ದೇವಾಲಯ ಸ್ವಾಯತ್ತತೆ: ಮುಜರಾಯಿ ದೇವರ ಜವಾಬ್ದಾರಿ ಭಕ್ತರಿಗೆ, ತಪ್ಪು, ಒಪ್ಪುಗಳು
ಕಳೆದ ಚಳಿಗಾಲದ ಅಧಿವೇಶನದಲ್ಲಿ ವಿವಾದೀತ ಮತಾಂತರ ನಿಷೇಧ ಕಾಯಿದೆಯನ್ನು ತರಾತುರಿಯಲ್ಲಿ ಮಂಡಿಸಿ, ಅಸೆಂಬ್ಲಿಯಲ್ಲಿ ಅನುಮೋದನೆ ಮಾಡಿಸಿಕೊಂಡ ಬೊಮ್ಮಾಯಿ ಸರಕಾರ, ಈಗ ಮತ್ತೊಂದು ಹೆಜ್ಜೆಯತ್ತ ಕಣ್ಣಿಟ್ಟಿದೆ. ಅದು, ಹಿಂದೂ ದೇವಾಲಯಗಳ ಸ್ವಾಯತ್ತತೆ.
ವಿಜಯದಶಮಿಯ ದಿನದಂದು ಸಂಘದ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್, ಉತ್ತರ ಮತ್ತು ದಕ್ಷಿಣ ಭಾರತದ ದೇವಾಲಯಗಳಲ್ಲಿರುವ ವ್ಯತ್ಯಾಸದ ಬಗ್ಗೆ ವಿವರಣೆಯನ್ನು ನೀಡಿದ್ದರು. ಸರಕಾರ ಮುಜರಾಯಿ ವ್ಯಾಪ್ತಿಯಲ್ಲಿ ಬರುವ ದೇವಾಲಗಳನ್ನು ಟ್ರಸ್ಟ್ ಮೂಲಕ ಯಾಕೆ ಭಕ್ತರ ಕೈಗೆ ಕೊಡಬಾರದು ಎಂದು ಹೇಳಿದ್ದರು.
ಇದರ ಮುಂದುವರಿದ ಭಾಗದಂತೆ ಹೇಳಬಹುದಾದ ನಡೆಯನ್ನು ಬೊಮ್ಮಾಯಿ ಸರಕಾರ ಇಟ್ಟಿದೆ. ಮುಜರಾಯಿ ವ್ಯಾಪ್ತಿಯಲ್ಲಿ ಬರುವ ದೇವಾಲಗಳನ್ನು ಟ್ರಸ್ಟ್ ಮೂಲಕ ಮುನ್ನಡೆಸುವ, ದೇವರ ಹೆಸರಿನಲ್ಲೇ ಜಾಗ ಖರೀದಿಸುವ ನಿರ್ಧಾರಕ್ಕೆ ಬೊಮ್ಮಾಯಿ ಸರಕಾರ ಬಂದಿದೆ. ಆ ಮೂಲಕ, ಸುಪ್ರೀಂಕೋರ್ಟ್ ಕೂಡಾ ಈ ವಿಚಾರದಲ್ಲಿ ಕೊಟ್ಟಿದ್ದ ತೀರ್ಪನ್ನು ಪಾಲಿಸಿದಂತಾಗುತ್ತದೆ, ಜೊತೆಗೆ, ಭಾಗವತ್ ಮಾತಿಗೂ ಬೆಲೆಕೊಟ್ಟಂತಾಗುತ್ತದೆ ಎನ್ನುವುದು ಸರಕಾರದ ಲೆಕ್ಕಾಚಾರ.
ಯಾವುದೇ ವ್ಯಕ್ತಿ ದೇವಾಲಯಕ್ಕೆ ಸಂಬಂಧಿಸಿದ ಆಸ್ತಿಪಾಸ್ತಿಗಳನ್ನು ಲಪಟಾಯಿಸಬಾರದು, ದೇವಾಲಯದ ಜಾಗಗಳು ದೇವಸ್ಥಾನದ ಹೆಸರಿನಲ್ಲೇ ನೊಂದಾಣಿಯಾಗಬೇಕು. ಖಾಸಗಿ ಟ್ರಸ್ಟ್ ಗಳನ್ನು ರಚಿಸಿ, ದೇವಾಲಯದ ಆಡಳಿತವನ್ನು ಟ್ರಸ್ಟ್ ಸುಪರ್ದಿಗೆ ನೀಡಬೇಕು. ಇಡೀ ದೇಶದಲ್ಲಿ ಒಂದೇ ಕಾನೂನು ಇರಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿತ್ತು. ಆದರೆ, ಇದರಿಂದ ದೇವಾಲಯಗಳು ಅಭಿವೃದ್ದಿಯೂ ಗೊಳ್ಳಬಹುದು, ಅವ್ಯವಹಾರಕ್ಕೂ ಕಾರಣವಾಗಬಹುದು.

ಸಿಗಂದೂರು ದೇವಾಲಯವು ಮುಜರಾಯಿ ವ್ಯಾಪ್ತಿಗೆ ಬರುವ ದಾರಿಯಲ್ಲಿತ್ತು
ಸಾಮಾನ್ಯವಾಗಿ ಅರ್ಚಕರು ಮತ್ತು ಟ್ರಸ್ಟ್ ಮಂಡಳಿಯ ನಡುವೆ ಗೊಂದಲವಿದ್ದರೆ ಮಾತ್ರ, ಅಂತಹ ದೇವಾಲಯಗಳನ್ನು ಸರಕಾರ ತಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತದೆ. ಇದಕ್ಕೆ ಕೊಡಬಹುದಾದ ಉದಾಹರಣೆಯೆಂದರೆ ಬೆಂಗಳೂರಿನ ಸರ್ಕಲ್ ಮಾರಮ್ಮ ದೇವಾಲಯ. ಇದೇ ರೀತಿ ಗೊಂದಲದಗೂಡಾಗಿದ್ದ ಸಿಗಂದೂರು ದೇವಾಲಯವು ಮುಜರಾಯಿ ವ್ಯಾಪ್ತಿಗೆ ಬರುವ ದಾರಿಯಲ್ಲಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಟ್ರಸ್ಟ್ ಸುಪರ್ದಿಯಲ್ಲೇ ಉಳಿದುಕೊಂಡಿತ್ತು.

ಉಡುಪಿ ಕೃಷ್ಣಮಠವನ್ನು ಸಿದ್ದರಾಮಯ್ಯ, ಮುಜರಾಯಿ ಇಲಾಖೆಗೆ ಸೇರಿಸಲು ಪ್ರಯತ್ನ
ಇದಕ್ಕೆ ಅಪವಾದ ಎನ್ನುವಂತೆ, ಹಿಂದೊಮ್ಮೆ ಯಾವುದೇ ಗೊಂದಲವಿಲ್ಲದಿದ್ದರೂ ಧರ್ಮಸ್ಥಳ ದೇವಾಲಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸರಕಾರ ವಿಫಲ ಪ್ರಯತ್ನ ನಡೆಸಿತ್ತು. ಇನ್ನು, ಉಡುಪಿ ಕೃಷ್ಣಮಠವನ್ನು ಸಿದ್ದರಾಮಯ್ಯನವರ ಸರಕಾರ, ಮುಜರಾಯಿ ಇಲಾಖೆಗೆ ಸೇರಿಸಲು ಪ್ರಯತ್ನ ನಡೆಸಿದ್ದರು ಎನ್ನುವುದನ್ನು ಕಾಂಗ್ರೆಸ್ ನಾಯಕರೇ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಸರಕಾರದ ಸುಪರ್ದಿಗೆ ದೇವಾಲಯಗಳು ಬಂದ ನಂತರ, ದೇವಸ್ಥಾನಗಳು ಅಭಿವೃದ್ದಿಗೊಂಡ ಉದಾಹರಣೆಗಳೂ ಇವೆ, ಅವ್ಯವಹಾರ ಹೆಚ್ಚಾದ ನಿದರ್ಶನಗಳೂ ಇವೆ.

ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಸಾಕಷ್ಟು ಬಾರಿ ಅವ್ಯವಹಾರದ ಘಾಟು
ರಾಜ್ಯದ ಎ ಗ್ರೇಡ್ ನಲ್ಲಿ ಬರುವಂತಹ ಶ್ರೀಮಂತ ದೇವಾಲಯಗಳು, ಉದಾಹರಣೆಗೆ ಬೆಂಗಳೂರಿನ ಬನಶಂಕರಿ ದೇವಾಲಯ ಸಾಕಷ್ಟು ಅಭಿವೃದ್ದಿಯನ್ನು ಕಂಡಿದೆ. ಇನ್ನು, ಆದಾಯದ ವಿಚಾರದಲ್ಲಿ ರಾಜ್ಯದ ನಂಬರ್ ಒನ್ ಮತ್ತು ಎರಡನೇ ಸ್ಥಾನದಲ್ಲಿರುವ ಕುಕ್ಕೆ ಸುಬ್ರಮಣ್ಯ ಮತ್ತು ಕೊಲ್ಲೂರು ಮೂಕಾಂಬಿಕೆ ದೇವಾಲಯದಲ್ಲಿ ಸಾಕಷ್ಟು ಬಾರಿ ಅವ್ಯವಹಾರದ ಘಾಟು ಹೊರಬಿದ್ದಿತ್ತು. ಇನ್ನು, ಮೂರನೇ ಸ್ಥಾನದಲ್ಲಿರುವ ಮಲೆಮಹದೇಶ್ವರ ದೇವಾಲಯವೂ ಅಭಿವೃದ್ದಿಯನ್ನು ಕಂಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ
"ರಾಜ್ಯದ ದೇವಾಲಯಗಳು ಜನರ ಆಸ್ತಿ. ಬಿಜೆಪಿ ಸರ್ಕಾರ ಈ ಆಸ್ತಿಯನ್ನು ಬಿಜೆಪಿ ಹಾಗೂ ಸಂಘ- ಪರಿವಾರದ ಕಾರ್ಯಕರ್ತರಿಗೆ ಹಸ್ತಾಂತರ ಮಾಡಲು ಮುಂದಾಗಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಆದರೆ, ದೇವಾಲಯದ ಸ್ವಾಯತ್ತತೆಯನ್ನು ಹೆಚ್ಚಿನ ಮಠಾಧೀಶರೂ ಸ್ವಾಗತಿಸುತ್ತಾರೆ. "ಹಿಂದೂ ದೇವಾಲಯದ ಆದಾಯ, ಆಯಾಯ ದೇವಸ್ಥಾನದ ಅಭಿವೃದ್ದಿಗೇ ಹೋಗುವುದರಿಂದ ಇದೊಂದು ಒಳ್ಳೆಯ ನಿರ್ಧಾರವೆಂದು" ಪ್ರಮೋದ್ ಮುತಾಲಿಕ್ ಹೇಳುತ್ತಾರೆ.

ಸ್ವಾಯತ್ತತೆ ವಿಚಾರದಲ್ಲಿ, ಸರಕಾರದ ನಿಲುವು ತಪ್ಪು ಅಥವಾ ಸರಿ
ಪ್ರಾಚೀನ ಕಾಲದಿಂದ ಬಂದಿರುವ ಹಿಂದೂ ದೇವಾಲಯಗಳು ಸರ್ಕಾರದ ಅಧೀನದಲ್ಲಿ ಇರುವುದರಿಂದ ಅದರ ಅಭಿವೃದ್ಧಿ ಆಗುತ್ತಿಲ್ಲ ಎನ್ನುವುದು ಕೆಲವರ ಒಪ್ಪಿಕೊಳ್ಳುವಂತಹ ವಾದ. ಪಾರಂಪರಿಕ ಪೂಜಾ ವಿಧಿವಿಧಾನಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎನ್ನುವುದು ಸರಕಾರ ಸ್ಪಷ್ಟ ಪಡಿಸಿದೆ. ಆದರೆ, ಶ್ರೀಮಂತ ದೇವಾಲಯಗಳು ಟ್ರಸ್ಟ್ ವ್ಯಾಪ್ತಿಗೆ ಬಂದರೆ, ಆದಾಯ ಸೋರಿಕೆಯಾಗುವ ಸಾಧ್ಯತೆಯಿಲ್ಲದಿಲ್ಲ. ಹಾಗಾಗಿ, ದೇವಾಲಯಗಳ ಸ್ವಾಯತ್ತತೆ ವಿಚಾರದಲ್ಲಿ, ಸರಕಾರದ ನಿಲುವು ತಪ್ಪು ಅಥವಾ ಸರಿ ಎನ್ನುವ ನಿರ್ಣಯಕ್ಕೆ ಬರುವುದು ಈಗ ಶೀಘ್ರವಾದೀತು.












Click it and Unblock the Notifications