ಕೊರೊನಾ ತಡೆಗೆ ಆಯುಷ್ ಸಲಹೆ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸೂಪರ್ ಸೂತ್ರಗಳು
ನವದೆಹಲಿ, ಏಪ್ರಿಲ್ 14: ಇಂದು ಬೆಳಗ್ಗೆ ರಾಷ್ಟ್ರವನ್ನುದ್ದೇಶಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ದೇಶವ್ಯಾಪಿ ಲಾಕ್ ಡೌನ್ ವಿಸ್ತರಣೆ ಮಾಡಿದರು. ಮೇ 3 ರವರೆಗೆ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಮೋದಿ ಘೋಷಿಸಿದರು.
ಇದೇ ವೇಳೆ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಸಪ್ತ ಸೂತ್ರಗಳನ್ನೂ ನರೇಂದ್ರ ಮೋದಿ ನೀಡಿದರು. ''ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಿ.. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ.. ಹೊರಗೆ ಹೋಗಬೇಕಾದರೆ ಮನೆಯಲ್ಲೇ ಮಾಡಿದ ಮಾಸ್ಕ್ ಧರಿಸಿ.. ಅಗತ್ಯವಿರುವವರಿಗೆ ಆಹಾರ ನೀಡಿ.. ಕೊರೊನಾ ವಾರಿಯರ್ಸ್ ಗೆ ಧನ್ಯವಾದ ತಿಳಿಸಿ.. ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳಿ..'' ಎಂದು ಪ್ರಧಾನಿ ಮೋದಿ ಹೇಳಿದರು.
ಇವುಗಳ ಜೊತೆಗೆ ''ಆಯುಷ್ ಮಂತ್ರಾಲಯದ ಮಾರ್ಗಸೂಚಿಗಳನ್ನು ಅನುಸರಿಸಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ'' ಎಂದೂ ನರೇಂದ್ರ ಮೋದಿ ಕರೆ ನೀಡಿದರು.
ಹಾಗಾದ್ರೆ, ಸ್ವಸ್ಥ ಆರೋಗ್ಯಕ್ಕಾಗಿ ಆಯುಷ್ ಮಂತ್ರಾಲಯ ನೀಡಿರುವ ಸೂತ್ರಗಳು ಯಾವುದು ಅಂತೀರಾ.? ಆ ಕುರಿತ ವಿವರ ಇಲ್ಲಿದೆ, ನೋಡಿ...

ಇವುಗಳನ್ನು ತಪ್ಪದೆ ಪಾಲಿಸಿ
* ಸಾಧ್ಯವಾದಷ್ಟು ನೀರು ಕುಡಿಯಿರಿ. ಅದರಲ್ಲೂ ಕುದಿಸಿ ಆರಿಸಿದ ನೀರಿಗೆ ಪ್ರಾಮುಖ್ಯತೆ ನೀಡಿ.
* ಪ್ರತಿ ದಿನ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ಯೋಗಾಸನ, ಪ್ರಾಣಾಯಾಮ, ಧ್ಯಾನದ ಮೊರೆ ಹೋಗಿ.
* ಆಹಾರದಲ್ಲಿ ಸಾಧ್ಯವಾದಷ್ಟು ಅರಿಶಿಣ, ಜೀರಿಗೆ, ಧನಿಯ, ಬೆಳ್ಳುಳ್ಳಿ ಬಳಕೆ ಮಾಡಿ.

ಕಷಾಯ ಕುಡಿಯಿರಿ
* ಪ್ರತಿದಿನ ಬೆಳಗ್ಗೆ 1 ಟೀ ಸ್ಪೂನ್ ಅಷ್ಟು ಚವನ್ ಪ್ರಶ್ ಸೇವಿಸಿರಿ. ಮಧುಮೇಹ ಕಾಯಿಲೆ ಹೊಂದಿರುವವರು ಸಕ್ಕರೆ ರಹಿತ ಚವನ್ ಪ್ರಶ್ ಸೇವಿಸಿ.
* ದಿನಕ್ಕೆ ಎರಡು ಬಾರಿ ತುಳಸಿ, ದಾಲ್ಚಿನ್ನಿ, ಕಾಳು ಮೆಣಸು, ಒಣ ಶುಂಠಿ, ಒಣ ದ್ರಾಕ್ಷಿ, (ರುಚಿಗೆ ಬೆಲ್ಲ ಅಥವಾ ನಿಂಬೆಹಣ್ಣು) ಸೇರಿಸಿ ಮಾಡಿದ ಕಷಾಯ/ಹರ್ಬಲ್ ಟೀ ಕುಡಿಯಿರಿ.
* ಬಿಸಿ ಹಾಲಿಗೆ ಅರಿಶಿನ ಬೆರೆಸಿ ಪ್ರತಿ ದಿನ ಸೇವಿಸಿ

ಮೂಗಿನ ರಕ್ಷಣೆಗೆ ಹೀಗೆ ಮಾಡಿ
ಮಲಿನ ಗಾಳಿಯ ಸೇವನೆ ತಡೆಯಲು ಮೂಗಿಗೆ ತುಪ್ಪವನ್ನು ಸವರಿಕೊಳ್ಳಿ. ತುಪ್ಪ ಇಲ್ಲದಿದ್ದರೆ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಕಿವಿಯೊಳಗೆ, ಮೂಗಿನ ಹೊಳ್ಳೆಗಳಿಗೆ ಲೇಪಿಸಿಕೊಳ್ಳಿ. ದಿನಕ್ಕೆ ಮೂರು ಬಾರಿ ಹೀಗೆ ಮಾಡುವುದರಿಂದ ಶೀತದಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ.

ಎಣ್ಣೆಯಿಂದ ಬಾಯಿ ಮುಕ್ಕಳಿಸಿ
ಗಂಟಲಿನಲ್ಲಿ ವೈರಸ್ ಸೇರುವುದನ್ನು ತಡೆಯಲು ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ ಬಾಯಿ ಮುಕ್ಕಳಿಸುವುದನ್ನು ರೂಢಿಸಿಕೊಳ್ಳಿ. ಒಂದು ಚಮಚ ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು ಮೂರು ನಿಮಿಷಗಳ ಕಾಲ ಚೆನ್ನಾಗಿ ಬಾಯಿ ಮುಕ್ಕಳಿಸಿ ಉಗಿಯಿರಿ. ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಬಾಯಿ ತೊಳೆದುಕೊಳ್ಳಿ.

ಕೆಮ್ಮಿದ್ದರೆ ಹೀಗೆ ಮಾಡಿ..
* ಗಂಟಲು ತುರಿಕೆ ಮತ್ತು ಒಣ ಕೆಮ್ಮು ತಡೆಯಲು ಪುದಿನ, ಅಜ್ವಾನಾ ಮಿಶ್ರಿತ ಬಿಸಿ ನೀರಿನ ಹಬೆ ತೆಗೆದುಕೊಳ್ಳಿ.
* ಜೇನು ತುಪ್ಪದ ಜೊತೆಗೆ ಲವಂಗ ಪುಡಿ ಬೆರೆಸಿ ಸೇವಿಸುವುದರಿಂದ ಕೆಮ್ಮನ್ನು ತಡೆಗಟ್ಟಬಹುದು.

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ
ಈ ಮೇಲಿನ ಎಲ್ಲಾ ಸೂತ್ರಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ ಆಗುತ್ತದೆ ಎಂದು ಆಯುಷ್ ಮಂತ್ರಾಲಯ ತಿಳಿಸಿದೆ. ಹಾಗಂದ ಮಾತ್ರಕ್ಕೆ ಇವು ಕೋವಿಡ್-19 ರೋಗವನ್ನೇ ತಡೆಯುತ್ತವೆ ಅಥವಾ ವಾಸಿ ಮಾಡುತ್ತವೆ ಎಂದರ್ಥವಲ್ಲ. ಹೀಗಾಗಿ, ಮನೆಯಲ್ಲೇ ಇರಿ, ಇವುಗಳೆಲ್ಲವನ್ನು ಬಳಸಿಕೊಂಡು ಸುರಕ್ಷಿತವಾಗಿರಿ. ಅಪ್ಪಿ-ತಪ್ಪಿ ಕೊರೊನಾ ವೈರಸ್ ಸೋಂಕಿನ ಲಕ್ಷಣ ಕಾಣಿಸಿಕೊಂಡರೆ, ವೈದ್ಯರಿಂದ ಚಿಕಿತ್ಸೆ ಪಡೆಯಿರಿ.











Click it and Unblock the Notifications