ಪಕ್ಷಿ ಸಂಕುಲ ಉಳಿವಿಗಾಗಿ ಎರಡು ಎಕರೆ ಭೂಮಿ ತ್ಯಾಗ ಮಾಡಿದ ಬಂಟ್ವಾಳದ ಪಕ್ಷಿಪ್ರೇಮಿ ದಂಪತಿ
ಮಂಗಳೂರು, ಅಕ್ಟೋಬರ್ 8: ಇಂಟರ್‌ನೆಟ್ ಯುಗ ಆರಂಭವಾದ ಬಳಿಕ ಪಕ್ಷಿ ಪ್ರಪಂಚ ಸಹಿಸಲಾಸಾಧ್ಯವಾದ ಹೊಡೆತ ತಿಂದಿದೆ. ಅದರಲ್ಲೂ ಯಥೇಚ್ಛವಾಗಿ ಕಾಣಸಿಗುತ್ತಿದ್ದ ಗುಬ್ಬಚ್ಚಿಗಳು ವಿನಾಶದ ಹಂತ ತಲುಪಿದೆ.
5G ದುನಿಯಾಗೆ ತೆರೆದುಕೊಳ್ಳುವ ಶುಭಾವಸರದ ನಡುವೆ ಹಕ್ಕಿ- ಪಕ್ಕಿಗಳ ಬಗ್ಗೆ ನಾವು ಯೋಚನೆಯನ್ನೇ ಮಾಡಲ್ಲ. ಆದರೂ ದಕ್ಷಿಣ ಕನ್ನಡ ಜಿಲ್ಲೆ ಪಕ್ಷಿ ಪ್ರೇಮಿ ದಂಪತಿಗಳು ಪಕ್ಷಿ ಸಂಕುಲದ ಉಳಿವಿಗೆ ಅದ್ಭುತ ಕಾರ್ಯ ಮಾಡಿದೆ. ಸ್ವಾರ್ಥ ಮರೆತು ತಮ್ಮ ಎರಡು ಎಕರೆ ಭೂಮಿಯನ್ನು ಪಕ್ಷಿಗಳಿಗೆಂದೇ ಬಿಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಎಲಿಯನಗೂಡು ಗ್ರಾಮದ ಬದ್ಯಾರಿನ ನಿತ್ಯಾನಂದ- ರಮ್ಯಾ ದಂಪತಿ, ಪಕ್ಷಿ- ಪರಿಸರದ ಬಗ್ಗೆ ಅದಮ್ಯ ಕಾಳಜಿ ಹೊಂದಿರುವ ಪಕ್ಷಿ ಪ್ರೇಮಿಗಳಾಗಿದ್ದಾರೆ.

ಪಕ್ಷಿಗಳಿಗೆಂದೇ ಎರಡು ಎಕರೆ ಭೂಮಿ ಮೀಸಲು
ಈ ಪಕ್ಷಿ ಪ್ರೇಮಿಗಳು ತಮ್ಮ ಎರಡು ಎಕರೆ ಭೂಮಿಯನ್ನು ಪಕ್ಷಿಗಳಿಗೆಂದೇ ಮೀಸಲಿರಿಸಿದ್ದಾರೆ. ಪಕ್ಷಿಗಳ ಸಂತಾನೋತ್ಪತ್ತಿಗೆ ನೆರವಾಗುವ ವಾತಾವರಣವನ್ನು ಕಲ್ಪಿಸಿದ್ದಾರೆ. ಎರಡು ಎಕರೆ ಭೂಮಿಯಲ್ಲಿ ಹಣ್ಣು, ತರಕಾರಿಗಳ ಗಿಡ ನೆಟ್ಟು, ಅವುಗಳನ್ನು ಪೋಷಿಸಿ ಅವುಗಳಲ್ಲಿ ಬರುವ ಫಲಗಳನ್ನು ಸಂಪೂರ್ಣ ಹಕ್ಕಿಗಳಿಗಾಗಿಯೇ ಮೀಸಲಿರಿಸಿದ್ದಾರೆ.
ನಿತ್ಯಾನಂದ- ರಮ್ಯಾ ದಂಪತಿ ವಿನಾಶದ ಅಂಚಿನಲ್ಲಿರುವ ಗುಬ್ಬಚ್ಚಿಗಳ ಮೇಲೆ ವಿಶೇಷ ಕಾಳಜಿ ಹೊಂದಿ, ಅವುಗಳಿಗಾಗಿಯೇ ಮನೆಯೊಂದನ್ನು ರಚಿಸಿದ್ದಾರೆ. ಒಂದು ಸಣ್ಣ ಮನೆ ನಿರ್ಮಿಸಿ, ಅದರಲ್ಲಿ ಮಣ್ಣಿನ ಮಡಕೆಯ ಗೂಡುಗಳನ್ನು ನಿರ್ಮಿಸಿ ಪಕ್ಷಿಗಳಿಗೆ ಮೊಟ್ಟೆಯಿಡಲು ಬೇಕಾದ ವ್ಯವಸ್ಥೆಯನ್ನು ಮಾಡಿದ್ದಾರೆ.

ಪಕ್ಷಿಗಳಿಗೆ ಸಂತಾನೋತ್ಪತ್ತಿ ಮಾಡುವುದಕ್ಕೆ ಅವಕಾಶ
ನಿತ್ಯಾನಂದ ಮತ್ತು ರಮ್ಯ ದಂಪತಿ ಈ ಗುಬ್ಬಚ್ಚಿ ಗೂಡಿನಲ್ಲಿ 100ಕ್ಕೂ ಅಧಿಕ ಪಕ್ಷಿಗಳಿಗೆ ಸಂತಾನೋತ್ಪತ್ತಿ ಮಾಡುವುದಕ್ಕೆ ಅವಕಾಶ ಮಾಡಿದ್ದಾರೆ. ಈ ಪರಿಸರದಲ್ಲಿ 90ಕ್ಕೂ ಹೆಚ್ಚು ವಿಧದ ಹಕ್ಕಿಗಳನ್ನು ದಾಖಲೀಕರಣ ಮಾಡಿಕೊಂಡಿದ್ದಾರೆ. ಪ್ರಮುಖವಾಗಿ ಇವರ ಪ್ರದೇಶ ಕಾಗೆ, ನೀರು ಕಾಗೆ, ಗೂಬೆ, ಪಾರಿವಾಳ, ಕೋಗಿಲೆ, ಗಿಳಿ, ಸೂರಕ್ಕಿ, ಹಸಿರು ಪಾರಿವಾಳ, ನವಿಲು ಮುಂತಾದ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ.

ಮಣ್ಣಿನ ಪಾತ್ರೆಯಲ್ಲಿ ನೀರು, ಆಹಾರ
"ಪಕ್ಷಿಗಳಿಗೆ ಮಣ್ಣಿನ ಗೂಡು ಮಾತ್ರವಲ್ಲದೇ ಎರಡು ಎಕರೆ ಪ್ರದೇಶದಲ್ಲಿ ಅಲ್ಲಲ್ಲಿ ಮಣ್ಣಿನ ಪಾತ್ರೆಯಲ್ಲಿ ನೀರು, ಆಹಾರವನ್ನು ಇಡುತ್ತಾರೆ. ಈ ಪಾತ್ರೆಗಳನ್ನು ಪ್ರತೀ ಎರಡು ದಿನಕ್ಕೊಮ್ಮೆ ಸ್ವಚ್ಛ ಮಾಡಿ ಮತ್ತೆ ಆಹಾರವನ್ನು ಇಡುತ್ತಾರೆ. ಈ ಬಗ್ಗೆ ಮಾತನಾಡಿರುವ ನಿತ್ಯಾನಂದ, ನಾವು ಈ ಹಿಂದೆ ಪ್ಲಾಸ್ಟಿಕ್ ಪಾತ್ರೆಯಲ್ಲಿ ನೀರು ಆಹಾರ ಇಡುತ್ತಿದ್ದೆವು. ಆದರೆ ಪ್ಲಾಸ್ಟಿಕ್ ಪರಿಸರಕ್ಕೆ ಮಾರಕ ಎಂದು ತಿಳಿದು ಮಣ್ಣಿನ ಪಾತ್ರೆಯಲ್ಲಿ ಆಹಾರ ನೀರು ಇಡುತ್ತಿದ್ದೇವೆ. ಪ್ರತೀ ಎರಡು ದಿನಕ್ಕೊಮ್ಮೆ ಪಾತ್ರೆ ಸ್ವಚ್ಛ ಮಾಡಿ ಆಹಾರ ಇಡುತ್ತೇವೆ. ನಾವು ಸೇವಿಸುವ ನೀರನ್ನೇ ಪಕ್ಷಿಗಳಿಗೆ ಇಡುತ್ತೇವೆ. ಸ್ವಚ್ಛ ಆಹಾರ ಇಡದಿದ್ದರೆ ಪಕ್ಷಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ," ಅನ್ನುವುದು ಅವರ ಅಭಿಪ್ರಾಯವಾಗಿದೆ.

ಏಳು ವರ್ಷಗಳಿಂದ ಪಕ್ಷಿಗಳ ಆರೈಕೆ
ಈ ದಂಪತಿ ಏಳು ವರ್ಷಗಳಿಂದ ಪಕ್ಷಿಗಳ ಆರೈಕೆ ಮಾಡುತ್ತಿದ್ದಾರೆ. ಇದರ ಜೊತೆಗೆ ಪಕ್ಷಿ ಪ್ರೇಮವನ್ನು ಇತರರಿಗೂ ಹಂಚುತ್ತಿದ್ದಾರೆ. ಈವರೆಗೆ ರಾಜ್ಯದ ವಿವಿಧ ಭಾಗಗಳ 250ಕ್ಕೂ ಹೆಚ್ಚು ಶಾಲೆಗಳಿಗೆ ಹೋಗಿ ಗುಬ್ಬಚ್ಚಿ ಗೂಡು- ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯ ರಾಶಿಗಳ ಮಹತ್ವ ಅನ್ನುವ ಜಾಗೃತಿ ಕಾರ್ಯಾಗಾರವನ್ನು ಮಾಡುತ್ತಿದ್ದಾರೆ. ಈವರೆಗೆ ಒಂದು ಸಾವಿರಕ್ಕೂ ಅಧಿಕ ಮಣ್ಣಿನ ಗುಬ್ಬಚ್ಚಿ ಗೂಡುಗಳನ್ನು ಹಂಚಿದ್ದಾರೆ.
"ಪಕ್ಷಿಗಳ ಬಗ್ಗೆ ಅಪಾರ ಒಲವನ್ನು ಹೊಂದಿರುವ ಈ ಪಕ್ಷಿ ಪ್ರೇಮಿ ದಂಪತಿ, ದಿನದ ಹಲವು ಗಂಟೆಗಳನ್ನು ಪಕ್ಷಿಗಳ ಆರೈಕೆಗೆ ಮೀಸಲಿರಿಸಿದ್ದಾರೆ. ಪಕ್ಷಿಗಳ ಚಿಲಿಪಿಲಿಯಲ್ಲಿ ಆನಂದ ಇದೆ. ಎಂತಹ ಬೇಜಾರು, ಸಮಸ್ಯೆಗಳಿದ್ದರೂ ಹಕ್ಕಿಗಳ ಸ್ವರ ಕೇಳಿದರೆ ದುಃಖವೆಲ್ಲಾ ಮಾಯವಾಗಿ ನೆಮ್ಮದಿ ದೊರೆಯುತ್ತದೆ," ಎಂದು ಈ ಪಕ್ಷಿ ಪ್ರೇಮಿ ದಂಪತಿ ತಿಳಿಸುತ್ತಾರೆ.












Click it and Unblock the Notifications