ ಪೋಲ್‌ನ ಬ್ಲೂ, ರೆಡ್ ಕಾರ್ನರ್ ನೋಟಿಸ್; ಏನು, ಎತ್ತ?
ಬೆಂಗಳೂರು, ಜನವರಿ 24 : ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿರುದ್ಧ ಇಂಟರ್ ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ಗುಜರಾತ್ ಪೊಲೀಸರು ಸಲ್ಲಿಸಿರುವ ಮನವಿಯ ಮೇರೆಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಗುಜರಾತ್‌ನಲ್ಲಿರುವ ನಿತ್ಯಾನಂದ ಆಶ್ರಮದಿಂದ ಇಬ್ಬರು ಬಾಲಕಿಯರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ನಿತ್ಯಾನಂದ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್‌ಗೆ ಮನವಿ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಇಂಟರ್ ಪೋಲ್ ಬ್ಲೂ ಮತ್ತು ರೆಡ್ ಎಂಬ ಎರಡು ಬಗೆಯ ನೋಟಿಸ್‌ಗಳನ್ನು ಜಾರಿಗೊಳಿಸುತ್ತದೆ. ಅಪರಾಧ ಪ್ರಕರಣದಲ್ಲಿ ಬೇಕಾಗಿರುವವರ ಮಾಹಿತಿ ಪಡೆಯಲು ಬ್ಲೂ ಕಾರ್ನರ್, ಪ್ರಕರಣದಲ್ಲಿ ಬೇಕಾಗಿರುವ ಅಪರಾಧಿಗಳನ್ನು ಬಂಧಿಸಲು ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗುತ್ತದೆ.
ಒಮ್ಮೆ ಇಂಟರ್ ಪೋಲ್ ನೋಟಿಸ್ ಜಾರಿಗೊಳಿಸಿದರೆ ಅದರ ಸದಸ್ಯ ರಾಷ್ಟ್ರಗಳು ಮಾಹಿತಿಯನ್ನು ಹಂಚಿಕೊಳ್ಳುವುದು ಕಡ್ಡಾಯವಾಗಿದೆ. ಭಾರತದಿಂದ ಪರಾರಿಯಾಗಿರುವ ಹಲವು ವ್ಯಕ್ತಿಗಳ ವಿರುದ್ಧ ಇಂಟರ್ ಪೋಲ್ ನೋಟಿಸ್ ಜಾರಿಗೊಳಿಸಿದೆ.

ಬ್ಲೂ ಕಾರ್ನರ್ ನೋಟಿಸ್
ಅಪರಾಧ ಪ್ರಕರಣದಲ್ಲಿ ಬೇಕಾಗಿರುವವರ ಮಾಹಿತಿ ಪಡೆಯಲು ಇಂಟರ್ ಪೋಲ್ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗುತ್ತದೆ. ಇಂಟರ್ ಪೋಲ್ ಅಪರಾಧಿ ಯಾವ ದೇಶಕ್ಕೆ ಸೇರಿದವನು ಮತ್ತು ಯಾವ ದೇಶದಲ್ಲಿ ಇದ್ದಾನೆಯೋ ಆ ದೇಶಗಳಿಗೆ ಮಾತ್ರ ನೋಟಿಸ್ ನೀಡುತ್ತದೆ. ಬ್ಲೂ ಕಾರ್ನರ್ ನೋಟಿಸ್ ಜಾರಿಯಾದ ಮೇಲೆ ಸದಸ್ಯ ರಾಷ್ಟ್ರ ಮಾಹಿತಿ ನೀಡುವುದು ಕಡ್ಡಾಯ.

ಎಷ್ಟು ಜನರ ಮೇಲೆ ಬೇಕಾದರೂ ನೀಡಬಹುದು
ಇಂಟರ್ ಪೋಲ್ ಒಮ್ಮೆ 1ಕ್ಕಿಂತ ಹೆಚ್ಚು ವ್ಯಕ್ತಿಗಳ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಬಹುದು. 2019ರಲ್ಲಿ ಕೇರಳದಿಂದ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾದ 100 ಜನರ ವಿರುದ್ಧ ಒಟ್ಟಿಗೆ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು.

ರೆಡ್ ಕಾರ್ನರ್ ನೋಟಿಸ್
ಆರೋಪಿಯನ್ನು ಬಂಧಿಸಲು, ಗಡಿಪಾರು ಮಾಡಲು ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುತ್ತದೆ. ಅಪರಾಧಿ ಎಂದು ಸಾಬೀತಾಗಿ ಬೇರೆ ದೇಶದಲ್ಲಿದ್ದರೆ ಆತನನ್ನು ಬಂಧಿಸಲು ಸಹ ನೋಟಿಸ್ ನೀಡಬಹುದು.

ಬಂಧಿಸುವಂತೆ ಒತ್ತಾಯ ಮಾಡುವಂತಿಲ್ಲ
ಒಬ್ಬ ವ್ಯಕ್ತಿಯ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಂಡರೆ ಆತ ಅಪರಾಧಿ, ಅಪರಾಧ ಸಾಬೀತಾಗಿದೆ ಎಂದು ಅರ್ಥವಲ್ಲ. ಆತನ ವಿರುದ್ಧ ಇರುವ ಆರೋಪ ನ್ಯಾಯಾಲಯದಲ್ಲಿಯೇ ಸಾಬೀತಾಗಬೇಕು. ಇಂಟರ್ ಪೋನ್ ರೆಡ್ ಕಾರ್ನರ್ ನೋಟಿಸ್ ನೀಡಬಹುದು. ಆದರೆ, ಸದಸ್ಯ ರಾಷ್ಟ್ರಕ್ಕೆ ಬಂಧಿಸುವಂತೆ ಒತ್ತಾಯಿಸುವಂತಿಲ್ಲ.












Click it and Unblock the Notifications