ದಸರಾ ಮಹೋತ್ಸವ: ನಾಡಹಬ್ಬದಲ್ಲಿ 'ಆರೋಗ್ಯ ಕಾಳಜಿ'ಗೂ ಒತ್ತು
ಮೈಸೂರು, ಸೆಪ್ಟೆಂಬರ್ 5 : ನಾಡಹಬ್ಬ ದಸರಾ ಮಹೋತ್ಸವದಲ್ಲಿ ಜನರಿಗೆ ಮನರಂಜನೆ ಕಾರ್ಯಕ್ರಮಗಳನ್ನು ನೀಡುವುದಲ್ಲದೇ ಅವರ ಆರೋಗ್ಯ ಕಾಳಜಿಗೆ ಸಂಬಂಧಿಸಿದ ಮಾಹಿತಿ ನೀಡಲು ವಸ್ತುಪ್ರದರ್ಶನ ಹಾಗೂ ಆರೋಗ್ಯ ಮೇಳ ಆಯೋಜಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.
ದಸರಾ ನವರಾತ್ರಿ ಸಂದರ್ಭದಲ್ಲಿ 9 ದಿನ ನಗರದಾದ್ಯಂತ ನಾನಾ ವೇದಿಕೆಗಳಲ್ಲಿ ಹತ್ತಾರು ಮನರಂಜನೆಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ದಸರಾ ಸಂದರ್ಭದಲ್ಲಿ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಹಾಗೂ ಸ್ಥಳೀಯರು ಹಲವಾರು ಮನರಂಜನಾ ಕಾರ್ಯಕ್ರಮಗಳಲ್ಲಿ ಮಿಂದೇಳುತ್ತಿದ್ದರು. ಆದರೆ ಈ ಬಾರಿ ದಸರಾ ಮಹೋತ್ಸವ ಕೇವಲ ರಂಜನೀಯ ಕಾರ್ಯಕ್ರಮಗಳಿಗೆ ವೇದಿಕೆಯಾಗದೇ ಆರೋಗ್ಯ ಕಾಳಜಿಗೂ ವೇದಿಕೆ ನೀಡಲಾಗುತ್ತಿದೆ.
ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಭರವಸೆಯ ಆಶಾಕಿರಣವಾಗಬೇಕೆಂಬ ಉದ್ದೇಶದಿಂದ ಆರೋಗ್ಯ ಮೇಳ ಆಯೋಜಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರಿಂದ ಅನುಮತಿ ಕೂಡ ಸಿಕ್ಕಿದೆ. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆಎಚ್.ಪ್ರಸಾದ್ ಹಾಗೂ ಮೈಸೂರು ಮೆಡಿಕಲ್ ಕಾಲೇಜು ಡೀನ್ ಆಂಡ್ ಡೈರೆಕ್ಟರ್ ದಾಕ್ಷಾಯಿಣಿ ಅವರಿಗೆ ಸೂಚನೆ ನೀಡಲಾಗಿದೆ.

ಆರೋಗ್ಯ ಸಮಸ್ಯೆಗಳಿಗೆ ಪರಿಹಾರ
ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಸಹಕಾರದೊಂದಿಗೆ ಮೈಸೂರು ನಗರವೂ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ನವರಾತ್ರಿ ಸಂದರ್ಭದಲ್ಲಿ ನಿತ್ಯ ಮಧುಮೇಹ, ಕ್ಯಾನ್ಸರ್, ಹೃದ್ರೋಗ, ಮೂಳೆ ರೋಗ ಸೇರಿದಂತೆ ನಾನಾ ಕಾಯಿಲೆಗಳ ತಪಾಸಣೆ ಶಿಬಿರ ಆಯೋಜಿಸುವ ಬಗ್ಗೆ ಸೂಚನೆ ನೀಡಲಾಗಿದೆ. ದಸರಾ ಎಂದರೆ ಕೇವಲ ರಂಜನೆಯಾಗಬಾರದು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾ ನೋವಿನಲ್ಲಿರುವವರಿಗೂ ಸಾಂತ್ವನ ನೀಡುವ ವೇದಿಕೆಯಾಗಬೇಕೆಂಬ ಉದ್ದೇಶದಿಂದ ಆರೋಗ್ಯ ಮೇಳದಂತಹ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲು ಸಚಿವರು, ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಇದಕ್ಕೆ ತಕ್ಕಂತೆ ಖಾಸಗಿ ಆಸ್ಪತ್ರೆಗಳನ್ನು ಸಂಪರ್ಕಿಸಿ ಸಮ್ಮತಿ ನೀಡಿದವರ ಸಹಕಾರದೊಂದಿಗೆ ಶಿಬಿರಗಳನ್ನು ಆಯೋಜಿಸಲಾಗುವುದು. ಇದರಿಂದ ಸಾವಿರಾರು ಮಂದಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಚ್.ಪ್ರಸಾದ್ ತಿಳಿಸಿದ್ದಾರೆ.

ಆರೋಗ್ಯ ಇಲಾಖೆಯೂ ಒಂದು ಮಳಿಗೆ
ಪ್ರತಿ ವರ್ಷ ದಸರಾ ಮಹೋತ್ಸವದ ಸಂದರ್ಭ ವಸ್ತುಪ್ರದರ್ಶನದಲ್ಲಿ ನಾನಾ ಇಲಾಖೆಗಳಿಂದ ಆಯಾ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಮಳಿಗೆಗಳನ್ನು ತೆರೆದು ಮಾಹಿತಿ ನೀಡಲಾಗುತ್ತದೆ. ಅಂತೆಯೇ ಆರೋಗ್ಯ ಇಲಾಖೆಯೂ ಒಂದು ಮಳಿಗೆ ಪಡೆದು ಆರೋಗ್ಯ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತದೆ. ಆದರೆ ಇದೇ ಮೊದಲ ಬಾರಿಗೆ ಮನುಷ್ಯನ ದೇಹ ರಚನೆ ಹಾಗೂ ಇನ್ನಿತರ ವೈದ್ಯಕೀಯ ಲೋಕದ ವಿಷಯಗಳ ಕುರಿತು ಪ್ರತ್ಯೇಕವಾಗಿ ಮೈಸೂರು ಮೆಡಿಕಲ್ ಕಾಲೇಜು ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶೇಷವಾದ ವಸ್ತುಪ್ರದರ್ಶನ ಆಯೋಜಿಸಲು ತೀರ್ಮಾನಿಸಲಾಗಿದೆ.

ರೂಪುರೇಷೆ ರಚನೆ
ಆರೋಗ್ಯಕ್ಕೆ ಸಂಬಂಧಿಸಿದ ವಸ್ತುಪ್ರದರ್ಶನ ಹಾಗೂ ಆರೋಗ್ಯ ಮೇಳ ಆಯೋಜಿಸಲು ಸದ್ಯದಲ್ಲಿಯೇ ಎಂಎಂಸಿ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ ಯಾವ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂಬುದರ ಬಗ್ಗೆ ಚರ್ಚಿಸಲಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರಿಂದಲೂ ಸಲಹೆ ಪಡೆದು ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಡಿಸಿ ತಿಳಿಸಿದ್ದಾರೆ.
"ಒಂದು ಉತ್ತಮ ಉದ್ದೇಶದಿಂದ ದಸರಾ ಸಮಿತಿ ಆರೋಗ್ಯ ಕಾಳಜಿ ಹಾಗೂ ಕಾಯಿಲೆ ಪತ್ತೆಗೆ ಸಂಬಂಧಿಸಿದಂತೆ ಕಾರ್ಯಕ್ರಮ ರೂಪಿಸುವಂತೆ ಸೂಚನೆ ನೀಡಿದೆ. ಅದರಂತೆ ಯೋಜನೆ ಸಿದ್ಧಪಡಿಸುತ್ತಿದ್ದೇವೆ" ಎಂದು ಜಿಲ್ಲಾ ಆರೋಗ್ಯಾಧಿಕಾರಿ ಕೆ.ಎಚ್.ಪ್ರಸಾದ್ ತಿಳಿಸಿದ್ದಾರೆ.

ಹೃದಯ ಸಂಬಂಧಿ ತಪಾಸಣೆ
ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆಸಲು ನಿರ್ಧರಿಸಿರುವ ಆರೋಗ್ಯ ಮೇಳದಲ್ಲಿ ಹೃದ್ರೋಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ 25 ವರ್ಷ ಮೇಲ್ಪಟ್ಟವರಿಗೆ ಹೃದಯಾಘಾತ ಉಂಟಾಗಿ ಮೃತ ಪಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮೇಳದಲ್ಲಿ ಹೃದ್ರೋಗ ತಪಾಸಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.











Click it and Unblock the Notifications