Bengaluru Rains : ಅಂಜಿ ಬಂದ ಬದುಕಿಗೆ ಗಂಜಿಎರವ 'ಮಾತೃ ಹೃದಯಿ ಬೆಂಗಳೂರು'
ಕಳೆದ ಕೆಲವು ದಿನಗಳಿಂದ ದೇಶದ ಸಿಲಿಕಾನ್ ವ್ಯಾಲಿಯಲ್ಲಿ ಅಕಾಲಿಕ ಮಳೆ ಸುರಿಯತ್ತಿದೆ. ಇದೊಂದು ನೈಸರ್ಗಿಕ ಪ್ರಕ್ರಿಯೆ ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಇಂತಹ ಪರಿಸ್ಥಿತಿಯನ್ನು ಎದುರಿಸಲು ಸರಕಾರ ಮುಂಜಾಗೃತೆ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆಯಾ ಎನ್ನುವ ಪ್ರಶ್ನೆಗೆ ಉತ್ತರ ಹೌದು. ಅದೂ ಬೊಮ್ಮಾಯಿ ಸರಕಾರ ಕೂಡಾ ಸೇರಿ.
ಬೆಂಗಳೂರಿನ ಎಲ್ಲಾ ದಿಕ್ಕುಗಳಲ್ಲಿ ಮಳೆಯಾಗುತ್ತಿದೆಯಾದರೂ, ಪ್ರವಾಹದ ಪರಿಸ್ಥಿತಿ ಎಲ್ಲಾ ಭಾಗದಲ್ಲಿ ಇಲ್ಲ ಎನ್ನುವುದು ಅತ್ಯಂತ ಸ್ಪಷ್ಟ. ನಗರದ ಪೂರ್ವ, ಆಗ್ನೇಯ ಭಾಗಗಳಲ್ಲಿ ಮಳೆಯಿಂದಾಗಿ ಹೆಚ್ಚಿನ ಸಮಸ್ಯೆಗಳು ಎದುರಾಗಿವೆ. ಹಾಗಂತ, ಇಡೀ ನಗರದಲ್ಲಿ ದೇಶವ್ಯಾಪಿ ಸುದ್ದಿಯಾಗುತ್ತಿದ್ದಂತೆ ನಾಲ್ಕು ಅಡಿ ನೀರು ನಿಲ್ಲುತ್ತಿಲ್ಲ. ದೋಣಿಗಳ ಅವಶ್ಯಕತೆಯಿಲ್ಲ, ಜೆಸಿಬಿಯಿಂದ ಓಡಾಡಬೇಕಾಗಿಲ್ಲ.
Recommended Video
ರಾಜಕಾರಣಿಗಳ, ಬಿಲ್ಡರ್ ಗಳ ಹಣದ ದಾಹಕ್ಕೆ ಬೆಂಗಳೂರಿನ ಕೆಲವು ಭಾಗಗಳಲ್ಲಿ ಮಳೆಯಿಂದ ಸಮಸ್ಯೆಯಾಗಿದೆ, ಆ ಪ್ರದೇಶಗಳಲ್ಲಿ ಪ್ರತಿಷ್ಠಿತ ಕಂಪೆನಿಗಳಿವೆ, ಐಟಿಬಿಟಿಗಳಿವೆ, ನೂರಾರು ಕೋಟಿ ತೆರಿಗೆ ಹಣ ಸಂದಾಯವಾಗುತ್ತದೆ ಎಲ್ಲವನ್ನೂ ಒಪ್ಪಿಕೊಳ್ಳೋಣ. ಹಾಗಂತ, ಇಡೀ ಬೆಂಗಳೂರಿನಲ್ಲಿ ಸಮಸ್ಯೆ ಎಂದು ಬಿಂಬಿಸಲು ಹೊರಟರೆ? ನಗರದ ಇತರ ಭಾಗದಲ್ಲಿ ಇರುವವರು ಮನುಷ್ಯರಲ್ಲವೇ?
ಕೆಲವು ತಿಂಗಳ ಹಿಂದೆ ಉತ್ತರ ಭಾರತದಲ್ಲಿ ಬಿಸಿಲು ಸುಡುತ್ತಿದ್ದಾಗ, ಇದೇ ಬೆಂಗಳೂರನ್ನು ಸ್ವರ್ಗ ಎಂದು ಕರೆಯುತ್ತಿದ್ದ ಜನರು, ಈಗ ಬೆಂಗಳೂರಿನ ಮಳೆಗೆ ವ್ಯಂಗ್ಯವಾಡುತ್ತಿದ್ದಾರೆ. ಇವರೆಲ್ಲಾ, 'ನಿಮ್ಮಿಂದ ಬೆಂಗಳೂರು ಅಲ್ಲ, ಬೆಂಗಳೂರಿನಿಂದ ನೀವು' ಎನ್ನುವುದನ್ನು ಮರೆತಂತಿದೆ. ಮರೆತಿದ್ದರೆ ಇನ್ನಾದರೂ ಅರಿತುಕೊಳ್ಳುವುದು ಸೂಕ್ತ.

ಚೆನ್ನೈನಲ್ಲಿ ಪ್ರವಾಹ ಬಂದಾಗ ಗಾಡ್ ಸೇವ್ ಚೆನ್ನೈ
ಕಳೆದ ಕೆಲವು ದಿನಗಳಿಂದ ಸತತವಾಗಿ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರು ಮಳೆಯದ್ದೇ ಸದ್ದು. ಮುಂಬೈನಲ್ಲಿ ಇದೇ ರೀತಿ ಮಳೆ ಬಂದಾಗ, ಸೇವ್ ಮುಂಬೈ ಎನ್ನುವ ಜನ, ಚೆನ್ನೈನಲ್ಲಿ ಪ್ರವಾಹ ಬಂದಾಗ ಗಾಡ್ ಸೇವ್ ಚೆನ್ನೈ ಎನ್ನುವ ಸಾಮಾಜಿಕ ಜಾಲತಾಣದ ಉತ್ತರ ಕುಮಾರರು, ಈಗ ಬೆಂಗಳೂರು ಬಗ್ಗೆ ಅಣಕವಾಡುತ್ತಿದ್ದಾರೆ. ಬೆಂಗಳೂರು ಬಿಟ್ಟು ಹೋಗುತ್ತೇವೆ ಎಂದು ಬೆದರಿಕೆ ಹಾಕಲಾಗುತ್ತಿದೆ. ಬೆಂಗಳೂರಿನಲ್ಲಿ ಮೋಟರ್ ಬೋಟ್ ಕಂಪೆನಿ ಇಡೋಣ, ಜೆಸಿಬಿಯಿಂದ ಕಚೇರಿಗೆ ಹೋದ್ವಿ ಎನ್ನುವ ಟ್ರೋಲ್ ಗಳು ಹೆಚ್ಚಾಗುತ್ತಿವೆ.

ಬೆಂಗಳೂರಿಗೆ ಬಂದು ಬದುಕು ರೂಪಿಸಿಕೊಂಡಿರುವ ಜನ
ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದು ಬದುಕು ರೂಪಿಸಿಕೊಂಡಿರುವ ಜನರು ಬ್ರೆಡ್ ಎಂಡ್ ಬಟರ್ ನೀಡುತ್ತಿರುವ ನಗರದ ಬಗ್ಗೆ ಲೇವಡಿ ಮಾಡುತ್ತಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. 'ಊರು ಬಿಟ್ಟಾಗಿಂದ ತಿಂದ ಒಂದೊಂದು ಕಾಳು ಅನ್ನದ ದುಡಿಮೆಗೆ ದಾರಿಯಾಗಿದ್ದು ಈ ಊರು, ಊರಲ್ಲಿ ಕೆಲಸಕ್ಕೆ ಬಾರದವರು ಎನಿಸಿಕೊಳ್ಳುತ್ತಿದ್ದವರಿಗೆ ಕೆಲಸ ಕೊಟ್ಟಿದ್ದು ಈ ಊರು' ಎನ್ನುವ ಭಾವನಾತ್ಮಕ ಮಾತುಗಳು ಸಾಮಾಜಿಕ ತಾಣದಲ್ಲಿ ಬಂದು ಬಂದು ಬೀಳುತ್ತಿದೆ.

ಮನೆಗಳಿಗೆ ನೀರು ನುಗ್ಗಿ ಆವಾಂತರ
ನಾಲ್ಕು ದಿನದ ಮಳೆಗೆ ರಸ್ತೆ ,ಮನೆಗಳಿಗೆ ನೀರು ನುಗ್ಗಿ ಆವಾಂತರಗಳಾದರೆ ಒಂದು ಹಂತಕ್ಕೆ ಆಡಳಿತದ ಅಸಮರ್ಪಕ ನಿರ್ವಹಣೆಯನ್ನು ಟೀಕಿಸಬಹುದಾದರೂ, ಇಂತಾ ಜಡಿಮಳೆಯ ಪ್ರಕೃತಿ ವಿಕೋಪಕ್ಕೆ ಅಮೇರಿಕ , ಯೂರೋಪ್ ಮುಂತಾದ ದೇಶಗಳ ಸುಸಜ್ಜಿತ ನಗರಗಳು ಸಿಕ್ಕು ಒದ್ದಾಡಿರುವುದನ್ನು ಗಮನಿಸಬೇಕು. ಆದರೆ ನಾಲ್ಕು ದಿನದ ಸಂಕಷ್ಟಕ್ಕೆ ವರುಷಗಳಿಂದ ಪೊರೆದ ಮಾತೃ ಹೃದಯಿ ಬೆಂಗಳೂರಿಗೆ ಬೈದರೇ? ತಾಯಿ ಭುವನೇಶ್ವರಿ ಮೆಚ್ಚಿಯಾಳೆ? ಎಂದು ಕವಿರಾಜ್ ಹೃದಯಸ್ಪರ್ಶಿ ನುಡಿಯನ್ನು ಹರಿಸಿದ್ದಾರೆ.

ಹಲೋ ಬೆಂಗಳೂರು: ಅಂಜಿ ಬಂದ ಬದುಕಿಗೆ ಗಂಜಿಎರವ ಊರಿದು
ಭಾರತವೂ ಸೇರಿ ವಿಶ್ವದ ಯಾವುದೇ ದೊಡ್ಡ ನಗರಗಳು ಹಂಡ್ರೆಂಡ್ ಪರ್ಸೆಂಟ್ ಸರಿಯಾದ ಸಿಟಿ ಎಂದು ಹೇಳಲು ಬರುವುದಿಲ್ಲ. ತೆರಿಗೆ ಪಾವತಿ ಮಾಡುವ ಮೂಲಭೂತ ಸೌಕರ್ಯವನ್ನು ಕೊಡಿ ಎಂದು ಕೇಳುವ ಹಕ್ಕು ನಮಗಿದೆ, ಆದರೆ ಅದಕ್ಕೊಂದು ರೀತಿನೀತಿ ಇದೆ. ಅದನ್ನು ಮರೆತು ಇಷ್ಟು ದಿನ ಅನ್ನ ಕೊಟ್ಟ ನಗರವನ್ನು ಅಣಕವಾಡಿಕೊಂಡು ಬಂದರೆ, ಆಕಾಶಕ್ಕೆ ಉಗುಳಿದರೆ ಅದು ನಮ್ಮ ಮುಖಕ್ಕೆ ಬಂದು ಬೀಳುತ್ತದೆ ಎನ್ನುವ ಕಾಮನಸೆನ್ಸ್ ಬೇಡವೇ?












Click it and Unblock the Notifications