ಯುಪಿ ಚುನಾವಣೆ: ಈ ಬಾರಿ ಪ್ರಣಾಳಿಕೆ ಬಿಡುಗಡೆ ಮಾಡಲ್ಲ ಬಿಎಸ್‌ಪಿ!
ಲಕ್ನೋ, ನವೆಂಬರ್ 24: ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಉತ್ತರ ಪ್ರದೇಶದಲ್ಲಿ 2022 ರ ವಿಧಾನಸಭೆ ಚುನಾವಣೆಗಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡದಿರಲು ನಿರ್ಧಾರ ಮಾಡಿದೆ. ಪ್ರಣಾಳಿಕೆಯ ಬದಲಾಗಿ ಬಿಎಸ್‌ಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಯಾವೆಲ್ಲಾ ಜನ ಉಪಯೋಗಿ ಕಾರ್ಯಗಳನ್ನು ಮಾಡಲಾಗಿದೆ ಎಂಬುವುದನ್ನು ಜನರಿಗೆ ತಿಳಿಸಲು ಬಿಎಸ್‌ಪಿ ಮುಂದಾಗಿದೆ.
ಈ ಬಗ್ಗೆ ಪಕ್ಷದ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ, "ಬೇರೆ ಪಕ್ಷಗಳಿಗಿಂತ ಭಿನ್ನವಾಗಿ ಬಿಎಸ್‌ಪಿ ಪಕ್ಷವು ತಳಮಟ್ಟದಲ್ಲಿ ಕೆಲಸ ಮಾಡಲು ನಿರ್ಧಾರ ಮಾಡಿಕೊಂಡಿದೆ. ವಿಧಾನಸಭೆ ಚುನಾವಣೆಗೂ ಮುನ್ನ ಬಿಎಸ್‌ಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದರ ಬದಲಾಗಿ, ನಾವು ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಮಾಡಿದ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಲಾಗುವುದು," ಎಂದು ಹೇಳಿದರು.
ಬಿಎಸ್‌ಪಿಯು 1995, 1997, 2002 ಹಾಗೂ 2007 ಉತ್ತರ ಪ್ರದೇಶದಲ್ಲಿ ಆಡಳಿತವನ್ನು ನಡೆಸಿದೆ. ಈ ನಿಟ್ಟಿನಲ್ಲಿ ಮಾಯಾವತಿ ಬಿಎಸ್‌ಪಿ ಸರ್ಕಾರದ ಜನಪರ ಯೋಜನೆ, ಸಾಧನೆಯ ಬಗ್ಗೆ ಜನರಿಗೆ ಮಾಹಿತಿ ನೀಡಲು ಮುಂದಾಗಿದೆ. "ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ನಾವು ಮಾಡಿದ ಅಭಿವೃದ್ದಿ ಹಾಗೂ ಕಲ್ಯಾಣ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಣೆ ಮಾಡಲಿದ್ದೇವೆ. ಅದಕ್ಕಾಗಿ ಸುತ್ತೋಲೆಯನ್ನು ಮಾಡಿದ್ದೇವೆ," ಎಂದು ತಿಳಿಸಿದರು.

ಈ ಸುತ್ತೋಲೆಯಲ್ಲಿ ಏನು ಇರುತ್ತದೆ?
"ಈ ಸುತ್ತೋಲೆಯಲ್ಲಿ ಬಿಎಸ್‌ಪಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ತಳಮಟ್ಟದಲ್ಲಿ ಮಾಡಿದ ಅಭಿವೃದ್ದಿ ಕಾರ್ಯವನ್ನು ಉಲ್ಲೇಖ ಮಾಡಲಾಗುತ್ತದೆ. ಬೇರೆ ಪಕ್ಷಗಳು ಬಿಎಸ್‌ಪಿ ತನ್ನ ಆಡಳಿತದ ಸಂದರ್ಭದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯವನ್ನೇ ಬರೀ ಹೆಸರು ಬದಲಾವಣೆ ಮಾಡಿ ಪ್ರಚಾರ ಮಾಡುತ್ತಿದೆ. ಬಿಜೆಪಿ ಸರ್ಕಾರವು ಕೇವಲ ಸುಳ್ಳು ಭರವಸೆಯನ್ನು ನೀಡುತ್ತಿದೆ. ಬಿಜೆಪಿಯ ಯೋಜನೆಗಳು ಬರೀ ಕಾಗದಕ್ಕೆ ಸೀಮಿತವಾಗಿದೆ. ಆದರೆ ಬಿಎಸ್‌ಪಿ ತಳಮಟ್ಟದಿಂದ ಜನರಿಗಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ," ಎಂದಿದ್ದಾರೆ. ''

ಬಿಎಸ್‌ಪಿಯಿಂದ ಮನೆ ಮನೆಗೂ ಸುತ್ತೋಲೆ ಹಂಚಿಕೆ
ಬಿಎಸ್‌ಪಿ ಸರ್ಕಾರ ಮಾಡಿದ ಕಾರ್ಯವನ್ನು ಜನರಿಗೆ ತಿಳಿಸುವ ಸುತ್ತೋಲೆಯನ್ನು ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿ ಮನೆ ಮನೆಗೂ ಹಂಚುತ್ತಾರೆ. ಈ ಮೂಲಕ 2022 ರಲ್ಲಿ ಬಿಎಸ್‌ಪಿ ಸರ್ಕಾರ ರಚನೆ ಮಾಡಿದರೆ, ಉತ್ತರ ಪ್ರದೇಶದ ಅಭಿವೃದ್ಧಿಗಾಗಿ ಬಿಎಸ್‌ಪಿ ಮಾಡುವ ಕಾರ್ಯ ಹಾಗೂ ತಳಮಟ್ಟದಲ್ಲಿ ಜನ ಸಾಮಾನ್ಯರ ಕಲ್ಯಾಣಕ್ಕಾಗಿ ಮಾಡುವ ಕಾರ್ಯವನ್ನು ಪಕ್ಷವು ಜನರಿಗೆ ತಲುಪಿಸಲಿದೆ," ಎಂದು ಕೂಡಾ ಹೇಳಿದರು.

86 ಮೀಸಲು ಸ್ಥಾನಗಳ ಮೇಲೆ ಬಿಎಸ್‌ಪಿ ಚಿತ್ತ
"ಉತ್ತರ ಪ್ರದೇಶದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‌ಪಿಯು ಪ್ರಮುಖವಾಗಿ 86 ಮೀಸಲು ಸ್ಥಾನಗಳ ಮೇಲೆ ಗಮನಹರಿಸಲಿದೆ," ಎಂದು ಕೂಡಾ ಮಾಯಾವತಿ ತಿಳಿಸಿದರು. ಉತ್ತರ ಪ್ರದೇಶದಲ್ಲಿ 403 ವಿಧಾನಸಭಾ ಸ್ಥಾನಗಳ ಪೈಕಿ 84 ಪರಿಶಿಷ್ಟ ಜಾತಿಗೆ ಮತ್ತು 2 ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ರಾಜ್ಯ ಘಟಕದ ಕಚೇರಿಯಲ್ಲಿ ಪಕ್ಷ ಪದಾಧಿಕಾರಿಗಳ ಜೊತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಮೀಸಲು ವಿಧಾನಸಭೆ ಸ್ಥಾನಗಳ ಪರಿಶೀಲನೆ ನಡೆಸಲಾಗಿದೆ. ಎಲ್ಲಾ ಮೀಸಲು ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಪಕ್ಷವು ಕಾರ್ಯತಂತ್ರ ರೂಪಿಸುತ್ತಿದೆ. ಮೇಲ್ಜಾತಿಯವರ ಮೇಲೆಯೂ ಪಕ್ಷವು ಗಮನ ಹರಿಸಲಿದೆ," ಎಂದು ಮಾಯಾವತಿ ತಿಳಿಸಿದರು.

ಕೃಷಿ ಕಾಯ್ದೆಯ ಬಗ್ಗೆ ಮಾಯಾವತಿ ಏನು ಹೇಳುತ್ತಾರೆ?
"ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಯನ್ನು ವಾಪಾಸ್ ಪಡೆದಿದೆ. ಕೃಷಿ ಕಾಯ್ದೆಯನ್ನು ಹಿಂಪಡೆಬೇಕು ಎಂದು ನಾನು ಹಲವಾರು ಬಾರಿ ಒತ್ತಾಯ ಮಾಡಿದ್ದೇನೆ. ಟ್ವೀಟ್‌ಗಳನ್ನು ಮಾಡುವ ಮೂಲಕ ಕೇಂದ್ರ ಸರ್ಕಾರದ ಗಮನವನ್ನು ಸೆಳೆದಿದ್ದೇನೆ. ಕೇಂದ್ರ ಸರ್ಕಾರವು ರೈತರೊಂದಿಗೆ ಮಾತುಕತೆ ನಡೆಸಬೇಕು. ರೈತರಿಗೆ ಈಗಲೂ ಸಣ್ಣಪುಟ್ಟ ಸಮಸ್ಯೆಗಳು ಇದೆ, ಆ ಬಗ್ಗೆ ಮಾತನಾಡಿ ಆ ಸಮಸ್ಯೆಯನ್ನು ಬಗೆಹರಿಸಬೇಕು. ಈ ಮೂಲಕ ರೈತರು ನೆಮ್ಮದಿಯಿಂದ ಮನೆಗೆ ತೆರಳುವಂತೆ ಆಗಬೇಕು," ಎಂದು ಆಗ್ರಹ ಮಾಡಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications