ನಿವೃತ್ತಿ ಬಳಿಕ ಸೋನಿಯಾ ಗಾಂಧಿ, ರಾಮನಾಥ್ ಕೋವಿಂದ್ ನೆರೆ-ಹೊರೆ!
ನವದೆಹಲಿ, ಜುಲೈ 19: ಭಾರತದ 14ನೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಇದೇ ಜುಲೈ 24ಕ್ಕೆ ಅಂತ್ಯವಾಗಲಿದೆ. ಜುಲೈ 25ರಂದು ಅವರು ರಾಷ್ಟ್ರಪತಿ ಭವನದಿಂದ ನಿರ್ಗಮಿಸಲಿದ್ದಾರೆ.
ದಲಿತ ಸಮುದಾಯದಿಂದ ಬೆಳೆದು ಬಂದು ಯಶಸ್ಸಿನ ಕೀರ್ತಿಶಿಖರ ಏರಿರುವ ಕೋವಿಂದ್ ಅವರಿಗೆ ಶನಿವಾರದಂದು ಭವ್ಯವಾದ ಬೀಳ್ಕೊಡುಗೆ ಸಮಾರಂಭ ಇಟ್ಟುಕೊಳ್ಳಲಾಗಿದೆ. ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಸಂಸದರು ಸಹಿ ಮಾಡಿರುವ ಪುಸ್ತಕ ಹಾಗೂ ಸ್ಮರಣಿಕೆಯನ್ನು ಕೋವಿಂದ್ ಅವರಿಗೆ ನೀಡಲಾಗುತ್ತದೆ.
ಸಂಸದರು, ಸಚಿವರು ಎಲ್ಲರೂ ಈ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ಧಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಉಪಸ್ಥಿತರಿರಲಿದ್ದಾರೆ.
ರಾಷ್ಟ್ರಪತಿ ಭವನದಿಂದ ಹೊರಹೋಗಲಿರುವ ರಾಮನಾಥ್ ಕೋವಿಂದ್ ಎಲ್ಲಿಗೆ ಹೋಗುತ್ತಾರೆ?. ಕೋವಿಂದ್ ಅವರಿಗೆ ಈಗಾಗಲೇ ಹೊಸ ಬಂಗಲೆಯನ್ನು ನೀಡಲಾಗಿದೆ. ಜುಲೈ 22ರಂದು ರಾಷ್ಟ್ರಪತಿ ಭವನದಿಂದ ಕೋವಿಂದ್ ಅವರ ಎಲ್ಲಾ ವೈಯಕ್ತಿಕ ವಸ್ತುಗಳನ್ನು ಹೊಸ ಬಂಗಲೆಗೆ ವರ್ಗಾಯಿಸಲಾಗುತ್ತದೆ.
ಜುಲೈ 25ರಂದು ಹೊಸ ರಾಷ್ಟ್ರಪತಿಗಳ ಆಯ್ಕೆಯಾಗಲಿದ್ದು, ಅಂದು ರಾಮನಾಥ್ ಕೋವಿಂದ್ ಅಧಿಕೃತವಾಗಿ ರಾಷ್ಟ್ರಪತಿ ಭವನವನ್ನು ಹೊಸ ರಾಷ್ಟ್ರಪತಿಗಳಿಗೆ ಬಿಟ್ಟುಕೊಟ್ಟು ತಮ್ಮ ಹೊಸ ಬಂಗಲೆಗೆ ವರ್ಗವಾಗುತ್ತಾರೆ.

ಸೋನಿಯಾ ಗಾಂಧಿ ಮನೆ ಪಕ್ಕದಲ್ಲೇ
ರಾಮನಾಥ್ ಕೋವಿಂದ್ ಅವರಿಗೆ ದೆಹಲಿಯ ಜನಪಥ್ ರಸ್ತೆಯಲ್ಲಿರುವ 12ನೇ ನಂಬರ್ ಬಂಗಲೆಯನ್ನು ಹಂಚಿಕೆ ಮಾಡಲಾಗಿದೆ. ಇದು ಸೋನಿಯಾ ಗಾಂಧಿ ಅವರಿರುವ 10ನೇ ನಂಬರ್ ಬಂಗಲೆಯ ಪಕ್ಕದಲ್ಲೇ ಇರುವುದು.
ರಾಮನಾಥ್ ಕೋವಿಂದ್ ಅವರ ಮಗಳು ಸ್ವಾತಿ ಈಗಾಗಲೇ 12ನೇ ನಂಬರ್ ಬಂಗಲೆಯ ನವೀಕರಣ ಕೆಲಸ ಮಾಡಿಸಿದ್ದಾರೆ. ಇದರ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ.

ಈ ಮುಂಚೆ ಯಾರಿದ್ದರು?
ಮಾಜಿ ಸಚಿವ ರಾಮ್ ವಿಲಾಸ್ ಪಾಸ್ವಾನ್ ಕೆಲ ವರ್ಷಗಳ ಹಿಂದೆ ನಿಧನವಾಗಿರುವವರೆಗೂ ಇಲ್ಲಿಯೇ ಮೂರು ದಶಕಗಳ ಕಾಲ ಇದ್ದರು. ಪಾಸ್ವಾನ್ ನಿಧನದ ಬಳಿಕ ಅವರ ಸಹೋದರ ಪಶುಪತಿ ಕುಮಾರ್‌ಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿತು. ಇದೇ ಬಂಗಲೆಯನ್ನು ಪಶುಪತಿಗೆ ಹಂಚಿಕೆ ಮಾಡಲಾಯಿತು. ಆದರೆ, ಇದು ಬೇಡ ಎಂದು ಅವರು ತಿರಸ್ಕರಿಸಿದರು.
ಪಾಸ್ವಾನ್ ಅವರ ಲೋಕಜನಶಕ್ತಿ ಪಕ್ಷದ ಕಚೇರಿ ಇದೇ ಬಂಗಲೆಯಲ್ಲಿ ಸಕ್ರಿಯವಾಗಿತ್ತು. ಪಾಸ್ವಾನ್ ನಿಧನದ ಬಳಿಕ ಅವರ ಮಗ ಚಿರಾಗ್ ಪಾಸ್ವಾನ್ ಕುಟುಂಬದವರು ಅಲ್ಲಿ ವಾಸ ಮುಂದುವರಿಸಿದ್ದರು. ರೈಲ್ವೆ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರಿಗೆ ಈ ಬಂಗಲೆ ಹಂಚಿಕೆ ಮಾಡಲಾಯಿತಾದರೂ ಚಿರಾಗ್ ಪಾಸ್ವಾನ್ ಇನ್ನೂ ಅಲ್ಲಿಯೇ ಇದ್ದರಿಂದ ಚೌಬೆಗೆ ಬೇರೆ ಬಂಗಲೆ ಹಂಚಲಾಯಿತು. ಮಾರ್ಚ್ ತಿಂಗಳಲ್ಲಿ ಚಿರಾಗ್ ಪಾಸ್ವಾನ್ ಅವರನ್ನು ಈ ಬಂಗಲೆಯಿಂದ ತೆರವುಗೊಳಿಸಲಾಯಿತು. ಆಗಿನಿಂದ ಈ 12ನೇ ನಂಬರ್ ಬಂಗಲೆ ಇನ್ನೂ ಖಾಲಿಯಾಗಿಯೇ ಇದೆ.

ನಿವೃತ್ತ ರಾಷ್ಟ್ರಪತಿಗಳಿಗೆ ಸಿಗುವ ಸೌಲಭ್ಯಗಳು
* ಏಳನೇ ವೇತನ ಆಯೋಗದ ಶ್ರೇಣಿಯಲ್ಲಿ ಮಾಸಿಕ ಪಿಂಚಣಿ
* ಬಂಗಲೆಯ ಕಚೇರಿ ಮತ್ತು ಉದ್ಯೋಗಿಗಳ ವೆಚ್ಚಕ್ಕೆ ತಿಂಗಳಿಗೆ 50 ಸಾವಿರಕ್ಕೂ ಹೆಚ್ಚು ಹಣ
* ಅಜೀವ ಪರ್ಯಂತ ಉಚಿತ ಬಂಗಲೆ ವಾಸ, ಅದೂ 8 ಕೊಠಡಿಗಳಿರುವ ಭವ್ಯ ಬಂಗಲೆ
* ಕಾರು ಮತ್ತು ಚಾಲಕ
* ಉಚಿತ ವಿದ್ಯುತ್ ಮತ್ತು ನೀರಿನ ವ್ಯವಸ್ಥೆ
* ಉಚಿತ ವೈದ್ಯಕೀಯ ವ್ಯವಸ್ಥೆ. ಭಾರತದಲ್ಲಿ ಒಬ್ಬ ವ್ಯಕ್ತಿಯ ಜೊತೆ ಉಚಿತವಾಗಿ ರೈಲು ಮತ್ತು ವಿಮಾನದಲ್ಲಿ ಪ್ರಯಾಣಿಸಲು ವ್ಯವಸ್ಥೆ.
* ಪೊಲೀಸ್ ಭದ್ರತೆ, ವೈಯಕ್ತಿಕ ಸಹಾಯಕಕ್ಕೆ 5 ಸಿಬ್ಬಂದಿ, ಇಬ್ಬರು ಕಾರ್ಯದರ್ಶಿಗಳು.

ರಾಮನಾಥ್ ಕೋವಿಂದ್‌ಗೆ ಸಿಗುವ ಸೌಲಭ್ಯ
ನಿವೃತ್ತ ರಾಷ್ಟ್ರಪತಿಗಳಿಗೆ ಸಿಗುವ ಎಲ್ಲಾ ಸೌಲಭ್ಯಗಳೂ ರಾಮನಾಥ್ ಕೋವಿಂದ್‌ಗೂ ಸಿಗುತ್ತದೆ. ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿಯಷ್ಟು ಪಿಂಚಣಿ ದೊರಕುತ್ತದೆ. ಅವರು ಬದುಕಿರುವವರೆಗೂ ಈ ಪಿಂಚಣಿ ಬರುತ್ತದೆ. ತಮ್ಮ ವೈಯಕ್ತಿಕ ಸಿಬ್ಬಂದಿ ಮತ್ತು ಕಚೇರಿ ವೆಚ್ಚಕ್ಕಾಗಿ ಸರಕಾರದಿಂದ ತಿಂಗಳಿಗೆ 60 ಸಾವಿರ ರೂ ಹಣವನ್ನೂ ಪಡೆಯುತ್ತಾರೆ.
ಹಾಗೆಯೇ, ಉಚಿತವಾಗಿ ಬಂಗಲೆಯಲ್ಲಿ ವಾಸ ಸೌಲಭ್ಯ ಅವರಿಗೆ ಇರುತ್ತದೆ. ತಮ್ಮ ಸಪರಿವಾರ ಸಮೇತ ಅವರು ಇಲ್ಲಿ ಇರಬಹುದು. ಇವರಿಗೆ ಎರಡು ಲ್ಯಾಂಡ್‌ಲೈನ್, ಮೊಬೈಲ್ ಫೋನ್, ಬ್ರಾಡ್‌ಬ್ಯಾಂಡ್ ಮತ್ತು ಇಂಟರ್ನೆಟ್ ಸಂಪರ್ಕ ಒದಗಿಸಲಾಗುತ್ತದೆ.
ತಮ್ಮ ಬಟ್ಟೆ ಬರೆ ವಗೈರೆ, ಊಟ ಇತ್ಯಾದಿ ವೈಯಕ್ತಿಕ ಕೆಲಸಗಳಿಗೆ ಮಾತ್ರ ಕೋವಿಂದ್ ಹಣ ವ್ಯಯಿಸಬೇಕಾಗಬಹುದು. ಉಳಿದಂತೆ ಅವರು ನಿಶ್ಚಿಂತೆಯಿಂದ ಭವ್ಯ ಬಂಗಲೆಯಲ್ಲಿ ಕಾಲಕಳೆಯಲು ಅಡ್ಡಿ ಇಲ್ಲ.
(ಒನ್ಇಂಡಿಯಾ ಸುದ್ದಿ)











Click it and Unblock the Notifications