BS Yediyurappa Profile: ಧಣಿವರಿಯದ ಬಿಎಸ್‌ವೈ ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕ- ಇಲ್ಲಿದೆ ಅವರ ಜೀವನಗಾಥೆ
ರಾಜ್ಯ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕರಾಗಿ ಗುರುತಿಸಿಕೊಂಡವರು ಬಿಎಸ್ ಯಡಿಯೂರಪ್ಪ. ಧಣಿವರದಿಯದ ರಾಜಕಾರಣಕ್ಕೆ ಹೆಸರು ಮಾಡಿರುವ ಅವರು ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಅವಿರತವಾಗಿ ಶ್ರಮಿಸಿದವರು. ಪಕ್ಷದ ಜೊತೆಜೊತೆಗೆ ತಮ್ಮ ವೈಯಕ್ತಿಕ ವರ್ಚಸ್ಸನ್ನೂ ಬೆಳಿಸಿಕೊಂಡವರು. ಈ ಮಹಾನಾಯಕನ ಜೀವನಗಾಥೆಯನ್ನು ತಿಳಿಯಲು ಇದನ್ನು ಓದಿ.

ಬಿಎಸ್‌ವೈ ವೈಯಕ್ತಿಕ ಬದುಕು
ಯಡಿಯೂರಪ್ಪನವರು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಬೂಕನಕೆರೆ ಎಂಬ ಗ್ರಾಮದಲ್ಲಿ ಜನಿಸಿದರು. 27 ಫೆಬ್ರವರಿ 1943 ರಂದು ಇವರ ಜನನವಾಯಿತು. ಇವರ ತಂದೆ ಸಿದ್ದಲಿಂಗಪ್ಪ ಹಾಗೂ ತಾಯಿ ಪುಟ್ಟತಾಯಮ್ಮ. ಅವರು ತಮ್ಮ ಪದವಿ ಪೂರ್ವ ಕಾಲೇಜು ಶಿಕ್ಷಣವನ್ನು ಮಂಡ್ಯದ ಸರ್ಕಾರಿ ಕಾಲೇಜಿನಲ್ಲಿ ಮುಗಿಸಿದರು. ವೀರಶೈವ ಲಿಂಗಾಯತ ಸಮುದಾಯದ ಗಾಣಿಗ ಉಪಜಾತಿಗೆ ಬಿಎಸ್‌ವೈ ಸೇರಿದವರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಗುಮಾಸ್ತರಾಗಿ ನೇಮಕ
1965 ರಲ್ಲಿ, ಯಡಿಯೂರಪ್ಪನವರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಮೊದಲ ವಿಭಾಗದ ಗುಮಾಸ್ತರಾಗಿ ನೇಮಕಗೊಂಡರು. ಆದರೆ ಅವರು ಕೆಲಸವನ್ನು ತೊರೆದು ಶಿಕಾರಿಪುರಕ್ಕೆ ತೆರಳಿ ಅಲ್ಲಿ ವೀರಭದ್ರ ಶಾಸ್ತ್ರಿಯವರ ಶಂಕರ ರೈಸ್ ಮಿಲ್‌ನಲ್ಲಿ ಗುಮಾಸ್ತರಾಗಿ ಸೇರಿದರು. 1967 ರಲ್ಲಿ ರೈಸ್ ಮಿಲ್ ಮಾಲೀಕನ ಮಗಳು ಮೈತ್ರಾದೇವಿಯನ್ನು ವಿವಾಹವಾದರು. ಬಳಿಕ ಶಿವಮೊಗ್ಗದಲ್ಲಿ ಹಾರ್ಡ್ ವೇರ್ ಶಾಪ್ ಸ್ಥಾಪಿಸಿದ್ದರು.
ಯಡಿಯೂರಪ್ಪ ಅವರಿಗೆ ರಾಘವೇಂದ್ರ (ಶಿವಮೊಗ್ಗ ಸಂಸದ), ಬಿ ವೈ ವಿಜಯೇಂದ್ರ (ರಾಜ್ಯ ಬಿಜೆಪಿಯ ಯುವ ನಾಯಕ) ಎಂಬ ಪುತ್ರರಿದ್ದಾರೆ. ಅರುಣಾದೇವಿ, ಪದ್ಮಾವತಿ ಮತ್ತು ಉಮಾದೇವಿ ಎಂಬ ಮೂವರು ಪುತ್ರಿಯರಿದ್ದಾರೆ. ಅವರು ರಾಜಕಾರಣದಲ್ಲಿ ಸಕ್ರಿಯರಾಗಿಲ್ಲ.

ಬಿಎಸ್‌ವೈ ರಾಜಕೀಯ ಜೀವನ
ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಗುರುತಿಸಿಕೊಂಡಿದ್ದ ಯಡಿಯೂರಪ್ಪ, 1972ರಲ್ಲಿ ಶಿಕಾರಿಪುರ ಪುರಸಭೆಗೆ ಆಯ್ಕೆಯಾದರು. ಅಂದಿನ ಜನಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿಯೂ ನೇಮಕಗೊಂಡರು. 1975ರಲ್ಲಿ ಶಿಕಾರಿಪುರ ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾದರು.
1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಬಿಎಸ್‌ವೈ ಜೈಲಿಗೆ ಹೋದರು. ಶಿವಮೊಗ್ಗ ಹಾಗೂ ಬಳ್ಳಾರಿ ಜೈಲಿನಲ್ಲಿ ಸೆರೆವಾಸ ಅನುಭವಿಸಿದರು. 1980ರಲ್ಲಿ ಬಿಜೆಪಿಯ ಶಿಕಾರಿಪುರ ತಾಲೂಕು ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು. ಆ ನಂತರ 1985ರಲ್ಲಿ ಬಿಜೆಪಿ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದರು.

ವಿರೋಧ ಪಕ್ಷದ ನಾಯಕರಾಗಿ ಸೇವೆ
1988ರಲ್ಲಿ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರಾದರು. ಅವರು 1983 ರಲ್ಲಿ ಶಿಕಾರಿಪುರದಿಂದ ಮೊದಲ ಬಾರಿಗೆ ಆಯ್ಕೆಯಾದರು. ಅಲ್ಲಿಂದ ಇಲ್ಲಿಯವರೆಗೂ ಬಿಎಸ್‌ವೈ ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 1994 ರಲ್ಲಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದರು. ಅವರು 2004 ರಲ್ಲಿ ಮತ್ತೆ ಕರ್ನಾಟಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದರು.

2007ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ
ಅಕ್ಟೋಬರ್ 2007 ರಲ್ಲಿ, ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕರದ ಒಪ್ಪಂದ ಪ್ರಕಾರ, ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ, ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ತಮ್ಮ ಸ್ಥಾನವನ್ನು ಬಿಟ್ಟುಕೊಡಲು ನಿರಾಕರಿಸಿದರು. ಆಗ ಯಡಿಯೂರಪ್ಪ ಕುಮಾರಸ್ವಾಮಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದುಕೊಂಡರು. 2007ರ ನವೆಂಬರ್ 7 ರಂದು ಕರ್ನಾಟಕವು ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟಿತು. ಇದು ಯಡಿಯೂರಪ್ಪನವರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಲು ದಾರಿ ಮಾಡಿಕೊಟ್ಟಿತು. ಯಡಿಯೂರಪ್ಪ ಅವರು 12 ನವೆಂಬರ್ 2007 ರಂದು ಕರ್ನಾಟಕದ 25 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ, ಅವರಿಗೆ ಸ್ಪಷ್ಟ ಬಹುಮತ ಸಿಗದೇ ಇದ್ದದ್ದರಿಂದ 19 ನವೆಂಬರ್ 2007 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಎರಡನೇ ಬಾರಿಗೆ ಸಿಎಂ ಆದ ಬಿಎಸ್‌ವೈ
2008 ರ ವಿಧಾನಸಭಾ ಚುನಾವಣೆಯಲ್ಲಿ, ಯಡಿಯೂರಪ್ಪ ಅವರು ಸಮಾಜವಾದಿ ಪಕ್ಷದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ವಿರುದ್ಧ ಶಿಕಾರಿಪುರದಿಂದ ಸ್ಪರ್ಧಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಬಂಗಾರಪ್ಪನವರಿಗೆ ಬೆಂಬಲವನ್ನು ನೀಡಿದ್ದವು. ಇದರ ಹೊರತಾಗಿಯೂ ಯಡಿಯೂರಪ್ಪ 45,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರು. ಈ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಈ ಮೂಲಕ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಗಟ್ಟಿ ಅಸ್ತಿತ್ವ ಸಿಕ್ಕಿತು. ಯಡಿಯೂರಪ್ಪ ಅವರು 30 ಮೇ 2008 ರಂದು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

2011ರಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ
ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ವ್ಯಾಪಕ ಭ್ರಷ್ಟಾಚಾರ ಆರೋಪಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ಅವರು 31 ಜುಲೈ 2011ರಂದು ರಾಜೀನಾಮೆ ನೀಡಿದರು. ಕೆಲ ದಿನಗಳ ಕಾಲ ಜೈಲಿಗೂ ಹೋದರು. ಅವರು 30 ನವೆಂಬರ್ 2012 ರಂದು ಭಾರತೀಯ ಜನತಾ ಪಕ್ಷದ ಶಾಸಕಾಂಗದ ಸದಸ್ಯ ಸ್ಥಾನ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಕರ್ನಾಟಕ ಜನತಾ ಪಕ್ಷವನ್ನು ಸ್ಥಾಪಿಸಿದರು. ಆದರೆ, ಕೆಜೆಪಿ ಪಕ್ಷವು ರಾಜಕೀಯವಾಗಿ ಅಷ್ಟೇನು ಯಶಸ್ಸು ಕಾಣಲಿಲ್ಲ. ಈ ಹಿನ್ನೆಲೆಯಲ್ಲಿ ನವೆಂಬರ್ 2013 ರಲ್ಲಿ, ಅವರು ಬಿಜೆಪಿಗೆ ಮರಳಿದರು. ಆ ಸಮಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿತ್ತು.

ಮೂರನೇ ಬಾರಿಗೆ ಕರ್ನಾಟಕ ಮುಖ್ಯಮಂತ್ರಿಯಾಗಿ ಆಯ್ಕೆ
2016 ರಲ್ಲಿ ಬಿಜೆಪಿ ಅವರನ್ನು ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರನ್ನಾಗಿ ಮರು ನೇಮಕ ಮಾಡಿತು. ಅವರು 2018 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು. ಆದರೆ ಪಕ್ಷವು ಕೇವಲ 104 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಸರಳ ಬಹುಮತಕ್ಕೆ 9 ಸದಸ್ಯರ ಕೊರತೆ ಇತ್ತು. ಇಷ್ಟಾದರೂ, ಯಡಿಯೂರಪ್ಪ ಅವರನ್ನು ಸರ್ಕಾರ ರಚಿಸಲು ಮತ್ತು ಮುಖ್ಯಮಂತ್ರಿಯಾಗಲು ರಾಜ್ಯಪಾಲರು ಆಹ್ವಾನಿಸಿದರು. ಅವರ ಪಕ್ಷವು 104 ಸ್ಥಾನಗಳೊಂದಿಗೆ ವಿಧಾನಸಭೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿದೆ ಎಂದು ಪ್ರತಿಪಾದಿಸಿದರು. 17 ಮೇ 2018 ರಂದು ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಮೂರನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾದರು.

ಮೂರನೇ ಬಾರಿಯೂ ರಾಜೀನಾಮೆ
ರಾಜ್ಯಪಾಲರು ಬಹುಮತ ಸಾಬೀತುಪಡಿಸಲು ಅವರಿಗೆ 15 ದಿನಗಳ ಕಾಲಾವಕಾಶ ನೀಡಿದ್ದರು. ಆದರೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಅದನ್ನು ಕೇವಲ 24 ಗಂಟೆಗಳಿಗೆ ಮೊಟಕುಗೊಳಿಸಿತು. ಶೀಘ್ರದಲ್ಲೇ ವಿಶ್ವಾಸಮತ ಪರೀಕ್ಷೆಗೆ ಆದೇಶಿಸಿತು. 19 ಮೇ 2018 ರಂದು ಸಂಜೆ 4 ಗಂಟೆಗೆ ವಿಶ್ವಾಸ ಮತ ಪರೀಕ್ಷೆ ನಡೆಯಬೇಕಿತ್ತು. ವಿಶ್ವಾಸ ಮತ ಪರೀಕ್ಷೆಗೂ ಮುನ್ನವೇ ಬಹುಮತವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿ ಬಿಎಸ್‌ವೈ ರಾಜೀನಾಮೆ ನೀಡಿದರು. ಜೆಡಿಎಸ್ - ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿತು.

4ನೇ ಹಾಗೂ ಕೊನೆಯ ಬಾರಿಗೆ ಸಿಎಂ ಆದ ಬಿಎಸ್‌ವೈ
2019ರ ಜುಲೈನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್‌ನ 16 ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡರು. ಜುಲೈ 26 ರಂದು ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ ಅವರು ಬಿಎಸ್‌ವೈ ಅವರನ್ನು ಮುಖ್ಯಮಂತ್ರಿಯಾಗಲು ಆಹ್ವಾನಿಸಿದರು. ಯಡಿಯೂರಪ್ಪ ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 26 ಜುಲೈ 2021 ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಯಡಿಯೂರಪ್ಪ ಘೋಷಿಸಿದರು.
ಬಸವರಾಜ ಬೊಮ್ಮಾಯಿ ಅವರು ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಚುನಾವಣೆ ರಾಜಕಾರಣದಿಂದ ನಿವೃತ್ತಿ ಹೊಂದುವುದಾಗಿ ಬಿಎಸ್‌ವೈ ಘೋಷಿಸಿದ್ದಾರೆ. ಆದರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ತಿಳಿಸಿದ್ದಾರೆ. ಅವರು ಬಿಜೆಪಿಯಲ್ಲಿ ಧಣಿವರಿಯದ ನಾಯಕರಾಗಿ ನೆನಪಿನಲ್ಲಿ ಉಳಿಯಲಿದ್ದಾರೆ












Click it and Unblock the Notifications